CHITRADURGA NEWS | 26 SEPTEMBER 2026
ಚಿತ್ರದುರ್ಗ: ಮದ್ಯದ ಅಮಲಿಗಿಂತ ಮನುಷ್ಯನ ಅಹಂಕಾರದ ಅಮಲು ಹೆಚ್ಚು ಅಪಾಯಕಾರಿ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶರಣರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ದಲಿತ ಸಂಘಟನೆಯ ಮುಖಂಡ ಹಾಗೂ ಬಂಡಾಯ ಸಾಹಿತಿ ಚಿಕ್ಕೇನಹಳ್ಳಿ ಎನ್. ದೇವರಾಜ್ ಹೇಳಿದರು.
ಇದನ್ನೂ ಓದಿ: ಮುದ್ದಾಪುರ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯ
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಿದ್ದ ಶಿವಶರಣರಾದ ಹೂಗಾರ ಮಾದಯ್ಯ ಹಾಗೂ ಹೆಂಡದ ಮಾರಯ್ಯ ತಂದೆಗಳ ಜಯಂತಿ (ಶರಣೋತ್ಸವ) ಕಾರ್ಯಕ್ರಮದಲ್ಲಿ ವಿಷಯಾವಲೋಕನ ಮಾಡಿದರು.
ಹೆಂಡದ ಮಾರಯ್ಯ ಅವರು 12ನೇ ಶತಮಾನದಲ್ಲಿಯೇ ವ್ಯಸನಮುಕ್ತ ಸಮಾಜಕ್ಕಾಗಿ ಶ್ರಮಿಸಿದ ಕ್ರಾಂತಿಕಾರಿ ಶರಣರಾಗಿದ್ದರು. ಆರಂಭದಲ್ಲಿ ದಣಿದವರಿಗೆ ನೀರು, ನಂತರ ಮಜ್ಜಿಗೆ ಹಾಗೂ ಪಾನಕ ನೀಡುವ ಕಾಯಕ ಮಾಡುತ್ತಿದ್ದರು. ಬಸವಣ್ಣನವರ ಸತ್ಯಶುದ್ಧ ಕಾಯಕದ ತತ್ವದಿಂದ ಪ್ರಭಾವಿತರಾಗಿ ಶರಣರಾದ ಅವರು, ವ್ಯಸನಿಗಳಿಗೆ ಸದ್ಗುಣಗಳನ್ನು ಬಿತ್ತುವ ಮೂಲಕ ಅವರನ್ನು ಪರಿವರ್ತಿಸಲು ಪ್ರಯತ್ನಿಸಿದರು ಎಂದು ವಿವರಿಸಿದರು.
ಎಸ್‌ಜೆಎಂ ವಿದ್ಯಾಪೀಠ ಹಾಗೂ ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಶರಣರು ತಮ್ಮ ಕಾಯಕದ ಮೂಲಕ ಸಮಾಜಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ. ಪ್ರತಿಯೊಬ್ಬ ಶರಣರ ಹೆಸರಿನೊಂದಿಗೆ ಅವರ ಕಾಯಕ ವೃತ್ತಿಯನ್ನು ಗುರುತಿಸುವ ಮೂಲಕ ವೃತ್ತಿಗೆ ಗೌರವ ನೀಡಿದ ಶರಣ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದೆ ಎಂದರು.
ಇದನ್ನೂ ಓದಿ: ಸೆ.30ರಂದು ಚಿತ್ರದುರ್ಗದಲ್ಲಿ ಮಾದಿಗ ಮುನ್ನಡೆ-2 ಜಿಲ್ಲಾ ಸಮಾವೇಶ
ಹೂಗಾರ ಮಾದಯ್ಯ ಅವರು ಹೂಗಾರಿಕೆ ವೃತ್ತಿಯೊಂದಿಗೆ ಶರಣ ತತ್ವಗಳನ್ನು ಪಾಲಿಸಿದ ನಿಜಶರಣರಾಗಿದ್ದರು. ಹೆಂಡದ ಮಾರಯ್ಯ ಅವರು ದುಶ್ಚಟಗಳಿಂದ ಸಮಾಜವನ್ನು ಮುಕ್ತಗೊಳಿಸಲು ಶ್ರಮಿಸಿದ ಮಹನೀಯರಾಗಿದ್ದರು ಎಂದು ಹೇಳಿದರು.
ಅಕ್ಟೋಬರ್ 13ರಿಂದ 23ರವರೆಗೆ ಶ್ರೀಮಠದಲ್ಲಿ ಶರಣ ಸಂಸ್ಕೃತಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದೆ. ಬೆಳಿಗ್ಗೆ ಯೋಗ, ಶಿವಯೋಗ, ವಿಚಾರಗೋಷ್ಠಿ ಹಾಗೂ ಸಂಜೆ ವಿವಿಧ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದರು.
ಹೂಗಾರ ಸಮಾಜದ ಮುಖಂಡ ದೊಡ್ಡಸಿದ್ದವ್ವನಹಳ್ಳಿ ಎಚ್.ವಿ. ಲಿಂಗಬಸಪ್ಪ ಮಾತನಾಡಿ, ಹೂಗಾರ ಮಾದಯ್ಯ ಅವರು ನಿಷ್ಠೆಯಿಂದ ಕಾಯಕ ಹಾಗೂ ಶರಣ ತತ್ವಗಳನ್ನು ಪಾಲಿಸಿದವರು. ಹೂಗಾರ ಸಮಾಜದ ಶರಣರ ಜಯಂತಿಯನ್ನು ಶ್ರೀಮಠದಲ್ಲಿ ಆಚರಿಸಿ ಸಮಾಜವನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸದ ಸಂಗತಿ ಎಂದರು.
ಇದನ್ನೂ ಓದಿ: ಸೆ.27ರಂದು ಹೊಸದುರ್ಗ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ
ಕಾರ್ಯಕ್ರಮದಲ್ಲಿ ಸಿರಸಂಗಿ ಶ್ರೀ ಬಸವ ಮಹಾಂತ ಸ್ವಾಮೀಜಿ, ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ, ಹೊಳಲ್ಕೆರೆ ಶ್ರೀ ತಿಪ್ಪೇರುದ್ರ ಸ್ವಾಮೀಜಿ, ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಮಠದ ಸಿಬ್ಬಂದಿ ಹಾಗೂ ಭಕ್ತರು ಉಪಸ್ಥಿತರಿದ್ದರು. ಗುರುರಾಜ್ ಕೊಳಲು ವಾದನದ ಮೂಲಕ ವಚನಗಾಯನ ನಡೆಸಿಕೊಟ್ಟರು.
ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ನೆರವೇರಿಸಿದರು. ಡಾ. ಎಸ್. ಚೇತನ್ ಸ್ವಾಗತಿಸಿದರು. ಪ್ರೊ. ಆರ್.ಎಸ್. ಜಯದೇವಪ್ಪ ನಿರೂಪಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

