CHITRADURGA NEWS | 05 OCTOBER 2026
ಚಿತ್ರದುರ್ಗ: ಕೆರೆಗಳ ಒತ್ತುವರಿ ತೆರವುಗೊಳಿಸಿ ನೀರು ತುಂಬಿಸುವುದು, ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಸಮರ್ಪಕವಾಗಿ ಹರಿಸುವುದು ಹಾಗೂ ರೈತರಿಂದ ಖರೀದಿಸಿರುವ ರಾಗಿ ಸೇರಿದಂತೆ ಕೃಷಿ ಉತ್ಪನ್ನಗಳ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಗ್ರಾಮಸ್ಥರು ಸೋಮವಾರ ಹೊಸದುರ್ಗ ತಾಲ್ಲೂಕಿನ ಮಾವಿನಕಟ್ಟೆ ಗೇಟ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಇದನ್ನೂ ಓದಿ: ಮಲ್ಟಿಫ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳ ಹವಾ | ನಟ ಶಿವರಾಜ್‌ಕುಮಾರ್
ರೈತರು ಜಾನುವಾರುಗಳು ಹಾಗೂ ಎತ್ತಿನಗಾಡಿಗಳೊಂದಿಗೆ ರಸ್ತೆಯಲ್ಲೇ ಶಾಮಿಯಾನ ಹಾಕಿ ಅಡುಗೆ ತಯಾರಿಸಿ ಪ್ರತಿಭಟನೆ ನಡೆಸಿದರು. ನಿರಂತರ ಬರಗಾಲದಿಂದ ಜಿಲ್ಲೆಯಲ್ಲಿ ಕೃಷಿಗೆ ಮಾತ್ರವಲ್ಲದೆ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆಯೂ ತೀವ್ರವಾಗಿದೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ರೈತರ ಜಮೀನುಗಳಿಗೆ ಸಮಗ್ರ ನೀರಾವರಿ ವ್ಯವಸ್ಥೆ ಕಲ್ಪಿಸಿ, ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಕೆರೆಗಳಿಗೆ ಸಮರ್ಪಕವಾಗಿ ಹರಿಸಬೇಕು. ಮಾವಿನಕಟ್ಟೆ ಕೆರೆ ಹಾಗೂ ಜೋಡಿತುಂಬಿನಕೆರೆ ಸೇರಿದಂತೆ ಸರ್ಕಾರಿ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆದು ಕೆರೆಗಳನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಹೊಸದುರ್ಗ ತಾಲ್ಲೂಕಿನ ತುಂಬಿನಕೆರೆ ಸೇರಿದಂತೆ ಸುತ್ತಮುತ್ತಲಿನ ಹಲವು ಕೆರೆಗಳ ಜಮೀನುಗಳನ್ನು ಹಿಂದಿನ ಶಾಸಕರ ಅವಧಿಯಲ್ಲಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಲಾಗಿದೆ ಎಂಬ ಆರೋಪಗಳಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ಕೆರೆಗಳನ್ನು ಮರಳಿ ಸರ್ಕಾರದ ವಶಕ್ಕೆ ಪಡೆದು ಒತ್ತುವರಿ ತೆರವುಗೊಳಿಸಬೇಕು ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 05 | ಶೇಂಗಾ, ರಾಗಿ, ಮೆಕ್ಕೆಜೋಳ ರೇಟ್….
ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿ ಹನಿ ನೀರಾವರಿ ಮೂಲಕ ರೈತರ ಜಮೀನುಗಳಿಗೆ ನೀರು ತಲುಪಿಸುವುದು ಪ್ರಮುಖ ಬೇಡಿಕೆಯಾಗಿದೆ. ರೈತರಿಂದ ಖರೀದಿಸಿರುವ ರಾಗಿ ಹಣ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಬಾಕಿ ಉಳಿದಿರುವುದು ಖಂಡನೀಯ. ಬರಪೀಡಿತ ಪ್ರದೇಶದ ರೈತರಿಗೆ ಬಾಕಿ ಹಣವನ್ನು ಬಡ್ಡಿ ಸಮೇತ ಬಿಡುಗಡೆ ಮಾಡಬೇಕು. ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳ ಈಡೇರಿಕೆಗೆ ಖಚಿತ ಭರವಸೆ ನೀಡುವವರೆಗೆ ರಸ್ತೆ ತಡೆ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮಾಯಪ್ಪ ಮಾತನಾಡಿ, ಬರಗಾಲದಿಂದ ತತ್ತರಿಸಿರುವ ರೈತರ ಸಮಸ್ಯೆಗಳಿಗೆ ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ. ಭದ್ರಾ ಮೇಲ್ದಂಡೆ ನೀರು ಹಂಚಿಕೆಯಲ್ಲಿ ಎಡದಂಡೆ ಮತ್ತು ಬಲದಂಡೆ ಭಾಗಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಮಲತಾಯಿ ಧೋರಣೆ ಕೈಬಿಟ್ಟು ತಾಲೂಕಿನ ಎಲ್ಲ ಹಳ್ಳಿಗಳು ಹಾಗೂ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ರಾಗಿ ಖರೀದಿಸಿ ಹಲವು ತಿಂಗಳು ಕಳೆದರೂ ರೈತರ ಖಾತೆಗಳಿಗೆ ಹಣ ಜಮೆಯಾಗಿಲ್ಲ. ಮೂರು ವರ್ಷಗಳ ಹಿಂದಿನ ರಾಗಿ ಖರೀದಿಯ ಹಣವೂ ಕೆಲ ರೈತರಿಗೆ ಇನ್ನೂ ಪಾವತಿಯಾಗಿಲ್ಲ. ಇದರಿಂದ ಮಕ್ಕಳ ಶಾಲಾ ಶುಲ್ಕ ಸೇರಿದಂತೆ ಕುಟುಂಬದ ಅಗತ್ಯ ವೆಚ್ಚಗಳನ್ನು ಭರಿಸಲು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ನವೋದಯ ವಿದ್ಯಾಲಯ ಪ್ರವೇಶ | ಅರ್ಜಿ ಸಲ್ಲಿಕೆ ಅ.15 ರವರೆಗೆ ವಿಸ್ತರಣೆ
ಕೆರೆಗಳ ಒತ್ತುವರಿಯಿಂದ ಗ್ರಾಮಗಳ ಸುತ್ತಮುತ್ತ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಉಂಟಾಗಿದೆ. ತಾಲೂಕು ಆಡಳಿತವೇ ಒತ್ತುವರಿ ತೆರವುಗೊಳಿಸಿ ಕೆರೆಯನ್ನು ಸಂರಕ್ಷಿಸಬೇಕು. ನೀರಿನ ತಾರತಮ್ಯ ನಿವಾರಣೆ, ಕೆರೆ ಒತ್ತುವರಿ ತೆರವು ಹಾಗೂ ರಾಗಿ ಖರೀದಿ ಬಾಕಿ ಹಣ ಬಿಡುಗಡೆ ಮಾಡುವವರೆಗೆ ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹೆಬ್ಬಳ್ಳಿ ಮಲ್ಲಿಕಾರ್ಜುನ, ಬಿಸನಹಳ್ಳಿ ಮಲ್ಲಿಕಾರ್ಜುನ, ಕೆಂಚದ್ಯಾಮಪ್ಪ, ಪಣಿ ರಂಗನಾಥ್, ಪ್ರಕಾಶ್, ಸ್ವಾಮಿ, ಕಸ್ತೂರಮ್ಮ, ನೇತ್ರಮ್ಮ, ಪ್ರದೀಪ್, ಮಂಜುನಾಥ್, ತಾಯಮ್ಮ, ಶರಣಪ್ಪ, ರಮೇಶ್, ರಾಜಾಹುಲಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

