CHITRADURGA NEWS | 27 MARCH 2026
ಚಿತ್ರದುರ್ಗ: ನಿಗದಿತ ಸಮಯದೊಳಗೆ ಜನನ-ಮರಣ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸಬೇಕು. ಯಾವುದೇ ಕಾರಣಕ್ಕೂ ಜನನ-ಮರಣ ಘಟನೆಗಳ ತಡೆ ನೋಂದಣಿ ಸಹಿಸಲಾಗುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 26 ಮಾರ್ಚ್ | ಚನ್ನಗಿರಿ, ಭೀಮಸಮುದ್ರ ಸೇರಿ ರಾಜ್ಯದ ಅಡಿಕೆ ಮಾರುಕಟ್ಟೆ ವಿವರ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ನಾಗರೀಕ ನೋಂದಣಿ ಪದ್ದತಿಯ ಮೊದಲನೇ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2026ರ ಜನವರಿಯಿಂದ ಫೆಬ್ರವರಿ ಅಂತ್ಯದವರೆಗೆ ಒಟ್ಟು 139 ವಿಳಂಬ ನೋಂದಣಿಗಳಾಗಿದ್ದು, ಇದರಲ್ಲಿ 27 ಜನನ ಹಾಗೂ 112 ಮರಣ ಪ್ರಕರಣಗಳು ಸೇರಿವೆ. ಯಾವುದೇ ಘಟನೆ ನಡೆದ 21 ದಿನಗಳ ಒಳಗೆ ಉಚಿತವಾಗಿ ನೋಂದಣಿ ಮಾಡಿಸಬೇಕು. ಆದರೆ ಒಂದು ವರ್ಷಕ್ಕೂ ಮೀರಿದ 431 ಜನನ ಹಾಗೂ 468 ಮರಣ ಸೇರಿದಂತೆ ಒಟ್ಟು 899 ಪ್ರಕರಣಗಳು ಬಾಕಿ ಇರುವುದು ಅಧಿಕಾರಿಗಳ ಬೇಜವಾಬ್ದಾರಿತನ ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನನ-ಮರಣಗಳ ನೋಂದಣಿಯಲ್ಲಿ ವಿಳಂಬ ಮಾಡುತ್ತಿರುವ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಕಾರಣ ಕೇಳಿ ನೋಟಿಸ್ ನೀಡಿ ಎಂದು ಸೂಚಿಸಿದ ಅವರು, ವಿಳಂಬವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ಭಾಗದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಆಡಳಿತಾಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಸ್ಫೋಟ | ಅಪ್ಪ, ಮಗ ಸಾವು
ಜನನ-ಮರಣ ಪ್ರಮಾಣ ಪತ್ರಗಳು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಅತ್ಯಗತ್ಯ. ಆಸ್ತಿ ಖಾತೆ ಬದಲಾವಣೆಯಂತಹ ಕೆಲಸಗಳಿಗೆ ಈ ದಾಖಲೆಗಳು ಬೇಕೇ ಬೇಕು. ಅಧಿಕಾರಿಗಳ ವಿಳಂಬದಿಂದಾಗಿ ಬಡಜನರು ಕಚೇರಿಗಳಿಗೆ ಅಲೆಯುವಂತಾಗಬಾರದು. ನೋಂದಣಿ ವಿಳಂಬದಿಂದ ಸಾರ್ವಜನಿಕರ ಸಮಯ ಮತ್ತು ಹಣ ವ್ಯಯವಾಗುತ್ತಿದೆ ಎಂದು ಎಚ್ಚರಿಸಿದರು.
ಹೆಸರು ಅದಲು ಬದಲು-ಗಂಭೀರ ಪ್ರಮಾದ: ಜಿಲ್ಲೆಯಲ್ಲಿ ಈಚೆಗೆ ಮೃತಪಟ್ಟವರ ಹೆಸರಿನ ಜಾಗದಲ್ಲಿ ಅರ್ಜಿದಾರರ ಹೆಸರನ್ನು ನಮೂದಿಸಿರುವ ಗಂಭೀರ ಪ್ರಕರಣ ಉಲ್ಲೇಖಿಸಿದ ಅಪರ ಜಿಲ್ಲಾಧಿಕಾರಿಗಳು, ಮೃತರ ಹೆಸರಿನ ಬದಲಿಗೆ ಅರ್ಜಿದಾರರ ಹೆಸರನ್ನೇ ಡೆತ್ ಎಂಟ್ರಿ ಮಾಡಲಾಗಿದೆ ಎಂದು ತಿಳಿಸಿದರು.
