
CHITRADURGA NEWS | 18 FEBRUARY 2026
ಚಿತ್ರದುರ್ಗ: ಕೇವಲ ನಿರುದ್ಯೋಗ ಭತ್ಯೆ ಪಡೆಯುವುದಷ್ಟೇ ಯುವ ಜನರ ಗುರಿಯಾಗಬಾರದು. ಅದರೊಂದಿಗೆ ಅಗತ್ಯ ಕೌಶಲ್ಯ ತರಬೇತಿ ಪಡೆದು ಉದ್ಯೋಗಗಳಿಸಿ ಸ್ವಾವಲಂಬಿಗಳಾಗಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ ಗಂಜಿಗಟ್ಟೆ ಹೇಳಿದರು.
ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೈಭವದ ಚಾಲನೆ | ಮೆರುಗು ನೀಡಿದ ಕಲಾ ತಂಡಗಳು | ಕನ್ನಡದ ಮನಸ್ಸುಗಳು
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪದವಿ ಮತ್ತು ಡಿಪ್ಲೋಮಾ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ಯುವ ಜನತೆಗೆ ಆರ್ಥಿಕ ಮತ್ತು ಮಾನಸಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಯುವಜನರು ಶಿಕ್ಷಣ ಮುಗಿಸಿ ಹೊರಬಂದಾಗ ಉದ್ಯೋಗ ಸಿಗುವವರೆಗೆ ಮನೆಯವರ ಮೇಲೆ ಅವಲಂಬಿತರಾಗಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಪದವೀಧರರಿಗೆ ರೂ.3000 ಹಾಗೂ ಡಿಪ್ಲೊಮಾ ಪದವೀಧರರಿಗೆ ರೂ.1500 ಭತ್ಯೆ ನೀಡುವ ಮೂಲಕ ಸರ್ಕಾರ ಅವರ ಬೆನ್ನಿಗೆ ನಿಂತಿದೆ. ಕೇವಲ ಹಣ ನೀಡುವುದು ಸರ್ಕಾರದ ಉದ್ದೇಶವಲ್ಲ.
ಇದನ್ನೂ ಓದಿ: ಬೇಸಿಗೆ ಆರಂಭ | ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ವಹಿಸಿ | ಡಿಸಿ ವೆಂಕಟೇಶ್ ಸೂಚನೆ
ಅಭ್ಯರ್ಥಿಗಳು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡು ಉತ್ತಮ ಉದ್ಯೋಗ ಪಡೆಯಲು ನೆರವಾಗಬೇಕು ಎನ್ನುವುದು ಯೋಜನೆಯ ಆಶಯ. ಇದಕ್ಕಾಗಿ ವಿವಿಧ ಬ್ಯಾಂಕುಗಳು ಮತ್ತು ತರಬೇತಿ ಸಂಸ್ಥೆಗಳ ಮೂಲಕ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕೌಶಲ್ಯಭಿವೃದ್ಧಿ ಅಧಿಕಾರಿ ಸಣ್ಣಕ್ಕಿ ಮಾರುತಿ ಮಾತನಾಡಿ, ಜಿಲ್ಲೆಯ ಯುವಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಜಿಟಿಟಿಸಿ ಹಾಗೂ ಐಟಿಐ ನಂತಹ ಸಂಸ್ಥೆಗಳ ಮೂಲಕ ಉಚಿತ ತರಬೇತಿ ನೀಡಿ ಶೇ.70 ರಷ್ಟು ಉದ್ಯೋಗಾವಕಾಶ ಕೊಡಿಸುವ ಗುರಿ ಸರ್ಕಾರ ಹೊಂದಿದೆ. ಹಾಗಾಗಿ ಯುವಜನರು ಕೌಶಲ್ಯವಂತರಾದರೆ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆಯಾಗುತ್ತದೆ. ಜಿಲ್ಲೆಯ ಎಲ್ಲಾ ಯುವನಿಧಿ ಫಲಾನುಭವಿಗಳು ಈ ಸುವರ್ಣ ಅವಕಾಶ ಬಳಸಿಕೊಂಡು ತರಬೇತಿ ಪಡೆದು ಗೌರವಯುತ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ರುಡ್‍ಸೆಟ್ ಸಂಸ್ಥೆ ಉಪನ್ಯಾಸಕ ತೋಟಪ್ಪ ಮಾತನಾಡಿ, ರಾಜ್ಯದ ಯುವಜನತೆ ಕೇವಲ ಪದವಿ ಪ್ರಮಾಣ ಪತ್ರಗಳಿಗೆ ಸೀಮಿತವಾಗದೆ, ಪ್ರಾಯೋಗಿಕ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಅಡಿಯಲ್ಲಿ ಜಿಟಿಟಿಸಿ, ಐಟಿಐ ಸಂಸ್ಥೆಗಳು ಮೆಕಾನಿಕಲ್, ಆಟೋಮೇಷನ್ ಮತ್ತು ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ಕೋರ್ಸ್‍ಗಳನ್ನು ನೀಡುತ್ತಿವೆ. ಉತ್ಪಾದನಾ ವಲಯದಲ್ಲಿ ಆಧುನಿಕ ಆಟೊಮೇಷನ್ ತಂತ್ರಜ್ಞಾನದ ಬಗ್ಗೆ ಇಲ್ಲಿ 2 ತಿಂಗಳಿಂದ 1 ವರ್ಷದ ಅವಧಿಯ ತರಬೇತಿ ಲಭ್ಯವಿದೆ.
ಇದನ್ನೂ ಓದಿ: SC, ST ಹಿಂದುಳಿದ ವರ್ಗದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನ್ಯಾಯ | ಮಾಜಿ ಸಂಸದ ಉಗ್ರಪ್ಪ
ವಿಶೇಷವಾಗಿ ಎಸ್‍ಸಿ, ಎಸ್‍ಟಿ ಮತ್ತು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಸರ್ಕಾರದ ಉಚಿತ ತರಬೇತಿ ನೀಡಲಾಗುವುದು. ತರಬೇತಿ ಮುಗಿಸಿದ ಅಭ್ಯರ್ಥಿಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಸಂದರ್ಶನದ ಮೂಲಕ ಉದ್ಯೋಗಕ್ಕೆ ನೆರವು ನೀಡಲಾಗುತಿದ್ದು, ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉದ್ಯೋಗಾಧಿಕಾರಿ ರವೀಂದ್ರ, ಚಿತ್ರದುರ್ಗ ಜಿಟಿಟಿಸಿ ಪ್ರಾಂಶುಪಾಲ ಸುಹಾಸ್, ಸಹಾಯಕ ಸಾಂಖ್ಯಿಕ ಅಧಿಕಾರಿ ವೇಮಣ್ಣ, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ರವಿಕಾಂತ್, ಕೆನರಾ ಬ್ಯಾಂಕ್ ಹಣಕಾಸು ಮತ್ತು ಸಾಕ್ಷರತೆ ಸಮಾಲೋಚಕ ತಿಪ್ಪೇಸ್ವಾಮಿ, ಡಿಪ್ಲೋಮೊ ಕಾಲೇಜು ಪ್ಲೇಸ್‍ಮೆಂಟ್ ಅಧಿಕಾರಿ ಸರಸ್ವತಿ, ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಯುವನಿಧಿ ಸಂಯೋಜಕ ಶ್ರೀಹರಿ, ಐಟಿಐ ತರಬೇತಿ ಅಧಿಕಾರಿ ಸತೀಶ್ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
