CHITRADURGA NEWS | 10 AUGUST 2026
ಚಿತ್ರದುರ್ಗ: ಭ್ರಷ್ಟಾಚಾರದ ವಿರುದ್ಧ ಕೆಆರ್‌ಎಸ್ ಪಕ್ಷ ರಾಜ್ಯದಲ್ಲಿ ದೊಡ್ಡ ದಂಗೆಯನ್ನೇ ನಡೆಸುತ್ತಿದೆ. ಇಂದು ರಾಜ್ಯಕ್ಕೆ ಇಂತಹ ಪ್ರಾಮಾಣಿಕ ರಾಜಕೀಯ ಪಕ್ಷದ ಅಗತ್ಯವಿದೆ. ಕೆಆರ್‌ಎಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದೊಡ್ಡ ಭವಿಷ್ಯವಿದೆ ಎಂದು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 10 | ಮೆಕ್ಕೆಜೋಳ, ರಾಗಿ ರೇಟ್…..
ನಗರದ ಬಂಜಾರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ 7ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದರೂ ಇಂದಿಗೂ ಬಿಪಿಎಲ್ ಕಾರ್ಡ್‌ನಂತಹ ಬಣ್ಣದ ಕಾರ್ಡ್‌ಗಳನ್ನು ಹಿಡಿದು ಪಡಿತರ ಪಡೆಯಲು ಜನರು ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಮುಂದುವರಿದಿರುವುದು ನಮ್ಮ ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಇನ್ನೂ ಬಡತನಮುಕ್ತವಾಗಿಲ್ಲ. ರೈತರು ಕಷ್ಟಪಟ್ಟು ಬೆಳೆ ಬೆಳೆದರೂ ಅವರ ಬೆಳೆಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಒಂದು ಕಡೆ ರೈತರು ಅನ್ನ ಬೆಳೆಯಲು ಶ್ರಮಿಸುತ್ತಿದ್ದರೆ, ಮತ್ತೊಂದೆಡೆ ಅದೇ ರೈತ ತನ್ನ ಕುಟುಂಬದ ಬದುಕಿಗಾಗಿ ರೇಷನ್ ಕಾರ್ಡ್ ಹಿಡಿದು ಪಡಿತರ ಪಡೆಯುವ ಪರಿಸ್ಥಿತಿ ಇನ್ನೂ ಮುಂದುವರಿದಿದೆ. ರೈತರಿಗೆ ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುವಂತಾಗಬೇಕು ಮತ್ತು ಪ್ರತಿಯೊಬ್ಬ ಕುಟುಂಬವೂ ಸ್ವಾಭಿಮಾನದಿಂದ ಬದುಕುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
ಬಡತನ ನಿರ್ಮೂಲನೆ ಮಾಡುವ ಬದಲು ಬಡತನವನ್ನೇ ರಾಜಕೀಯದ ಅಸ್ತ್ರವನ್ನಾಗಿ ಮಾಡಿಕೊಂಡಿರುವ ವ್ಯವಸ್ಥೆ ಬದಲಾಗಬೇಕು. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಿಂದ ಮುಕ್ತವಾದ, ಜನರ ತೆರಿಗೆ ಹಣವನ್ನು ಜನರ ಅಭಿವೃದ್ಧಿಗೆ ಬಳಸುವ ಪ್ರಾಮಾಣಿಕ ರಾಜಕೀಯ ವ್ಯವಸ್ಥೆ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಕೆಆರ್‌ಎಸ್ ಪಕ್ಷದ ಹೋರಾಟ ಅತ್ಯಂತ ಅಗತ್ಯವಾಗಿದೆ ಎಂದು ಜಾಣಗೆರೆ ವೆಂಕಟರಾಮಯ್ಯ ಅಭಿಪ್ರಾಯಪಟ್ಟರು.
ಕೆಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ರಘು ಜಾಣಗೆರೆ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಬಹುತೇಕ ಸಚಿವರು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತರ ಹೆಸರಿನಲ್ಲಿ ರಾಜಕಾರಣಕ್ಕೆ ಬರುವವರು ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣವನ್ನೇ ಲೂಟಿ ಮಾಡುತ್ತಿದ್ದಾರೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದಿರುವ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಜಾಮೀನಿನ ಮೇಲೆ ಹೊರಬಂದ ನಂತರವೂ ಸಚಿವರನ್ನಾಗಿ ಮಾಡಿರುವುದು ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ: ಶಿವಶಿಂಪಿ ಸಮಾಜ ಸಂಘಟನೆಗೆ ಆದ್ಯತೆ ನೀಡಿ | ಕೆ.ಎಸ್.ನವೀನ್
ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾತನಾಡಿ, ಕೆಆರ್‌ಎಸ್ ಪಕ್ಷವು ಈಗಿನಿಂದಲೇ 2028ರ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಆರಂಭಿಸಬೇಕು ಎಂದು ಕರೆ ನೀಡಿದರು.
ಇನ್ನೂ ಕೆಲವೇ ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ಈ ಚುನಾವಣೆಗಳನ್ನು ಪಕ್ಷದ ಸಂಘಟನೆಯನ್ನು ಬಲಪಡಿಸಲು ಹಾಗೂ ಜನರೊಂದಿಗೆ ನೇರ ಸಂಪರ್ಕ ಸಾಧಿಸಲು ಪ್ರಮುಖ ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಇಂದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜಕಾರಣ ಕೆಲವೇ ಕುಟುಂಬಗಳ ಸುತ್ತ ಸೀಮಿತವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಎರಡನೇ ಹಾಗೂ ಮೂರನೇ ಹಂತದ ನಾಯಕರಿಗೆ ಅವಕಾಶ ನೀಡದೆ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಕುಟುಂಬ ರಾಜಕಾರಣವನ್ನು ರಾಜ್ಯದ ಜನತೆ ತಿರಸ್ಕರಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಸಾವಯವ ಸಮಗ್ರ ಕೃಷಿ ಪದ್ಧತಿ ಕುರಿತು ಮೂರು ದಿನಗಳ ಉಚಿತ ವಸತಿಯುಕ್ತ ತರಬೇತಿ
ಕೆಆರ್‌ಎಸ್ ಪಕ್ಷವು ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡದೆ, ಸಾಮಾನ್ಯ ಜನರನ್ನು ರಾಜಕೀಯಕ್ಕೆ ಕರೆತರುವ ಹಾಗೂ ಭ್ರಷ್ಟಾಚಾರ ಮತ್ತು ಅಕ್ರಮಗಳಿಗೆ ಅವಕಾಶವಿಲ್ಲದ ಪ್ರಾಮಾಣಿಕ ರಾಜಕೀಯ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಭ್ರಷ್ಟಾಚಾರ ಮಾಡದೆ, ಅಕ್ರಮಗಳಿಗೆ ಅವಕಾಶ ನೀಡದೆ ಚುನಾವಣೆಗಳನ್ನು ಎದುರಿಸುವುದು ಕೆಆರ್‌ಎಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.
ಕೆಆರ್‌ಎಸ್ ರಾಜ್ಯಾಧ್ಯಕ್ಷ ದೀಪಕ್ ಸಿ.ಎನ್., ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ಉಪಾಧ್ಯಕ್ಷರಾದ ಮಂಜುನಾಥ್ ಎಸ್., ಸೋಮಸುಂದರ್ ಹಾಗೂ ಜ್ಞಾನಸಿಂಧುಸ್ವಾಮಿ, ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನಯ್ಯ, ಸೋಣಪ್ಪ ಹಾಗೂ ವಿಜಯ್ ಕುಮಾರ್, ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

