
ಚಿತ್ರದುರ್ಗ ನ್ಯೂಸ್.ಕಾಂ: ನಗರದಲ್ಲಿ ಅವೈಜ್ಞಾನಿಕ ಡಿವೈಡರ್‍ಗಳಿಂದಾಗಿ ಸಾಕಷ್ಟು ಅವಘಡಗಳು ಸಂಭವಿಸಿವೆ. ವಿಶೇಷವಾಗಿ ಬೆಂಗಳೂರು, ಚಳ್ಳಕೆರೆ ಕಡೆಯಿಂದ ಚಿತ್ರದುರ್ಗ ಪ್ರವೇಶಿಸುವ ಚಳ್ಳಕೆರೆ ಗೇಟ್‍ನ ಅಂಡರ್‍ಪಾಸ್ ಮುಂಭಾಗ ನಿರ್ಮಿಸಿರುವ ಡಿವೈಡರ್ ಹಾಗೂ ಆ ವೃತ್ತದ ಡಿಸೈನ್‍ನಲ್ಲಿ ಆಗಿರುವ ಎಡವಟ್ಟಿನಿಂದ ಅಮಾಯಕರು ಅಪಘಾತಕ್ಕೀಡಾಗುವಂತಾಗಿದೆ.
ಹಿರಿಯೂರಿನಲ್ಲಿ ಚಳ್ಳಕೆರೆ ಹಾಗೂ ಚಿತ್ರದುರ್ಗ ಕಡೆಯಿಂದ ಹಿರಿಯೂರು ಪ್ರವೇಶಿಸುವಾಗ ಅಂಬೇಡ್ಕರ್ ವೃತ್ತ ಸಿಗುತ್ತದೆ. ಇಲ್ಲಿ ಯಾವ ಕಡೆಯಿಂದ ವಾಹನಗಳು ಬಂದರೂ ಗೊಂದಲವಿಲ್ಲದೆ ಸರಾಗವಾಗಿ ವೃತ್ತವನ್ನು ಸುತ್ತು ಹಾಕಿ ಹೋಗಬಹುದು.

ಅದೇ ಮಾದರಿಯ ರಸ್ತೆ ಚಿತ್ರದುರ್ಗದಲ್ಲಿ ಚಳ್ಳಕೆರೆ ಗೇಟ್‍ನಲ್ಲಿದೆ. ಆದರೆ, ಇಲ್ಲಿ ಅಂಡರ್‍ಪಾಸ್ ಹತ್ತಿರದವರೆಗೆ ಡಿವೈಡರ್ ತಂದಿದ್ದಾರೆ. ಜೊತೆಗೆ ಚಳ್ಳಕೆರೆ ಅಥವಾ ಬೆಂಗಳೂರು ಕಡೆಯಿಂದ ಬಂದವರು ಸರ್ವೀಸ್ ರಸ್ತೆ ಬಳಸಿ ಕೆಳಗೋಟೆ ಕಡೆಗೆ ಹೋಗುವುದು ಅಸಾಧ್ಯ ಎನ್ನುವಂತಹ ಸ್ಥಿತಿ ಇದೆ. ಕಾರಣ ಚಿತ್ರದುರ್ಗ ನಗರದ ಒಳಗಿನಿಂದ ಬರುವ ವಾಹನಗಳು ಇಲ್ಲಿ ಎದುರಾಗುತ್ತವೆ.
ಇದನ್ನೂ ಓದಿ: ರೈತ ಹೋರಾಟಗಾರ ಟಿ.ನುಲೇನೂರು ಎಂ.ಶಂಕ್ರಪ್ಪ ಇನ್ನಿಲ್ಲ
ಚಿತ್ರದುರ್ಗ ನಗರದಿಂದ ಚಳ್ಳಕೆರೆ ಗೇಟ್‍ವರೆಗೆ ಬಂದಿರುವ ಡಿವೈಡರ್ ಸುಮಾರು 50 ಮೀಟರ್ ಉದ್ದಕ್ಕೆ ತಿರುವಿನಿಂದ ಕೂಡಿದ್ದು, ಇಲ್ಲಿ ಎದುರಿಗೆ ಬರುವ ವಾಹನಗಳು ಕಾಣಿಸುವುದಿಲ್ಲ. ಹೀಗಾಗಿ ಸಾಕಷ್ಟು ಅಪಘಾತಗಳು ಸಂಭವಿಸುತ್ತವೆ. ಮುಂದೆ ದೊಡ್ಡ ಮಟ್ಟದ ತೊಂದರೆಯಾಗಿ ಜೀವಹಾನಿಯಾಗುವ ಮೊದಲು ಈ ವೃತ್ತದ ಡಿಸೈನ್ ಬದಲಾಯಿಸಬೇಕಿದೆ.
ಅವೈಜ್ಞಾನಿಕ ಡಿವೈಡರ್ ತೆರವಿಗೆ ಪಟ್ಟು | ಧರಣಿ
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಸದಸ್ಯ ದೀಪಕ್ ಸೇರಿದಂತೆ ಹಲವು ಮುಖಂಡರು ಮಂಗಳವಾರ ಡಿವೈಡರ್ ತೆರವಿಗೆ ಆಗ್ರಹಿಸಿ ರಸ್ತೆಯಲ್ಲಿ ಸುಮಾರು ಒಂದು ಗಂಟೆ ಕುಳಿತು ಪ್ರತಿಭಟನೆ ನಡೆಸಿದರು.
