
CHITRADURGA NEWS | 11 OCTOBER 2025
ಚಿತ್ರದುರ್ಗ: ರೈತ ಸಂಘದ ವತಿಯಿಂದ ನಗರದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಇದನ್ನೂ ಓದಿ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಪ್ರಕರಣ ಹೆಚ್ಚಳ ಅಪಾಯಕಾರಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಳವಳ
ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ನಿಮ್ಮ ಜೊತೆ ರೈತ ಸಂಘ ಇರುತ್ತೆ. ವಿದ್ಯುತ್‍ನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಸರ್ಕಾರ ಒತ್ತಾಯಿಸಿದ್ದರು.
ರಾಜ್ಯದಲ್ಲಿ ಈರುಳ್ಳಿ ಬೆಳೆ ಅತಿ ಮಳೆಯಿಂದ ನಾಶವಾಗಿದೆ, ಇನ್ನೊಂದು ಕಡೆ ಬೆಳೆಗೆ ಬೆಲೆ ಇಲ್ಲ. ಬೆಳೆ ಬಂದರೆ ಬೆಲೆ ಇರಲ್ಲ. ಬೆಲೆ ಇದ್ದರೆ ಬೆಳೆ ಇರಲ್ಲ. ಚಿತ್ರದುರ್ಗ ಜಿಲ್ಲೆ ಬಹಳ ವಿಚಿತ್ರವಾದ ಸನ್ನಿವೇಶವನ್ನು ಹೊಂದಿದೆ. ಕೆಲವು ಕಡೆ ಅತಿವೃಷ್ಟಿ ಮಳೆಯಾದರೆ ಕೆಲವು ಕಡೆ ಅನಾವೃಷ್ಟಿ ಮಳೆಯಾಗುತ್ತದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳನ್ನು ಬರ ತಾಲ್ಲೂಕುಗಳು ಎಂದು ಘೋಷಣೆ ಮಾಡಬೇಕು. ಉಳಿದ ತಾಲ್ಲೂಕುಗಳಿಗೆ ಅತಿವೃಷ್ಟಿಯ ಪರಿಹಾರ ನೀಡಬೇಕು. ಕಾಯಕವೇ ಕೈಲಾಸ ಎನ್ನುವ ಕಾಲವೊಂದು ಇತ್ತು, ಆದರೆ ಈಗ ಕಳ್ಳತನ ಮಾಡುವುದೇ ಕೈಲಾಸ ಆಗಿದೆ. ಮತ್ತೆ ಕಾಯಕಕ್ಕೆ ಬೆಲೆ ಬರುವ ಕಾಲ ಬರಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಅಡಿಕೆ ಬೆಲೆ ಮತ್ತಷ್ಟು ಏರಿಕೆ
ಕೇಂದ್ರ ಸರ್ಕಾರ ಹೆಕ್ಟರ್ ಒಂದಕ್ಕೆ ಖುಷ್ಕಿ ಭೂಮಿಗೆ 6,800 ರೂ, ನೀರಾವರಿ ಜಮೀನಿಗೆ 17000, ತೋಟಗಾರಿಕೆ ಬೆಳೆಗಳಿಗೆ 21,000 ನಿಗದಿ ಮಾಡಿದೆ. ಆದರೆ ನಮ್ಮ ಅಗ್ರಹ ಎಲ್ಲಾ ಬೆಳೆಗಳಿಗೂ ಹೆಕ್ಟರ್ ಒಂದಕ್ಕೆ 75,000 ನೀಡಬೇಕು.
ಕೇಂದ್ರ ಸರ್ಕಾರ ಜಾರಿಗೆ ತಂದಂತಹ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳ ವಿರುದ್ಧ 420 ಸಂಘಟನೆಗಳು ಸೇರಿಕೊಂಡು ಸುದೀರ್ಘ ಪ್ರತಿಭಟನೆ ಮಾಡಿದ್ದರ ಪರಿಣಾಮವಾಗಿ ಕೇಂದ್ರ ಸರ್ಕಾರ ಈ ಮೂರು ಕಾಯ್ದೆಗಳನ್ನು ರದ್ದುಪಡಿಸಿದೆ, ಆದರೆ ರಾಜ್ಯ ಸರ್ಕಾರ ಇನ್ನೂ ಸಹ ಈ ಕಾಯ್ದೆಗಳನ್ನು ರದ್ದುಪಡಿಸಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದೇನೆ ಎಂದರು.
