
CHITRADURGA NEWS | 17 FEBRUARY 2026
ಚಿತ್ರದುರ್ಗ: ಬಾಲಕಾರ್ಮಿಕ ಪದ್ಧತಿಯಿಂದಾಗಿ ಜಿಲ್ಲೆಯ ಪ್ರಾಥಮಿಕ, ಪ್ರೌಢ, ಹಾಗೂ ಉನ್ನತ ಶಿಕ್ಷಣ ಕ್ಷೇತ್ರದ ಮೇಲೆ ಗಂಭೀರವಾದ ಪ್ರತಿಕೂಲ ಪರಿಣಾಮ ಬೀರಲಿದ್ದು, ಈ ನಿಟ್ಟಿನಲ್ಲಿ ಮಕ್ಕಳು ಹಾಗೂ ಪೋಷಕರಿಗೆ ವ್ಯಾಪಕ ಅರಿವು ಮೂಡಿಸುವ ಕಾರ್ಯಗಳು ನಿರಂತರವಾಗಿ ಜಿಲ್ಲೆಯಲ್ಲಿ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 16 ಫೆಬ್ರವರಿ | ರಾಶಿ, ಗೊರಬಲು, ಸಿಪ್ಪೆಗೋಟು ಇನ್ನಿತರೆ ಅಡಿಕೆ ರೇಟ್

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಲ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ 1986 ರ ಕಲಂ 17 ರಡಿ ನಿರೀಕ್ಷಕರಾಗಿ ಅಧಿಸೂಚಿಸಲ್ಪಟ್ಟ ಅಧಿಕಾರಿಗಳ ತಮಡವನ್ನು ರಚಿಸಿ, ಪ್ರತಿ ತಂಡವು ಮಾಸಿಕ ಕನಿಷ್ಟ 15 ತಪಾಸಣೆಗಳನ್ನು ಕೈಗೊಳ್ಳುವಂತೆ ಮಾಸಿಕ ಗುರಿ ನಿಗದಿಪಡಿಸಲಾಗಿದೆ.
ತಪಾಸಣೆಗಳಲ್ಲಿ ಅಥವಾ ದಾಳಿ ಸಂದರ್ಭದಲ್ಲಿ ಪತ್ತೆಯಾದ ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ಬಳಿಕ ಬಾಲಮಂದಿರಗಳಿಗೆ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಕೆಯ ವಸತಿ ಶಾಲೆಗಳಿಗೆ ಸೇರಿಸಿ, ಅವರನ್ನು ಅರ್ಹತೆಗನುಗುಣವಾಗಿ ಶಿಕ್ಷಣದ ಮುಖ್ಯ ವಾಹಿನಿಗೆ ತರಲಾಗುತ್ತಿದೆ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 743 ತಪಾಸಣೆಗಳನ್ನು ನಡೆಸಿದ್ದು, ಒಟ್ಟು 12 ಬಾಲಕಾರ್ಮಿಕರನ್ನು ಪತ್ತೆ ಮಾಡಿ, ಪುನರ್ ವಸತಿಗೊಳಿಸಲಾಗಿದೆ. 08 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲಾಗಿದೆ. ಬಾಲ ಮತ್ತು ಕಿಶೋರ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ 20 ಸಾವಿರ ರೂ. ಗಳಿಂದ 50 ಸಾವಿರ ರೂ. ವರೆಗೂ ದಂಡ ಹಾಗೂ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಬಾಂಬ್ ಬೆದರಿಕೆ ಕರೆ | ಚಿತ್ರದುರ್ಗದಲ್ಲಿ ಪೊಲೀಸರ ಅಲರ್ಟ್
18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡರೆ ಮಕ್ಕಳ ಸಹಾಯವಾಣಿ 1098, ಕಾರ್ಮಿಕರ ಸಹಾಯವಾಣಿ 155214 ಅಥವಾ ಪೊಲೀಸ್ ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಕಾರ್ಮಿಕ ಅಧಿಕಾರಿ ಅನಿಲ್ ಕುಮಾರ್ ಬಗಟೆ ಅವರು ತಿಳಿಸಿದರು.
ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು, ಜಿಲ್ಲೆಯಲ್ಲಿ ಇಟ್ಟಿಗೆ ಭಟ್ಟಿಗಳು, ಕೋಳಿ ಫಾರಂಗಳು, ಗ್ಯಾರೇಜ್ ಸೇರಿದಂತೆ ಪ್ರಮುಖವಾಗಿ ಕೃಷಿ ಕೂಲಿ ಕೆಲಸಕ್ಕಾಗಿ ಮಕ್ಕಳನ್ನು ದುಡಿಮೆಗೆ ಬಳಸುವುದು ಕಂಡುಬರುತ್ತದೆ. ಈ ಬಗ್ಗೆ ಅಧಿಕಾರಿಗಳು ಪರಿಣಾಮಕಾರಿಯಾದ ತಪಾಸಣೆ ನಡೆಸಬೇಕು.
ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆಗೂ, ಹಾಜರಾತಿ ಸಂಖ್ಯೆಗೂ ಬಹಳಷ್ಟು ವ್ಯೆತ್ಯಾಸ ಇರುವುದು ಕಂಡುಬಂದಿದ್ದು, ಈ ಕುರಿತಂತೆ ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಮನ್ವಯ ಮಾಡಿಕೊಂಡು, ಈ ಮಕ್ಕಳು ದುಡಿಮೆಗೆ ಹೋಗುತ್ತಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಬೇಕು.
ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೋಟೆನಾಡು ಸಜ್ಜು | ಕಂಗೊಳಿಸುತ್ತಿವೆ ಕನ್ನಡ ಬಾವುಟಗಳು
ಬಾಲಕಾರ್ಮಿಕ ಪದ್ಧತಿಗೆ ಮಕ್ಕಳ ಒಳಗಾದಲ್ಲಿ ಅವರ ಕಲಿಕಾ ಸಾಮಥ್ರ್ಯ ಮತ್ತು ಗುಣಮಟ್ಟದ ಶಿಕ್ಷಣದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಇಂತಹ ಮಕ್ಕಳನ್ನು ಶಿಕ್ಷಣದ ದಾರಿಗೆ ತರದೇ ಹೋದಂಲ್ಲಿ, ಎಸ್‍ಎಸ್‍ಎಲ್‍ಸಿ, ಪಿಯುಸಿ ಸೇರಿದಂತೆ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕೈಗೊಳ್ಳುವ ಯಾವುದೇ ಕ್ರಮಗಳೂ ಶೇ. 100 ರಷ್ಟು ಯಶಸ್ವಿಯಾಗುವುದು ಕಷ್ಟಸಾಧ್ಯ. ಇದು ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ದುಡಿಮೆಗೆ ಹೋಗುವಂತಹ ತೀರ ಅನಿವಾರ್ಯತೆ ಇರುವಂತಹ ಬಡ ಕುಟುಂಬಗಳನ್ನು ಗುರುತಿಸಿ, ಅಂತಹ ಮಕ್ಕಳನ್ನು ವಸತಿಯುತ ಶಾಲೆಗೆ ಸೇರಿಸಬೇಕು. ಗ್ರಾಮ ಸಭೆಗಳಲ್ಲಿ, ಶಾಲೆ, ಕಾಲೇಜುಗಳ ಹಂತದಲ್ಲಿ ಮಕ್ಕಳು ಹಾಗೂ ಪೋಷಕರಿಗೆ ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ವ್ಯಾಪಕವಾದ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಇದನ್ನೂ ಓದಿ: ದ್ವೇಷಕ್ಕೆ ಸುಟ್ಟು ಹೋಯ್ತು 22 ಲೋಡ್ ಮೆಕ್ಕೆಜೋಳ
ಸಭೆಯಲ್ಲಿ ಕಾರ್ಮಿಕ ನಿರೀಕ್ಷಕರುಗಳು, ಆರೋಗ್ಯ, ಕಾರ್ಮಿಕ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನಗರಾಭಿವೃದ್ಧಿ, ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
