CHITRADURGA NEWS | 25 AUGUST 2026
ಚಿತ್ರದುರ್ಗ: ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು, ಬಿಸಿಯೂಟ ತಯಾರಕರ ಗೌರವಧನ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಸಿಯೂಟ ತಯಾರಕರು ಹಾಗೂ ಸಹಾಯಕರು ಜಿಲ್ಲಾಧಿಕಾರಿಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯಲ್ಲಿ 12.97 ಲಕ್ಷ ಮತದಾರರ ಕರಡು ಪಟ್ಟಿ ಪ್ರಕಟ | ಜಿಲ್ಲಾಧಿಕಾರಿ ವೆಂಕಟೇಶ್
ನಗರದ ದಾವಣಗೆರೆ ರಸ್ತೆಯಲ್ಲಿರುವ ಸಂಘದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಸಿಯೂಟ ತಯಾರಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಕಳೆದ 25 ವರ್ಷಗಳಿಂದ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರಿಗೆ ಕಳೆದ ಎರಡು ತಿಂಗಳ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಕೆಲಸದಿಂದ ಬಿಡುಗಡೆಗೊಳ್ಳುವ ಬಿಸಿಯೂಟ ತಯಾರಕರಿಗೆ ಇಡುಗಂಟು ಹಣ ನೀಡಬೇಕು. ಕನಿಷ್ಠ ವೇತನ ಜಾರಿಗೊಳಿಸಿ, ‘ಸ್ಕೀಮ್ ವರ್ಕರ್ಸ್’ ಎಂಬ ಬದಲಿಗೆ ಕಾರ್ಮಿಕರೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ನಿವೃತ್ತ ಬಿಸಿಯೂಟ ತಯಾರಕರಿಗೆ ಪಿಂಚಣಿ ನೀಡದ ಹಿನ್ನೆಲೆಯಲ್ಲಿ ಪ್ರಸ್ತುತ ನೀಡಲಾಗುತ್ತಿರುವ ₹40 ಸಾವಿರ ಇಡುಗಂಟು ಹಣವನ್ನು ₹2 ಲಕ್ಷಕ್ಕೆ ಹೆಚ್ಚಿಸಬೇಕು. ಮೊಟ್ಟೆ ಸುಲಿಯುವ ಭತ್ಯೆಯನ್ನು ಪ್ರತಿ ಮೊಟ್ಟೆಗೆ ₹1ಕ್ಕೆ ಹೆಚ್ಚಿಸಬೇಕು. ರಾಜ್ಯದ 95 ಬಿಸಿಯೂಟ ತಯಾರಕರಿಗೆ ಬಾಕಿ ಇರುವ ಮೊಟ್ಟೆ ಸುಲಿದ ಹಣವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಆನ್ಲೈನ್ ವಂಚನೆ | ಮಾಜಿ ಸೈನಿಕರೇ ಎಚ್ಚರ
100 ವಿದ್ಯಾರ್ಥಿಗಳವರೆಗೆ ಇರುವ ಶಾಲೆಗಳಲ್ಲಿ ಇಬ್ಬರು ಅಡುಗೆಯವರ ಮೇಲೆ ಹೆಚ್ಚಿನ ಕೆಲಸದ ಹೊರೆ ಬೀಳುತ್ತಿರುವುದರಿಂದ ಕನಿಷ್ಠ ಮೂರು ಬಿಸಿಯೂಟ ತಯಾರಕರನ್ನು ಕಡ್ಡಾಯವಾಗಿ ನೇಮಿಸಬೇಕು. ಪ್ರತಿತಿಂಗಳ ಐದನೇ ತಾರೀಖಿನಂದು ಗೌರವಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ತಯಾರಕರಿಗೆ ₹10 ಲಕ್ಷ ಮರಣ ಪರಿಹಾರ ನೀಡಬೇಕು. ಶಾಲೆಗಳಲ್ಲಿ ಕೆಲಸದ ವೇಳೆ ಅಪಘಾತ ಸಂಭವಿಸಿದರೆ ಆಸ್ಪತ್ರೆ ವೆಚ್ಚಕ್ಕಾಗಿ ₹1 ಲಕ್ಷ ನೆರವು ನೀಡಬೇಕು. ರಾಜ್ಯಾದ್ಯಂತ ಪಬ್ಲಿಕ್ ಶಾಲೆಗಳನ್ನು ಆರಂಭಿಸಿದರೂ ಹಾಲಿ ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿರುವವರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ಬಿಡುಗಡೆಗೊಳಿಸದೆ ಉದ್ಯೋಗ ಕಲ್ಪಿಸಬೇಕು. ಬಿಸಿಯೂಟ ತಯಾರಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಿ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಈ ಎಲ್ಲ ಬೇಡಿಕೆಗಳ ಕುರಿತು ಚರ್ಚಿಸಲು ಶಿಕ್ಷಣ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಕೂಡಲೇ ಸಭೆ ಕರೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಇದನ್ನೂ ಓದಿ: ಕುಡಿಯುವ ನೀರಿನ ಸಮಸ್ಯೆ ತಕ್ಷಣ ಪರಿಹರಿಸಿ | ಡಿಸಿ ಟಿ.ವೆಂಕಟೇಶ್
ಪ್ರತಿಭಟನೆಯ ನೇತೃತ್ವವನ್ನು ಗೌರವಾಧ್ಯಕ್ಷ ಜಿ.ಸಿ. ಸುರೇಶ್ ಬಾಬು, ಅಧ್ಯಕ್ಷ ಪರ್ವೀನ್ ಬಾನು, ಉಪಾಧ್ಯಕ್ಷರಾದ ಕಾಂತಮ್ಮ, ರಜಿಯಾ, ನಾಗಮ್ಮ, ಗಿರಿಜಮ್ಮ, ತಿಪ್ಪಮ್ಮ ಹಾಗೂ ಸತ್ಯಕೀರ್ತಿ ವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

