CHITRADURGA NEWS | 15 NOVEMBER 2025
ಚಿತ್ರದುರ್ಗ: ದನಗಳಿಲ್ಲದ ಕೃಷಿಯಿಂದ ಆರೋಗ್ಯ ಉಳಿಯುವುದಿಲ್ಲ ಎಂದು ಭಾರತೀಯ ಕಿಸಾನ್ ಸಂಘದ ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಸಸಿ ನೆಟ್ಟು ಶ್ರದ್ಧಾಂಜಲಿ ಸೂಚನೆ
ನಗರದ ಜಗದ್ಗುರು ಜಯದೇವ ಕ್ರೀಡಾಂಗಣದಲ್ಲಿ ಸ್ವದೇಶಿ ಜಾಗರಣಾ ಮಂಚ್ ಆಯೋಜಿಸಿರುವ ಸ್ವದೇಶಿ ಮೇಳದಲ್ಲಿ ರೈತ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ರೈತರು ಕನಿಷ್ಟ ಒಂದು ಹಸು ಕಟ್ಟಬೇಕು. ಮನೆಯಲ್ಲಿ ಆಕಳಿದ್ದರೆ ಒಬ್ಬ ಡಾಕ್ಟರಿದ್ದಂತೆ. ಇಂದು ಏಕಬೆಳೆಯ ವ್ಯಾಮೋಹಕ್ಕೆ ಬಿದ್ದು, ದನಗಳನ್ನ ಬಿಟ್ಟು ಟ್ರ್ಯಾಕ್ಟರ್ ಹಿಂದೆ ಬಿದ್ದಿದ್ದೇವೆ. ಇದರಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಹಿಂದೆ ನಮ್ಮ ಜಮೀನಿಗೆ ಬೇಕಾದ ಬೀಜ, ಗೊಬ್ಬರವನ್ನು ನಮ್ಮ ಹಿರಿಯರು ಅವರೇ ತಯಾರಿಸಿಕೊಳ್ಳುತ್ತಿದ್ದರು. ಇಂದು ಎಲ್ಲದಕ್ಕೂ ಅಂಗಡಿಗೆ ಹೋಗಬೇಕಾಗಿದೆ. ನಮಗಾಗಿ ಬೀಜ, ಗೊಬ್ಬರದ ಕಂಪನಿಗಳಿಗಾಗಿ ದುಡಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾಧಿಸಿದರು.
ಇದನ್ನೂ ಓದಿ: ಅಡಿಕೆ ರೇಟ್ | ಭೀಮಸಮುದ್ರ, ಚನ್ನಗಿರಿ ಅಡಿಕೆ ಮಾರುಕಟ್ಟೆ ದರ
ಒಂದು ಕಾಲದಲ್ಲಿ ಕಬ್ಬು ಬೆಳೆದ ರೈತ ತನ್ನ ಗಾಣದಲ್ಲೇ ಬೆಲ್ಲ ತಯಾರಿಸಿ ಮನೆಗೆ ಬಳಕೆ ಮಾಡುತ್ತಿದ್ದ. ಉಳಿದಿದ್ದನ್ನು ಮಾರಾಟ ಮಾಡುತ್ತಿದ್ದ. ಆದರೆ, ಬ್ರಿಟೀಷರು ಬಂದು ಹೋದ ನಂತರ ಸಕ್ಕರೆಯ ಹಿಂದೆ ಬಿದ್ದು ಬೆಳೆದ ಕಬ್ಬಿನೊಂದಿಗೆ ಸಕ್ಕರೆ ಕಾರ್ಖಾನೆ ಕಾಯುವಂತಾಗಿದೆ. ಹಿಂದಿನ ಕಾಲದಲ್ಲಿ ಕೃಷಿಯನ್ನು ಉಳಿಸಿಕೊಳ್ಳಲಾಗುತ್ತಿತ್ತು ಆದರೆ ಇಂದಿನ ದಿನದಲ್ಲಿ ಕೃಷಿಯನ್ನು ಕಳೆದುಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ 10 ಸಾವಿರ ವರ್ಷದಿಂದ ಇದೆ, ಇದು ನಿನ್ನೆ ಮೊನ್ನೆಯಿಂದ ಬಂದಿದ್ದಲ್ಲ. ಇಂದು ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಯುವಜನತೆ ಕೃಷಿ ಬಿಟ್ಟು ಉದ್ಯೋಗಕ್ಕಾಗಿ ನಗರದ ಕಡೆಗೆ ಮುಖ ಮಾಡುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಗಂಭೀರ ಚಿಂತನೆ ಮಅಡಬೇಕಾಗಿದೆ. ಯುವಕರು ಮತ್ತೆ ಕೃಷಿ ಕಡೆಗೆ, ಹಳ್ಳಿ ಕಡೆಗೆ ಮರಳಬೇಕಿದೆ ಎಂದು ಕರೆ ನೀಡಿದರು.
ಸಾವಯವ ಕೃಷಿಕ ಹುಲಿಕೆರೆ ವಿಶ್ವೇಶ್ವರ ಸಜ್ಜನ್ ಮಾತನಾಡಿ, ಬರಗಾಲಕ್ಕೆ ತುತ್ತಾಗಿ ತೆಂಗು ಬೆಳೆ ಕಳೆದುಕೊಂಡಾಗ ಬಯಲು ಸೀಮೆಯಲ್ಲಿ ನೀರಿಲ್ಲದೆಯೂ ಜೀವ ಉಳಿಸಿಕೊಳ್ಳುವ ಹುಣಸೆ, ಬೇಲದ ಮರದ ಬಗ್ಗೆ ಆಸಕ್ತಿ ಮೂಡಿತು. ಬೇಲದ ಮರಗಳನ್ನು ಬೆಳೆಸಿ ಇಂದು ಅದರಿಂದ ಉಪ ಉತ್ಪನ್ನಗಳನ್ನು ತಯಾರಿಸಿ ಕೃಷಿಯಲ್ಲಿ ಗೆದ್ದಿದ್ದೇನೆ ಎಂದು ವಿವರಿಸಿದರು.
