CHITRADURGA NEWS | 17 MARCH 2026
ಚಿತ್ರದುರ್ಗ: ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಸಿಗಲಿದ್ದು, ರೈತರು ಸಮಗ್ರ ಕೃಷಿ ವಿಧಾನಗಳ ಜೊತೆಗೆ ನೀರಾವರಿ ಸೌಲಭ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಆರ್ಥಿಕವಾಗಿ ಸಶಕ್ತರಾಗಬೇಕು’ ಎಂದು ಲೋಕೋಪಯೋಗಿ ಇಲಾಖೆಯ ವಿಶ್ರಾಂತ ಮುಖ್ಯಕಾರ್ಯದರ್ಶಿ ಡಾ. ಕೆ.ಎಸ್. ಕೃಷ್ಣಾರೆಡ್ಡಿ ಹೇಳಿದರು.
ಇದನ್ನೂ ಓದಿ: ವಂಚನೆ ಪ್ರಕರಣ | ನಗರಸಭೆ ಮಾಜಿ ಸದಸ್ಯ ಚಂದ್ರಶೇಖರ್ ಬಂಧನ
ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟದ ಅಕ್ಕಮ್ಮ ದೇವಸ್ಥಾನದ ಬಳಿ ಭಾನುವಾರ ಬೆಳಗಟ್ಟ, ಕಾಸವರಹಟ್ಟಿ, ಬಚ್ಚಬೋರನಹಟ್ಟಿ ಹಾಗೂ ಹಾಯ್ಕಲ್ ಗ್ರಾಮಸ್ಥರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಎಲ್ಲರೂ ಬೆಳೆಯುವ ಸಾಂಪ್ರದಾಯಿಕ ಬೆಳೆಗಳನ್ನೇ ಬೆಳೆಯಬೇಡಿ. ಮಾರುಕಟ್ಟೆಯ ಬೇಡಿಕೆ ಗಮನಿಸಿ ಅಡಕೆ ಪ್ರಮಾಣ ಕಡಿಮೆ ಮಾಡಿ, ಆಧುನಿಕ ಹೂವು ಹಾಗೂ ಹಣ್ಣಿನ ಕೃಷಿ ಮಾಡಿ. ನೂತನ ಕೃಷಿ ಕೌಶಲಗಳನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಬೆಳಗಟ್ಟ, ಬಚ್ಚಬೋರನಹಟ್ಟಿ ಸೇರಿದಂತೆ ಈ ಭಾಗದ ಸಾವಿರಾರು ರೈತರು ರಸ್ತೆ ಸೌಲಭ್ಯವಿಲ್ಲದೆ ದಶಕಗಳಿಂದ ಅನುಭವಿಸುತ್ತಿದ್ದ ನೋವು ನನ್ನ ಗಮನದಲ್ಲಿತ್ತು. ಸೇವೆಯಲ್ಲಿದ್ದಾಗ ನನಗೆ ಸಿಕ್ಕ ಅವಕಾಶ ಬಳಸಿಕೊಂಡು ಸಂಪರ್ಕ ರಸ್ತೆಗೆ ಬೇಕಾದ ಅನುದಾನ ಹಾಗೂ ಮಂಜೂರಾತಿ ಕೊಡಿಸಿದ್ದೇನೆ. ಇದು ನನ್ನ ಕರ್ತವ್ಯ ಎಂದು ಸ್ಮರಿಸಿದರು.
ಇದನ್ನೂ ಓದಿ: ಸಾಗರ ಅಡಿಕೆ ಮಾರುಕಟ್ಟೆಯಲ್ಲಿ 59 ಸಾವಿರ ದಾಟಿದ ರಾಶಿ ಅಡಿಕೆ
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರಿನ ಹಂಚಿಕೆ ಬಹಳ ಕಡಿಮೆ ಇತ್ತು. ಬದ್ಧತೆಯ ಕೆಲಸಗಾರರಾಗಿದ್ದ ಚೀಫ್ ಎಂಜಿನಿಯರ್ ಚೆಲುವರಾಜ್ ಅವರು ಕೇಂದ್ರೀಯ ಜಲ ಆಯೋಗಕ್ಕೆ ಸೂಕ್ತ ದಾಖಲೆ ಹಾಗೂ ಅಂಕಿ-ಅಂಶಗಳನ್ನು ಮಂಡಿಸಿ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯೋಜನೆ ಜಾರಿಯಲ್ಲಿ ಅವರ ಪ್ರಯತ್ನ ಮಹತ್ವದ್ದು ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭದ್ರಾ ಮೇಲ್ದಂಡೆ ಯೋಜನೆಯ ನಿವೃತ್ತ ಚೀಫ್ ಎಂಜಿನಿಯರ್ ಆರ್. ಚೆಲುವರಾಜ್ ಮಾತನಾಡಿ, ಈ ಭಾಗಕ್ಕೆ ವಿಶೇಷ ಕಾಳಜಿ ವಹಿಸಿ ರಸ್ತೆ ಸಂಪರ್ಕ ಕಲ್ಪಿಸಿದ ಕೃಷ್ಣಾರೆಡ್ಡಿಯವರನ್ನು ನಿವೃತ್ತಿಯ ನಂತರವೂ ಅಭಿನಂದಿಸುತ್ತಿರುವುದು ಶ್ಲಾಘನೀಯ. ಇದು ಅವರ ಮೇಲಿಟ್ಟಿರುವ ಪ್ರೀತಿ ಹಾಗೂ ಅಭಿಮಾನಕ್ಕೆ ನಿದರ್ಶನ ಎಂದರು.
ಕಾರ್ಯಕ್ರಮದಲ್ಲಿ ಡಾ. ಕೆ.ಎಸ್. ಕೃಷ್ಣಾರೆಡ್ಡಿ ಹಾಗೂ ಕೆ. ಸುಮಾ ದಂಪತಿಯನ್ನು ಹೃದಯಸ್ಪರ್ಶಿಯಾಗಿ ಅಭಿನಂದಿಸಲಾಯಿತು. ದೊಂಟ್ಲು ಮಂಜುನಾಥರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 16 | ಮೆಕ್ಕೆಜೋಳ, ಶೇಂಗಾ ರೇಟ್…
ವೇದಿಕೆಯಲ್ಲಿ ಪಿ.ಎಚ್. ಮಾರುತೇಶ್ ರೆಡ್ಡಿ, ರಾಜೇಂದ್ರ ರೆಡ್ಡಿ, ಖಾಸಾ ತಿಮ್ಮಾರೆಡ್ಡಿ, ಕಂದಿ ಸಂಜೀವರೆಡ್ಡಿ, ಕೋಟ್ಲಾ ವೆಂಕಟೇಶರೆಡ್ಡಿ, ರವಿಶಂಕರ್ ರೆಡ್ಡಿ, ನಿವೃತ್ತ ಅಧೀಕ್ಷಕ ಎಂಜಿನಿಯರ್ ಟಿ.ಎಸ್. ಮಲ್ಲಿಕಾರ್ಜುನ್, ಎ.ಇ. ಮಂಜುನಾಥ್, ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್. ಅಹೋಬಳಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
