CHITRADURGA NEWS | 09 FEBRUARY 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಕಾರ್ಯಾನುಷ್ಠಾನ ಮತ್ತು ಅನುದಾನ ಬಿಡುಗಡೆಗೆ ಆಗ್ರಹಿಸಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕರೆ ನೀಡಿದ್ದ ಚಳ್ಳಕೆರೆ ಬಂದ್‌ಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ಜನರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಾಗಿಲು ತೆಗೆಯದೆ ಬೆಂಬಲ ಸೂಚಿಸಿದವು. ನಗರದ ಮುಖ್ಯ ರಸ್ತೆ ಬಿಕೋ ಎನ್ನುತ್ತಿದ್ದು, ವಾಹನಗಳ ಸಂಚಾರ ಸಹ ಸ್ಥಗಿತವಾಗಿದೆ.
ಬಂದ್‌ಗೆ ರೈತಪರ ಸಂಘಟನೆಗಳು, ಎಐಟಿಯುಸಿ, ಕಾರ್ಮಿಕರ ಸಂಘ, ದಲ್ಲಾಲರ ಸಂಘ, ವಾಣಿಜ್ಯ ಸಂಘಟನೆ, ಕೆಆರ್‌ಎಸ್ ಪಕ್ಷ, ಛೇಂಬರ್ ಆಫ್ ಕಾಮರ್ಸ್, ಕನ್ನಡ ರಕ್ಷಣಾ ವೇದಿಕೆ ಸೇರಿ ಹತ್ತಕ್ಕೂ ಹೆಚ್ಚು ಸಂಘಟನೆಗಳು ಬಂದ್ ಬೆಂಬಲಿಸಿ ರಸ್ತೆಗಿಳಿದವು.
ಚಳ್ಳಕೆರೆ-ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ₹ 5,300 ಕೋಟಿ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ತರಳಬಾಳು ಹುಣ್ಣಿಮೆ ಸರಳ ಆಚರಣೆ | ಅಡ್ಡಪಲ್ಲಕ್ಕಿ ಉತ್ಸವಕ್ಕೆ ಬೇಡವೆಂದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 20 ವರ್ಷಗಳಿಂದ ಜಿಲ್ಲೆಯ ಜನರನ್ನು ವಂಚಿಸುತ್ತಲೇ ಬಂದಿವೆ. ಭದ್ರಾದಿಂದ ಕೆರೆಗಳಿಗೆ ನೀರು ಹರಿಯದಿರುವ ಕಾರಣ ಜಿಲ್ಲೆಯ ಜನರು ಬರಗಾಲ ಅನುಭವಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಕುಟುಂತ್ತಾ ಸಾಗಿರುವುದು ರೈತಾಪಿ ಸಮುದಾಯದಲ್ಲಿ ಕಳವಳ ಮೂಡಿಸಿದೆ. ರಾಜ್ಯ ಸರ್ಕಾರದ ಉದಾಸೀನ ಮನೋಭಾವ, ಕೇಂದ್ರ ಸರ್ಕಾರ ಘೋಷಿತ ವಚನ ಈಡೇರಿಸದೇ ಇರುವುದು ಪ್ರಮುಖ ಕಾರಣ.
₹ 22 ಸಾವಿರ ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಕಾಮಗಾರಿಗೆ ಇದುವರೆಗೂ ರಾಜ್ಯ ಸರ್ಕಾರ ಮಾಡಿದ ವೆಚ್ಚ ಹತ್ತು ಸಾವಿರ ಕೋಟಿ ರು ದಾಟಿಲ್ಲ.ಕಾಮಗಾರಿ ಆರಂಭವಾಗಿ ಇಪ್ಪತ್ತು ವರ್ಷಗಳು ಅರೆಬರೆಯಾಗಿದೆ. ಯೋಜನೆ ಕಾಲಮಿತಿ ಅನುಸಾರ ಕಾಮಗಾರಿ ಕೈಗೊಂಡಿದ್ದರೆ ಇಷ್ಟೊತ್ತಿಗೆ ಪೂರ್ಣಗೊಳ್ಳುತ್ತಿತ್ತು. ಜನತೆ ನಿತ್ಯವೂ ಬೀದಿಗೆ ಬಂದು ಕೂಗುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.
ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಕೇಂದ್ರದಿಂದ ಅನುದಾನ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ವಚನ ನೀಡಿದ್ದರು. 2023-24 ರ ಕೇಂದ್ರ ಬಜೆಟ್ ನಲ್ಲಿ 5300 ಕೋಟಿ ರುಪಾಯಿ ಮೀಸಲಿಡಲಾಗಿತ್ತು. ವರ್ಷಗಳು ಉರುಳಿದರೂ ಒಂದು ಪೈಸೆ ಅನುದಾನ ಬಿಡಗಡೆಯಾಗಿಲ್ಲ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಜಲಶಕ್ತಿ ಸಚಿವರ ಭೇಟಿ ಮಾಡಿ ಅನುದಾನಕ್ಕೆ ವಿನಂತಿಸಿದರೂ ಮನ್ನಣೆ ದೊರೆಯದೇ ಇರುವುದು ವಿಷಾಧನೀಯ.
ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಕೇಂದ್ರದ ಗಮನ ಸೆಳೆದಿರುವ ನಡೆಯನ್ನು ನೀರಾವರಿ ಹೋರಾಟ ಸಮಿತಿ ಸ್ವಾಗತಿಸುತ್ತದೆ. ಅದೇ ರೀತಿ ತನ್ನ ಜವಾಬ್ದಾರಿ ಮೆರೆಯುವಂತೆ ರಾಜ್ಯ ಸರ್ಕಾರವ ಎಚ್ಚರಿಸುತ್ತದೆ.
ಮಧ್ಯಕರ್ನಾಟಕ ಪ್ರದೇಶ ಮೊದಲಿನಿಂದಲೂ ದಟ್ಟ ಹುಲ್ಲುಗಾವಲು ಎಂದೇ ಖ್ಯಾತಿ ಪಡೆದಿತ್ತು. ಪಶು ಪಾಲನಾ ಬುಡಕಟ್ಟು ಸಂಸ್ಕೃತಿ ಇಲ್ಲಿ ಪ್ರಧಾನವಾಗಿ ಬೇರೂರಿತ್ತು. ದನ, ಕುರಿ, ಮೇಕೆ ಕಾದುಕೊಂಡು ಇವುಗಳಿಂದ ಬರುವ ಉಪ ಉತ್ಪನ್ನಗಳಿಂದ ಜನತೆ ಬದುಕು ಕಟ್ಟಿಕೊಂಡಿದ್ದರು. ಕಾಲ ಕ್ರಮೇಣ ಹುಲ್ಲುಗಾವಲು ಮಾಯವಾಗಿದೆ.
ಕೇಂದ್ರ ಸರ್ಕಾರದ ಡಿಆರ್ ಡಿಓ ಸೇರಿದಂತೆ ಹಲವು ಯೋಜನೆಗಳಿಗೆ ಚಳ್ಳಕೆರೆ ತಾಲೂಕಿನ 13 ಸಾವಿರಕ್ಕೂ ಹೆಚ್ಚು ಪ್ರದೇಶ ಬಿಟ್ಟುಕೊಡಲಾಗಿದೆ. ಚಳ್ಳಕೆರೆ ತಾಲೂಕಿನ ಜನರ ಈ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಡಿಆರ್ ಡಿಓ ಸೇರಿದಂತೆ ಹಲವು ಯೋಜನೆಗಳು ತಾಲೂಕಲ್ಲಿ ಭದ್ರವಾಗಿ ನೆಲೆಯೂರಿವೆ. ಪರ್ಯಾಯವಾಗಿ ಈ ಜನರ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರ ಪ್ರಯತ್ನಗಳ ಮಾಡದೇ ಇರುವುದು ದುರದೃಷ್ಟಕರ ಸಂಗತಿ. ತ್ಯಾಗಿಗಳು, ದೇಶಪ್ರೇಮಿಗಳ ನಿಕೃಷ್ಟವಾಗಿ ಕಾಣಲಾಗಿದೆ ಎಂದೇ ಹೋರಾಟ ಸಮಿತಿ ಭಾವಿಸುತ್ತದೆ.
