CHITRADURGA NEWS | 07 MARCH 2026
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನಕ್ಕೆ ಆಗ್ರಹಿಸಿ ಅಮರಣಾಂತ ಉಪವಾಸ ಕೈಗೊಂಡಿದ್ದ ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವುದು ನಾಗರಿಕ ಸಮಾಜವನ್ನೇ ಅಣಕಿಸುವಂತಿದೆ ಎಂದು ಛಲವಾದಿ ಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆನಂದ್ ಗೆ ಬೀಳ್ಕೊಡುಗೆ
ಒನಕೆ ಓಬವ್ವ ವೃತ್ತದಲ್ಲಿ ಮಾ.2ರಿಂದ ಐದು ದಿನಗಳ ಕಾಲ ಉಪವಾಸ ಕೈಗೊಂಡಿದ್ದ ತಿಪ್ಪೇಸ್ವಾಮಿ ಅವರನ್ನು ಆರಂಭದಲ್ಲಿಯೇ ಜಿಲ್ಲಾಡಳಿತ ಮನವೊಲಿಸಬಹುದಿತ್ತು. ಆದರೆ, ನಿರ್ಲಕ್ಷ್ಯ ವಹಿಸಿದ ಪರಿಣಾಮ ಅನ್ನದಾತ ಆಸ್ಪತ್ರೆ ಸೇರುವಂತಾಗಿದೆ ಎಂದರು.
ಜಿಲ್ಲೆಯ ಪ್ರತಿಯೊಬ್ಬರಿಗೂ ನೀರು ಬೇಕು. ಅದಕ್ಕಾಗಿ ಹೋರಾಟ ನಡೆಸುತ್ತಿದ್ದ ರೈತಮುಖಂಡ ಅಸ್ವಸ್ಥಗೊಂಡಿರುವುದು ದುಃಖದ ವಿಷಯ. ನಾಗರಿಕರಿಗಾಗಿ ಯಾವುದೇ ವ್ಯಕ್ತಿ ಹೋರಾಟ ನಡೆಸಿದರೆ, ಅದಕ್ಕೆ ಸ್ಪಂದಿಸುವುದು ಅಧಿಕಾರಸ್ಥರ ಕರ್ತವ್ಯ. ಈ ನಿಟ್ಟಿನಲ್ಲಿ ಲೋಪ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆ.ಟಿ.ತಿಪ್ಪೇಸ್ವಾಮಿ ಅವರಿಗೆ ಆಗಿರುವ ಅನ್ಯಾಯ ಖಂಡಿಸಿ, ಚಿಕಿತ್ಸೆ ವೆಚ್ಚ ಭರಿಸುವಂತೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನಕ್ಕಾಗಿ ಎಲ್ಲ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸುವುದು ಅಗತ್ಯ. ಈ ನಿಟ್ಟಿನಲ್ಲಿ ಪ್ರಮುಖರು ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ನಾಳೆ ಬಿಜೆಪಿ ಬೃಹತ್ ಜನ ಆಂದೋಲನ ಪೂರ್ವಭಾವಿ ಸಭೆ
ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ ಮಾತನಾಡಿ, ಜಿಲ್ಲೆಯನ್ನು ಎಲ್ಲ ಸರ್ಕಾರಗಳು ಕಡೆಗಣಿಸಿವೆ. ಈ ಬಾರಿಯೂ ಅದು ಮುಂದುವರಿದಿದೆ. ಜನಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಭದ್ರಾ
ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಬದ್ಧತೆ ಪ್ರದರ್ಶಿಸಬೇಕಿತ್ತು. ಆದರೆ, ಜಿಲ್ಲೆಯ ರಾಜಕಾರಣಿಗಳ ಒತ್ತಡ ಇಲ್ಲದ ಕಾರಣಕ್ಕೆ ಅವರು ನಿರ್ಲಕ್ಷಿಸಿದ್ದಾರೆ ಎಂದು ಅಮಧಾನ ವ್ಯಕ್ತಪಡಿಸಿದರು.
