
ಚಿತ್ರದುರ್ಗ ನ್ಯೂಸ್.ಕಾಂ
ಭಗವಾನ್ನಾರಾಯಣನು ಇಬ್ಬರು ಅಸುರರಿಗಾಗಿ ವೈಕುಂಠದ ದ್ವಾರವನ್ನು ತೆರೆದ ದಿನವೆಂದು ಆಚರಿಸಲಾಗುವ ವೈಕುಂಠ ಏಕಾದಶಿಯನ್ನು ಪ್ರಸಕ್ತ ವರ್ಷ ಡಿ. 23ರಂದು ಆಚರಿಸಲಾಗುತ್ತಿದೆ. ಈ ಆಚರಣೆಗೆ ಈಗಾಗಲೇ ಜಿಲ್ಲೆಯ ವಿಷ್ಣು ದೇವಾಲಯಗಳಲ್ಲಿ ಸಿದ್ಧತೆಗಳು ಪ್ರಾರಂಭವಾಗಿದ್ದು, ವೈಕುಂಠ ದ್ವಾರವನ್ನು ನಿರ್ಮಿಸಲಾಗುತ್ತಿದೆ. ದೇವರ ದರ್ಶನ ಮಾಡಿ ಈ ದ್ವಾರದ ಮೂಲಕ ಭಕ್ತರು ಹಾಯ್ದು ಬರುವ ಪದ್ಧತಿ ರೂಢಿಯಲ್ಲಿದೆ.
ಆರ್ಯವೈಶ್ಯ ಸಂಘದಿಂದ ಚಿತ್ರದುರ್ಗ ನಗರದ ವಾಸವಿ ಮಹಲ್ ರಸ್ತೆಯ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ‘ಭೂವರಾಹ ಸ್ವಾಮಿ ಅವತಾರ ದರ್ಶನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತರು ಮಹಾದ್ವಾರದ ಮೂಲಕ ದೇವಾಲಯವನ್ನು ಪ್ರವೇಶಿಸಿ ಶ್ರೀನಿವಾಸ ಲಕ್ಷ್ಮೀ ಪದ್ಮಾವತಿ ದೇವರುಗಳ ಪರಿವಾರವನ್ನು ಕುಳ್ಳಿರಿಸಿರುವ ತೊಟ್ಟಿಲು ಕೆಳಗೆ ಮುಂದಕ್ಕೆ ಸಾಗಿ ನಂತರ ವಿಶೇಷ ಅಲಂಕಾರ ಮತ್ತು ಸುವರ್ಣ, ವಜ್ರಾಂಗಿ ಆಭರಣಗಳಿಂದ ಕಂಗೊಳಿಸುವ ಕನ್ಯಾಕಪರಮೇಶ್ವರಿ ಅಮ್ಮ, ನಗರೇಶ್ವರ ಸ್ವಾಮಿ ಹಾಗೂ ಜನಾರ್ಧನಸ್ವಾಮಿಯ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: 96 ಸಾಧಕರಿಗೆ ಸನ್ಮಾನ; 24ರಂದು ವಾಲ್ಮೀಕಿ ನಾಯಕ ನೌಕರರ ಸಮಾವೇಶ
ಬೆಳಿಗ್ಗೆ 7.30ಕ್ಕೆ ವೈಕುಂಠ ದ್ವಾರವನ್ನು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಎಲ್.ಇ.ಶ್ರೀನಿವಾಸ ಬಾಬು ಅಧ್ಯಕ್ಷತೆವಹಿಸಲಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರಿನಾಥ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5.15ಕ್ಕೆ ಸಾರ್ವಜನಿಕರ ದರ್ಶನವನ್ನು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಉದ್ಘಾಟಿಸಲಿದ್ದಾರೆ. ಸಂಜೆ 5.30ರಿಂದ 9.30ರವರೆಗೆ ಭಕ್ತರಿಗೆ ದರ್ಶನ ಸಮಯವನ್ನು ನಿಗಧಿಗೊಳಿಸಲಾಗಿದೆ.
ತುರುವನೂರು ರಸ್ತೆಯ ಐತಿಹಾಸಿಕ ವೆಂಕಟರಮಣ ದೇವಸ್ಥಾನ, ಆನೆಬಾಗಿಲ ಬಳಿಯ ಲಕ್ಷ್ಮಿ ವೆಂಕಟೇಶ್ವರ, ತಿಪ್ಪಜ್ಜಿ ವೃತ್ತದ ವೆಂಕಟೇಶ್ವರಸ್ವಾಮಿ ದೇವಸ್ಥಾನ, ಕೋಟೆ ವೇಣುಗೋಪಾಲಸ್ವಾಮಿ ದೇವಸ್ಥಾನ, ಜೆಸಿಆರ್ ವೃತ್ತದ ಇಸ್ಕಾನ್ ಮಂದಿರಗಳಲ್ಲಿ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ನಸುಕಿನ 5ರ ವೇಳೆಗೆ ದೇಗುದಲ್ಲಿ ಗೋವಿಂದ, ನಾರಾಯಣ, ಶ್ರೀಹರಿ, ಸಪ್ತಗಿರಿವಾಸ ಶ್ರೀನಿವಾಸ, ಶ್ರೀವೆಂಕಟೇಶ ಸೇರಿದಂತೆ ಶ್ರೀವಿಷ್ಣುವಿನ ನಾನಾ ನಾಮಸ್ಮರಣೆಯ ಘೋಷಗಳು ಮೊಳಗಲಿವೆ.