ಸುಮಾರು ಒಂದು ಗಂಟೆ ರಸ್ತೆ ನಡೆ ನಡೆಸಿ ರಸ್ತೆಯಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಬಂದು ಡಿವೈಡರ್ ತೆರವಿಗೆ ಗಡುವು ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು. ಈ ವೇಳೆ ಪೊಲೀಸರು ಹರಸಾಹಸ ಮಾಡುವಂತಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಚಳ್ಳಕೆರೆ, ಬೆಂಗಳೂರಿನಿಂದ ನಗರ ಪ್ರವೇಶಿಸುವ, ವಾಹನಗಳು ತಿರುವು ಪಡೆಯುವಾಗ ಒಂದಕ್ಕೊಂದು ಕಾಣದಂತೆ ಅವೈಜ್ಞಾನಿಕವಾಗಿ ರಸ್ತೆ ವಿಭಜಕ ನಿರ್ಮಿಸಿರುವ ಕಾರಣ ಅಪಘಾತಗಳು ಹೆಚ್ಚಾಗುತ್ತಿವೆ. ಹಲವು ವಾಹನಗಳಿಗೆ ಹಾನಿ ಆಗಿದೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಾರಾದರೂ ಮೃತಪಟ್ಟರೆ, ಯಾರು ಹೊಣೆ ಎಂದು ಪ್ರಶ್ನಿಸಿದರು.
ಈ ಮಾರ್ಗದಲ್ಲಿ ಹೆಚ್ಚಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನಡೆದುಕೊಂಡು, ವಾಹನಗಳಲ್ಲಿ ಬರುತ್ತಾರೆ. ಕೆಲವೊಮ್ಮೆ ಅಪಘಾತಗಳಾಗಿವೆ. ಮಕ್ಕಳಿಗೂ ತೊಂದರೆಯಾಗುವ ಸಾಧ್ಯತೆಗಳೇ ಹೆಚ್ಚಿದೆ. ಆದ್ದರಿಂದ ತೆರವುಗೊಳಿಸಲೇಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮುರುಘಾ ಶರಣರಿಗೆ ಹೈಕೋರ್ಟ್‍ನಿಂದ ಬಿಗ್ ರಿಲೀಫ್
ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲೂ ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾನ್ ಆದಿತ್ಯ ಬಿಸ್ವಾಸ್, ಕೂಡ ಅವೈಜ್ಞಾನಿಕವೆಂದು ಹೇಳಿ ತೆರವಿಗೆ ಕ್ರಮವಹಿಸುವುದಾಗಿ ಹೇಳಿದ್ದರು.
ಪೊಲೀಸರಿಗೆ ಇಲ್ಲಿನ ಸಮಸ್ಯೆ ತಿಳಿದಿದ್ದರೂ ಸಂಬಂಧಿಸಿದವರ ಗಮನಕ್ಕೆ ತರುತ್ತಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೊಟ್ಟ ಭರವಸೆಯಂತೆ ಡಿವೈಡರ್ ತೆರವು ಮಾಡದಿದ್ದರೆ ನಾವೇ ತೆರವು ಮಾಡುತ್ತೇವೆ. ಬೇಕಾದರೆ ದೂರು ದಾಖಲಿಸಿ
| ಬಿ.ಕಾಂತರಾಜ್, ನಗರಸಭೆ ಮಾಜಿ ಅಧ್ಯಕ್ಷ.
ಅರವಿಂದ್ ಗಾಮೆರ್ಂಟ್ಸ್ ಮುಂಭಾಗ ಈ ಹಿಂದೆ ರಸ್ತೆ ವಿಭಜಕ ನಿರ್ಮಿಸಿ, ಮೂರು ದಿನದಲ್ಲಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ ನಾವು ಪ್ರತಿಭಟಿಸಿದರೆ, ಕಾನೂನಿನ ಬಗ್ಗೆ ಮಾತನಾಡುತ್ತಾರೆ. ಆಗ ಅಡ್ಡಿಯಾಗದ ಕಾನೂನು ಈಗ ಯಾಕೆ ಎಂದು ಪ್ರಶ್ನಿಸಿದರು. ಭರವಸೆ ಆಗದೆ, ಕಾರ್ಯಗತವಾಗಬೇಕು. ಇಲ್ಲದಿದ್ದರೆ, ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಗುವುದು. ಯಾವುದೇ ಪ್ರಕರಣ ದಾಖಲಿಸಿದರೂ ಎದುರಿಸಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಜೆ.ಎಸ್.ದೀಪಕ್, ಮುಖಂಡರಾದ ಅಂಜಿನಪ್ಪ, ಪಿ.ತಿಪ್ಪೇಸ್ವಾಮಿ, ಮಂಜುನಾಥ್, ಎಸ್.ನಾಗೇಶ್, ಆರ್.ಮಂಜುನಾಥ್, ವಿ.ಎನ್.ರುಜತ್, ಜಗದೀಶ್, ಎನ್.ಶರಣಪ್ಪ, ಓಬಳೇಶ, ಎನ್.ಪ್ರವೀಣ್, ಕೆ.ಎನ್.ಸುನೀಲ್, ಶಿವು, ಹರೀಶ್, ಕೆ.ವಿನಾಯಕ, ಆರ್.ಅನುಕುಮಾರ್, ಸಿ.ಏಕಾಂತ, ಬಿ.ಮಂಜುನಾಥ್, ಟಿ.ಆರ್.ಗುರುಪ್ರಸಾದ್ ಮತ್ತಿತರರಿದ್ದರು.
ಜಿಲ್ಲಾಧಿಕಾರಿಗಳ ಜೊತೆಗೆ ಈ ಸಂಬಂಧ ಚರ್ಚಿಸಿ ಮುಂದಿನ 20 ದಿನಗಳಲ್ಲಿ ತೆರವು ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ.
| ಎಂ.ರೇಣುಕಾ, ನಗರಸಭೆ ಆಯುಕ್ತೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

