
CHITRADURGA NEWS | 29 MAY 2026
ಚಿತ್ರದುರ್ಗ: ಹೊರನೋಟಕ್ಕೆ ನೇರ, ನಿಷ್ಠೂರವಾಗಿ ಮಾತನಾಡುತ್ತಿದ್ದರೂ, ಒಳಗಣ್ಣಿನಲ್ಲಿ ಅವರು ಅಪ್ಪಟ ಮಾತೃಹೃದಯಿಯಾಗಿದ್ದರು. ಅವರ ಕೊನೆಯುಸಿರಿನ ಸುದ್ದಿ ಕೇಳಿ ಒಮ್ಮೆಲೇ ಎದೆ ಜರ್ರೆಂದಿತು, ಮಾನಸಿಕವಾಗಿ ಆಘಾತವಾಯಿತು. ಹೀಗೆನ್ನುತ್ತಾ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಪಾವಗಡದ ಧೀಮಂತ ನಾಯಕ ವೆಂಕಟರಮಣಪ್ಪ ಅವರ ಅಗಲಿಕೆಗೆ ಅತ್ಯಂತ ಭಾವುಕರಾಗಿ ಕಣ್ಣೀರಿನ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೇ.29 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್..
ಕಾಲು ಶತಮಾನದ ಬಾಂಧವ್ಯ, ನೆನೆದು ಕರಗಿದ ಶ್ರೀಗಳು, ಈ ಕುರಿತು ಅತ್ಯಂತ ಆರ್ದ್ರತೆಯಿಂದ ಕೂಡಿರುವ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶ್ರೀಗಳು, ಕಳೆದುಹೋದ ದಿನಗಳನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
ನಮಗೂ ಅವರಿಗೂ ಕಳೆದ 25 ವರ್ಷಗಳ ಸುದೀರ್ಘ ಒಡನಾಟ. ಸದಾಕಾಲ ನಮ್ಮ ಹಿತವನ್ನೇ ಚಿಂತಿಸುತ್ತಿದ್ದ ಜೀವವದು. ಮಠದ ಪ್ರಗತಿಯ ಬಗ್ಗೆ ಅವರು ನೀಡುತ್ತಿದ್ದ ಸಲಹೆಗಳು ಮಾರ್ಗದರ್ಶಕವಾಗಿದ್ದವು. ಅವರ ಸಹಕಾರ, ಪ್ರೀತಿಯ ಸೂಚನೆಯ ಮೇರೆಗೇ ನಾವು ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿ ‘ಸಿದ್ಧರಾಮೇಶ್ವರ ಸಂದೇಶ ಯಾತ್ರೆ ಕೈಗೊಂಡಿದ್ದೆವು.
ಭೋವಿ ಸಮಾಜವನ್ನು ಒಂದೆಡೆ ತಂದು ಸಂಘಟಿಸಿದ್ದು, ಸಿದ್ಧರಾಮೇಶ್ವರ ಜಯಂತ್ಯೋತ್ಸವವನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಆಚರಿಸಿದ್ದು ಆ ಪುಣ್ಯಾತ್ಮನ ಬೆಂಬಲದಿಂದಲೇ ಎಂದು ಶ್ರೀಗಳು ಗದ್ಗದಿತರಾಗಿದ್ದಾರೆ.
