
CHITRADURGA NEWS | 12 MARCH 2026
ಚಿತ್ರದುರ್ಗ: ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ)ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವರ್ಗಾಯಿಸುವ ಪ್ರಸ್ತಾವನೆ ಹಿಂಪಡೆಯಲು ಒತ್ತಾಯಿಸಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಸಂಘದಿಂದ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಮಹಿಳಾ ದಿನಾಚರಣೆ | ಪೂಜನೀಯ ಸ್ಥಾನ ಮಾತ್ರವಲ್ಲ, ಪ್ರೋತ್ಸಾಹ ಮುಖ್ಯ
ಈ ವೇಳೆ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್ ಮಾತನಾಡಿ, ರಾಜ್ಯದಲ್ಲಿ 1317 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಹಾಗೂ 829 ಅನುದಾನಿತ ಪದವಿ ಪೂರ್ವ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಆಡಳಿತಾತ್ಮಕ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಗುಣಮಟ್ಟದ ಶಿಕ್ಷಣ,ಪರಿಣಾಮಕಾರಿ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ.
ರಾಜ್ಯದ ಸಿಇಟಿ ಅರ್ಹತಾ ಪರೀಕ್ಷೆಗಳ ಆಯೋಜನೆ ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಒಂದು ವೇಳೆ ಇಲಾಖೆಯ ಆಡಳಿತ, ಶೈಕ್ಷಣಿಕ,ಮಾನ್ಯತೆ, ನವೀಕರಣ, ಮೂಲಭೂತ ಸೌಕರ್ಯ ಒದಗಿಸುವ ಅಧಿಕಾರವನ್ನು ಜಿಲ್ಲಾ ಪಂಚಾಯತ್ ಸಿಇಒಗೆ ನೀಡಿದರೆ ಇಲಾಖೆಯ ಅಸ್ಮಿತೆಗೆ ಧಕ್ಕೆ ಆಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ರಾಜೇಶ್ ಪಿ.ಎಂ.ಜಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಉತ್ತರ ಪತ್ರಿಕೆ ಮೌಲ್ಯಮಾಪನ ಭತ್ಯೆ,ಪರೀಕ್ಷಾ ಸಂಭಾವನೆ ಪರಿಷ್ಕರಿಸಿಲ್ಲ. ಖಾಸಗಿ ಹಾಗೂ ಅತಿಥಿ ಉಪನ್ಯಾಸಕರಿಗೆ ಕಳೆದ ವರ್ಷದ ಬಾಕಿ ಸಂಭಾವನೆ ವಿತರಿಸಿಲ್ಲ ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 12 | ಹತ್ತಿ ರೇಟ್ ಎಷ್ಟಿದೆ?
ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕಾಂತರಾಜು ಮಾತನಾಡಿ, ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಹುದ್ದೆಗಳನ್ನು ತುಂಬದೆ ಇದ್ದರೆ ಆ ಕಾಲೇಜುಗಳಿಗೆ ಯಾವೊಬ್ಬ ವಿದ್ಯಾರ್ಥಿ ಪ್ರವೇಶ ಹೊಂದದೆ ಕಾಲೇಜು ಮುಚ್ಚಬೇಕಾಗುತ್ತದೆ.
ಆದ್ದರಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ, ಪ್ರಾಂಶುಪಾಲರ ವರ್ಗಾವಣೆ ಹಾಗೂ ಪದೋನ್ನತಿ ಬಡ್ತಿ ಹೊಂದಿದ ಪ್ರಾಂಶುಪಾಲರ ಸ್ಥಳ ನಿಯುಕ್ತಿ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯನ್ನು ಪರಿಗಣಿಸದೆ ಎಲ್ಲಾ ಖಾಲಿ ಹುದ್ದೆಗಳನ್ನು ಯಾವುದೇ ನಿರ್ಬಂಧವಿಲ್ಲದೆ ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಿದಾಗ ಮಾತ್ರ ಸರ್ಕಾರಿ ಕಾಲೇಜುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎ.ನಾಗರಾಜ್ ಮಾತನಾಡಿ, ನಮ್ಮ ನ್ಯಾಯಯುತವಾದ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ 2026ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಿ ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ | ಅರ್ಜಿ ಅಹ್ವಾನ
ಪ್ರಾಚಾರ್ಯರಾದ ಸಣ್ಣಪಾಲಯ್ಯ, ಬಿ.ಕೃಷ್ಣಪ್ಪ, ಟಿ.ದುರುಗಪ್ಪ, ಎಸ್.ದೇವೆಂದ್ರಪ್ಪ, ಡಿ.ಎಸ್.ವೇದಮೂರ್ತಿ, ಕೆ.ನಾಗರಾಜಪ್ಪ, ಉಪನ್ಯಾಸಕರಾದ ಆರ್.ಮೂರ್ತಪ್ಪ, ಸಿ.ಕಲ್ಲಪ್ಪ, ರಾಜಭಕ್ಷಿ, ಹೆಚ್.ಎಸ್.ವಸಂತಕುಮಾರ್, ಪಿ.ಎ.ಶಿವಕುಮಾರ್, ಕಾಮಾಕ್ಷಿ, ಯಶೋಧ, ಪರೀದ್ಪರ್ವಿನ್, ಬಿ.ಸುರೇಶ, ಹೆಚ್.ಶ್ರೀನಿವಾಸ, ಎನ್.ಟಿ.ನಾಗರಾಜ್, ಎಸ್.ಮಂಜುನಾಥ, ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ, ಟಿ.ಪೆನ್ನಯ್ಯ ಮತ್ತಿತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
