
CHITRADURGA NEWS | 25 AUGUST 2026
ಚಿತ್ರದುರ್ಗ: ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಕರ್ನಾಟಕ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಠಿಣ ಶ್ರಮ ಹಾಗೂ ತಾಂತ್ರಿಕ ಸಂಶೋಧನೆಗಳ ಮೂಲಕ ಭಾರತ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನಕ್ಕೇರುವಂತೆ ರೈತರು ಹಾಗೂ ವಿಜ್ಞಾನಿಗಳು ಶ್ರಮಿಸಬೇಕು ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ಇದನ್ನೂ ಓದಿ: ನಿಮ್ಮ ಮುಖ ಕಾಂತಿಯುತವಾಗಿರಲು ಗುಲಾಬಿ ದಳಗಳು ಮತ್ತು ಹಸಿ ಹಾಲಿನಿಂದ ತಯಾರಿಸಿದ ಈ ಫೇಸ್ ಪ್ಯಾಕ್ ಅನ್ನು ಪ್ರಯತ್ನಿಸಿ
ನಗರದ ರೇಷ್ಮೆ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನನ್ನ ರೇಷ್ಮೆ ನನ್ನ ಹೆಮ್ಮೆ’ ಅಭಿಯಾನದಡಿ ರೈತರು ಮತ್ತು ವಿಜ್ಞಾನಿಗಳ ನಡುವಿನ ಸಂವಾದ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗದ ಮಾರಗಟ್ಟದಲ್ಲಿ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರ ವಿಸ್ತರಣ ಕೇಂದ್ರವನ್ನು ಪ್ರಾದೇಶಿಕ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. 1982ರಲ್ಲಿ ಪ್ರಾರಂಭವಾದ ಚಿತ್ರದುರ್ಗ ತಾಲ್ಲೂಕಿನ ಮಾರಗಟ್ಟದಲ್ಲಿರುವ ರೇಷ್ಮೆ ಸಂಶೋಧನಾ ವಿಸ್ತರಣ ಕೇಂದ್ರವು ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆ ಮೂರು ಜಿಲ್ಲೆಗಳ ರೇಷ್ಮೆ ಬೆಳೆಗಾರರ ಅಗತ್ಯತೆಗಳನ್ನು ಪೂರೈಸುತ್ತಿತ್ತು. ಬೆಂಗಳೂರಿನ ಸರ್ಜಾಪುರದ ಬಳಿಯ ಕೊಡತಿಯಿಂದ ಪ್ರಾದೇಶಿಕ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರವನ್ನು ಚಿತ್ರದುರ್ಗದ ಮಾರಗಟ್ಟಕ್ಕೆ ಸ್ಥಳಾಂತರಿಸಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಹೇಳಿದರು.
ಚಿತ್ರದುರ್ಗದ ಮಾರಗಟ್ಟದಲ್ಲಿದ್ದ ಸಂಶೋಧನಾ ವಿಸ್ತರಣ ಕೇಂದ್ರವನ್ನು ಹಾವೇರಿ ಜಿಲ್ಲೆಯ ರಾಣೀಬೆನ್ನೂರಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಮಾರಗಟ್ಟದ ಈ ಕೇಂದ್ರವು ತಾಂತ್ರಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಕಾರ್ಯಾರಂಭ ಮಾಡಿದೆ.
ಇದನ್ನೂ ಓದಿ: KSCA ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಪ್ರತಿನಿಧಿಯಾಗಿ ಎಚ್.ರಾಜು ನೇಮಕ
ಚಿತ್ರದುರ್ಗದ ಈ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರವು 10 ಉಪ-ಘಟಕಗಳ ತಾಂತ್ರಿಕ ಚಟುವಟಿಕೆಗಳನ್ನು ಮತತು ಉತ್ತರ ಕರ್ನಾಟದದಲ್ಲಿ ಕಾರ್ಯನಿರ್ವಹಿಸುತ್ತಿರುವ 03 ಘಟಕಗಳನ್ನು ಅಂದರೆ ರಾಣಿಬೆನ್ನೂರು, ಕೊಪ್ಪಳ ಮತ್ತು ಬೀದರ್ ನಲ್ಲಿರುವ ಸಂಶೋಧನಾ ವಿಸ್ತರಣ ಕೇಂದ್ರಗಳನ್ನು ಸಮನ್ವಯಗೊಳಿಸುತ್ತದೆ.
