CHITRADURGA NEWS | 06 OCTOBER 2026
ಚಿತ್ರದುರ್ಗ: ಚಿತ್ರದುರ್ಗವನ್ನಾಳಿದ ನಾಡ ದೊರೆ ರಾಜವೀರ ಮದಕರಿನಾಯಕ ಅವರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ, ಸರ್ವ ಸಮುದಾಯಗಳ ಸಹಭಾಗಿತ್ವದಲ್ಲಿ ಜಯಂತಿಯನ್ನು ವೈಭವದಿಂದ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಇದನ್ನೂ ಓದಿ: 60ನೇ ದಿನಕ್ಕೆ ಕಾಲಿಟ್ಟ ಭೀಮಸಮುದ್ರದ ಗಣಿ ಮುಷ್ಕರ | ಎಸ್.ಆರ್.ಹಿರೇಮಠ, ರವಿಕೃಷ್ಣಾರೆಡ್ಡಿ ಭಾಗೀ
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸಂಜೆ ನಡೆದ ಪೂರ್ವಭಾವಿ ಸಭೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಮುದಾಯಗಳ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಮದಕರಿನಾಯಕ ಜಯಂತಿಯನ್ನು ಎಲ್ಲರೂ ಒಗ್ಗೂಡಿ ವಿಜೃಂಭಣೆಯಿಂದ ಆಚರಿಸುವ ಕುರಿತು ಚರ್ಚಿಸಿದರು.
ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಬಿ.ಎ. ಲಿಂಗಾರೆಡ್ಡಿ ಮಾತನಾಡಿ, ನಾಡ ದೊರೆ ರಾಜವೀರ ಮದಕರಿನಾಯಕ ಅವರನ್ನು ಈವರೆಗೆ ನಾಯಕ ಸಮುದಾಯಕ್ಕೆ ಸೀಮಿತಗೊಳಿಸಲಾಗಿತ್ತು. ಇದೀಗ ಎಲ್ಲ ಜಾತಿ-ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಯಂತಿ ಆಚರಿಸಲು ಮುಂದಾಗಿರುವುದು ಸಂತಸದ ವಿಚಾರ. ಐತಿಹಾಸಿಕ ಚಿತ್ರದುರ್ಗ ಕೋಟೆಯನ್ನು ಆಳಿದ ಮದಕರಿನಾಯಕನ ಜಯಂತಿಯನ್ನು ಸರ್ವ ಸಮುದಾಯದವರು ಒಗ್ಗೂಡಿ ಆಚರಿಸಬೇಕು. ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್. ಮಂಜಪ್ಪ ಮಾತನಾಡಿ, ಜಯಂತಿಯನ್ನು ವೈಭವೋಪೇತವಾಗಿ ಆಚರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಆಹ್ವಾನಿಸಿ ಪೂರ್ಣಕುಂಭ ಸ್ವಾಗತಕ್ಕೆ ಅವಕಾಶ ಕಲ್ಪಿಸಬೇಕು. ಬರಗೇರಮ್ಮ, ಉಚ್ಚಂಗಿಯಲ್ಲಮ್ಮ ಹಾಗೂ ಏಕನಾಥೇಶ್ವರಿ ದೇವತೆಗಳನ್ನು ಜಯಂತಿಯಲ್ಲಿ ಬರಮಾಡಿಕೊಳ್ಳಬೇಕು. ರಕ್ತದಾನ ಶಿಬಿರ, ಮಕ್ಕಳಿಗೆ ನೋಟ್‌ಬುಕ್ ವಿತರಣೆ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ದಿನ ಭವಿಷ್ಯ | ಅಕ್ಟೋಬರ್ 06 | ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು, ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು
ವೀರಶೈವ ಸಮಾಜದ ಜಿತೇಂದ್ರ ಮಾತನಾಡಿ, ಮದಕರಿನಾಯಕನ ಇತಿಹಾಸವನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಂತಿಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು. ಮದಕರಿನಾಯಕ ಎಲ್ಲರ ಸ್ವತ್ತು, ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದರು.
