
ಚಿತ್ರದುರ್ಗ ನ್ಯೂಸ್.ಕಾಂ: ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳಿಸಿರುವ ಹಳೇ ಬೆಂಗಳೂರು ರಸ್ತೆಯ ಮನೆಯೊಂದರಲ್ಲಿ ಐದು ಜನರ ಅಸ್ಥಿಪಂಜರಗಳು ಪತ್ತೆ ಪ್ರಕರಣ ಪ್ರತಿ ಕ್ಷಣವೂ ಕುತೂಹಲ ಮೂಡಿಸುತ್ತಿದೆ.
ಮೃತಪಟ್ಟು ನಾಲ್ಕು ವರ್ಷವಾದರೂ ಯಾರಿಗೂ ಗೊತ್ತಾಗದೇ ಮೃತ ದೇಹಗಳು ಕೊಳೆತು, ಅಸ್ಥಿಪಂಜರವಾದಾಗ ಬೆಳಕಿಗೆ ಬಂದಿದ್ದು ಮೊದಲನೇ ಆಚ್ಚರಿಯಾದರೆ, ಈ ಕುಟುಂಬದ ಜೀವನ ಶೈಲಿ ಮತ್ತೊಂದು ಅಚ್ಚರಿಯಾಗುತ್ತಿದೆ.
ಈಗ ಇಡೀ ಪ್ರಕರಣ ಬೆಳಕಿಗೆ ಬಂದಿದ್ದ, ಮರಣೋತ್ತರ ಪರೀಕ್ಷೆಯೂ ನಡೆದು ಹೋಗಿದೆ. ಸಂಬಂಧಿಕರು ಮೃತರ ಅಸ್ಥಿಪಂಜರಗಳನ್ನು ಪಡೆದು ಚಿತ್ರದುರ್ಗದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನೂ ಮಾಡಿದ್ದಾರೆ.
ಈಗ ಮತ್ತೊಂದು ಸ್ಪೋಟಕ ಅಂಶ ಹೊರಬಿದ್ದಿದೆ. ಮರಣೋತ್ತರ ಪರೀಕ್ಷೆ ವೇಳೆ ಮೃತರಲ್ಲಿ ಇಬ್ಬರ ದೇಹದ ಮೇಲೆ ಹಗ್ಗ ಬಿಗಿದ ಸ್ಥಿತಿಯಲ್ಲಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಪುಸ್ತಕ ಪ್ರಿಯರಿಗೆ ಗುಡ್‍ನ್ಯೂಸ್ | ವರ್ಷಪೂರ್ತಿ ಅರ್ಧ ಬೆಲೆಗೆ ಮಾರಾಟ
ಅಸ್ಥಿಪಂಜರದ ಪರೀಕ್ಷೆ ವೇಳೆ ಒಂದು ಗಂಡು ಮತ್ತು ಮತ್ತೊಂದು ಹೆಣ್ಣಿನ ಮೃತ ದೇಹದ ಮೇಲೆ ಹಗ್ಗದಿಂದ ಬಿಗಿದಂತೆ ಗೋಚರಿಸಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಇದು ಮತ್ತೊಂದು ತಿರುವು ನೀಡುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಅನೇಕರನ್ನು ಕರೆದು ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಲೀಲಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣ ಹಾಗೂ ನರೇಂದ್ರರ ಅಸ್ಥಿಪಂಜರಗಳು ಇರಬಹುದು ಎಂದು ಶಂಕಿಸಿಯೇ ತನಿಖೆ ನಡೆಯುತ್ತಿದೆ. ಕಟುಂಬದವರು ಇದೇ ನಂಬಿಕೆಯಲ್ಲಿ ಅಂತ್ಯ ಕ್ರಿಯೆ ನಡೆಸಿದ್ದಾರೆ.
