CHITRADURGA NEWS | 19 OCTOBER 2026
ಚಿತ್ರದುರ್ಗ: ವಿಕಲಚೇತನರಿಗೆ ನೀಡುವ ಮಾಸಾಶನವನ್ನು ಕನಿಷ್ಠ ₹6 ಸಾವಿರಕ್ಕೆ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಸರ್ಕಾರವನ್ನು ಆಗ್ರಹಿಸಿದರು.
ಇದನ್ನೂ ಓದಿ: ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಚಿತ್ರದುರ್ಗದ ಕೋಲಾಟ ಕಲಾವಿದ ನರಸಪ್ಪ ಆಯ್ಕೆ
ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಸೋಮವಾರ ಶ್ರೀ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಬೆಂಗಳೂರಿನ ವಿಕಲಚೇತನರ ಅಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಶರಣಸಂಸ್ಕೃತಿ ಉತ್ಸವ-2026ರ ರಾಜ್ಯಮಟ್ಟದ ವಿಕಲಚೇತನರ ಸಮಾವೇಶ ಹಾಗೂ ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನದ ಪ್ರಾಸ್ತಾವಿಕ ಭಾಷಣದಲ್ಲಿ ಅವರು ಮಾತನಾಡಿದರು.
ವಿಕಲಚೇತನರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಇತರ ವರ್ಗಗಳಿಗೆ ವಿವಿಧ ಯೋಜನೆಗಳಡಿ ನೆರವು ನೀಡಲಾಗುತ್ತಿದ್ದರೂ ವಿಕಲಚೇತನರಿಗೆ ಸಮರ್ಪಕ ಸೌಲಭ್ಯಗಳು ಸಿಗುತ್ತಿಲ್ಲ. ಮಾಸಾಶನವನ್ನು ₹800ರಿಂದ ಕನಿಷ್ಠ ₹6 ಸಾವಿರಕ್ಕೆ ಹೆಚ್ಚಿಸಬೇಕು. ಉಚಿತ ಬಸ್ಪಾಸ್ ನೀಡಬೇಕು ಹಾಗೂ ವಿಕಲಚೇತನರ ವಿವಾಹ ಪ್ರೋತ್ಸಾಹಧನವನ್ನು ₹5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಮಾಸಾಶನಕ್ಕೆ ಆದಾಯ ಮಿತಿ ವಿಧಿಸಬಾರದು, ವಿಕಲಚೇತನರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಪ್ರತಿ ತಾಲೂಕಿನಲ್ಲಿ ವಿಕಲಚೇತನರ ಭವನ ನಿರ್ಮಿಸಬೇಕು. ತಾಲೂಕು ಆಡಳಿತದಿಂದ ಪ್ರತಿ ತಿಂಗಳು ಕುಂದುಕೊರತೆ ಸಭೆ ನಡೆಸಬೇಕು. ವಿಆರ್ಡಬ್ಲ್ಯೂ, ಯುಆರ್ಡಬ್ಲ್ಯೂ ಹಾಗೂ ಎಂಆರ್ಡಬ್ಲ್ಯೂ ನೌಕರರನ್ನು ಕಾಯಂಗೊಳಿಸಬೇಕು. ಖಾಲಿ ಇರುವ ರಾಜ್ಯ ವಿಕಲಚೇತನರ ಹಕ್ಕುಗಳ ಆಯುಕ್ತರ ಹುದ್ದೆ ಭರ್ತಿ ಮಾಡಿ, ಹೊರಗುತ್ತಿಗೆ ಹಾಗೂ ದಿನಗೂಲಿ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಬೇಡಿಕೆಗಳ ಪಟ್ಟಿ ಮಂಡಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 19 | ರಾಗಿ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ಬಸವಕುಮಾರ ಸ್ವಾಮೀಜಿ, ವಿಕಲಚೇತನರ ಬಗ್ಗೆ ಅನುಕಂಪದ ಮಾತುಗಳನ್ನಾಡುವುದಷ್ಟೇ ಸಾಲದು, ಅವರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಬೇಕು. ತಮ್ಮ ಹಕ್ಕುಗಳಿಗಾಗಿ ವಿಕಲಚೇತನರು ಮೊದಲು ಸಂಘಟಿತರಾಗಿ ಹೋರಾಟ ನಡೆಸಬೇಕು. ಅವರ ಹೋರಾಟಕ್ಕೆ ಮಠ ಸದಾ ಬೆಂಬಲವಾಗಿ ನಿಲ್ಲಲಿದೆ. ಸಂಘಟಿತ ಹೋರಾಟದಿಂದ ಮಾತ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯ ಎಂದು ಹೇಳಿದರು. ಅಂಧರ ಬದುಕಿನಲ್ಲಿ ಬೆಳಕು ಮೂಡಿಸುವ ಕೆಲಸ ಮಾಡುತ್ತಿರುವ ಗಾಯತ್ರಿ ಶಿವರಾಂ ಅವರ ಸೇವೆಯನ್ನು ಶ್ಲಾಘಿಸಿದರು.