ಚಿಕ್ಕಜಾಜೂರಿನ ರಾಮಕೃಷ್ಣ ದೇವಸ್ಥಾನದಲ್ಲಿ ಪಂಚ ಲೋಹಗಳಿಂದ ತಯಾರಿಸಲಾದ ನಾರಾಯಣ, ಶ್ರೀದೇವಿ ಹಾಗೂ ಭೂದೇವಿಯರ ಮೂರ್ತಿಗಳನ್ನು ವೈಕುಂಠ ಏಕಾದಶಿ ಪ್ರಯುಕ್ತ ಶನಿವಾರ ಮುಂಜಾನೆ 5.15ಕ್ಕೆ ಪ್ರತಿಷ್ಠಾಪಿಸಿ, ವೈಕುಂಠ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ಶನಿವಾರ ಮುಂಜಾನೆ 4 ಗಂಟೆಗೆ ದೇವರಹೊನ್ನಾಳಿಯ ಪುರೋಹಿತ ಶ್ರೀನಿವಾಸ ಮೂರ್ತಿ ಅವರು ಹೋಮವನ್ನು ನಡೆಸಲಿದ್ದಾರೆ. ಸಂಜೆ ನಾರಾಯಣ, ಶ್ರೀದೇವಿ ಹಾಗೂ ಭೂದೇವಿಯರ ಉತ್ಸವ ಮೂರ್ತಿಗಳನ್ನು ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ.
ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿಯ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಇಡೀ ದಿನ ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಇರುತ್ತದೆ. ಸಂಜೆ 6.30 ರಿಂದ 9ರವರೆಗೆ ಭಕ್ತರಿಂದ ವಿಷ್ಣು ಸಹಸ್ರನಾಮ, ಲಲಿತ ಸಹಸ್ರನಾಮ, ಗೋವಿಂದ ನಾಮಾವಳಿ ಪಠಣ ನಡೆಯಲಿದೆ. ಭಕ್ತರಿಗೆ ತಿರುಪತಿಯಿಂದ ತರಿಸಿರುವ ಲಾಡು ಪ್ರಸಾದ ವಿತರಿಸಲಾಗುತ್ತದೆ.
ಹೊಸದುರ್ಗ ತಾಲ್ಲೂಕಿನ ಸಣ್ಣಕ್ಕಿ ಬಾಗೂರು ಗ್ರಾಮದ ಚನ್ನಕೇಶವಸ್ವಾಮಿ ದೇಗುಲದಲ್ಲಿ ಸುಪ್ರಭಾತ ಸೇವೆ, ಮಹಾಭಿಷೇಕ, ತೋಮಾಲೆ ಸೇವೆ, ಅಲಂಕಾರ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ವೇದ ಪಾರಾಯಣ, ಅರ್ಚನೆ, ಮಹಾಮಂಗಳಾರತಿ ನೆರವೇರಲಿವೆ. ವೈಕುಂಠ ದ್ವಾರದ ಮೂಲಕ ವಿಷ್ಣು ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ಚನ್ನಕೇಶವ ದೇವಾಲಯದ 11 ಮಹಾದ್ವಾರಗಳ ಮೂಲಕ ಚನ್ನಕೇಶವ ಸ್ವಾಮಿಯ ಮೂಲ ಮೂರ್ತಿಯನ್ನು ಸಂದರ್ಶಿಸಿ ನಂತರ ಕೊನೆಯ ಉತ್ತರದ್ವಾರದ ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಸ್ವಾಮಿಯ ಭೂ ವೈಕುಂಠ ಸೇವಾ ದರ್ಶನಕ್ಕೆ ಅವಕಾಶ ಮಾಡಲಾಗಿದೆ.
ಹಿರಿಯೂರು ತಾಲ್ಲೂಕಿನ ಕಳವೀಭಾಗಿ ಗ್ರಾಮದ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದಲ್ಲಿ ಬೆಳಗಿನ ಜಾವ 4.30ರಿಂದ ಪೂಜೆ ಆರಂಭವಾಗಲಿದೆ. ಏಕಾದಶಿ ಪೂಜೆ ಪ್ರಯುಕ್ತ ಪುಣ್ಯಾಹ, ಗಂಗಾಪೂಜೆ, ಮೇಲುದೀಪಾರಾಧನೆ, ನವಗ್ರಹ ಪೂಜೆ, ಅಭಿಷೇಕ ಮತ್ತು ವಿಷ್ಣು ಸಹಸ್ರನಾಮ, ಸ್ವಾಮಿಗೆ ಶಾಂತಿ ಹೋಮ, ಬಲಿ ಪೂರ್ಣಾಹುತಿ, ಸುಮಂಗಲಿಯರಿಂದ ತಂಬಿಟ್ಟಿನ ಆರತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಪೂಜಾ ವಿಧಿಗಳು ಜರುಗಲಿವೆ. ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
