CHITRADURGA NEWS | 16 OCTOBER 2025
ಚಿತ್ರದುರ್ಗ: ಕಾನೂನಿನ ಸಂರಕ್ಷಣೆಯಲ್ಲಿರುವ ಬಾಲಕರ ಸಂಖ್ಯೆಗೆ ಅನುಗುಣವಾಗಿ ಸದ್ಯ ನಗರದಲ್ಲಿ ಬಾಡಿಗೆ ಕಟ್ಟದಲ್ಲಿರುವ ಬಾಲಕರ ಸರ್ಕಾರಿ ವೀಕ್ಷಣಾಲಯ ಸೂಕ್ತ ಸೌಕರ್ಯ ಹಾಗೂ ಮೂಲಭೂತ ಸೌಲಭ್ಯಗಳನ್ನು ಹೊಂದಿಲ್ಲ. ಈ ಹಿನ್ನಲೆಯಲ್ಲಿ ತಿಂಗಳ ಒಳಗಾಗಿ ಸುಸಜ್ಜಿತವಾಗಿರುವ ಬೇರೆ ಕಟ್ಟಡಕ್ಕೆ ಬಾಲಕರ ಸರ್ಕಾರಿ ವೀಕ್ಷಣಾಲಯವನ್ನು ಸ್ಥಳಾಂತರಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ್ ಅವರು ಮಕ್ಕಳ ರಕ್ಷಣಾಧಿಕಾರಿ ಪ್ರೇಮಮೂರ್ತಿ ಅವರಿಗೆ ಸೂಚಿಸಿದರು.
ಇದನ್ನೂ ಓದಿ: 30 ಲಕ್ಷ ಪಡೆದು ನಕಲಿ ಚಿನ್ನ ಮಾರಿದ್ದ ಇಬ್ಬರ ಬಂಧನ | ತಳಕು ಪೊಲೀಸರ ಕಾರ್ಯಾಚರಣೆ
ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ಬಾಲನ್ಯಾಯ ಮಂಡಳಿ, ಮಾನವ ಕಳ್ಳ ಸಾಗಣಿಕೆ, ಪೋಕ್ಸೋ ಹಾಗೂ ಬಾಲ ಕಾರ್ಮಿಕ ಕಾಯ್ದೆಗಳ ಅನುಷ್ಠಾನದ ಕುರಿತು ನ್ಯಾಯಾಧೀಶರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ನಿಯಮಾನುಸಾರ ವೀಕ್ಷಣಾಲಯದಲ್ಲಿ ಸುರಕ್ಷಿತ ಕ್ರಮಗಳನ್ನು ಪಾಲಿಸಬೇಕು. ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ಉಚಿತವಾಗಿ ಕಾನೂನಿನ ಸೇವೆ ನೀಡಬೇಕು. ಮಕ್ಕಳನ್ನು ಸುಧಾರಿಸಿ, ಉತ್ತಮ ನಾಗರಿಕರನ್ನಾಗಿ ಮಾಡಲು ಪ್ರಯತ್ನ ಪಡಬೇಕು ಎಂದು ನಾಯಾಧೀಶ ರೋಣ್ ವಾಸುದೇವ್ ಹೇಳಿದರು.
ಬಾಲ ಗರ್ಭಿಣಿ ಪ್ರಕರಣಗಳ ಇಳಿಕೆ:
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬಾಲ ಗರ್ಭಿಣಿಯರ ಸಂಖ್ಯೆ ಇಳಿಮುಖವಾಗುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಆದರೆ ಪ್ರಕರಣ ದಾಖಲಾಗುತ್ತದೆ ಎಂಬ ಭಯದಿಂದ ಬಹಳಷ್ಟು ಜನರು ಸರ್ಕಾರದ ಸವಲತ್ತುಗಳನ್ನು ಪಡೆಯಲು ಮುಂದೆ ಬರದೆ ಇರುವ ಸನ್ನಿವೇಶಗಳು ಇರಬಹುದು. ಖಾಸಗಿ ಆಸ್ಪತ್ರೆ ಹಾಗೂ ವೈದ್ಯರು ಬಾಲಗರ್ಭಿಣಿಯರು ಕಂಡು ಬಂದ ತಕ್ಷಣವೇ ವರದಿ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಒಂದು ವೇಳೆ ಖಾಸಗಿ ವೈದ್ಯರು ಬಾಲಗರ್ಭಿಣಿಯರಿಗೆ ಚಿಕಿತ್ಸೆ ನೀಡಿ, ಗಮನಕ್ಕೆ ತರದೇ ಹೋದರೆ ಅವರ ಮೇಲೆ ಕಾನೂನ ಕ್ರಮ ಕೈಗೊಳ್ಳುವುದಾಗಿ ನಾಯಾಧೀಶ ರೋಣ್ ವಾಸುದೇವ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 867, 2023-24 ರಲ್ಲಿ 660, 2024-25 ರಲ್ಲಿ 279 ಹಾಗೂ ಪ್ರಸಕ್ತ ವರ್ಷದಲ್ಲಿ ಸೆಪ್ಟೆಂಬರ್ ಅಂತ್ಯ 69 ಬಾಲಗರ್ಭಿಣಿ ಪ್ರಕರಣಗಳನ್ನು ಆರ್.ಸಿ.ಹೆಚ್. ಪೋರ್ಟಲ್ ನಲ್ಲಿ ನಮೂದು ಮಾಡಲಾಗಿದೆ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಭಿನವ್ ಸಭೆಯಲ್ಲಿ ಮಾಹಿತಿ ನೀಡಿದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯರ ಹಾಜರಿ ಕಡ್ಡಾಯ:
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ನೇಮಕವಾದ ಸದಸ್ಯರು ಕಡ್ಡಾಯವಾಗಿ ಸಭೆಗಳಲ್ಲಿ ಪಾಲ್ಗೊಳ್ಳಬೇಕು. ಸದಸ್ಯರ ಗೈರು ಹಾಜರಿ ಕಂಡುಬಂದರೆ ಅಂತಹವರನ್ನು ಸಮಿತಿಯಿಂದ ಕೈ ಬಿಡಲು ಶಿಫಾರಸ್ಸು ಮಾಡುವುದಾಗಿ ನಾಯಾಧೀಶ ರೋಣ್ ವಾಸುದೇವ್ ಹೇಳಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಪ್ರತಿ ಬಾರಿ ನಡೆಯುವ ಸಭೆಯ ವಿವರಗಳನ್ನು ಸಿ.ಸಿ. ಟಿ.ವಿ ವಿಡಿಯೋ ಸಹಿತ ಜಿಲ್ಲಾ ನ್ಯಾಯಾಲಯಕ್ಕೆ ಕಳುಹಿಸಿಕೊಡಬೇಕು. ಕಲ್ಯಾಣ ಸಮಿತಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಬೇಕು ಎಂದರು.