ಇದರ ಜೊತೆಗೆ ದಕ್ಷಿಣ ಕರ್ನಾಟಕದ ಎರಡು ಘಟಕಗಳಾದ ಮದ್ದೂರು ಮತ್ತು ಮಡಿವಾಳ ಘಟಕಗಳೂ ಸಹ ಚಿತ್ರದುರ್ಗ ಕೇಂದ್ರದ ವ್ಯಾಪ್ತಿಗೆ ಬಳಪಡುತ್ತವೆ. ಇದರ ಜೊತೆಗೆ ಮಹಾರಾಷ್ಟ್ರದ ನಾಲ್ಕು ಮತ್ತು ಮಧ್ಯಪ್ರದೇಶದ ಒಂದು ರೇಷ್ಮೆ ವಿಸ್ತರಣಾ ಕೇಂದ್ರಗಳು ಚಿತ್ರದುರ್ಗದ ಕೇಂದ್ರದ ವ್ಯಾಪ್ತಿಗೆ ಒಳಪಡಲಿವೆ ಎಂದು ಹೇಳಿದರು.
ಸರ್ವಜ್ಞ ಕವಿಯ ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’ ಎಂಬ ನುಡಿಯಂತೆ, ರೈತ ಬೆಳೆಯನ್ನು ಬೆಳೆಯದಿದ್ದರೆ ನಮಗೆ ಉಣ್ಣಲು ಅನ್ನವೂ ಇರುವುದಿಲ್ಲ, ಮಾನ ಮುಚ್ಚಲು ಬಟ್ಟೆಯೂ ಸಿಗುವುದಿಲ್ಲ. ಪ್ರತಿಯೊಂದು ರಂಗಕ್ಕೂ ಕೃಷಿಯೇ ಮೂಲಾಧಾರ. ನಮ್ಮ ಪೂರ್ವಜರು ನಮಗಾಗಿ ಬಿಟ್ಟುಹೋದ ಭೂಮಿಯನ್ನು ರಿಯಲ್ ಎಸ್ಟೇಟ್ ಹೆಸರಿನಲ್ಲಿ ಮಾರಾಟ ಮಾಡದೆ, ಅದನ್ನು ಫಲವತ್ತಾಗಿಸಿ 140 ಕೋಟಿ ದೇಶವಾಸಿಗಳಿಗೆ ಅನ್ನ ನೀಡುವ ಪವಿತ್ರ ಕಾಯಕದಲ್ಲಿ ನಿರತರಾಗಬೇಕು.
ಇದನ್ನೂ ಓದಿ: ಆನ್ಲೈನ್ ವಂಚನೆ | ಮಾಜಿ ಸೈನಿಕರೇ ಎಚ್ಚರ
ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದ ಸಂಸದರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪ್ರತಿಯೊಂದು ರಂಗದಲ್ಲೂ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಶ್ರಮಿಸುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯ ಒಟ್ಟು 1,42,767 ರೈತರಿಗೆ ರೂ.713.72 ಕೋಟಿ ನೇರ ಹಣ ವರ್ಗಾವಣೆಯಾಗಿದೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯ 3,43,000 ರೈತರು ರೂ.113 ಕೋಟಿ ಪ್ರೀಮಿಯಂ ವಂತಿಗೆ ಪಾವತಿಸಿದ್ದರು. ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿಯಾಗಿ ರೂ.722 ಕೋಟಿ ಬೆಳೆ ವಿಮೆ ಪರಿಹಾರ ಧನ ತಲುಪಿದೆ. ಯಾವುದೇ ಅರ್ಹ ರೈತರಿಗೆ ವಿಮೆ ಹಣ ತಲುಪದೇ ಇದ್ದರೆ ಪೂರ್ಣ ವಿವರಗಳನ್ನು ನೀಡಿದರೆ, ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಂಸದರು ಭರವಸೆ ನೀಡಿದರು.
ಕೃಷಿ ಯಂತ್ರೋಪಕರಣ ಯೋಜನೆಯಡಿ ಜಿಲ್ಲೆಯ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ರೂ.47.72 ಕೋಟಿ ವೆಚ್ಚದಲ್ಲಿ 17,306 ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಅಂತೆಯೇ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೂ.94 ಕೋಟಿ ಸಹಾಯಧನದೊಂದಿಗೆ 53,301 ತುಂತುರು ಘಟಕಗಳನ್ನು ನೀಡಲಾಗಿದೆ ಎಂದು ತಿಳಿಸಿದ ಅವರು, ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಜಿಲ್ಲೆಯಲ್ಲಿ 2.65 ಲಕ್ಷಕ್ಕೂ ಹೆಚ್ಚು ಜನರು ಸಾಲ ಸೌಲಭ್ಯ ಪಡೆದಿದ್ದಾರೆ.
