CHITRADURGA NEWS | 11 AUGUST 2026
ಚಿತ್ರದುರ್ಗ: ಯಾಂತ್ರಿಕ ಬದುಕಿನಲ್ಲಿ ಹಣದ ಹಿಂದೆ ಓಡುತ್ತಿರುವವರು ಮನಸ್ಸಿನ ನೆಮ್ಮದಿ ಹಾಗೂ ಜೀವನದ ಸಮತೋಲನಕ್ಕಾಗಿ ಕಲೆ, ಸಾಹಿತ್ಯ ಮತ್ತು ಸಂಗೀತದ ಕಡೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಕರೆ ನೀಡಿದರು.
ನಗರದ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಅಂಜನಾ ನೃತ್ಯ ಕಲಾ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಆಯೋಜಿಸಿದ್ದ ‘ನೃತ್ಯ ನಾದ ನಮನ, ನೃತ್ಯ ನಿವೇದನ ಹಾಗೂ ಗುರುವಂದನಾ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೃತ್ಯ, ಸಾಹಿತ್ಯ, ಸಂಗೀತ ಹಾಗೂ ಭರತನಾಟ್ಯಕ್ಕೆ ಮನಸೋಲದವರಿಲ್ಲ. ಮಗು ಹುಟ್ಟಿ ಬೆಳೆಯುವ ಹಂತದಲ್ಲಿ ತಾಯಿಯ ಜೋಗುಳದ ಹಾಡಿಗೆ ಸುಖನಿದ್ರೆಗೆ ಜಾರುತ್ತದೆ. ಭಾರತೀಯ ಪರಂಪರೆಯಲ್ಲಿ ಕಲೆಗಳಿಗೆ ವಿಶೇಷ ಸ್ಥಾನವಿದೆ. ನೃತ್ಯವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮನಸ್ಸಿಗೂ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.
ಚಿತ್ರದುರ್ಗದ ಅಂಜನಾ ನೃತ್ಯ ಕಲಾ ಕೇಂದ್ರ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸುವ ಮೂಲಕ ದೇಶ-ವಿದೇಶಗಳಲ್ಲಿ ನಗರದ ಕೀರ್ತಿ ಹೆಚ್ಚಿಸಿದೆ. ಹಣ ಗಳಿಸಿ ಸಂತೋಷಪಡುವ ಭರಾಟೆಯಲ್ಲಿ ಅನೇಕರು ಆರೋಗ್ಯವನ್ನು ಹಾಳು ಮಾಡಿಕೊಂಡು ಆಸ್ಪತ್ರೆಗಳಿಗೆ ಹಣ ಖರ್ಚು ಮಾಡುವಂತಾಗಿದೆ. ಬದುಕು ಸಮತೋಲನದಲ್ಲಿರಬೇಕಾದರೆ ಕಲೆಗಳನ್ನು ಆಸ್ವಾದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 10 | ಮೆಕ್ಕೆಜೋಳ, ರಾಗಿ ರೇಟ್…..
‘ಸಾಧನೆ ಯಾರ ಮನೆಯ ಸ್ವತ್ತೂ ಅಲ್ಲ’. ಜೀವನದಲ್ಲಿ ಪರಿಶ್ರಮಪಡುವವರು ದೊಡ್ಡ ಸಾಧನೆ ಮಾಡಬಹುದು. ಎಸ್. ಜಾನಕಿ ಅವರಿಗೆ ಬಾಲ್ಯದಿಂದಲೇ ಹಾಡುವ ಹವ್ಯಾಸವಿದ್ದು, ತಮ್ಮ ವಿಶಿಷ್ಟ ಕಂಚಿನ ಕಂಠದ ಮೂಲಕ ದಕ್ಷಿಣ ಭಾರತದಲ್ಲಿ ಪ್ರಸಿದ್ಧ ಗಾಯಕಿಯಾಗಿ ಗುರುತಿಸಿಕೊಂಡರು. ಅದೇ ರೀತಿ ಲತಾ ಮಂಗೇಶ್ಕರ್ ಅವರೂ ತಮ್ಮ ಗಾಯನದ ಮೂಲಕ ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದ್ದಾರೆ ಎಂದು ಹೇಳಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಚಿತ್ರದುರ್ಗದಲ್ಲಿ ಅಂಜನಾ ನೃತ್ಯ ಕಲಾ ಕೇಂದ್ರ ಸ್ಥಾಪನೆಯಾಗದಿದ್ದರೆ ಕಲಾ ಚಟುವಟಿಕೆಗಳಿಗೆ ದೊಡ್ಡ ಕೊರತೆಯಾಗುತ್ತಿತ್ತು. ಇಂದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಬಹುತೇಕರು ಮೊಬೈಲ್‌ನಲ್ಲಿ ಮುಳುಗಿರುವುದರಿಂದ ಹಾಡು-ಸಂಗೀತದ ಮೇಲಿನ ಒಲವು ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ವಿದುಷಿ ಡಾ.ನಂದಿನಿ ಶಿವಪ್ರಕಾಶ್ ಅವರು ಭರತನಾಟ್ಯದ ಮೂಲಕ ದೇಶ-ವಿದೇಶಗಳಲ್ಲಿ ಚಿತ್ರದುರ್ಗದ ಕೀರ್ತಿ ಮೊಳಗಿಸಿದ್ದಾರೆ. ಇಂದಿನ ಕಾಲದಲ್ಲಿ ಶಿಷ್ಯರು ಗುರುವಂದನೆ ಸಲ್ಲಿಸುವುದು ಅಪರೂಪವಾಗಿದ್ದು, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಸಿ.ಆರ್. ಶಿವಪ್ರಕಾಶ್ ಅವರಿಗೆ ಗುರುವಂದನೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ.
ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
ಗುರುಗಳ ಕೃಪೆ ಮತ್ತು ಮಾರ್ಗದರ್ಶನವಿದ್ದರೆ ಏನನ್ನಾದರೂ ಸಾಧಿಸಬಹುದು. 42 ವರ್ಷಗಳಲ್ಲಿ ಅಂಜನಾ ನೃತ್ಯ ಕಲಾ ಕೇಂದ್ರ ಸಾವಿರಾರು ಭರತನಾಟ್ಯ ವಿದ್ಯಾರ್ಥಿಗಳನ್ನು ರೂಪಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಂಜನಾ ನೃತ್ಯ ಕಲಾ ಕೇಂದ್ರದ ಸಿ.ಆರ್. ಶಿವಪ್ರಕಾಶ್, ವಿದುಷಿ ಡಾ. ನಂದಿನಿ ಶಿವಪ್ರಕಾಶ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ‘ಶ್ರೀಕೃಷ್ಣದೇವರಾಯ’, ‘ಗುರು-ಶಿಷ್ಯರು’, ‘ಶೃತಿ ಸೇರಿದಾಗ’ ಚಿತ್ರಗಳಲ್ಲಿ ಎಸ್. ಜಾನಕಿ ಹಾಡಿರುವ ಕನ್ನಡ ಗೀತೆಗಳಿಗೆ ಅಂಜನಾ ನೃತ್ಯ ಕಲಾ ಕೇಂದ್ರದ ಕಲಾವಿದರು ಭರತನಾಟ್ಯದ ಮೂಲಕ ನೃತ್ಯ ನಿವೇದನೆ ಸಲ್ಲಿಸಿದರು.
ಇದನ್ನೂ ಓದಿ: ಗಾಜಿನ ವಸ್ತುಗಳು ಮಸುಕಾಗಿದ್ದರೆ ಅದನ್ನು ಈ ರೀತಿ ಸ್ವಚ್ಛಗೊಳಿಸಿ
ವಿದುಷಿ ಡಾ. ರಕ್ಷಿತಾ ಹಾಗೂ ತಂಡದಿಂದ ಶಾಸ್ತ್ರೀಯ ನೃತ್ಯ ವೈವಿಧ್ಯ, ವಿದುಷಿ ಪ್ರಜ್ಞಾ ಹಾಗೂ ತಂಡದಿಂದ ನೃತ್ಯ ಮಾಲಿಕಾ, ವಿದುಷಿ ವೈಷ್ಣವಿ ಮರಡಿ ಹಾಗೂ ತಂಡದಿಂದ ‘ನಟವರ’ ನೃತ್ಯ ರೂಪಕ ಪ್ರದರ್ಶನಗೊಂಡು ಪ್ರೇಕ್ಷಕರ ಮನಸೂರೆಗೊಂಡಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

