
CHITRADURGA NEWS | 08 September 2026
ಹೊಸದುರ್ಗ: ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕುಗಳಿಗೆ ಅಧಿಕೃತವಾಗಿ ಹರಿದುಬಂದಿದ್ದು, ಈ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ.
ಇದನ್ನೂ ಓದಿ: ಎಲ್ಲೀವರೆಗೆ ಹರಿದು ಬಂದಳು ಗೊತ್ತಾ ಭದ್ರೆ | ಬಯಲು ಸೀಮೆಯಲ್ಲಿ ಸಂಭ್ರಮ
ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹರಿದು ಬಂದ ನೀರನ್ನು ವೀಕ್ಷಿಸಿ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ನೀರಿಗಾಗಿ ಸುಮಾರು 30 ವರ್ಷಗಳಿಂದ ಸತತ ಹೋರಾಟ ನಡೆಸಲಾಗಿದೆ. ಯೋಜನೆ ಜಾರಿಗೆ ತರೀಕೆರೆ, ಅಜ್ಜಂಪುರ, ಅಜ್ಜಿನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸ್ಥಳೀಯ ವಿರೋಧ ಹಾಗೂ ವಿವಿಧ ವಿಘ್ನಗಳು ಎದುರಾಗಿದ್ದವು. ಸಭೆಗಳನ್ನು ನಡೆಸಿ, ಸಾಣೇಹಳ್ಳಿಗೆ ಸಾರ್ವಜನಿಕರನ್ನು ಕರೆಸಿ ಯೋಜನೆಯ ಅಗತ್ಯತೆ ಕುರಿತು ಮನವರಿಕೆ ಮಾಡಲಾಗಿತ್ತು ಎಂದರು.
ಅನೇಕರ ಪರಿಶ್ರಮದ ಫಲವಾಗಿ ಇಂದು ಈ ಭಾಗಕ್ಕೆ ನೀರು ತಲುಪಿದೆ. ಸರ್ಕಾರಗಳು ರೈತರ ವಿಚಾರದಲ್ಲಿ ನಿಧಾನಗತಿ ಅನುಸರಿಸದೆ, ಸಮಯಕ್ಕೆ ಸರಿಯಾಗಿ ನೀರು ಮತ್ತು ವಿದ್ಯುತ್ ಒದಗಿಸಿದರೆ ರೈತರು ಸರ್ಕಾರಕ್ಕೆ ಸಾಲ ನೀಡುವಷ್ಟು ಸಶಕ್ತರಾಗುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 08 | ಹತ್ತಿ ರೇಟ್ ಎಷ್ಟಿದೆ?
ನೀರಿನ ಹರಿವು ಕೇವಲ ಸಾಂಕೇತಿಕವಾಗಿರಬಾರದು. ಮಧ್ಯದಲ್ಲಿ ನಿಲ್ಲದೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕೆರೆಗಳಿಗೂ ನೀರು ತಲುಪಬೇಕು. ಕೊನೆಯ ಹಂತದವರೆಗೂ ನೀರು ಹರಿಯುವಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೀರಿನ ವಿಚಾರದಲ್ಲಿ ದಾವಣಗೆರೆ ಭಾಗದ ಕೆಲವರು ಅನಗತ್ಯವಾಗಿ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಯಾರ ಹಕ್ಕನ್ನೂ ಕಸಿದುಕೊಳ್ಳುತ್ತಿಲ್ಲ. ಬದಲಾಗಿ ನಮ್ಮ ಹಕ್ಕಿನ ಸೌಲಭ್ಯವನ್ನು ಕೇಳುತ್ತಿದ್ದೇವೆ. ಜನರು ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕೇ ಹೊರತು ಪರಸ್ಪರ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಭದ್ರಾ ನೀರು ಗಂಗೆಯಂತೆ ಪವಿತ್ರವಾಗಿದ್ದು, ನೀರಿಗೆ ಬಾಟಲಿ, ಚರಂಡಿ ತ್ಯಾಜ್ಯ ಹಾಗೂ ಕೊಳೆಯನ್ನು ಎಸೆಯದೆ ಸಂರಕ್ಷಿಸಬೇಕು. ಜನರು ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಅದರ ಸಂಪೂರ್ಣ ಸದುಪಯೋಗ ಪಡೆಯಬೇಕು ಎಂದು ಶ್ರೀಗಳು ಮನವಿ ಮಾಡಿದರು.
ಇದನ್ನೂ ಓದಿ: ಚಿತ್ರದುರ್ಗ ತಾಲ್ಲೂಕು ಗುತ್ತಿಗೆದಾರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಸ್ಥಳೀಯರು ಸೋಮವಾರ ರಾತ್ರಿಯಿಂದಲೇ ನೀರಿನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ತಮ್ಮ ಪೂರ್ವನಿಗದಿತ ಮಹತ್ವದ ಕಾರ್ಯಕ್ರಮಗಳನ್ನು ಮುಂದೂಡಿ ನೀರಿಗೆ ಬಾಗಿನ ಅರ್ಪಿಸಿ, ನಾಡಿನ ಸಮೃದ್ಧಿಗಾಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

