CHITRADURGA NEWS | 27 JUNE 2026
ಚಿತ್ರದುರ್ಗ: ಜೈನ ಸಮುದಾಯದವರು ತಮ್ಮ ವ್ಯಾಪಾರ ವಹಿವಾಟಿನಲ್ಲಿ ಬರುವ ಲಾಭಾಂಶವನ್ನು ನೊಂದವರ, ಬಡವರ ಪರೋಪಕಾರಕ್ಕಾಗಿ ಬಳಸುತ್ತಿರುವುದು ಪುಣ್ಯದ ಕೆಲಸ ಎಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಗುಣಗಾನ ಮಾಡಿದರು.
ಇದನ್ನೂ ಓದಿ: ಕೆಂಪೇಗೌಡರ ದೂರದೃಷ್ಟಿ ಆಡಳಿತ ದಾರಿದೀಪ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ದಿವಂಗತ ಬಬ್ಲಿಬಾಯಿ ಹಂಜಾರಿ ಮಲ್ಜಿ, ಚಿತ್ರದುರ್ಗ ಇವರ ಸ್ಮರಣಾರ್ಥ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಉಚಿತ ಮೆಗಾ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನನ್ನ ಅನುದಾನದಲ್ಲಿ ಇಲ್ಲಿಯವರೆಗೂ ಹದಿನಾರು ಸಾವಿರ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ನಡೆಸಿದ್ದು, ತಾಲ್ಲೂಕಿನಾದ್ಯಂತ ಏಳು ಸಾವಿರ ಕನ್ನಡಕಗಳನ್ನು ವಿತರಿಸಲಾಗಿದೆ. ಪ್ರತಿ ವಾರ್ಡ್ ಹಾಗೂ ಪಂಚಾಯಿತಿ ಮಟ್ಟಗಳಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿಯೊಬ್ಬರಿಗೂ ಕಣ್ಣು ಅತ್ಯಂತ ಸೂಕ್ಷ್ಮವಾಗಿದ್ದು, ಜೋಪಾನ ಮಾಡಿಕೊಳ್ಳುವಂತೆ ಜನತೆಯಲ್ಲಿ ಮನವಿ ಮಾಡಿದರು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡಿ ಲಾಭಾಂಶವನ್ನು ಸಮಾಜಕ್ಕೆ ಧಾರೆ ಎರೆಯುವ ಕೆಲಸ ಮಾಡುವವರು ಜೈನ ಸಮುದಾಯದವರು. ದೊಡ್ಡ ದೊಡ್ಡ ಶ್ರೀಮಂತರಿದ್ದಾರೆ. ಎಲ್ಲರಿಗೂ ದಾನ ಮಾಡುವ ಮನಸ್ಸಿರುವುದಿಲ್ಲ. ಅವಕಾಶ ಸಿಕ್ಕಾಗ ಸಮಾಜ ಸೇವೆ ಮಾಡಿದರೆ ನೆನಪಿನಲ್ಲಿ ಉಳಿಯುತ್ತದೆ. ಹುಟ್ಟು-ಸಾವಿನ ಮಧ್ಯೆ ಏನು ಮಾಡುತ್ತಾರೆಂಬುದು ಮುಖ್ಯ. ಈ ಸಮುದಾಯದ ಸೇವೆ ಸದಾ ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಮಾನವನ ದೇಹದಲ್ಲಿ ಅತ್ಯಂತ ಶ್ರೇಷ್ಟವಾದುದು ತಲೆ. ಅದರಲ್ಲಿ ಕಣ್ಣು ಪ್ರಧಾನವಾದುದು. ಮನುಷ್ಯನ ಜನ್ಮ ಸಾರ್ಥಕವಾಗಬೇಕಾದರೆ ಕಣ್ಣು ಬೇಕು.
ಇದರಿಂದ ಜಗತ್ತನ್ನು ನೋಡಬಹುದು. ಜೈನ ಸಮುದಾಯ ಇಂತಹ ಸಮಾಜಮುಖಿ ಕೆಲಸಗಳನ್ನು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದೆ. ಕೃತಕ ಕಾಲ ಜೋಡಣೆ, ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತ ಅಸಹಾಯಕರ ನೆರವಿಗೆ ನಿಲ್ಲುತ್ತಿದೆ.
