ಮುಖ್ಯ ಸುದ್ದಿ
ಮುಖ್ಯಮಂತ್ರಿಗೆ ಪತ್ರ ಬರೆದ ಸಚಿವ ಡಿ.ಸುಧಾಕರ್ | ಪತ್ರದ ಪೂರ್ಣ ವಿವರ ಇಲ್ಲಿದೆ

CHITRADURGA NEWS | 24 FEBRUARY 2025
ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಪೂರ್ಣ ವಿವರ ಹೀಗಿದೆ..
ಸಚಿವ ಡಿ.ಸುಧಾಕರ್ ಪತ್ರದ ಸಾರಾಂಶ:

ಭದ್ರಾ ಮೇಲ್ದಂಡೆ ಯೋಜನೆ ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಾದ ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಯಲ್ಲಿನ 2,25,515 ಹೆಕ್ಟರ್ ಭೂ ಪ್ರದೇಶಕ್ಕೆ ಹನಿ ನೀರಾವರಿ ಪದ್ಧತಿಯಲ್ಲಿ ನೀರಾವರಿ ಸೌಲಭ್ಯ ಹಾಗೂ ಈ ಜಿಲ್ಲೆಗಳ ವ್ಯಾಪ್ತಿಯಲ್ಲಿನ 367 ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಸದರಿ ಯೋಜನೆಯ ಅಂದಾಜು ರೂ. 21,473.67 ಕೋಟಿಗಳ ಪರಿಷ್ಕೃತ ಯೋಜನಾ ವರದಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಈ ಯೋಜನೆಗೆ 2024-25ನೇ ಸಾಲಿನ ಆಯವ್ಯಯದಲ್ಲಿ ರೂ. 1250 ಕೋಟಿಗಳ ಅನುದಾನ ಘೋಷಣೆ ಮಾಡಲಾಗಿದ್ದು, ಈವರೆಗೆ ರೂ.750 ಕೋಟಿ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ.
ಇದನ್ನೂ ಓದಿ: ಹೆದ್ದಾರಿಯಲ್ಲಿ ಭೀಕರ ಅಪಘಾತ | ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಪ್ರಸ್ತುತ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣ ಪ್ರಮಾಣದಲ್ಲಿ ಫಲಪ್ರದವಾಗಬೇಕಾದಲ್ಲಿ ಹಾಗೂ ಹಂಚಿಕೆಯಾದ ನೀರನ್ನು ಪೂರ್ಣ ಪ್ರಮಾಣದಲ್ಲಿ ಪಡೆಯುವ ನಿಟ್ಟಿನಲ್ಲಿ ತುಂಗಾ ನದಿಯಿಂದ ಲಿಫ್ಟ್ ಮೂಲಕ ನೀರನ್ನು ಪಡೆಯುವ ಒಂದನೇ ಹಂತದ ಕಾಮಗಾರಿಗೆ ವೇಗದ ಚಾಲನೆ ನೀಡಬೇಕಾಗಿರುತ್ತದೆ. ಅಲ್ಲದೇ ಈ ಯೋಜನೆ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳನ್ನು ಸಹ ಕೈಗೊಳ್ಳಬೇಕಾಗಿರುತ್ತದೆ. ಕೇಂದ್ರ ಪುರಸ್ಕೃತ ಯೋಜನೆಯಾದ ಈ ಕಾಮಗಾರಿಗೆ ಈವರೆಗೂ ಕೇಂದ್ರ ಸರ್ಕಾರದಿಂದ ಧನಸಹಾಯ ಬಿಡುಗಡೆಯಾಗದೇ ಇರುವುದರಿಂದ ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಮಧ್ಯ ಕರ್ನಾಟಕದ ಕನಸಿನ ಯೋಜನೆಯಾದ ಈ ಭದ್ರಾ ಮೇಲ್ದಂಡೆ ಯೋಜನೆಯಡಿ ಬರುವ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಯನ್ನು ಅಕ್ಟೋಬರ್-2025 ರೊಗಳಗೆ ಪೂರ್ಣಗೊಳಿಸುವ ಗುರಿ ನಿಗಧಿಪಡಿಸಿಕೊಳ್ಳಲಾಗಿದ್ದು, ಈ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯೊಳಗೆ ಪೂರ್ಣಗೊಳಿಸಲು ಅನುವಾಗುವಂತೆ ತಾವುಗಳು ದಯಮಾಡಿ ಈ ಬಾರಿಯ 2025-26ನೇ ಸಾಲಿನ ಆಯವ್ಯಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ರೂ.3000 ಕೋಟಿಗಳ ಅನುದಾನ ಒದಗಿಸಲು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ.