ಭೋವಿ ಸಮಾಜದ ಮುಖಂಡ ಆನಂದಪ್ಪ ಮಾತನಾಡಿ, ನಾಯಕ ಸಮುದಾಯದವರಷ್ಟೇ ಜಯಂತಿ ಆಚರಿಸುವುದಕ್ಕಿಂತ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಆಚರಿಸಿದರೆ ಜಯಂತಿಗೆ ಹೆಚ್ಚಿನ ಗೌರವ ದೊರೆಯಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ರಾಜವೀರ ಮದಕರಿನಾಯಕ ಅವರು ನಾಯಕ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಮಾನವಕುಲಕ್ಕೆ ಸೇರಿದ ಮಹಾನ್ ವ್ಯಕ್ತಿ. ಏಳು ದಿನಗಳ ಕಾಲ ಜಯಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ಕೆರೆ ಒತ್ತುವರಿ ತೆರವು, ರಾಗಿ ಹಣ ಬಿಡುಗಡೆಗೆ ಆಗ್ರಹ | ಮಾವಿನಕಟ್ಟೆ ಗೇಟ್ ಬಳಿ ರೈತರ ರಸ್ತೆ ತಡೆ
ದಲಿತ ಮುಖಂಡ ಕುಂಚಿಗನಹಾಳ್ ಮಹಲಿಂಗಪ್ಪ ಮಾತನಾಡಿ, ಮಹನೀಯರ ಜಯಂತಿಗಳನ್ನು ಎಲ್ಲ ಜಾತಿ-ಜನಾಂಗದವರು ಒಗ್ಗೂಡಿ ಆಚರಿಸಿದಾಗ ಅದಕ್ಕೆ ವಿಶೇಷ ಶೋಭೆ ಬರುತ್ತದೆ ಎಂದರು.
ನಗರಸಭೆ ಮಾಜಿ ಸದಸ್ಯ ವೆಂಕಟೇಶ್ ಮಾತನಾಡಿ, ಇಡೀ ಚಿತ್ರದುರ್ಗ ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ, ಏಳು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ. ಕೃಷ್ಣಮೂರ್ತಿ ಮಾತನಾಡಿ, ಮದಕರಿನಾಯಕನ ಹೆಸರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ ಜಯಂತಿಯನ್ನು ವೈಭವೋಪೇತವಾಗಿ ಆಚರಿಸಬೇಕು. ಮದಕರಿನಾಯಕನ ಇತಿಹಾಸ ಕುರಿತ ಪುಸ್ತಕವನ್ನು ಹೊರತಂದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸ ಮಾಡಬೇಕು. ಕೆಂಪೇಗೌಡ ಜಯಂತಿಯನ್ನು ಮೀರಿಸುವ ರೀತಿಯಲ್ಲಿ ಮದಕರಿನಾಯಕ ಜಯಂತಿ ಆಚರಿಸಲು ಎಲ್ಲ ಜಾತಿ-ಜನಾಂಗದವರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಮಲ್ಟಿಫ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳ ಹವಾ | ನಟ ಶಿವರಾಜ್‌ಕುಮಾರ್
ಸಭೆಯಲ್ಲಿ ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಉಪ್ಪಾರ ಸಮಾಜದ ನಿಕಟಪೂರ್ವ ಅಧ್ಯಕ್ಷ ಆರ್. ಮೂರ್ತಿ, ವೀರೇಂದ್ರ, ರೈತ ಮುಖಂಡ ಲಕ್ಷ್ಮಿಕಾಂತ್, ಬಾಳೆಕಾಯಿ ಶ್ರೀನಿವಾಸ್, ನ್ಯಾಯವಾದಿ ಉಮೇಶ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ನಾಯಕ ಸಮಾಜದ ಮಂಜುನಾಥ್, ಶ್ರೀನಿವಾಸ ನಾಯಕ, ರಾಜಾ ಮದಕರಿನಾಯಕ, ರಾಜಣ್ಣ ಲಕ್ಷ್ಮಿಸಾಗರ ಮತ್ತಿತರರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

