Connect with us

    ಕವಾಡಿಗರಹಟ್ಟಿಗೆ ಉಪಲೋಕಾಯುಕ್ತರ ಭೇಟಿ | ನಿವೇಶರಹಿತರ ಪಟ್ಟಿ ಮಾಡಿ

    ಮುಖ್ಯ ಸುದ್ದಿ

    ಕವಾಡಿಗರಹಟ್ಟಿಗೆ ಉಪಲೋಕಾಯುಕ್ತರ ಭೇಟಿ | ನಿವೇಶರಹಿತರ ಪಟ್ಟಿ ಮಾಡಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 22 JANUARY 2025

    ಚಿತ್ರದುರ್ಗ: ವರ್ಷದ ಹಿಂದೆ ಕಲುಷಿತ ನೀರು ಸೇವಿಸಿ ಅಹಿತಕರ ಘಟನೆ ಸಂಭವಿಸಿದ್ದ ಚಿತ್ರದುರ್ಗ ನಗರದ ಕವಾಡಿಗರಹಟ್ಟಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಬುಧವಾರ ಭೇಟಿ ನೀಡಿ, ಕವಾಡಿಗರಹಟ್ಟಿ ನಿವಾಸಿಗಳ ಸಮಸ್ಯೆ ಆಲಿಸಿದರು.

    Also Read: ಮಲ್ಲಾಪುರ ಕೆರೆ ನಿರ್ಲಕ್ಷ್ಯ | ಸುಮೋಟೊ ಕೇಸ್ | ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ

    ಕವಾಡಿಗರಹಟ್ಟಿಯಲ್ಲಿ ಜರುಗಿದ ಅಹಿತಕರ ಘಟನೆ ಬಳಿಕ ಇಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಓವರ್ ಹೆಡ್ ಟ್ಯಾಂಕ್, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಪ್ರತಿ ಮನೆಗೂ ಹೊಸದಾಗಿ ನಳ ಸಂಪರ್ಕ ಕಲ್ಪಿಸಲಾಗಿದೆ.

    ಸಮರ್ಪಕವಾಗಿ ನೀರಿನ ಸೌಲಭ್ಯ ಕಲ್ಪಿಸಲಾಗಿದ್ದು, ಕುಡಿಯುವ ನೀರಿನ ಯಾವುದೇ ತೊಂದರೆ ಇಲ್ಲ ಎಂದು ಕವಾಡಿಗರಹಟ್ಟಿ ನಿವಾಸಿಗಳು ಉಪಲೋಕಾಯುಕ್ತರಿಗೆ ಮಾಹಿತಿ ನೀಡಿದರು.

    ಬಳಿಕ ಮಾತನಾಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ, ಕವಾಡಿಗರಹಟ್ಟಿ ಓವರ್ ಹೆಡ್ ಟ್ಯಾಂಕ್ ಸೇರಿದಂತೆ ಚಿತ್ರದುರ್ಗ ನಗರ ವ್ಯಾಪ್ತಿಯ ಓವರ್ ಹೆಡ್ ಟ್ಯಾಂಕ್‍ಗಳನ್ನು ಕನಿಷ್ಟ 6 ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸುವ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು.

    ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಅವರಿಗೆ ಉಪಲೋಕಾಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.

