CHITRADURGA NEWS | 06 OCTOBER 2026
ಚಿತ್ರದುರ್ಗ: ಒಂಟಿ ಜೀವನಕ್ಕಿಂತ ಜಂಟಿ ಜೀವನ ಆರಾಮದಾಯಕವಾಗಿದ್ದು, ದಾಂಪತ್ಯ ಜೀವನದಲ್ಲಿ ನಂಬಿಕೆ, ಪ್ರೀತಿ ಹಾಗೂ ಹೊಂದಾಣಿಕೆ ಬಹಳ ಮುಖ್ಯ ಎಂದು ಶಿರಸಂಗಿಯ ಶ್ರೀ ಮಹಾಲಿಂಗೇಶ್ವರ ಮಠದ ಶ್ರೀ ಬಸವ ಮಹಾಂತ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಹೋಟೆಲ್‌ಗಳಲ್ಲಿ ನೈರ್ಮಲ್ಯ ಪರಿಶೀಲನೆ | ಅಧಿಕಾರಿಗಳ ದಿಢೀರ್ ದಾಳಿ
ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ 36ನೇ ವರ್ಷದ ಹತ್ತನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಅವರು, ವಿವಾಹದ ಬಳಿಕ ತಂದೆ-ತಾಯಿಯನ್ನು ಗೌರವದಿಂದ ಕಾಣಬೇಕು. ದೇವರನ್ನು ದೇವಾಲಯಗಳಲ್ಲಿ ಹುಡುಕುವುದಕ್ಕಿಂತ ತಂದೆ-ತಾಯಿಗಳಲ್ಲಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಅವರಿಗೆ ದುಃಖದ ಕಣ್ಣೀರು ತರಿಸದೆ, ಆನಂದಬಾಷ್ಪ ತರಿಸುವಂತೆ ನಡೆದುಕೊಳ್ಳಬೇಕು ಎಂದರು.
ವಿವಾಹವಾಗುವ ವಧುವಿಗೆ ಮಾತ್ರ ಸಂಸ್ಕಾರದ ಮಾತುಗಳನ್ನು ಹೇಳುವುದಲ್ಲ, ವರನೂ ಸಹ ಗುಟ್ಕಾ, ಸಿಗರೇಟು, ಮದ್ಯಪಾನದಿಂದ ದೂರವಿದ್ದು ಕುಟುಂಬದ ಸದಸ್ಯರು ಹಾಗೂ ಬಾಳಸಂಗಾತಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಕಿವಿಮಾತು ಹೇಳಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಮಾತನಾಡಿ, ಮುರುಘಾಮಠದಲ್ಲಿ ಅಂತರ್ಜಾತಿ ಹಾಗೂ ಅಂತರ್‌ಧರ್ಮೀಯ ವಿವಾಹಗಳಿಗೂ ಅವಕಾಶ ನೀಡಲಾಗುತ್ತಿದೆ. ಜಾತಿ, ಲಿಂಗ, ವರ್ಗ, ವರ್ಣ ಹಾಗೂ ಧರ್ಮಭೇದದಿಂದ ದೂರವಿದ್ದು ಸಮಾನತೆಯ ಸಂದೇಶವನ್ನು ಶ್ರೀಮಠ ಸಾರುತ್ತಿದೆ. ನವದಂಪತಿಗಳು ಅರಿತು-ಬೆರೆತು ಒಂದಾಗಿ ಸಂತೋಷದಿಂದ ಬಾಳಬೇಕು ಎಂದು ಶುಭ ಹಾರೈಸಿದರು.
ಇದನ್ನೂ ಓದಿ: ಎಲ್ಲ ಸಮುದಾಯಗಳ ಸಹಭಾಗಿತ್ವದಲ್ಲಿ ಮದಕರಿನಾಯಕ ಜಯಂತಿ ಆಚರಣೆಗೆ ನಿರ್ಧಾರ
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಹಾಲಿನಿಂದ ತುಪ್ಪವಾಗುವಂತೆ ದಾಂಪತ್ಯ ಜೀವನವೂ ಒಂದು ಸಂಸ್ಕಾರದ ಪ್ರಕ್ರಿಯೆ. ಜೀವನದಲ್ಲಿ ನಕಾರಾತ್ಮಕ ಚಿಂತನೆಗಳನ್ನು ಬಿಟ್ಟು ಧನಾತ್ಮಕವಾಗಿ ಯೋಚಿಸಿ, ಪರಸ್ಪರ ಹೊಂದಿಕೊಂಡು ಬಾಳಬೇಕು. ಜ್ಞಾನಿಗಳ ಸಂಘದಲ್ಲಿದ್ದು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ನವದಂಪತಿಗಳ ಬದುಕು ಜ್ಯೋತಿಯಂತೆ ಬೆಳಗಲಿ ಎಂಬ ಆಶಯದಿಂದ ಎರಡು ದೀಪಗಳನ್ನು ಬೆಳಗಿಸಲಾಗಿದೆ. ಹೊಂಬಾಳೆ ಹೂ ಮುಡಿಸಿರುವ ಕಲಶಗಳು ಬಂಗಾರದಂತಹ ಬದುಕಿನ ಸಂಕೇತವಾಗಿದ್ದು, ನೀರು ತನು-ಮನ-ಭಾವ ಶುದ್ಧತೆಯ ಸಂಕೇತವಾಗಿದೆ. ನವದಂಪತಿಗಳ ಬಾಳು ಸುಗಂಧಮಯವಾಗಿರಲಿ ಎಂದು ಹಾರೈಸಿದರು.
ಮಹೋತ್ಸವದಲ್ಲಿ ಎರಡು ಅಂತರ್ಜಾತಿ ವಿವಾಹ ಸೇರಿದಂತೆ ಒಟ್ಟು ಎಂಟು ಜೋಡಿ ವಧು-ವರರಿಗೆ ವಚನ ಮಂತ್ರದೊಂದಿಗೆ ವಿಭೂತಿ ಧಾರಣೆ, ರುದ್ರಾಕ್ಷಿ ಧಾರಣೆ ಹಾಗೂ ಪ್ರತಿಜ್ಞಾವಿಧಿ ನೆರವೇರಿಸಿ, ಬಳಿಕ ಮಾಂಗಲ್ಯಧಾರಣೆ ಮಾಡಿಸಲಾಯಿತು.
ಇದನ್ನೂ ಓದಿ: ದಿನ ಭವಿಷ್ಯ | ಅಕ್ಟೋಬರ್ 06 | ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು, ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು
ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ಹಾಡಿದರು. ಎಸ್‌ಜೆಎಂ ಆಂಗ್ಲಮಾಧ್ಯಮ ಶಾಲೆಯ ಸಹಶಿಕ್ಷಕಿ ನೇತ್ರಾವತಿ ಎಸ್.ಆರ್. ಸ್ವಾಗತಿಸಿದರು. ಎಸ್‌ಜೆಎಂ ಪಾಲಿಟೆಕ್ನಿಕ್‌ನ ಎನ್.ಟಿ. ಲಿಂಗರಾಜು ನಿರೂಪಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

