CHITRADURGA NEWS | 26 JUNE 2026
ಚಿತ್ರದುರ್ಗ: ವಿಶಿಷ್ಟ ಸೌಹಾರ್ದತೆಯ ಸಂಕೇತವಾಗಿರುವ ಪೀರಲ ದೇವರ (ಮೊಹರಂ) ಹಬ್ಬವು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ಜರುಗಿತು.
ಇದನ್ನೂ ಓದಿ: ನಿರುದ್ಯೋಗ ಯುವಕ – ಯುವತಿರಿಗೆ ಉಚಿತ ಮೊಬೈಲ್ ರಿಪೇರಿ, ಸರ್ವೀಸ್ ತರಬೇತಿ | ಜೂನ್ 27ರಂದು ಸಂದರ್ಶನ
ಜಾತಿ-ಮತಗಳ ಬೇಧವಿಲ್ಲದೆ ಹಿಂದೂ-ಮುಸ್ಲಿಂ ಬಾಂಧವರು ಒಂದಾಗಿ ಮೊಹರಂ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆಯನ್ನು ಮೆರೆದರು.
ಬಚ್ಚಬೋರನಹಟ್ಟಿಯಲ್ಲಿ ಮೊಹರಂ ವೈಭವ:
ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳೇ ಇಲ್ಲದಿದ್ದರೂ, ಹಿಂದೂ ಧರ್ಮದ ಗ್ರಾಮಸ್ಥರೆಲ್ಲರೂ ಸೇರಿ ಮೊಹರಂ ಹಬ್ಬವನ್ನು ಸೌಹಾರ್ಧತೆ ಮತ್ತು ವೈಭವದಿಂದ ಆಚರಿಸಿದರು.
ಚಿತ್ರದುರ್ಗದಿಂದ ಮುಸ್ಲಿಂ ಸಮುದಾಯದವರನ್ನು ಆಹ್ವಾನಿಸಿ, ಸತತ 10 ದಿನಗಳ ಕಾಲ ಮೊಹರಂ ಹಬ್ಬವನ್ನು ಆಚರಿಸಿದ್ದು, ಹಬ್ಬದ ಕೊನೆಯ ದಿನವಾದ ಗುರುವಾರ ರಾತ್ರಿ ಭಕ್ತರು ದೇವರಿಗೆ ಮಂಡಕ್ಕಿ, ಸಕ್ಕರೆ, ಬೆಲ್ಲ ಹಾಗೂ ಕೆಂಪುದಾರವನ್ನು ಅರ್ಪಿಸಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು. ಹರಕೆ ಹೊತ್ತ ನೂರಾರು ಭಕ್ತರು ದೇವರಿಗೆ ಬೆಲ್ಲ, ಅಕ್ಕಿ, ಖರ್ಜೂರ ಹಾಗೂ ಕಾಸಿನ ತುಲಾಭಾರ ಸಲ್ಲಿಸಿದರು.
ಇದನ್ನೂ ಓದಿ: ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು ಪ್ರೌಢ ಶಾಲೆಗಳಿಗೆ ನಿಯೋಜಿಸುವ ಕ್ರಮವನ್ನು ಖಂಡಿಸಿ ಬೃಹತ್ ಧರಣಿ
ಪೀರಲ ಹಬ್ಬದ ಆಚರಣೆಯಲ್ಲಿ ‘ಅಳ್ಳೊಳ್ಳಿ ಬುಕ್ಕಾ’ ವೇಷಧಾರಿಗಳ ವಿಶೇಷ ಆಕರ್ಷಣೆ ಗಮನ ಸೆಳೆಯಿತು. ಕರಿಯ ಕಂಬಳಿಗೆ ಬಣ್ಣದ ಬಟ್ಟೆಗಳ ಚುರುಗಳನ್ನು ಕುಚ್ಚುಗಳನ್ನಾಗಿ ಮಾಡಿಕೊಂಡು ಧರಿಸಿದ ವೇಷ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿತು.
ಕಾಲಿನ ಗೆಜ್ಜೆ, ಸೊಂಟದ ಘಂಟೆಯ ಸದ್ದು, ಅಡಿಕೆ ಎಲೆಯ ದಬ್ಬೆ ಹಿಡಿದು, ಮುಖವಾಡ ಹಾಕಿಕೊಳ್ಳುವ ‘ಅಳ್ಳೊಳ್ಳಿ ಬುಕ್ಕಾ’ ವೇಷಧಾರಿಗಳು ಪೀರಲ ಹಬ್ಬದಲ್ಲಿ ಭರಪೂರ ಮನೋರಂಜನೆ ನೀಡಿದರು.
ಹಬ್ಬದ ಅಂಗವಾಗಿ ಗ್ರಾಮದ ಹೊನ್ನೂರಸ್ವಾಮಿ ಗುಡಿ ಮುಂಭಾಗದಲ್ಲಿ ಯುವಕರು ಮುಖಕ್ಕೆ ಬಣ್ಣ ಬಳಿದು, ವಿವಿಧ ವೇಷಭೂಷಣಗಳನ್ನು ಧರಿಸಿ ಡೋಲು ಮತ್ತು ತಮಟೆಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ “ಅಲ್ಬಿದಾ ದುಲ್ಯಾ ಅರಲಮೋ ದುಲ್ಯಾ” ಎಂದು ಗಟ್ಟಿಯಾಗಿ ಘೋಷಣೆ ಕೂಗುತ್ತಾ ಹೆಜ್ಜೆ ಮೇಳ ಪ್ರದರ್ಶಿಸಿ ಹರಕೆ ತೀರಿಸಿದರು.
ಇದನ್ನೂ ಓದಿ: ಸರಸ್ವತಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಶುಕ್ರವಾರ ಬೆಳಗ್ಗೆ ಮತ್ತು ಸಂಜೆ ಪೀರಲ ದೇವರನ್ನು ಹೊತ್ತು ಭಕ್ತಿಯಿಂದ ಕೆಂಡಸೇವೆ ಸಲ್ಲಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಎರಡು ಬಾರಿ ದೇವರ ಭವ್ಯ ಮೆರವಣಿಗೆಯನ್ನು ನಡೆಸಿದ ಬಳಿಕ, ದೇವರನ್ನು ನೀರಿಗೆ ಅರ್ಪಿಸುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
