CHITRADURGA NEWS | 27 SEPTEMBER 2026
ಚಿತ್ರದುರ್ಗ: ಅಶೋಕನ ಮೂರು ಶಾಸನಗಳನ್ನು ಹೊಂದಿರುವ ಚಿತ್ರದುರ್ಗ ಜಿಲ್ಲೆ ರಾಜ್ಯದ ಇತರ ಜಿಲ್ಲೆಗಳಿಗಿಂತ ವಿಶಿಷ್ಟವಾದ ಐತಿಹಾಸಿಕ ಮಹತ್ವ ಹೊಂದಿದೆ ಎಂದು ಸಂಸ್ಕೃತಿ ಸಂಶೋಧಕ ಬೆಂಗಳೂರಿನ ಎಸ್. ಕಾರ್ತಿಕ್ ಹೇಳಿದರು.
ಇದನ್ನೂ ಓದಿ: ಸೆ.30ರಂದು ಚಿತ್ರದುರ್ಗದಲ್ಲಿ ಮಾದಿಗ ಮುನ್ನಡೆ-2 ಜಿಲ್ಲಾ ಸಮಾವೇಶ
ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ–ಸಂಸ್ಕೃತಿ–ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನದ ಸಹಯೋಗದಲ್ಲಿ ನಗರದ ಐ.ಎಂ.ಎ. ಹಾಲ್‌ನಲ್ಲಿ ಭಾನುವಾರ ನಡೆದ 55ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಚಿತ್ರದುರ್ಗ ಪ್ರದೇಶದ ಪ್ರಾಚೀನ ಕನ್ನಡ ಕವಿಗಳು: 10ನೇ ಶತಮಾನದಿಂದ 1900’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಕನ್ನಡದ ಮೊದಲ ಪದ ದೊರೆತ ಶಾಸನವೂ ಚಿತ್ರದುರ್ಗ ಜಿಲ್ಲೆಯಲ್ಲಿದೆ. ಕನ್ನಡ ಭಾಷೆಯ ಪ್ರಪ್ರಥಮ ಕೃತಿಯೂ ಈ ಜಿಲ್ಲೆಗೆ ಸಂಬಂಧಿಸಿದೆ. ಮುರುಘಿಶಾಂತವೀರರ ಕಾಲದವರೆಗೆ ಯಾವುದೇ ಕೃತಿ ಲಭ್ಯವಾಗಿಲ್ಲ ಎನ್ನುವುದಾದರೆ, ಈ ಕುರಿತು ಸಮರ್ಪಕವಾಗಿ ಸಂಶೋಧನೆ ನಡೆದಿಲ್ಲ ಎಂದರ್ಥ ಎಂದು ಹೇಳಿದರು.
ಅವಿಭಜಿತ ಚಿತ್ರದುರ್ಗ ಜಿಲ್ಲೆಗೆ ಸೇರಿದ ಹರಿಹರದಲ್ಲಿ ಪೊಲ್ವಾಲದಂಡನಾಥನ ಹರಿಚಾರಿತ್ರ ಕೃತಿ ದೊರೆತಿದೆ. ಹಿರಿಯೂರಿನ ರಂಗ ಮತ್ತು ಅವರ ತಂದೆ ರಂಗ, ಬಬ್ಬೂರಿನ ರಂಗ ಹಾಗೂ ಹಿರಿಯೂರಿನ ಪ್ರಭು ಮಾಧವ ಸೇರಿದಂತೆ ಹಲವು ಕವಿಗಳು ಈ ಪ್ರದೇಶದಲ್ಲಿದ್ದರು. ಇದರಿಂದ ಹಿರಿಯೂರಿನಲ್ಲಿ ಪಾಳೆಯಪಟ್ಟು ಇದ್ದಿರುವುದು ತಿಳಿದುಬರುತ್ತದೆ ಎಂದರು.