ಇದನ್ನೂ ಓದಿ: DCC ಬ್ಯಾಂಕ್ ಅಧ್ಯಕ್ಷರಾಗಿ ಶಾಸಕ ಟಿ.ರಘುಮೂರ್ತಿ ಅವಿರೋಧ ಆಯ್ಕೆ
ಅಧಿಕಾರಿಗಳ ಪಾಲಿನ ಆಪತ್ಬಾಂಧವ
ವೆಂಕಟರಮಣಪ್ಪ ಅವರು ಸಮಾಜದ ಧ್ವನಿಯಿಲ್ಲದವರಿಗೆ ಹೇಗೆ ಆಸರೆಯಾಗಿದ್ದರು ಎಂಬುದನ್ನು ನೆನೆದ ಸ್ವಾಮೀಜಿ, “ಅವರು ಭೋವಿ ಸಮಾಜದ ಅಧಿಕಾರಿಗಳಿಗೆ ಕೇವಲ ನಾಯಕರಾಗಿರಲಿಲ್ಲ, ಒಂದು ಗಟ್ಟಿ ರಕ್ಷಾಕವಚದಂತೆ ಇದ್ದವರು. ಅಧಿಕಾರ ಇರಲಿ, ಬಿಡಲಿ, ತೊಂದರೆಗೆ ಸಿಲುಕಿದ ಸಮಾಜದ ಅಧಿಕಾರಿಗಳು ಕಣ್ಣೀರು ಹಾಕುತ್ತಾ ಬಂದರೆ, ಕಣ್ಣೊರೆಸುವ ಆಪತ್ಬಾಂಧವನಂತೆ ನಿಲ್ಲುತ್ತಿದ್ದರು ಎಂದು ಕೊಂಡಾಡಿದ್ದಾರೆ.
ರಾಜ್ಯಾದ್ಯಂತ ನಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸಭೆ-ಸಮಾರಂಭಗಳಲ್ಲಿ ಭಾಗವಹಿಸುತ್ತಾ, “ಶಿಕ್ಷಣ ಪಡೆಯಿರಿ, ಸಂಘಟಿತರಾಗಿ, ದುಶ್ಚಟ ಮುಕ್ತ ಬದುಕು ಕಟ್ಟಿಕೊಳ್ಳಿ” ಎಂದು ಅವರು ಸಮಾಜಕ್ಕೆ ನೀಡುತ್ತಿದ್ದ ಕರೆ ಇಂದಿಗೂ ಕಿವಿಯಲ್ಲಿ ಮಾರ್ದನಿಸುತ್ತಿದೆ. ಪಾವಗಡ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಸಮಾಜದ ಉದ್ಧಾರಕ್ಕಾಗಿ ತಮ್ಮ ಇಡೀ ಬದುಕನ್ನೇ ಅವರು ಸಮರ್ಪಿಸಿಕೊಂಡಿದ್ದರು.
ಇದನ್ನೂ ಓದಿ: ಮೊಳಕಾಲ್ಮೂರು ಬಳಿ ಮತ್ತೊಂದು ಅಪಘಾತ | ಚಳ್ಳಕೆರೆಯ 5 ಜನ ಸಾವು | ಒಂದೇ ದಿನದ ಅಂತರದಲ್ಲಿ ಜಿಲ್ಲೆಯಲ್ಲಿ ಹತ್ತು ಸಾವು
ತುಂಬಲಾರದ ಶೂನ್ಯ:
ಅವರ ಈ ಹಠಾತ್ ಅಗಲಿಕೆ ಭೋವಿ ಸಮಾಜಕ್ಕೆ ಹಾಗೂ ಪಾವಗಡ ಕ್ಷೇತ್ರಕ್ಕೆ ಎಂದಿಗೂ ತುಂಬಲಾರದ ದೊಡ್ಡ ನಷ್ಟ ಮತ್ತು ಆಘಾತ. ಆ ಜೀವಕ್ಕೆ ಚಿರಶಾಂತಿ ಸಿಗಲಿ. ತಮ್ಮ ನೆಚ್ಚಿನ ನಾಯಕನನ್ನು ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿರುವ ಅವರ ಕುಟುಂಬಸ್ಥರಿಗೆ, ಆತ್ಮೀಯ ಮಿತ್ರರಿಗೆ ಹಾಗೂ ಅನಾಥಪ್ರಜ್ಞೆ ಎದುರಿಸುತ್ತಿರುವ ಪಾವಗಡದ ಮತದಾರ ಪ್ರಭುಗಳಿಗೆ ಈ ಅಪಾರ ದುಃಖವನ್ನು ತಡಿಯುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ” ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಪ್ರಾರ್ಥಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

