ಮುಖ್ಯ ಸುದ್ದಿ
council election: ಪೈಪೋಟಿ ನಡುವೆ ಅವಿರೋಧ ಆಯ್ಕೆ | ನಗರಸಭೆಯಲ್ಲಿ ಒಗ್ಗಟ್ಟು ಪ್ರದರ್ಶನ

CHITRADURGA NEWS | 20 AUGUST 2024
ಚಿತ್ರದುರ್ಗ: ಸ್ಥಳೀಯ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಘೋಷಣೆಯಾದ ಬೆನ್ನಲ್ಲೇ ಚುನಾವಣೆ ನಡೆಯುತ್ತಿವೆ. ಜಿಲ್ಲೆಯಲ್ಲಿ ಹಿರಿಯೂರು ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡಲಾಗಿದೆ.
ಹಿರಿಯೂರು ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷರಾಗಿ ಜೆ.ಆರ್.ಅಜಯ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಸಿ. ಅಂಬಿಕಾ ಅವಿರೋಧವಾಗಿ ಸೋಮವಾರ ಆಯ್ಕೆಯಾದರು. ಹಿಂದುಳಿದ ವರ್ಗ (ಎ)ಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಹತ್ತು ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ 22ನೇ ವಾರ್ಡ್ ಸದಸ್ಯ ಜೆ.ಆರ್.ಅಜಯ್ ಕುಮಾರ್ ಅವರಿಗೆ ಅದೃಷ್ಟ ಒಲಿಯಿತು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ಇಲ್ಲದ ಕಾರಣ ನಿರೀಕ್ಷೆಯಂತೆ ಸಿ.ಅಂಬಿಕಾ ಆಯ್ಕೆಯಾದರು.
ಕ್ಲಿಕ್ ಮಾಡಿ ಓದಿ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮಾನತು | ಕರ್ತವ್ಯ ಲೋಪದ ಆರೋಪ

ಆಯ್ಕೆಯ ಬಳಿಕ ಮಾತನಾಡಿದ ಅಜಯ್ ಕುಮಾರ್ , ‘ನಗರದ ಪ್ರಧಾನ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಪ್ರವಾಸಿ ಮಂದಿರ ವೃತ್ತದಿಂದ ವೇದಾವತಿ ಸೇತುವೆವರೆಗೆ ನಡೆಸಲಾಗುತ್ತಿದೆ. ರಸ್ತೆ ಬದಿಯ ಮರಗಳನ್ನು ತೆರವುಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ವೇದಾವತಿ ಸೇತುವೆಯಿಂದ ಗಾಂಧಿ ವೃತ್ತದವರೆಗೆ ರಸ್ತೆ ವಿಸ್ತರಣೆ ಆಗಬೇಕೆಂಬುದು ಸಾರ್ವಜನಿಕರ ಒತ್ತಾಯ. ಇದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಅಜಯ್ ಕುಮಾರ್ ತಿಳಿಸಿದರು.
ನಗರದ ಅಭಿವೃದ್ಧಿ ವಿಚಾರದಲ್ಲಿ ಅಧ್ಯಕ್ಷರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಉಪಾಧ್ಯಕ್ಷೆ ಸಿ.ಅಂಬಿಕಾ ತಿಳಿಸಿದರು.