    Also Read: ವಿವಿ ಸಾಗರಕ್ಕೆ ಸಿಎಂ ಬಾಗೀನ | ಹೊಸದುರ್ಗ-ಹಿರಿಯೂರು ನಡುವೆ ಮಾರ್ಗ ಬದಲಾವಣೆ

    ಕವಾಡಿಗರಹಟ್ಟಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಎಷ್ಟು ಜನಸಂಖ್ಯೆ ಇದೆ. ಕುಟುಂಬಗಳ ಸಂಖ್ಯೆ ಎಷ್ಟು? ಒಂದು ಕುಟುಂಬದಲ್ಲಿ ಎಷ್ಟು ಜನರಿದ್ದಾರೆ ಹಾಗೂ ಕೂಡು ಕುಟುಂಬಗಳ ಸಂಖ್ಯೆಯನ್ನು ಗುರುತಿಸಿ, ನಂತರ ಒಂದೇ ಕುಟುಂಬದಲ್ಲಿ ನಾಲ್ಕೈದು ಮಂದಿ ಅಣ್ಣತಮ್ಮಂದಿರು ಇದ್ದರೆ ಕುಟುಂಬ ಬೇರೆಯಾಗಲು ಇಚ್ಛಿಸಿದರೆ ಅವರಿಗೂ ಸಹ ಕಾನೂನು ಪ್ರಕಾರ ಪ್ರತ್ಯೇಕವಾಗಿ ನಿವೇಶನ ನೀಡಬೇಕು.

    ಕವಾಡಿಗರಹಟ್ಟಿ ಜನರಿಗೆ ನಿವೇಶನ ಹಂಚಿಕೆಗಾಗಿ ಈಗಾಗಲೇ ಮೂರು ಎಕರೆ ಜಮೀನು ಮಂಜೂರು ಆಗಿದ್ದು, ಇದರಲ್ಲಿ 62 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ರಸ್ತೆ ಅಗಲೀಕರಣಕ್ಕಾಗಿ ಮನೆ ಕಳೆದುಕೊಂಡವರಿಗೆ ಮೊದಲು ನಿವೇಶನ ಹಂಚಿಕೆ ಮಾಡಬೇಕು. ಇನ್ನೂ ಉಳಿದ ಜನರಿಗಾಗಿ ಸುತ್ತಮುತ್ತ ಇರುವ ಸರ್ಕಾರಿ ಜಮೀನು ಗುರುತಿಸಿ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡುವಂತೆ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಾಕೀತು ಮಾಡಿದರು.

    ಕವಾಡಿಗರಹಟ್ಟಿ- ಮೂಲಭೂತ ಸೌಕರ್ಯ ನೀಡಿಕೆ ಕುರಿತಂತೆ ಸ್ವಯಂಪ್ರೇರಿತ ಪ್ರಕರಣ ದಾಖಲು:

    ಈ ಹಿಂದೆ ಕಲುಷಿತ ನೀರು ಕುಡಿದು ದುರಂತ ಸಂಭವಿಸಿದ್ದ ಕವಾಡಿಗರಹಟ್ಟಿಯಲ್ಲಿನ ನಿವಾಸಿಗಳಿಗೆ ರಸ್ತೆ, ಮನೆಗಳಿಗೆ ಶೌಚಾಲಯ, ನಿವೇಶನ, ಸೂರು ವಿತರಣೆ ಕುರಿತಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.

    Also Read: ಶ್ರೀ ಬಸವಪ್ರಭು ಸ್ವಾಮೀಜಿಗೆ ಗೌರವ ಡಾಕ್ಟರೇಟ್

    ಸ್ವಯಂಪ್ರೇರಿತ ಪ್ರಕರಣದಲ್ಲಿ ನಗರಸಭೆ ಪೌರಾಯುಕ್ತರು, ಜಿಲ್ಲಾಧಿಕಾರಿಗಳನ್ನು ಪಾರ್ಟಿಗಳನ್ನಾಗಿ ಮಾಡಿಕೊಳ್ಳಲಾಗುವುದು. ಕವಾಡಿಗರಹಟ್ಟಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಕಾಲಕಾಲಕ್ಕೆ ವರದಿ ನೀಡಬೇಕು. ಕವಾಡಿಗರಹಟ್ಟಿ ಬಡಾವಣೆ ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಡವವರೆಗೂ ಪ್ರಕರಣ ಚಾಲ್ತಿಯಲ್ಲಿ ಇರಲಿದೆ ಎಂದು ಉಪಲೋಕಾಯುಕ್ತರು ಹೇಳಿದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ತಹಶೀಲ್ದಾರ್ ಡಾ.ನಾಗವೇಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top