ಬೇರೆ ದೇಶಗಳ ಉತ್ಪನ್ನಗಳು ಯಾವುದೇ ತೆರಿಗೆಯಿಲ್ಲದೇ ಆಮದಾಗುತ್ತೇವೆ. ಆ ಉತ್ಪನ್ನಗಳ ಮೇಲೆ ನಮ್ಮ ದೇಶದ ರೈತರು ಸ್ಪರ್ಧೆ ಮಾಡಲು ಆಗುವುದಿಲ್ಲ. ರೈತರ ಉತ್ಪನ್ನಗಳ ಬೆಲೆಗಳು ಸಹ ಕುಸಿದು ಹೋಗುತ್ತಿವೆ. ರೈತರ ಮೇಲೆ ಬರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
ಇದನ್ನೂ ಓದಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ | ಅ.18 ರವರೆಗೆ ವಿಸ್ತರಣೆ | ಜಿಲ್ಲಾಧಿಕಾರಿ
ರಾಜ್ಯದಲ್ಲಿ ಗನ್ ಪಾಯಿಂಟ್ ನ್ನು ಇಟ್ಟುಕೊಂಡು ಭೂ ಕಬಳಿಕೆ ಮಾಡುತ್ತಿದ್ದಾರೆ. ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಸಾಗುವಳಿ ಹಕ್ಕು ಪತ್ರ ನೀಡದೇ ಅಲ್ಲಿಂದ ಒಕ್ಕಲೆಬ್ಬಿಸುತ್ತಿದ್ದಾರೆ.
ರಾಜ್ಯದಲ್ಲಿ ಅಕ್ರಮ ಸಕ್ರಮ ಸರಿಯಾಗಿ ಜಾರಿಯಾಗುತ್ತಿಲ್ಲ. ಲಂಚ ಕೊಟ್ಟವರಿಗೆ ಮಾತ್ರ ಮಾಡಿಕೊಡುತ್ತಿದ್ದಾರೆ. ನೀವು ಯಾರು ಸಹ ಲಂಚ ಕೊಡಬೇಡಿ ಎಂದು ಅನ್ನದಾತರಿಗೆ ಮನವಿ ಮಾಡಿದರು.
ಸರ್ಕಾರ ರೈತರ ಪಂಪ್‍ಸೆಟ್‍ಗಳಿಗೆ ಏಳು ಗಂಟೆಗಳ ಕಾಲ ವಿದ್ಯುತ್ ನೀಡುತ್ತೇವೆ ಎಂದು ಹೇಳಿದೆ ಆದರೆ ಸರಿಯಾಗಿ ಸಮರ್ಪಕವಾದ ವಿದ್ಯುತ್ ನೀಡುತ್ತಿಲ್ಲ. ಸಮರ್ಪಕವಾದ ಏಳು ಗಂಟೆಗಳ ಕಾಲ ವಿದ್ಯುತ್ ತನ್ನ ಹಗಲು ಹೊತ್ತಲ್ಲೇ ನೀಡಬೇಕು. ರೈತರು ಹೊಸದಾಗಿ ಬೋರ್ವೆಲ್ ಕೊರಸಿದರೆ ಅದಕ್ಕೆ ಬೇಕಾದ ಕಂಬಗಳು ಲೈನ್, ಟಿಸಿ ಅನ್ನ ಅವರೇ ಹಾಕಿಸಿಕೊಳ್ಳುವಂತಹ ಮರಣ ಶಾಸನ ಸರ್ಕಾರ ಜಾರಿಗೆ ತಂದಿದೆ, ಇದನ್ನು ಸರ್ಕಾರ ಕೂಡಲೇ ರದ್ದುಪಡಿಸಬೇಕು ಎಂದರು.
ದಿನಾಂಕ: 26.11.2025 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಭರಮಸಾಗರ ಹೋಬಳಿಯ ಎಲ್ಲಾ ಗ್ರಾಮಗಳಿಗೆ ಇನ್ನೂ 5 ತಿಂಗಳಲ್ಲಿ ಕುಡಿಯುವ ನೀರು ಪೂರೈಕೆ | ಶಾಸಕ ಚಂದ್ರಪ್ಪ
ಜಿಲ್ಲಾಧ್ಯಕ್ಷ ಡಿ.ಎಸ್.ಮಲ್ಲಿಕಾರ್ಜನ್ ಮಾತನಾಡಿದರು.
ರಾಜ್ಯ ಉಪಾಧ್ಯಕ್ಷ ಮಹೇಶ್, ಹೊನ್ನೂರು ಮುನಿಯಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಿಟ್ಟೂರು ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ರೈತರಾದ ಮಾರುತಿ, ವಿರೂಪಾಕ್ಷಪ್ಪ, ಕಬ್ಬಿಗೆರೆ ಕಾಂತರಾಜ್, ಬಾಗೇನಾಳ್ ಕೊಟ್ರಬಸಪ್ಪ, ಮರಳುಸಿದ್ದಯ್ಯ, ನಿಂಗಪ್ಪ, ತಾಲ್ಲೂಕು ಅಧ್ಯಕ್ಷ ಕಾಂತರಾಜ್, ಸಿದ್ದಪ್ಪ, ಜಿ.ಕೆ.ನಾಗರಾಜ್, ಹರಳಯ್ಯ, ಸಿದ್ದಬಸಪ್ಪ, ತಿಪ್ಪೇಸ್ವಾಮಿ, ಗಣೇಶ್, ರಾಮರೆಡ್ಡಿ, ನಿರಂಜನ ಮೂರ್ತಿ ಮಂಜುನಾಥ್, ಮಲ್ಲೇಶಪ್ಪ ಸೇರಿದಂತೆ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