ಶಿವಶರಣ ಮಾದಾರ ಗುರುಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ವಿಕಲಚೇತನರಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಸಮಾಜದ ಜವಾಬ್ದಾರಿಯಾಗಿದೆ. ದೈಹಿಕ ವಿಕಲತೆ ಸಾಧನೆಗೆ ಅಡ್ಡಿಯಾಗಬಾರದು. ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೂಲಕ ವಿಕಲಚೇತನರು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಅವರ ಹಕ್ಕುಗಳಿಗಾಗಿ ಎಲ್ಲರೂ ಕೈಜೋಡಿಸಬೇಕು ಎಂದರು.
ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಿ. ಬಸವರಾಜ್ ಮಾತನಾಡಿ, ವಿಕಲಚೇತನರನ್ನು ಸಮಾಜದ ಆಸ್ತಿಯೆಂದು ಪರಿಗಣಿಸಿ ಸಮಾನ ಅವಕಾಶ ಕಲ್ಪಿಸಬೇಕು. ಅವರ ಸಾಧನೆಗೆ ಪ್ರೋತ್ಸಾಹ ನೀಡುವುದರ ಜತೆಗೆ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮುನ್ನಡೆಯಲು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಇದನ್ನೂ ಓದಿ: ಶರಣ ಸಂಸ್ಕೃತಿ ಉತ್ಸವದಲ್ಲಿ ಮಹಿಳಾ ಸಮಾವೇಶ | ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಮಾತನಾಡಿ, ವಿಕಲಚೇತನರು ತಮ್ಮ ದೈಹಿಕ ಸ್ಥಿತಿಯನ್ನು ವೈಫಲ್ಯವೆಂದು ಭಾವಿಸದೆ ಆತ್ಮವಿಶ್ವಾಸದಿಂದ ಬದುಕಬೇಕು. ಅವರಿಗೆ ಉತ್ತಮ ಶಿಕ್ಷಣ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.
ಚಿತ್ರದುರ್ಗ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಎಸ್.ಪಿ. ಮಾತನಾಡಿ, ತಾವು ಕೂಡ ವಿಕಲಚೇತನರಾಗಿದ್ದು, ವಿಕಲಚೇತನರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾದ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ಜಗಳೂರು ಘಟಕದ ಅಧ್ಯಕ್ಷ ಅಜ್ಜಯ್ಯ ನಾಡಿಗರ್, ದಾವಣಗೆರೆಯ ಮಾನಸ ಸಾಧನ ವಿಕಲಚೇತನ ಸೇವಾ ಟ್ರಸ್ಟ್ ಅಧ್ಯಕ್ಷೆ ಎಂ. ವಿಜಯಲಕ್ಷ್ಮಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಜಿಲ್ಲಾ ಅಧಿಕಾರಿ ಡಿ.ಟಿ. ಜಗನ್ನಾಥ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಗುರುಮಠಕಲ್ನ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ವಿನಾಯಕ ತೊಡರನಾಳ್, ಗಾಯತ್ರಿ ಶಿವರಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಮದ್ಯಪಾನ ನಿಯಂತ್ರಣಕ್ಕೆ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಲಿ | ಮಠಾಧೀಶರ ಒತ್ತಾಯ
ಜಗಳೂರಿನ ರಾಘವೇಂದ್ರ ಆಸ್ಪತ್ರೆಯ ಡಾ. ಅನಿರುದ್ಧ ರಾಘವೇಂದ್ರ ಜೆ., ಸಾಮಾಜಿಕ ಅರಣ್ಯ ವಲಯದ ಕೊಟ್ರೇಶ್ ಎ., ರೈತ ಸಂಘದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿಯ ಬಸವರೆಡ್ಡಿ, ಕರುನಾಡ ವಿಜಯಸೇನೆಯ ಅಧ್ಯಕ್ಷ ಕೆ.ಟಿ. ಶಿವಕುಮಾರ್ ಹಾಗೂ ಮಾರುತಿ ಆರ್. ತಮಲೇಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಮಹಾಂತೇಶ್ ಬ್ರಹ್ಮ ರಚಿಸಿದ ವಿಕಲಚೇತನ ವಿಶೇಷ ಕೂಗು ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಮಾರುತಿ ಆರ್. ತಮಲೇಹಳ್ಳಿ ಸ್ವಾಗತಿಸಿದರು. ಎಸ್.ವಿ. ಶಾಂತಕುಮಾರ್ ನಿರೂಪಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

