ಮುಖ್ಯ ಸುದ್ದಿ
ಎರಡು ವಾರದ ಹಿಂದೆ ಮಾಡಿದ್ದ ಕೊಬ್ಬರಿ ನೋಂದಣಿ ರದ್ದು | ಪುನಃ ಹೊಸದಾಗಿ ಪ್ರಾರಂಭ

CHITRADURGA NEWS | 21 FEBRUARY 2024
ಚಿತ್ರದುರ್ಗ: ರೈತರ ಹೆಸರಿನಲ್ಲಿ ಅಕ್ರಮ ನಡೆದ ಆರೋಪದ ಹಿನ್ನಲೆಯಲ್ಲಿ ಕಳೆದ ಎರಡು ವಾರದ ಹಿಂದೆ ನಡೆದಿದ್ದ ಉಂಡೆ ಕೊಬ್ಬರಿ ನೋಂದಾಣಿಯನ್ನು ಸಂಪೂರ್ಣ ರದ್ದು ಪಡಿಸಲಾಗಿದೆ. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮೂಲಕ ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಖರೀದಿಸಲು ರೈತರ ಹೆಸರು ನೋಂದಣಿ ಮಾಡಿಕೊಂಡಿದ್ದರು. ಆದರೆ ಇದೀಗ ಆ ಪ್ರಕ್ರಿಯೆಯನ್ನು ರದ್ದುಪಡಿಸಿರುವ ಸರ್ಕಾರ ಹೊಸದಾಗಿ ನೋಂದಣಿ ಮಾಡಿಸಿ, ಖರೀದಿಸಲು ಆದೇಶಿಸಿದೆ.
ಚಿತ್ರದುರ್ಗ, ಹಾಸನ, ಮಂಡ್ಯ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ರಾಮನಗರ ಜಿಲ್ಲೆಗಳಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಹಾಗೂ ತುಮಕೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು (ಎಪಿಎಂಸಿ) ಮೂಲಕ ಖರೀದಿಸಲು ಆದೇಶಿಸಲಾಗಿದೆ.
ಪ್ರತಿ ಎಕರೆಗೆ 6 ಕ್ವಿಂಟಲ್, ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಕೊಬ್ಬರಿ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಬಾರಿ ಯಾವುದೇ ಲೋಪದೋಷಗಳು ಉಂಟಾಗದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ.

ವರ್ತಕರು, ದಲ್ಲಾಳಿಗಳು, ರವಾನೆದಾರರು ರೈತರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದರು. ಈ ಅಕ್ರಮ ಬೆಳಕಿಗೆ ಬರುತ್ತಿದ್ದಂತೆಯೇ ತನಿಖೆ ನಡೆಸಿದ ಸಹಕಾರ ಇಲಾಖೆಯು ಕೆಲವು ನೌಕರರನ್ನು ಅಮಾನತು ಮಾಡಿತ್ತು. ಹಲವು ರೈತರಿಗೆ ನೋಂದಣಿ ಮಾಡಿಸಲು ಅವಕಾಶವೇ ಸಿಕ್ಕಿರಲಿಲ್ಲ. ಈಗ ಮತ್ತೆ ಹೊಸದಾಗಿ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ತರಳಬಾಳು ಹುಣ್ಣಿಮೆ ಆಚರಣೆ | ಸಿರಿಗೆರೆ ಸದ್ಧರ್ಮ ನ್ಯಾಯಪೀಠಕ್ಕೆ ಬಿಡುವು

ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿದ ಹಿನ್ನೆಲೆಯಲ್ಲಿ ಬೆಂಬಲ ಬೆಲೆಯಲ್ಲಿ ಕೇಂದ್ರ ಸರ್ಕಾರ ಖರೀದಿ ಸುವಂತೆ ರೈತರು ಸತತ ವಾಗಿ ಒತ್ತಡ ಹಾಕಿ ದ್ದರು. ಹಲವು ದಿನಗಳ ಹೋರಾಟದ ಫಲ ವಾಗಿ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮೂಲಕ 6.25 ಲಕ್ಷ ಕ್ವಿಂಟಲ್ ಖರೀದಿಸಲು ಮುಂದಾಗಿತ್ತು.
ಜನವರಿಯಿಂದ ಮೂರು ಬಾರಿ ರೈತರ ಹೆಸರು ನೋಂದಣಿ ಪ್ರಕ್ರಿಯೆ ಮುಂದೂಡ ಲಾಗಿತ್ತು. ಕೊನೆಗೂ ಫೆ. 5ರಿಂದ ನೋಂದಣಿ ಆರಂಭಿಸಿದ್ದು, ನಾಲ್ಕು ದಿನಗಳಲ್ಲಿ ನೋಂದಣಿ ಸ್ಥಗಿತಗೊಳಿಸಲಾಗಿತ್ತು. ಈ ಸಮಯದಲ್ಲಿ ಸರ್ವರ್ ಸಮಸ್ಯೆ ತೀವ್ರವಾಗಿ ಕಾಡಿತ್ತು. ಕೊನೆಗೆ ನೋಂದಣಿ ಮಾಡಿಸಲು ಸಾಧ್ಯವಾಗದೆ ರೈತರು ಪ್ರತಿಭಟನೆ ನಡೆಸಿದ್ದರು.
ಚಿತ್ರದುರ್ಗ ಜಿಲ್ಲೆಯ ಜಿಲ್ಲೆಯ ಹೊಸದುರ್ಗದ ಎಪಿಎಂಸಿ ಯಲ್ಲಿ 2, ಹಿರಿಯೂರು ಮತ್ತು ಚಿತ್ರದುರ್ಗ ದಲ್ಲಿ ತಲಾ 1 ಕೇಂದ್ರ ತೆರೆಯಲಾಗಿದೆ. ಫೆ.5 ರಿಂದ ನೋಂದಣಿ ಪ್ರಾರಂಭವಾಗಿ ಫೆ.9 ರ ಮಧ್ಯಾಹ್ನ ಸ್ಥಗಿತವಾಗಿತ್ತು.
ಮೊದಲ ದಿನದಿಂದಲು ನಾಲ್ಕು ಕೇಂದ್ರದಲ್ಲೂ ಸರ್ವರ್ ಸಮಸ್ಯೆ ಎದುರಾಗಿತ್ತು. ಫೆ.8 ರವರೆಗೆ 2,927 ರೈತರು ಬಯೋಮೆಟ್ರಿಕ್ ಮೂಲಕ 43,401 ಕ್ವಿಂಟಲ್ ಉಂಡೆ ಕೊಬ್ಬರಿ ನೋಂದಣಿ ಮಾಡಿಸಿದ್ದರು. ಫೆ.9 ರಂದು ಮಧ್ಯಾಹ್ನದ 2.30 ಕ್ಕೆ 544 ರೈತರು 7586 ಕ್ವಿಂಟಲ್ ನೋಂದಾಣಿ ಮಾಡಿಸುತ್ತಿದ್ದಂತೆ ಸರ್ವರ್ ಸ್ಥಗಿತಗೊಂಡಿದೆ.
ಐದು ದಿನಕ್ಕೆ ಜಿಲ್ಲೆಯಲ್ಲಿ 3471 ರೈತರು 50,987 ಕ್ವಿಂಟಲ್ ನೋಂದಾಣಿ ಮಾಡಿಸಿದ್ದಾರೆ. ಕಳೆದ ವರ್ಷ ಹೊಸದುರ್ಗ, ಹಿರಿಯೂರು ಎರಡು ಕೇಂದ್ರಗಳಲ್ಲಿ 21,278 ಕ್ವಿಂಟಲ್ ಖರೀದಿಸಲಾಗಿತ್ತು.
