CHITRADURGA NEWS | 26 MAY 2026
ಚಿತ್ರದುರ್ಗ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ‘ಭೂ ಸುರಕ್ಷಾ’ ಎಂಬ ಅದ್ಭುತ ತಂತ್ರಾಂಶವನ್ನು (ಸಾಫ್ಟ್ವೇರ್) ಸರ್ಕಾರ ಅಭಿವೃದ್ಧಿಪಡಿಸಲಾಗಿದ್ದು, ರಾಜ್ಯದ ಭೂಮಿಗೆ ಸಂಬಂದಪಟ್ಟ ಪಹಣಿ ಪುಸ್ತಕ, ಕೈಬರಹದ ಪಹಣಿ, 5 ಸ್ಟಾರ್ ದಾಖಲೆಗಳು, ಮ್ಯುಟೇಷನ್, ಭೂ ಮಂಜೂರಾತಿ ದಾಖಲೆಗಳನ್ನು ಡಿಜಿಟಲಿಕರಣಗೊಳಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಭೂ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವದು ತಪ್ಪಿ, ಬೆರಳ ತುದಿಯಲ್ಲಿ ದಾಖಲೆಗಳು ಸಿಗಲಿದೆ. ಇದೊಂದು ಸದ್ದಿಲ್ಲದೆ ನಡೆಯುತ್ತಿರುವ ಕ್ರಾಂತಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬಣ್ಣಿಸಿದರು.
ಇದನ್ನೂ ಓದಿ: ನಾಳೆ ಚಿತ್ರದುರ್ಗದಲ್ಲಿ ನಟ ಶರತ್ ಲೋಹಿತಾಶ್ವಗೆ ಗೌರವ ಸನ್ಮಾನ
ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ “ದಾಖಲೆಗಳ ಮಹತ್ವ, ಸಂರಕ್ಷಣೆ, ನಿರ್ವಹಣೆ ಹಾಗೂ ಸಾರ್ವಜನಿಕ ದಾಖಲೆಗಳ ಅಧಿನಿಯಮ 2010 ಮತ್ತು ನಿಯಮಗಳು 2013” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೂಸುರಕ್ಷಾ ಯೋಜನೆಯಡಿ ಪ್ರತಿ ದಾಖಲೆ ಮತ್ತು ಪುಟಗಳನ್ನು ಯಥಾವತ್ತಾಗಿ ಸ್ಕ್ಯಾನ್ ಮಾಡುವುದರ ಜೊತೆಗೆ, ಅದರ ನೈಜತೆಯನ್ನು ಕಚೇರಿ ಮುಖ್ಯಸ್ಥರ ಮುಖಾಂತರ ದೃಢೀಕರಿಸಲಾಗುತ್ತಿದೆ. ಈಗಾಗಲೇ ಸಾರ್ವಜನಿಕರಿಗೆ ಇದರ ಸೌಲಭ್ಯ ಸಿಗುತ್ತಿದ್ದು, ದಾಖಲೆಗಳಿಗಾಗಿ ಯಾರೂ ಕಚೇರಿಗಳಿಗೆ ಅಲೆಯುವ ಅವಶ್ಯಕತೆ ಇಲ್ಲ. 2000ನೇ ಇಸವಿಯಲ್ಲಿ ಜಾರಿಗೆ ಬಂದ ಭೂಮಿ ತಂತ್ರಜ್ಞಾನದಂತೆ, ಈಗ ಸಾರ್ವಜನಿಕರು ತಮ್ಮ ಮೊಬೈಲ್ನಲ್ಲೇ ಪಹಣಿ, ಮ್ಯುಟೇಷನ್ಗಳನ್ನು ವೀಕ್ಷಿಸುವ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದ್ದರಿಂದ ಇಲಾಖೆಯ ಸಿಬ್ಬಂದಿ ದಾಖಲೆಗಳ ಮಹತ್ವವನ್ನು ಅರಿತು ಕೆಲಸ ಮಾಡಬೇಕು ಎಂದರು.