ಈಗಾಗಲೇ ಕಡು ಬೇಸಿಗೆ ಆರಂಭವಾಗಿದ್ದು ಕುಡಿಯುವ ನೀರಿನ ಆಹಾಕಾರ ಎದುರಾಗಿದೆ. ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಂಡಿದ್ದರೆ ಚಳ್ಳಕೆರೆ ತಾಲೂಕಿನ 60ಕ್ಕೂ ಹೆಚ್ಚು ಕೆರೆಗಳು ತುಂಬಿ ಅಂತರ್ಜಲ ಮಟ್ಟ ಹೆಚ್ಚಾಗುತ್ತಿತ್ತು. ಜನ ಜಾನುವಾರುಗಳಿಗೆ ಅನುಕೂಲವಾಗುತ್ತಿತ್ತು. ಜನರ ಬದುಕನ್ನು ಸಂಮೃದ್ದಗೊಳಿಸುವುದು ಪ್ರಜಾಪ್ರಭುತ್ವದ ಮೂಲ ಆಶಯ. ಇಂತಹ ಜನಕಲ್ಯಾಣ ಕಾರ್ಯಕ್ರಮವನ್ನೇ ಸರ್ಕಾರ ಮರೆತುಕುಳಿತರೆ ಭವಿಷ್ಯದ ದಿನಗಳು ಘೋರವಾಗುತ್ತವೆ.
ಯೋಜನೆ ತ್ವರಿತಗೊಳಿಸಲು ಆಗ್ರಹಿಸಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಬಂದ್ ಸೇರಿದಂತೆ ಹಲವು ಸರಣಿ ಹೋರಾಟಗಳ ಕೈಗೆತ್ತಿಕೊಂಡಿದೆ. ಜಿಲ್ಲೆಯ ಎಲ್ಲ ಜನಪರ , ಕನ್ನಡಪರ, ಕಾರ್ಮಿಕ ಸಂಘಟನೆಗಳು, ಉದ್ದಿಮೆ ವಲಯಗಳು ಹೋರಾಟಕ್ಕೆ ಬೆಂಬಲ ನೀಡಿವೆ. ಜನರ ಆಕ್ರೋಶಗಳು ಇಮ್ಮಡಿಯಾಗುವ ಮೊದಲು ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ರಾಜ್ಯ ಸರ್ಕಾರ ಕೇಂದ್ರದ ಅನುದಾನ ಕಾದು ಕುಳಿತುಕೊಳ್ಳದೇ ಭದ್ರಾ ಮೇಲ್ದಂಡೆ ಕಾಮಗಾರಿಗೆ ಶರವೇಗ ನೀಡಿ ಪೂರ್ಣಗೊಳಿಸಬೇಕು. ಎಲ್ಲ ಅಡೆ ತಡೆಗಳ ನಿವಾರಿಸಬೇಕು. ಕೇಂದ್ರ ಸರ್ಕಾರ ₹ 5300 ಕೋಟಿ ನೆರವು ನೀಡಿ ತನ್ನ ವಚನ ಬದ್ಧತೆ ಮೆರೆಯಬೇಕೆಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸಿತು.
ಇದನ್ನೂ ಓದಿ: ಫೆ.11ರಂದು ಶ್ರೀ ಗಂಗಾಂಬಿಕಾ ಸಮುದಾಯ ಭವನ ಉದ್ಘಾಟನೆ | ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನಿಧ್ಯ
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ , ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಮುಖಂಡ ಕೆ.ಪಿ.ಭೂತಯ್ಯ ಕರುನಾಡ ವಿಜಯಸೇನೆ ಕಾರ್ಯಕರ್ತರು ಹಾಗು ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಐಟಿಯುಸಿ ಮುಖಂಡ ಸಿ.ವೈ.ಶಿವರುದ್ರಪ್ಪ, ರೈತ ಸಂಘದ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಾಲ್ಲೂಕು ಶಾಖೆ ಮಾಜಿ ಅಧ್ಯಕ್ಷ ಓ.ಟಿ.ತಿಪ್ಪೇಸ್ವಾಮಿ, ಹಮಾಲರ ಸಂಘಟನೆ ಮುಖಂಡ ಟಿ.ತಿಪ್ಪೇಸ್ವಾಮಿ, ಟಿ.ನಿಂಗಣ್ಣ, ಕನ್ನಡ ರಕ್ಷಣಾ ವೇದಿಕೆಯ ಚೇತನ್‍ಕುಮಾರ್, ದೊಡ್ಡುಳ್ಳಾರ್ತಿ ಕರಿಯಣ್ಣ, ದಲ್ಲಾಲರ ಸಂಘದ ಅಧ್ಯಕ್ಷ ಅರವಿಂದ್, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರಘುನಾಥ ಬಾಬು, ಕೆಆರ್‌ಎಸ್ ಪಕ್ಷದ ಮಹೇಶ್, ಸಾಮಾಜಿಕ ಹೋರಾಟಗಾರ ಎಚ್.ಎಸ್.ಸೈಯದ್, ಬಂಡೆ ತಿಪ್ಪೇಸ್ವಾಮಿ ಹಾಜರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
