CHITRADURGA NEWS | 24 MAY 2026
ಚಿತ್ರದುರ್ಗ: ಸಾಧನೆ ಮಾಡುವವರಿಗೆ ಸಾಧಿಸುವ ಹಂಬಲ ಇರಬೇಕೇ ಹೊರತು ಬೇರೆ ಯಾವುದರ ಕಡೆಗೂ ಆಲೋಚನೆ ಇರಬಾರದು. ವಿದ್ಯಾರ್ಥಿ ಜೀವನದಲ್ಲಿ ಒಂದು ಉತ್ತಮ ಗುರಿ ಇಟ್ಟುಕೊಂಡು ಬಂದರೆ ಮಾತ್ರ ಮುಂದಿನ ಜೀವನದ ದಾರಿ ಸುಗಮವಾಗುತ್ತದೆ. ಪದವಿ ಪೂರೈಸಿದ ವಿದ್ಯಾರ್ಥಿಗಳ ಮುಂದೆ ನೂರಾರು ಆಯ್ಕೆಗಳಿರುವ ಸಂದರ್ಭದಲ್ಲಿ ನಿಮ್ಮ ಜೀವನದ ಬಂಡಿಯ ಚಾಲಕರು ನೀವೇ ಆಗಬೇಕು ಆಗ ಮಾತ್ರ ನಿಮ್ಮ ಜೀವನ ಸರಿಯಾದ ದಿಕ್ಕಿನ ಕಡೆಗೆ ಸಾಗಿ ನಿಗದಿತ ಗುರಿ ತಲುಪಲು ಸಾಧ್ಯ ಎಂದು ಡಾ.ಬಸವಪ್ರಭು ಸ್ವಾಮಿಗಳು ನುಡಿದರು.
ಇದನ್ನೂ ಓದಿ: ಕ್ಷಯರೋಗಕ್ಕೆ ನಿಗದಿತ ಉಚಿತ ಚಿಕಿತ್ಸೆ ಲಭ್ಯ
ನಗರದ ಚಂದ್ರವಳ್ಳಿಯ ಎಸ್.ಜೆ.ಎಂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿ, ರೆಡ್‌ಕ್ರಾಸ್ ಹಾಗೂ ವಿದ್ಯಾರ್ಥಿ ಒಕ್ಕೂಟದ ಸಹಯೋಗದಲ್ಲಿ ನಡೆದ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತ,
ನಾನು ಇದೇ ಕಾಲೇಜಿನ ಹಳೇ ವಿದ್ಯಾರ್ಥಿ. ಈ ಕಾಲೇಜಿನಲ್ಲಿ ಓದಿರುವುದು ನನ್ನ ಪುಣ್ಯ. ಈ ಕಾಲೇಜಿನಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ದೇಶದಾದ್ಯಂತ ಉನ್ನತ ಹುದ್ದೆಯಲ್ಲಿರುವುದೇ ಈ ಕಾಲೇಜಿನ ಹೆಮ್ಮೆಯ ವಿಷಯವಾಗಿದೆ ಎಂದು ಹೇಳುತ್ತಾ ಅವರ ಕಾಲದ ಎಲ್ಲ ತಮ್ಮ ಹಳೆಯ ಗುರುಗಳನ್ನು ನೆನೆಸಿಕೊಂಡರು.
ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯ ಕಟ್ಟಿಕೊಳ್ಳುವ ಕುರಿತು ಸಲಹೆ ನೀಡುವುದರ ಜೊತೆಗೆ ಈ ಕಾಲೇಜು ವಿದ್ಯಾರ್ಥಿಗಳ ಜೀವನ ರೂಪಿಸುವ ಒಂದು ಕಾರ್ಖಾನೆಯಾಗಿ ಇಂದಿಗೂ ಉಳಿದುಕೊಂಡಿದೆ. ಹಾಗೆಯೇ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದುಶ್ಚಟಗಳಿಂದ ದೂರವಿದ್ದು ಭವಿಷ್ಯದ ಕುರಿತು ಯೋಚಿಸಬೇಕು. ನಿಮ್ಮ ಜೀವನಕ್ಕೆ ಮೆಟ್ಟಿಲಾಗಿರುವ ನಿಮ್ಮ ತಂದೆ ತಾಯಿಗಳನ್ನು ಯಾವ ಕಾರಣಕ್ಕೂ ದೂರ ಮಾಡಿಕೊಳ್ಳದೆ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಮಹಾಂತೇಶ್ ಆಯ್ಕೆ
ಶಂಷೀರ್ ಮಾತನಾಡಿ, ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜು ಒಂದು ದೊಡ್ಡ ಆಲದ ಮರ. ಎಷ್ಟೋ ಜನ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವುದರ ಜೊತೆಗೆ ಅವರಿಗೆ ಹಲವಾರು ರೀತಿಯಲ್ಲಿ ಜೀವನವನ್ನು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ. ಪದವಿ ಪೂರೈಸಿರುವ ಅಂತಿಮ ವರ್ಷದ ವಿದ್ಯಾರ್ಥಿಗಳು ಕೇವಲ ಸರ್ಕಾರಿ ಕೆಲಸಕ್ಕೆ ಕಾಯದೆ ಬೇರೆ ಬೇರೆ ರೀತಿಯ ಉದ್ಯಮದಲ್ಲಿ, ಕೆಲಸಗಳಲ್ಲಿ ತೊಡಗಿಕೊಂಡರೆ ಜೀವನದಲ್ಲಿ ಯಾರು ನಿರುದ್ಯೋಗಿಗಳಾಗಿ ಉಳಿದುಕೊಳ್ಳದೆ ಜೀವನದಲ್ಲಿ ಮುಂದೆ ಬರಬಹುದು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಎಚ್. ಪಂಚಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕಾಲೇಜಿನ ಆರಂಭದಿಂದಲೂ ಅಂದರೆ 1969ರಿಂದಲೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ನೀಡುವುದನ್ನು ಒಂದು ಪರಂಪರೆಯಾಗಿ ಉಳಿಸಿಕೊಂಡು ಬಂದಿದ್ದೆವೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತಮ್ಮ ಕೊನೆಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆದು ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಅವರಿಗೆ ಸಲಹೆ ನೀಡಿದರು.
ಪ್ರೊ.ಎಸ್.ಆನಂದ್, ಐಕ್ಯೂಎಸಿ ಸಂಚಾಲಕ ಡಾ.ಹರ್ಷವರ್ಧನ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ | ನಿಗಮ ಅಧ್ಯಕ್ಷ ಡಾ.ಎಂ.ರಾಮಪ್ಪ
ಡಾ.ಹೆಚ್.ಸತೀಶ್ ನಾಯಕ್ ಕಾಲೇಜಿನ ವಾರ್ಷಿಕ ವರದಿ ವಾಚನ ಮಾಡಿದರು. ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರೊ. ಟಿ.ಎನ್.ರಜಪೂತ್ ಬಹುಮಾನ ವಿತರಿಸಿದರು.
ಡಾ.ಎಂ.ಆರ್.ಚಿದಾನಂದಪ್ಪ, ಪ್ರೊ.ನಾಗರಾಜ್, ಪ್ರೊ. ಬಿ.ಎಂ.ಸ್ವಾಮಿ, ಪ್ರೊ.ಮಂಜುನಾಥ್, ಡಾ. ವೆಂಕಟೇಶ್, ಡಾ. ಬಿ. ರೇವಣ್ಣ, ಡಾ. ರಮೇಶ್ ಸಿ., ಡಾ. ನಾಜೀರುನ್ನಿಸ, ಪ್ರೊ. ರಾಜ ನಾಯಕ್ ಹಾಗೂ ಉಪನ್ಯಾಸಕರಾದ ಶ್ರೀಮತಿ ದೇವಿಕಾ, ಅಕ್ಷತಾ, ಶಾಲಿನಿ, ಹೀನಾ ಕೌಸರ್, ದ್ರಾಕ್ಷಾಯಿಣಿ ಮೋಹನ್, ವಿನಯ್, ಪುನೀತ್, ಸಿದ್ದೇಶ್ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