ಪೋಕ್ಸೋ ಪ್ರಕರಣ ಹೆಚ್ಚಳಕ್ಕೆ ಕಳವಳ:
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದಕ್ಕೆ ನಾಯಾಧೀಶ ರೋಣ್ ವಾಸುದೇವ್ ಕಳವಳ ವ್ಯಕ್ತಪಡಿಸಿದರು. 2023 ರಲ್ಲಿ 131, 2024 ರಲ್ಲಿ 150 ಪ್ರಕರಣಗಳು ದಾಖಲಾಗಿದ್ದವು. 2025 ಸೆಪ್ಟೆಂಬರ್ ಅಂತ್ಯಕ್ಕೆ 122 ಪ್ರಕರಣಗಳು ದಾಖಲಾಗಿದ್ದು, ಮುಂದೆಯೂ ಪ್ರಕರಣ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಪೋಕ್ಸೋ ಕುರಿತು ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ವಿದ್ಯಾರ್ಥಿಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಉದ್ದಿಮೆ ಪರವಾನಿಗೆ ರದ್ದತಿಗೆ ಸೂಚನೆ:
ಪದೇ ಪದೇ ಬಾಲಕಾರ್ಮಿಕರು ಪತ್ತೆಯಾಗುವ ಸ್ಥಳಗಳ ಮಾಲಿಕರ ಉದ್ದಿಮೆ ಪರವಾನಿಗೆ ರದ್ದತಿಗೆ ಸ್ಥಳೀಯ ಸಂಸ್ಥೆಗಳಿಗೆ ಕಾರ್ಮಿಕ ಇಲಾಖೆಯಿಂದ ಶಿಫಾರಸ್ಸು ಮಾಡಬೇಕು. ದಂಡ ವಸೂಲಿಯ ಜೊತೆಗೆ ಕಠಿಣ ಶಿಕ್ಷೆಯಾದರೆ ಮಾತ್ರ ಬಾಲಕಾರ್ಮಿರನ್ನು ನೇಮಿಸಿಕೊಳ್ಳವ ಪ್ರವೃತ್ತಿ ಕಡಿಮೆಯಾಗುವುದು ಎಂದು ನಾಯಾಧೀಶ ರೋಣ್ ವಾಸುದೇವ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಬ್ರಾಹ್ಮಣ ಸಮುದಾಯ | ಸಾಲ, ಸಹಾಯಧನ ಯೋಜನೆಗೆ ಅರ್ಜಿ
ಪ್ರಸಕ್ತ ವರ್ಷದಲ್ಲಿ ಕೇವಲ 5 ಬಾಲಕಾರ್ಮಿಕ ಪ್ರಕರಣಗಳು ದಾಖಲಾಗಿವೆ. ಕಾರ್ಮಿಕ ನಿರೀಕ್ಷಕರು ತಮ್ಮ ವೃತ್ತ ಪ್ರದೇಶದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲ ಕಾರ್ಮಿಕ ತಪಾಸಣೆಗಳನ್ನು ನಡೆಸಬೇಕು. ಪತ್ತೆಯಾದ ಬಾಲ ಕಾರ್ಮಿಕರಿಗೆ ಪುರ್ನವಸತಿ ಕಲ್ಪಿಸಿ ಮುಖ್ಯವಾಹಿನಿಗೆ ತರಬೇಕು ಎಂದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್, ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬಾಲನ್ಯಾಯ ಮಂಡಳಿ ಅಧ್ಯಕ್ಷೆ ಉಜ್ವಲ ವೀರಣ್ಣ ಸಿದ್ದಣ್ಣವರ್, ಪ್ರಧಾನ ಹಿರಿಯ ನ್ಯಾಯಾಧೀಶೆ ಮಮತಾ.ಟಿ, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ದರಾಮಪ್ಪ ಪಾಟೀಲ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ವಿಜಯ್‍ಕುಮಾರ್, ಹಿರಿಯೂರು ಪೊಲೀಸ್ ಉಪಾಧೀಕ್ಷಕ ಶಿವಕುಮಾರ್, ಚಳ್ಳಕೆರೆ ಪೊಲೀಸ್ ಉಪಾಧೀಕ್ಷಕ ಸತ್ಯನಾರಾಯಣರಾವ್, ಮಕ್ಕಳ ರಕ್ಷಣಾಧಿಕಾರಿ ಪ್ರೇಮಮೂರ್ತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶೀಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