ಕಡತಗಳ ನಿರ್ವಹಣೆ ಲೋಪ ಸಲ್ಲದು :
ಸಾರ್ವಜನಿಕ ಕಚೇರಿಗಳಲ್ಲಿ ಕಡತಗಳ ನಿರ್ವಹಣೆ ಮತ್ತು ಸಂರಕ್ಷಣೆ ಅತ್ಯಂತ ಪ್ರಮುಖವಾಗಿದೆ. ಎಷ್ಟೋ ಬಾರಿ ಕಡತಗಳ ನಿರ್ವಹಣೆಯನ್ನು ಸರಿಯಾಗಿ ಮಾಡದ ಕಾರಣ, ಮಾಹಿತಿ ಆಯೋಗದ ಮುಂದೆ ಅಧಿಕಾರಿಗಳು ಚಿರಾಮಾರಿ ಆಕ್ಷೇಪಣೆ ಎದುರಿಸುವುದು, ದಂಡ ಕಟ್ಟುವುದು ಹಾಗೂ ನ್ಯಾಯಾಲಯಗಳಲ್ಲಿ ತಲೆ ತಗ್ಗಿಸಿ ನಿಲ್ಲುವಂತಹ ಪ್ರಸಂಗಗಳು ಎದುರಾಗುತ್ತಿವೆ.
ಇದನ್ನೂ ಓದಿ: ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಖಾಸಗಿ ಬಸ್ ಮಾಲಿಕರ ತೀರ್ಮಾನ
ಸಾರ್ವಜನಿಕ ದಾಖಲೆಗಳ ಕಾಯ್ದೆಯ ಮಹತ್ವದ ಬಗ್ಗೆ ಅನೇಕರಿಗೆ ಇನ್ನು ಸರಿಯಾದ ಅರಿವಿಲ್ಲ. ವರ್ಗಾವಣೆಯಾದ ತಕ್ಷಣ ಕೆಲವರು ದಾಖಲೆಗಳನ್ನು ನೀಡುತ್ತಾರೆ, ಇನ್ನು ಕೆಲವರು ನೀಡುವುದಿಲ್ಲ. ಚಾರ್ಜ್ ತೆಗೆದುಕೊಳ್ಳುವವರೂ ಸಹ ಏನು ಕೊಡುತ್ತಿದ್ದಾರೋ ಅದನ್ನು ಸರಿಯಾಗಿ ಕೇಳಿ ಪಡೆದುಕೊಳ್ಳುವುದಿಲ್ಲ. ಕಚೇರಿಯ ರೆಕಾರ್ಡ್ ವಿಚಾರದಲ್ಲಿ ಕೇವಲ ಕೆಳಹಂತದ ನೌಕರರು ಮಾತ್ರವಲ್ಲದೆ, ಕಚೇರಿ ಮುಖ್ಯಸ್ಥರು, ಮ್ಯಾನೇಜರ್, ಶಿರಸ್ತೆದಾರರು ಸೇರಿದಂತೆ ಎಲ್ಲರಿಗೂ ಜವಾಬ್ದಾರಿ ಇರಬೇಕು. ಆದರೆ ಇಂದು ಅಧಿಕಾರಿಗಳು ನನ್ನ ಟೇಬಲ್ ಮೇಲೆ ಬರುವ ಫೈಲ್ಗೆ ಮಾತ್ರ ನಾನು ಸಹಿ ಮಾಡುವುದು ಎಂಬ ಮಟ್ಟಕ್ಕೆ ತಲುಪಿರುವುದು ವಿಷಾದನೀಯ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಜಿ.ಪಂ. ಕಾರ್ಯದರ್ಶಿ ಡಾ. ರಂಗಸ್ವಾಮಿ, ಇ-ಆಫೀಸ್ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವುದರಿಂದ ಮತ್ತು ದಾಖಲೆಗಳನ್ನು ನಿಯಮಾನುಸಾರ ವರ್ಗೀಕರಿಸಿ ಸಂರಕ್ಷಿಸುವುದರಿAದ ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಅಧಿಕಾರಿಗಳು ತಮ್ಮ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ದಾಖಲೆಗಳ ಸಂರಕ್ಷಣೆ ನಮ್ಮ ಕಾರ್ಯದ ರಕ್ಷಣೆಯು ಆಗಿದೆ. ಸಾರ್ವಜನಿಕರು ವೆಬ್ಸೈಟ್ಗಳ ಮೂಲಕ ಮಾಹಿತಿ ಪಡೆದು, ಕಚೇರಿಗಳಿಂದ ವಿವಿಧ ದಾಖಲೆಗಳನ್ನು ಕೇಳುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜಾರಿಗೆ ತಂದಿರುವ ‘ಇ-ಆಫೀಸ್’ ವ್ಯವಸ್ಥೆಯನ್ನು ನಾವೆಲ್ಲರೂ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇದರಿಂದ ಹೆಚ್ಚಿನ ದಾಖಲೆಗಳು ಡಿಜಿಟಲೀಕರಣಗೊಂಡು ಸುಲಭವಾಗಿ ಲಭ್ಯವಾಗುತ್ತವೆ.