ಕೃಷಿಕರು ಮಕ್ಕಳಿಗೆ ನಮ್ಮಂತೆ ನೀವಾಗಬಾರದು ಎನ್ನುತ್ತಾರೆ. ಆದರೆ, ನಾನು ನನ್ನ ಮಕ್ಕಳಿಗೆ ಕೃಷಿ ಆಸಕ್ತಿ ಮೂಡಿಸಿದ್ದೇನೆ. ಹೊರಗಿನ ಜೀವನವೇ ಶಿಕ್ಷಣ ನೀಡುತ್ತದೆ ಎನ್ನುವ ಮಾತು ನಂಬಿ ಕೃಷಿ ಬದುಕು, ಹಣ್ಣು ಮಾರಾಟ ಮಾಡುವ ಅಭ್ಯಾಸ ಮಾಡಿಸಿದ ಪರಿಣಾಮ ಇಂದು ದೊಡ್ಡ ಮಟ್ಟದ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ ಎಂದರು.
ಇದನ್ನೂ ಓದಿ: 11 ಸಾವಿರ ದಾಟಿದ ಹತ್ತಿ | ಇಂದಿನ ರೇಟ್ ಎಷ್ಟಿದೆ?
ಬಯಲು ಸೀಮೆ ಭಾಗದಲ್ಲಿ ಶೇ.೮೦ ರಷ್ಟು ಕೃಷಿ ಭೂಮಿ, ೨೦ ರಷ್ಟು ಸರ್ಕಾರಿ ಭೂಮಿ ಇದೆ. ಆದರೆ, ಮಲೆನಾಡು ಭಾಗದಲ್ಲಿ ಶೇ.೨೦ ರಷ್ಟು ಮಾತ್ರ ಕೃಷಿ ಭೂಮಿ. ಉಳಿದಿದ್ದೆಲ್ಲಾ ಕಾಡು, ಬೆಟ್ಟ, ಗುಡ್ಡ, ಸರ್ಕಾರಿ ಜಾಗ. ಆದರೆ, ಇಂದಿಗೂ ಮಲೆನಾಡಿಗೆ ಬಯಲು ಸೀಮೆಯಿಂದ ವಲಸೆ ಹೋಗುವುದು ತಪ್ಪಿಲ್ಲ. ಈ ದಿಸೆಯಲ್ಲಿ ಆಲೋಚನೆ ಮಾಡಿ ನಮ್ಮ ವಾತಾವರಣದಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆದು ಯಶಸ್ಸು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರಸಿಕೆರೆಯ ಸಾವಯವ ಕೃಷಿಕ ರಘು ಮಾತನಾಡಿ, ನಾವು ಬೆಳೆದ ಬೆಳೆಗಳನ್ನು ಹಾಗೇಯೇ ಮಾರಾಟ ಮಾಡಿದರೆ ನಮಗೆ ಆದಾಯ ಕಡಿಮೆ ಬರುತ್ತದೆ. ಬದಲಾಗಿ ಅದೇ ಬೆಳೆಯನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಲಾಭ ಬರುತ್ತದೆ ಎಂದರು.
ಬೆಳೆಗಳ ಮೌಲ್ಯವರ್ಧನೆ ಮಾಡುವ ಬಗ್ಗೆ ರೈತರು ಆಲೋಚನೆ ಮಾಡಬೇಕು. ನಾವೇ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಳ್ಳಬೇಕಿದೆ. ರೈತರು ತಮ್ಮಲ್ಲಿನ ಭೂಮಿಯಲ್ಲಿ ಒಂದೇ ಬೆಳೆಯನ್ನು ಹಾಕುವ ಬದಲು ವಿವಿಧ ರೀತಿಯ ಬೆಳೆಯನ್ನು ಹಾಕುವ ಮೂಲಕ ಸದಾ ಹಣ ನೋಡಬಹುದಾಗಿದೆ.
ಇದನ್ನೂ ಓದಿ: ಅಸಾಧಾರಣ ಪ್ರತಿಭೆಯುಳ್ಳ ಮಕ್ಕಳಿಗೆ ಜಿಲ್ಲಾಮಟ್ಟದ ಪ್ರಶಸ್ತಿ | ನವೆಂಬರ್ 26 ಅರ್ಜಿ ಸಲ್ಲಿಸಲು ಕೊನೆ ದಿನ
ನನ್ನ 11 ಎಕರೆಯಲ್ಲಿ ಬಹು ಬೆಳೆಗಳನ್ನು ಹಾಕಿದ್ದೇನೆ ಒಂದು ಬೆಳೆ ಬಂದ ಮೇಲೆ ಮತ್ತೊಂದು ಬೆಳೆ ಬರುವಂತೆ ಮಾಡಿದ್ದೆನೆ ಇದರಿಂದ ನನಗೆ ಮಾರುಕಟ್ಟೆ ಹೊರೆಯಾಗದೇ ಉತ್ತಮ ಆದಾಯ ಸಿಗುತ್ತಿದೆ ಎಂದು ತಿಳಿಸಿದರು.
ಸ್ವದೇಶಿ ಮೇಳದ ಸಂಘಟಕರಾದ ಜಗದೀಶ್, ಡಿ.ಎಸ್.ಹಳ್ಳಿ ಜ್ಞಾನೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಮಿಥನ್, ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