ಜಗನ್ನಾಥ ರೆಡ್ಡಿ ಅವರ ಸಂಬಂಧಿಕರು ಕೂಡಾ ಇದೇ ಅನುಮಾನ ವ್ಯಕ್ತಪಡಿಸಿದ್ದು, ಸಾವಿನ ಬಗ್ಗೆ ಅನುಮಾನವಿದೆ. ತನಿಖೆ ನಡೆಸಬೇಕು ಎಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಒಂದೇ ಮನೆಯಲ್ಲಿ ಐದು ಮೃತದೇಹಗಳಿದ್ದವು. ಒಂದೇ ಕೊಠಡಿಯಲ್ಲಿ ನಾಲ್ವರ ದೇಹಗಳಿದ್ದರೆ ಮತ್ತೊಂದು ಕೊಠಡಿಯಲ್ಲಿ ಒಬ್ಬರ ದೇಹವಿತ್ತು. ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿತ್ತಾದರೂ, ಒಂದೊಂದು ಪರೀಕ್ಷೆಯ ನಂತರ ಒಂದೊಂದು ಅಂಶಗಳು ಬೆಳಕಿಗೆ ಬರುತ್ತಿವೆ.
ಒಂದೇ ಮಂಚದ ಮೇಲೆ ಇಬ್ಬರ ಮೃತದೇಹಗಳು, ಮತ್ತೊಂದು ಬದಿಯ ಇನ್ನೊಂದು ಮಂಚದ ಮೇಲೆ ಒಬ್ಬರ ಮೃತದೇಹವಿದ್ದರೆ, ನಲದ ಮೇಲಿನ ಬೆಡ್ ಮೇಲೆ ಮತೊಂದು ದೇಹವಿತ್ತು. ಮಂಚದ ಕೆಳಗೆ ಮತ್ತೊಬ್ಬರ ದೇಹವಿತ್ತು. ಒಂದು ಮೃತ ದೇಹ ಮಕಾಡೆ ಮಲಗಿದ ಸ್ಥಿತಿಯಲ್ಲಿತ್ತು ಎನ್ನುವ ಅಂಶಗಳು ಬೆಳಕಿಗೆ ಬಂದಿವೆ.
ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ನಡೆಸುತ್ತಿರುವ ಪೊಲೀಸರು, ಮೃತರ ಅಸ್ಥಿಪಂಜರಗಳನ್ನು ದಹನ ಮಾಡಲು ಸಂಬಂಧಿಕರು ಕೇಳಿದಾಗ ಒಪ್ಪಿಗೆ ನೀಡಲಿಲ್ಲ. ಇನ್ನೂ ಎಫ್‍ಎಸ್‍ಎಲ್ ವರದಿ ಹಾಗೂ ಡಿಎನ್‍ಎ ವರದಿ ಬರಬೇಕಿರುವುದರಿಂದ ಮಣ್ಣು ಮಾಡಲು ಒಪ್ಪಿದ ನಂತರ ಸಂಬಂಧಿಕರಿಗೆ ಹಸ್ತಾಂತರ ಮಾಡಿದರು.
ಮೃತರ ಅಸ್ಥಿ ಪಂಜರಗಳಿಗೆ ಪೊಲೀಸರು ನಂಬರ್ ನೋಡಿ ಅಂತ್ಯಕ್ರಿಗೆ ನೀಡಿದ್ದಾರೆ. ಸಂಬಂಧಿಕರು ಶನಿವಾರ ಸಂಜೆ ವಿವೇಕಾನಂದ ನಗರದ ಬಳಿಯಿರುವ ಹಿಂದೂ ರುದ್ರಭೂಮಿಯಲ್ಲಿ ಜೆಸಿಬಿ ಮೂಲಕ ಗುಂಡಿ ತೋಡಿಸಿ ಅಂತ್ಯಕ್ರಿಯೆ ನಡೆಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ನೇತೃತ್ವದಲ್ಲಿ ಡಿವೈಎಸ್ಪಿ ಅನೀಲ್ ಕುಮಾರ್ ಹಾಗೂ ಬಡಾವಣೆ ಠಾಣೆ ಪಿಐ ನಯೀಂ ಅಹಮದ್ ತನಿಖೆ ಕೈಗೊಂಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