ಇದನ್ನೂ ಓದಿ: ಜೋಗಿ ಸಮುದಾಯ ಭವನ ನಿರ್ಮಾಣಕ್ಕೆ ₹3 ಕೋಟಿ ಅನುದಾನಕ್ಕೆ ಮನವಿ
ಚಿತ್ರದುರ್ಗ ಜಿಲ್ಲೆಯ ಸಾಹಿತ್ಯ ಪರಂಪರೆ ಬಹಳ ದೊಡ್ಡದಾಗಿದ್ದು, ಪ್ರಾಚೀನ ಕನ್ನಡ ಕವಿಗಳ ಕುರಿತು ವಿಸ್ತೃತ ಸಂಶೋಧನಾ ಗ್ರಂಥ ಪ್ರಕಟವಾಗಬೇಕಿದೆ. ಪ್ರಕಟಿತ, ಅಪ್ರಕಟಿತ, ಲಭ್ಯ ಹಾಗೂ ಅಲಭ್ಯವಾಗಿರುವ ಅನೇಕ ಕೃತಿಗಳಿದ್ದು, ಬೃಹನ್ಮಠದ ಹಸ್ತಪ್ರತಿ ಭಂಡಾರದಲ್ಲಿಯೂ ಹಲವು ಕೃತಿಗಳಿವೆ. ಇವುಗಳ ಕುರಿತು ಸಮಗ್ರ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.
ಕರ್ನಾಟಕಕ್ಕಿಂತ ತಮಿಳುನಾಡಿನಲ್ಲಿ ಹೆಚ್ಚು ಶಾಸನಗಳಿವೆ ಎನ್ನುವುದು ಸರಿಯಲ್ಲ. ಕರ್ನಾಟಕದಲ್ಲಿ ಸುಮಾರು 40 ಸಾವಿರ ಶಾಸನಗಳು ಪ್ರಕಟಗೊಂಡಿದ್ದು, ಭಾರತದಲ್ಲಿಯೇ ಅತಿ ಹೆಚ್ಚು ಶಾಸನಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಶಾಸನ ಹಾಗೂ ಪ್ರಾಚೀನ ಸಾಹಿತ್ಯದ ಕುರಿತು ಪ್ರಾಥಮಿಕ ಹಂತದ ಸಂಶೋಧನಾ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಚಿತ್ರದುರ್ಗದ ಕುರಿತು ಅಧ್ಯಯನ ನಡೆಸಿದ ವಿದ್ವಾಂಸರಲ್ಲಿ ಹುಲ್ಲೂರು ಶ್ರೀನಿವಾಸ ಜೋಯಿಸರು ಪ್ರಮುಖರು. ಸಾಹಿತ್ಯ ಅಧ್ಯಯನದ ಸಂದರ್ಭದಲ್ಲಿ ಕವಿಗಳ ಕುರಿತು ಸಮಗ್ರ ಕೃತಿಗಳನ್ನು ಸಿದ್ಧಪಡಿಸುವ ಅಗತ್ಯವಿದೆ. ಲಭ್ಯವಿರುವ ಸಾಹಿತ್ಯವನ್ನು ಸಂಗ್ರಹಿಸಿ ಅಧ್ಯಯನ ಮಾಡುವ ಮೂಲಕ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಮಹೋತ್ಸವ | ಅಕ್ಟೋಬರ್ 1ಕ್ಕೆ ಬೃಹತ್ ಬೈಕ್ ರ್ಯಾಲಿ | 3ಕ್ಕೆ ಶೋಭಾಯಾತ್ರೆ
ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ. ಎನ್.ಎಸ್. ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್. ಕಾರ್ತಿಕ್ ಅವರು ನೇರ, ನಿಷ್ಠುರ ಹಾಗೂ ವಸ್ತುನಿಷ್ಠ ಸಂಶೋಧಕರಾಗಿದ್ದು, ಪ್ರಾಚೀನ ಸಾಹಿತ್ಯ ಮತ್ತು ಶಾಸನಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದಾರೆ. ಜಿಲ್ಲೆಯ ಪ್ರಾಚೀನ ಕನ್ನಡ ಕವಿಗಳ ಕುರಿತು ಮೊದಲ ಬಾರಿಗೆ ವಸ್ತುನಿಷ್ಠ ಅಧ್ಯಯನ ನಡೆಸಿದ್ದಾರೆ ಎಂದು ಪರಿಚಯಿಸಿದರು.
ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಪ್ರೊ. ಲಕ್ಷ್ಮಣ್ ತೆಲಗಾವಿ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ. ಗುಣವತಿ ಮಹಂತೇಶ್, ಪ್ರೊ. ಟಿ.ವಿ. ಸುರೇಶ್‌ಗುಪ್ತ, ಡಿ. ಗೋಪಾಲಸ್ವಾಮಿ ನಾಯಕ, ಮೃತ್ಯುಂಜಯಪ್ಪ, ಮಲ್ಲಿಕಾರ್ಜುನಪ್ಪ, ಮುದ್ದರಂಗಪ್ಪ, ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಬಿ.ಆರ್. ಸುಬ್ರಮಣ್ಯ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