ರೈತರು ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡ ತಕ್ಷಣವೇ ಅವರನ್ನು ಮನವೊಲಿಸುವ ಕೆಲಸ ಮಾಡದೆ ಜಿಲ್ಲಾಡಳಿತ ತಪ್ಪು ಮಾಡಿದೆ. ಈಗ ರೈತ ಆಸ್ಪತ್ರೆಗೆ ದಾಖಲಾಗಿದ್ದು, 15 ಲಕ್ಷ ರೂ. ವೆಚ್ಚವಾಗಲಿದೆ. ಈ ಹಣವನ್ನು ಜಿಲ್ಲಾಡಳಿತ ಸಂಪೂರ್ಣ ಭರಿಸಲು ತಕ್ಷಣವೇ ಜಿಲ್ಲಾಡಳಿತ ಮುಂದಾಗಬೇಕು ಎಂದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಜಿಲ್ಲೆಯ ಜನರಿಗೆ ಕುಡಿಯುವ ನೀರು ಕೊಡಿ ಎಂದು ಉಪವಾಸ ಕುಳಿತಿದ್ದ ಹೋರಾಟಗಾರನನ್ನು ಅತ್ಯಂತ ಅಮಾನವೀಯವಾಗಿ ಜಿಲ್ಲಾಡಳಿತ ನಡೆಸಿಕೊಂಡಿದೆ. ಈ ಕುರಿತು ರಾಜ್ಯಮಟ್ಟದ ರೈತನಾಯಕರು ಶೀಘ್ರದಲ್ಲಿ ಜಿಲ್ಲೆಗೆ ಆಗಮಿಸಿ ಹೋರಾಟ ನಡೆಸಲಿದ್ದಾರೆ ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 07 | ಹತ್ತಿ ರೇಟ್ ಎಷ್ಟಿದೆ?
ರೈತರು ಬೇಡುವವರಲ್ಲ, ಕೊಡುವವರು. ನೀರು ಕೊಟ್ಟರೇ ನಾವು ಎಲ್ಲವನ್ನೂ ಬೆಳೆದು ಕೊಡುತ್ತೇವೆ. ಆದರೆ, ನೀರಿಗಾಗಿ ಸತ್ಯಾಗ್ರಹ ಕುಳಿತ ರೈತನತ್ತ ಗಮನಹರಿಸದ ಪರಿಣಾಮ ರೈತಮುಖಂಡನೊಬ್ಬ ಅಸ್ವಸ್ತಗೊಂಡಿದ್ದಾರೆ. ಇದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.
ಮುಖಂಡರಾದ ಟಿಪ್ಪು ಖಾಸೀಂ ಅಲಿ, ವೀರ ಸಂಗೊಳ್ಳಿ ರಾಯಣ್ಣ ಸೇನೆ ಅಧ್ಯಕ್ಷ ಟಿ.ಆನಂದ್ ಮಾತನಾಡಿ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ.ಎಸ್.ಅನಿಲ್‌ಕುಮಾರ್, ಕಾರ್ಯದರ್ಶಿ ಚಂದ್ರಶೇಖರ ಪಾಟೀಲ್, ಉಪಾಧ್ಯಕ್ಷ ಗಿರೀಶ್ ನಾಯ್ಕ್ ಮಾತನಾಡಿದರು. ನರೇನಹಳ್ಳಿ ಅರುಣ್‌ಕುಮಾರ್, ಚಳ್ಳಕೆರೆ ಬಸವರಾಜ್, ಜೋಗಿಮಟ್ಟಿ ಮಹೇಶಬಾಬು, ಆರ್.ಶೇಷಣ್ಣಕುಮಾರ್, ರವಿಕುಮಾರ್, ಎಂ.ದಯಾನಂದ್, ಮಲ್ಲಿಕಾರ್ಜುನ್ ಪಾರ್ಥ ಇತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