ಅಹಿಂಸಾವಾದಿಗಳಾಗಿರುವ ಇವರು ಗೋಶಾಲೆಯನ್ನು ತೆರೆದಿದ್ದಾರೆ. ಯಾವುದೇ ಪಕ್ಷವಾಗಲಿ ಜನಸೇವೆ ಮಾಡುವವರಿಗೆ ಸದಾ ಬೆಂಬಲವಿರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಈ ಮೂರು ಮನೆಮದ್ದುಗಳು ಶ್ವಾಸಕೋಶದಲ್ಲಿ ಸಂಗ್ರಹವಾದ ಕಫವನ್ನು ಒಂದೇ ಬಾರಿಗೆ ಹೊರಹಾಕುತ್ತದೆಯಂತೆ
ಡಾ.ಸೋಲಂಕಿ ಮಾತನಾಡಿ, ಇಲ್ಲಿಯವರೆಗೂ ಮೂರುವರೆ ಲಕ್ಷ ಜನರಿಗೆ ಆಪರೇಷನ್ ಮಾಡಿದ್ದೇವೆ. ಚಿತ್ರದುರ್ಗದಲ್ಲಿ ಮೂರು ಸಾವಿರ ಕಣ್ಣಿನ ಆಪರೇಷನ್ ಮಾಡಿದ್ದೇನೆ. 2021 ರಿಂದ ನಮ್ಮ ಸೇವೆ ಆರಂಭಗೊಂಡಿತು. ರಾಜ್ಯದ 26 ಜಿಲ್ಲೆಗಳಲ್ಲಿ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ. ರಾಜಸ್ಥಾನ, ವಿದೇಶದಲ್ಲಿಯೂ ನಮ್ಮ ತಂಡದೊಂದಿಗೆ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ನಡೆದಿದೆ ಎಂದರು.
ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಕಣ್ಣಿನ ದೃಷ್ಠಿ ಕಳೆದುಕೊಂಡರೆ ಪ್ರಪಂಚವೆ ಕತ್ತಲಾಗುತ್ತದೆ. ಜೈನ ಸಮುದಾಯದಿಂದ ಪ್ರತಿ ವರ್ಷವೂ ಇಂತಹ ಸಮಾಜ ಸೇವೆ ಮುಂದುವರೆಯಲಿ. ಸಾಮಾನ್ಯ ಜನರು ಉಡುಪಿ, ಚಿಕ್ಕಮಗಳೂರಿಗೆ ಹೋಗಿ ಚಿಕಿತ್ಸೆ ಪಡೆಯುವ ಬದಲು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿಯೂ ಸುಲಭವಾಗಿ ಬಡವರಿಗೆ ಚಿಕಿತ್ಸೆ ಸಿಗುವಂತಾಗಲಿ ಎಂದು ಸಲಹೆ ನೀಡಿದರು.
ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿದರು.
ಇದನ್ನೂ ಓದಿ: ಹೈನುಗಾರಿಕೆ ಅತ್ಯಂತ ಲಾಭದಾಯಕ ಚಟುವಟಿಕೆ | ಡಾ.ತಿಪ್ಪೇಸ್ವಾಮಿ
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ವೈದ್ಯಕೀಯ ಅಧೀಕ್ಷಕ ಡಾ.ಎಲ್.ಪಾಲಾಕ್ಷಯ್ಯ, ರಂಜಿತ್ಕುಮಾರ್, ಪಾರಸ್ಮಲ್, ಬಾಂಬೆ ಪೈವುಡ್ನ ಹೋಂಜಿ, ಪ್ರಫುಲ್ಬಾಯಿ, ಕಲ್ಪೇಶ್, ಮಹೇಂದ್ರಬಾಯಿ, ರಾಜು, ರಾಹುಲ್, ಆಶಿಕ್, ಅನಿಲ್ ಸೇರಿದಂತೆ ಮತ್ತಿತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

