
ಚಿತ್ರದುರ್ಗ ನ್ಯೂಸ್. ಕಾಂ: ಮುರುಘಾ ಮಠದ ಪೀಠಾಧಿಪತಿ ಡಾ.ಶ್ರೀ. ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿಯ ಪರಿಶೀಲನೆ ಇಂದು ಚಿತ್ರದುರ್ಗ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ.
ಈಗಾಗಲೇ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಶರಣರ ಪರ ವಕೀಲರಾದ ಸಂದೀಪ್ ಪಾಟೀಲ್ ಶುಕ್ರವಾರ ವಿಚಾರಣಾ ನ್ಯಾಯಾಲಯ ಆಗಿರುವ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಪ್ರತಿ ಹಾಗೂ ಶರಣರ ಪಾಸ್ ಪೋರ್ಟ್ ಸಲ್ಲಿಸಿದ್ದಾರೆ.
ಇದೇ ವೇಳೆ ಹೈಕೋರ್ಟ್ ಆದೇಶದಂತೆ ಕೆ.ಸಿ.ನಾಗರಾಜ್ ಹಾಗು ಮಧುಕುಮಾರ್ ಎಂಬ ಇಬ್ಬರ ಶ್ಯೂರಿಟಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಇದನ್ನೂ ಓದಿ: ಪುನಃ ಬಂಧನ ಭೀತಿಯಲ್ಲಿ ಮುರುಘಾ ಶರಣರು | ಎಲ್ಲರ ಚಿತ್ತ ನ.15ರತ್ತ
ನ್ಯಾಯಾಧೀಶರಾದ ಬಿ.ಕೆ.ಕೋಮಲಾ ಈ ಶ್ಯೂರಿಟಿ ಪರಿಶೀಲನೆ ನಿಟ್ಟಿನಲ್ಲಿ ಬಿಡುಗಡೆ ಆದೇಶವನ್ನು ನವೆಂಬರ್ 15 ಬುಧವಾರಕ್ಕೆ ಕಾಯ್ದಿರಿಸಿದ್ದರು.
ಇಷ್ಟೇ ಆಗಿದ್ದರೆ ಶರಣರು ನಿರಾಳರಾಗಿರುತ್ತಿದ್ದರು. ಆದರೆ, ಶ್ರೀಗಳ ವಿರುದ್ಧ ಎರಡು ಪೋಕ್ಸೊ ಪ್ರಕರಣ ದಾಖಲಾಗಿದ್ದವು. ಮೊದಲ ಪ್ರಕರಣದಲ್ಲಿ ಬಂಧನದಲ್ಲಿದ್ದ ಕಾರಣ, ಎರಡನೇ ಪ್ರಕರಣದಲ್ಲಿ ಬಾಡಿ ವಾರೆಂಟ್ ಪಡೆದು ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಈಗ ಮೊದಲನೆ ಪ್ರಕರಣದಲ್ಲಿ ಶ್ರೀಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರ ಬಿಡುಗಡೆ ಪ್ರಕ್ರಿಯೆ ಶುರುವಾಗುತ್ತಲೇ, ಸರ್ಕಾರಿ ವಕೀಲರು ಎರಡನೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಿದ್ದಾರೆ. ಇದರಿಂದ ಬಿಡುಗಡೆಯ ಬಗ್ಗೆ ತುಸು ಆತಂಕ ಮೂಡಿದೆ.
ಶುಕ್ರವಾರ ಸರ್ಕಾರಿ ವಕೀಲ ಜಗದೀಶ್ ಮನವಿ ಮಾಡಿದ್ದರು. ನ್ಯಾಯಾಲಯ ನ.15 ರಂದು ಲಿಖಿತವಾಗಿ ಸಲ್ಲಿಸಿ ಎಂದಿತ್ತು. ಇಂದು ಎರಡನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಕೋರಿದರೆ ಕಾನೂನು ಪ್ರಕ್ರಿಯೆ ಏನಾಗಿರಲಿದೆ ಎನ್ನುವ ಕುತೂಹಲ ದಟ್ಟವಾಗಿದೆ.
ಮುರುಘಾ ಶ್ರೀಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹೈಕೋರ್ಟ್ ವಕೀಲ ಸಂದೀಪ್ ಪಾಟೀಲ್ ಎರಡನೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನ ಮಾಡುವುದು ಹೈಕೋರ್ಟ್ ಆದೇಶದ ಪ್ರಕಾರ ನ್ಯಾಯಾಂಗ ನಿಂಧನೆಯಾಗುತ್ತದೆ. ಆ ಪ್ರಕರಣಕ್ಕೆ ತಡೆಯಾಜ್ಞೆ ಇರುವುದರಿಂದ ಹಾಗೇ ಮಾಡಲು ಬರುವುದಿಲ್ಲ. ಜಾಮೀನು ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಹೀಗಾಗಿ ಇಂದು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುವ ಬೆಳಬಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ. ಬರೋಬ್ಬರಿ 14 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಶ್ರೀಗಳಿಗೆ ಬಿಡುಗಡೆಯ ಭಾಗ್ಯ ದೊರೆಯುತ್ತದಾ ಎನ್ನುವ ಪ್ರಶ್ನೆ ಎದುರಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