ಇದನ್ನೂ ಓದಿ: ತಾಂತ್ರಿಕ ಮತ್ತು ವೈದ್ಯಕೀಯ ಸ್ನಾತಕ ಪದವಿ ವಿದ್ಯಾಭ್ಯಾಸಕ್ಕಾಗಿ ಅರ್ಜಿ ಆಹ್ವಾನ
ಕಡತಗಳನ್ನು ಎ, ಬಿ, ಸಿ, ಡಿ ಎಂದು ಶಾಸ್ತ್ರೀಯವಾಗಿ ವರ್ಗೀಕರಿಸಿ ಸಂರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಸರಿಯಾದ ದಾಖಲಾತಿ ನಿರ್ವಹಣೆ ಇಲ್ಲದಿದ್ದರೆ ಅಧಿಕಾರಿಗಳು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚೆಗೆ ಮಾಹಿತಿ ಆಯೋಗವು ಕಡತಗಳ ನಿರ್ವಹಣೆಯಲ್ಲಿನ ಲೋಪಕ್ಕಾಗಿ ಅಧಿಕಾರಿಯೊಬ್ಬರಿಗೆ 25,000 ರೂ. ದಂಡ ವಿಧಿಸಿರುವುದಲ್ಲದೆ, ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದೆ.
ಕೇವಲ ಮನೆ ಮತ್ತು ಜಮೀನಿನ ದಾಖಲಾತಿಗಳ ನಿರ್ವಹಣೆಯಲ್ಲಿನ ನಿರ್ಲಕ್ಷö್ಯವೇ ಇದಕ್ಕೆ ಕಾರಣವಾಗಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಈ ಕಾರ್ಯಾಗಾರವು ಕೇವಲ ಇತರರಿಗಾಗಿ ಅಲ್ಲ, ನಮ್ಮನ್ನು ನಾವು ಇಲಾಖಾ ಮತ್ತು ಕಾನೂನು ಪ್ರಕ್ರಿಯೆಗಳಿಂದ ರಕ್ಷಿಸಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ.
ಸಂಪನ್ಮೂಲ ವ್ಯಕ್ತಿಗಳು ನೀಡುವ ತಾಂತ್ರಿಕ ಮಾಹಿತಿಯನ್ನು ಪ್ರತಿಯೊಬ್ಬ ಅಧಿಕಾರಿಯೂ ಸರಿಯಾಗಿ ಅರ್ಥೈಸಿಕೊಂಡು ಕಚೇರಿಗಳಲ್ಲಿ ಅಳವಡಿಸಿಕೊಳ್ಳಬೇಕು. ಕಡತಗಳ ಸಂರಕ್ಷಣೆ ಕೇವಲ ಕಚೇರಿಯ ಕೆಲಸವಲ್ಲ; ಅದು ಅಧಿಕಾರಿ ಮತ್ತು ನೌಕರರ ವೃತ್ತಿಪರ ರಕ್ಷಣೆಯ ಕವಚವಾಗಿದೆ ಎಂದು ಡಾ.ರಂಗಸ್ವಾಮಿ ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಕಾರ್ಯಾಗಾರದಲ್ಲಿ ಕಡತಗಳ ಮಹತ್ವ ಹಾಗೂ ದಾಖಲೆಗಳ ಡಿಜಿಟಲೀಕರಣ ಕುರಿತು ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ, ದಾಖಲೆಗಳ ಸಂರಕ್ಷಣಾ ವಿಧಾನಗಳು ಕುರಿತು ಹಿರಿಯ ಸಂಶೋಧಕ ಡಾ.ಜಯಸಿಂಹ, ಸಾರ್ವಜನಿಕ ದಾಖಲೆಗಳ ಅಧಿನಿಯಮ 2010 ಮತ್ತು ನಿಯಮಗಳು 2013ರ ಪರಿಚಯ ಮತ್ತು ದಾಖಲೆಗಳ ನಿರ್ವಹಣೆ ಕುರಿತು ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ಜಂಟಿ ನಿರ್ದೇಶಕ ಡಾ.ನೆಲ್ಕುದ್ರಿ ಸದಾನಂದಪ್ಪ, ಸೂಕ್ಶ್ಮ ಚಿತ್ರೀಕರಣ ವಿಧಾನದಲ್ಲಿ ದಾಖಲೆಗಳ ಸಂರಕ್ಷಣೆ ಕುರಿತು ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ತಾಂತ್ರಿಕ ಅಧಿಕಾರಿ ಕೆ.ನಾರಾಯಣ ಬಾಬು ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