ಒಮ್ಮೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ದಾಖಲೆಯಾದರೆ ಆತನಿಗೆ ಸಿಗಬೇಕಾದ ಪಿಂಚಣಿ ಸೇರದಂತೆ ಎಲ್ಲಾ ಸರ್ಕಾರಿ ಸೌಲಭ್ಯಗಳು ಸ್ಥಗಿತಗೊಳ್ಳುತ್ತವೆ. ಇಂತಹ ತಪ್ಪುಗಳಿಂದ ಬದುಕಿರುವವರೇ ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟಂತಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಅಡಿಕೆ ಸಿಪ್ಪೆಯಲ್ಲಿ ಕಾಂಪೋಸ್ಟ್ ತಯಾರಿಕೆ ಕುರಿತು ತರಬೇತಿ
ದಾಖಲೆಗಳನ್ನು ನೀಡುವ ಮೊದಲು ಕನಿಷ್ಟ ಎರಡು ಬಾರಿ ಪರಿಶೀಲಿಸಿ, ಅನುಮೋದನೆ ನೀಡಬೇಕು. ಇದರಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್ ಮಾತನಾಡಿ, ಎಲ್ಲ ಸರ್ಕಾರಿ ಆಸ್ಪತ್ರೆಗಳು ಜನನ, ಮರಣ ಘಟನೆಗಳನ್ನು ಸಂಭವಿಸಿದ 21 ದಿನಗಳೊಳಗೆ ಕಡ್ಡಾಯವಾಗಿ ನೊಂದಣಿ ಮಾಡಿ ಪ್ರಮಾಣ ಪತ್ರ ವಿತರಿಸುವುದು. ಆಸ್ಪತ್ರೆಯಿಂದ ತಾಯಿ ಮತ್ತು ಮಗು ಬಿಡುಗಡೆಯಾಗುವ ಮುನ್ನವೇ “ಜನನ ಪ್ರಮಾಣ ಪತ್ರ” ವಿತರಿಸಲು ಕ್ರಮವಹಿಸಬೇಕು ಎಂದು ತಿಳಿಸಿದ ಅವರು, ಆನ್ಲೈನ್ನ “ಇ-ಜನ್ಮ” ಪೋರ್ಟಲ್ನಲ್ಲಿ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಜನನ-ಮರಣಗಳ ಘಟನೆಗಳ ವರದಿಯನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾಮಟ್ಟದ ನಾಗರೀಕ ನೋಂದಣಿ ಪದ್ಧತಿ ಸಮನ್ವಯ ಸಮಿತಿ ಯಂತೆಯೇ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ನಾಗರೀಕ ನೋಂದಣಿ ಪದ್ಧತಿಯಡಿ ಸಮನ್ವಯ ಸಮಿತಿ ಸಭೆ ಆಯೋಜಿಸಿ, ಜನನ ಮರಣಗಳ ನೋಂದಣಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದ ಅವರು, 2024ನೇ ವರ್ಷದ ಜನನ ಮರಣ ದಾಖಲೆಗಳನ್ನು ಸಂರಕ್ಷಿಸಲು ಎಲ್ಲಾ ನೋಂದಣಾಧಿಕಾರಿ, ಉಪನೋಂದಣಾಧಿಕಾರಿಗಳು ಸಂಬಂಧಿಸಿದ ತಾಲ್ಲೂಕು ಕಚೇರಿ, ನಗರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: PUC ಶಿಕ್ಷಣದೊಂದಿಗೆ ವೃತ್ತಿಪರ ಪ್ರವೇಶ ಪರೀಕ್ಷೆ | ಅರ್ಜಿ ಆಹ್ವಾನ
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಆನಂದ ಪ್ರಕಾಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯ ಸಹಾಯಕ ನಿರ್ದೇಶಕಿ ಶಶಿರೇಖಾ, ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಬಿ.ಬಿ.ಅಶ್ವತ್ಥಾಮ, ಹೆಚ್.ವೀಣಾ, ಮಮತಾ, ನಜರೀನ್, ಸಾಂಖ್ಯಿಕ ನಿರೀಕ್ಷಕ ರಾಕೇಶ್ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
