
CHITRADURGA NEWS | 23 AUGUST 2025
ಚಿತ್ರದುರ್ಗ: ಜಿಲ್ಲೆಯಲ್ಲಿ ಈ ಬಾರಿಯ ಗೌರಿ ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸೋಣ, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ಇದನ್ನೂ ಓದಿ: ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಇ.ಡಿ.ವಶಕ್ಕೆ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಹಾಗೂ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಕುರಿತು ಅಧಿಕಾರಿಗಳು ಹಾಗೂ ಸಂಘಟಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಗಣೇಶ ಹಬ್ಬ ಹಾಗೂ ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸಲು ಪೊಲೀಸ್ ಇಲಾಖೆಯೊಂದಿಗೆ ಎಲ್ಲರೂ ಕೈ ಜೋಡಿಸಬೇಕು.
ಈ ಬಾರಿ ಶೋಭಾಯಾತ್ರೆಯಲ್ಲಿ ಸುಮಾರು 4 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ಪೊಲೀಸ್ ಇಲಾಖೆಯಿಂದ ಈಗಾಗಲೇ ಸೂಕ್ತ ಬಂದೋಬಸ್ತ್‍ಗೆ ಕ್ರಮ ಕೈಗೊಳ್ಳಲಾಗಿದೆ. ನಗರದ ಬಿ.ಡಿ. ರಸ್ತೆ ಹಾಗೂ ಹೊಳಲ್ಕೆರೆ ರಸ್ತೆಯಲ್ಲಿ ಸುಗಮವಾಗಿ ಮೆರವಣಿಗೆ ಹಾದು ಹೋಗುವಂತೆ ನಗರಸಭೆಯಿಂದ ಬ್ಯಾರಿಕೇಡ್‍ಗಳನ್ನು ಅಳವಡಿಸಬೇಕು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 23 | ಹತ್ತಿ ರೇಟ್ ಎಷ್ಟಿದೆ?
ಪೊಲೀಸರು ವೀಕ್ಷಣೆಗೆ ಅನುಕೂಲವಾಗುವಂತೆ ವಾಚ್ ಟವರ್ ನಿರ್ಮಿಸಬೇಕು. ಸ್ವಚ್ಛತೆ, ಕುಡಿಯುವ ನೀರು ಹಾಗೂ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಮೆರವಣಿಗೆ ಸಾಗುವ ರಸ್ತೆ ಹಾಗೂ ಅಸು ಪಾಸಿನ ಸ್ಥಳದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಸಾರ್ವಜನಿಕರು ಹತ್ತಿ ನಿಲ್ಲದಂತೆ ನಿರ್ಬಂಧ ವಿಧಿಸಬೇಕು. ಬೆಸ್ಕಾಂ ಅಧಿಕಾರಿಗಳು ಮೆರವಣಿಗೆ ವೇಳೆ ವಿದ್ಯುತ್ ಅಡಚಣೆಯಾಗದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಇದೇ ವೇಳೆ ಪಿಓಪಿ ಗಣೇಶ ಮೂರ್ತಿಗಳ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ ಅವರು, ಪರಿಸರ ಅಧಿಕಾರಿಗಳು ತಂಡಗಳನ್ನು ರಚಿಸಿ ಗಣೇಶ ಮೂರ್ತಿಗಳ ಮಾರಾಟ ಸ್ಥಳಗಳಲ್ಲಿ ನಿರಂತರವಾಗಿ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜತ್ ಕುಮಾರ್ ಬಂಡಾರು ಅವರು ಮಾತನಾಡಿ, ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆಯಲ್ಲಿ ಡಿ.ಜೆ. ಬಳಸಲು ಅನುಮತಿ ನೀಡಲಾಗುವುದಿಲ್ಲ. ಕಳೆದ ಬಾರಿ ಶೋಭಾಯಾತ್ರೆಯಲ್ಲಿ ಸುಮಾರು 3 ಲಕ್ಷಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಸುಮಾರು 10ಕ್ಕೂ ಹೆಚ್ಚು ಜನರಿಗೆ ಡಿ.ಜೆ. ಶಬ್ದದಿಂದಾಗಿ ಕಿವಿಯ ತೊಂದರೆ ಉಂಟಾಗಿದೆ.