ಇದನ್ನೂ ಓದಿ: ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ
ಜಿಲ್ಲೆಯಲ್ಲಿ ಒಟ್ಟು ರೂ.3,891 ಕೋಟಿಯಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗಿದೆ. ಇದರೊಂದಿಗೆ ಪಿಎಂ ಸ್ವನಿಧಿ ಯೋಜನೆಯಡಿ ಜಿಲ್ಲೆಯ 5,800 ಜನ ಬೀದಿಬದಿ ವ್ಯಾಪಾರಿಗಳಿಗೆ ರೂ.14.90 ಕೋಟಿ ನೆರವು ಒದಗಿಸಲಾಗಿದೆ. 2025–26ನೇ ಸಾಲಿನಲ್ಲಿ ಜಿಲ್ಲೆಯ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ಸುಮಾರು 180 ರೈತರಿಗೆ ಅಗತ್ಯ ಉಪಕರಣ ಹಾಗೂ ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ರೈತರು, ಕೃಷಿ ಕಾರ್ಮಿಕರು ಹಾಗೂ ಶೋಷಿತ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಯಲ್ಲಪ್ಪ ಹರಿಜನ್ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ನೂತನ ಸಂಶೋಧನೆ ಹಾಗೂ ಆಧುನಿಕ ತಂತ್ರಜ್ಞಾನಗಳ ನೇರ ವರ್ಗಾವಣೆಯಿಂದ ಕಚ್ಚಾ ರೇಷ್ಮೆ ಉತ್ಪಾದನೆ, ಉತ್ಪಾದಕತೆ ಹೆಚ್ಚಿಸುವುದರ ಜೊತೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಾಧ್ಯ ಎಂದು ಹೇಳಿದರು.
ಕೇಂದ್ರ ರೇಷ್ಮೆ ಮಂಡಳಿಯಿಂದ ದೇಶಾದ್ಯಂತ 219 ಜಿಲ್ಲೆಗಳಲ್ಲಿ 100 ದಿನಗಳ ಬೃಹತ್ ಅಭಿಯಾನ ನಡೆಯುತ್ತಿದೆ. ತಂತ್ರಜ್ಞಾನ ಅಭಿವೃದ್ಧಿಪಡಿಸಿದ ವಿಜ್ಞಾನಿಗಳೇ ನೇರವಾಗಿ ರೈತರ ಬಳಿಗೆ ತೆರಳಿ ಮಾಹಿತಿ ಒದಗಿಸುವುದು ಈ ಅಭಿಯಾನದ ವಿಶೇಷವಾಗಿದೆ. ತಂತ್ರಜ್ಞಾನ ವರ್ಗಾವಣೆಯಲ್ಲಿ ಕಂಡುಬರುವ ಅಂತರವನ್ನು ಕಡಿಮೆ ಮಾಡುವುದು ಇದರ ಮುಖ್ಯ ಧ್ಯೇಯ ಎಂದು ತಿಳಿಸಿದ ಅವರು, ರೇಷ್ಮೆ ಕೃಷಿಯಲ್ಲಿ ರೈತರು ಎದುರಿಸುತ್ತಿರುವ ರೋಗಬಾಧೆ, ತಾಂತ್ರಿಕ ಸವಾಲುಗಳು ಹಾಗೂ ತಮ್ಮ ಅನುಭವಗಳನ್ನು ವಿಜ್ಞಾನಿಗಳೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯಲ್ಲಿ 12.97 ಲಕ್ಷ ಮತದಾರರ ಕರಡು ಪಟ್ಟಿ ಪ್ರಕಟ | ಜಿಲ್ಲಾಧಿಕಾರಿ ವೆಂಕಟೇಶ್
ನನ್ನ ರೇಷ್ಮೆ ನನ್ನ ಹೆಮ್ಮೆ ಅಭಿಯಾನದ ಅಂಗವಾಗಿ ರೈತರು ಮತ್ತು ವಿಜ್ಞಾನಿಗಳ ನಡುವಿನ ಸಂವಾದ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ರೇಷ್ಮೆ ಬೆಳಗಾರ ರೈತರು ಹಾಗೂ ವಿಜ್ಞಾನಿಗಳು ತಮ್ಮ ಸಲಹೆ-ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್.ಬೋಜಣ್ಣ, ಕೇಂದ್ರ ರೇಷ್ಮೆ ಮಂಡಳಿ ಚಿತ್ರದುರ್ಗ ಪ್ರಾದೇಶಿಕ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ವೈ.ಶ್ರೀನಿವಾಸಲು, ಪ್ರಶಾಂತ್, ರೇಷ್ಮೆ ಸಹಾಯಕ ನಿರ್ದೇಶಕಿ ಉಷಾ ಸೇರಿದಂತೆ ರೇಷ್ಮೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೇಷ್ಮೆ ಬೆಳೆಗಾರ ರೈತರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