ಇದನ್ನೂ ಓದಿ: ಒಳಮೀಸಲಾತಿ | ಸ್ಪೃಶ್ಯ ಪದ ತೆಗೆದು ವಿಮುಕ್ತ ಸಮುದಾಯವೆನ್ನಿ | ಇಮ್ಮಡಿ ಶ್ರೀ
ಬಂದೋಬಸ್ತ್‍ಗೆ ನಿಯೋಜಿಸಿದ್ದ ಪೊಲೀಸ್ ಸಬ್ ಇನ್ಸ್‍ಪಕ್ಟರ್ ಓರ್ವರು ಸಹ ಕಿವಿ ಸಮಸ್ಯೆಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದಾರೆ. ಡಿ.ಜೆ. ಶಬ್ದದಿಂದಾಗಿ ಪೊಲೀಸ್ ವೈರ್‍ಲೆಸ್ ವಾಕಿ ಟಾಕಿಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಸಂವಹನದಲ್ಲಿ ಅಡೆ ತಡೆಯಾಗಿತ್ತು. ಇದರಿಂದಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ತೊಂದರೆಯಾಗುತ್ತದೆ. ಮೆರವಣಿಗೆಯಲ್ಲಿ ನಿಗದಿತ ಡೆಸಿಬಲ್‍ಗಿಂತ ಹೆಚ್ಚಿನ ಶಬ್ದ ಉಂಟುಮಾಡುವ ಧ್ವನಿ ವರ್ಧಕ ಸೇರಿದಂತೆ ಶಬ್ದಮಾಲಿನ್ಯ ಮಾಡುವ ಎಲೆಕ್ಟ್ರಾನಿಕ್ ಡಿವೈಸ್‍ಗಳನ್ನು ಬಳಸುವಂತಿಲ್ಲ.
ಸಾರ್ವಜನಿಕರಿಗೆ ಗೊಂದಲ ಉಂಟುಮಾಡುವ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪಟಾಕಿಗಳನ್ನು ಸಿಡಿಸುವಂತಿಲ್ಲ. ಒಂದು ವೇಳೆ ಯಾರಾದರೂ ಪಟಾಕಿ ಸಿಡಿಸಿದರೆ, ಅವರನ್ನು ಸ್ಥಳದಲ್ಲಿಯೇ ಬಂಧಿಸಲಾಗುವುದು. ಮೆರವಣಿಗೆಯಲ್ಲಿ ಪ್ರಚೋಧನಕಾರಿ ಘೋಷಣೆಗಳನ್ನು ಕೂಗಬಾರದು.
ಶೋಭಾಯಾತ್ರೆ ಮೆರವಣಿಗೆಗೆ ಸುಮಾರು 3000 ಪೊಲೀಸ್ ಸಿಬ್ಬಂದಿ ನೇಮಿಸಲಾಗುವುದು. ಬರುವ ಭಾನುವಾರ ಆಗಸ್ಟ್ 24 ರಂದು ಎಲ್ಲ ಧರ್ಮಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜತ್ ಕುಮಾರ್ ಬಂಡಾರು ತಿಳಿಸಿದರು.
ಇದನ್ನೂ ಓದಿ: ನಾಗಪುರ ದೀಕ್ಷಾ ಭೂಮಿ ಯಾತ್ರೆ | ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಈಶ್ವರ್ ನಾಯ್ಕ್, ಜಿಲ್ಲಾ ಪರಿಸರ ಅಧಿಕಾರಿ ಆಸಿಫ್ ಖಾನ್, ನಗರಸಭೆ ಆಯುಕ್ತೆ ರೇಣುಕಾ.ಎಂ ಜಿಲ್ಲೆಯ ಎಲ್ಲಾ ವಿಭಾಗಗಳ ಪೊಲೀಸ್ ಉಪಾಧೀಕ್ಷಕರು, ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸಂಘಟಕರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
