ಮುಖ್ಯ ಸುದ್ದಿ
Upper Bhadra Project: ಭದ್ರಾ ಮೇಲ್ದಂಡೆಗೆ ಕೇಂದ್ರದಿಂದ ಪುನಃ ದ್ರೋಹ | ಅನುದಾನ ಬಿಡುಗಡೆಗೆ ಕ್ಯಾತೆ

CHITRADURGA NEWS | 11 SEPTEMBER 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆಗೆ ಅನುದಾನ ನೀಡದೆ ಕೇಂದ್ರ ಸರ್ಕಾರ ದ್ರೋಹದ ಮಾರ್ಗ ಅನುಸರಿಸುತ್ತಿದೆ. ಯೋಜನೆಗೆ ಕೇಂದ್ರ ಸರ್ಕಾರವೇ ಎಲ್ಲ ತಾಂತ್ರಿಕ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಇದೀಗ ಹಣ ಬಿಡುಗಡೆ ವೇಳೆಗೆ ಕ್ಯಾತೆ ತೆಗೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಶ್ನಿಸಿದೆ.
ಇಲ್ಲಿನ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಪದಾಧಿಕಾರಿಗಳು, ಸೆಪ್ಟಂಬರ್ 5 ರಂದು ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು. ಭದ್ರಾ ಮೇಲ್ದಂಡೆಗೆ ರಾಜ್ಯ ಸರ್ಕಾರ ಈವರೆಗೆ ಮಾಡಿದ ಖರ್ಚು ವೆಚ್ಚ, ಯೋಜನೆ ಪೂರ್ಣಗೊಳಿಸಲುಬೇಕಾದ ಬಾಕಿ ಮೊತ್ತದ ಆಧಾರದ ಮೇಲೆ ಕೇಂದ್ರ ನೆರವು ನೀಡುತ್ತದೆ ಎಂದರು.
ಭೌಗೋಳಿಕ ಹಂಚಿಕೆ ಹಾಗೂ ಹಣಕಾಸು ಲಭ್ಯತೆ ನೋಡಿಕೊಳ್ಳಬೇಕಾಗುತ್ತದೆ ಎಂಬ ಅಂಶವ ದೇಬರ್ಶಿ ಮುಖರ್ಜಿ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಪತ್ರ ಬರೆಯುವಾಗ ವಿವೇಚನಾ ರಹಿತವಾಗಿ ನಡೆದುಕೊಳ್ಳಲಾಗಿದೆ. ಅನುದಾನ ನೆರವು ನೀಡುವುದ ಮತ್ತೊಂದಿಷ್ಟು ದಿನ ಮುಂದಕ್ಕೆ ಹಾಕುವ ಉದ್ದೇಶ ಇದರ ಹಿಂದೆ ಅಡಗಿದೆ ಎಂದು ಸಮಿತಿ ದೂರಿದೆ.

ಕ್ಲಿಕ್ ಮಾಡಿ ಓದಿ: ಬೆಳೆ ಹಾನಿಯಿಂದ ಹೆಚ್ಚಿದ ಸಾಲದ ಹೊರೆ | ರೈತ ಆತ್ಮಹತ್ಯೆ
ಐದು ಹಂತದ ಸಮಿತಿಗಳ ಮುಂದೆ ಭದ್ರಾ ಮೇಲ್ದಂಡೆ ಪ್ರಸ್ತಾವನೆ ಹೋಗಿ ಅಂತಿಮವಾಗಿ ಅನುಮೋದನೆಗೊಂಡಿದೆ. ರಾಜ್ಯ ಸರ್ಕಾರದಿಂದ ಯಾವುದೇ ತಾಂತ್ರಿಕ ಮಾಹಿತಿ ಪೂರೈಕೆ ಅಗತ್ಯವಿಲ್ಲ. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಖುದ್ದು ಆಸಕ್ತಿ ವಹಿಸಿ, ಎಲ್ಲ ತಾಂತ್ರಿಕ ಅಡಚಣೆಗಳ ನಿವಾರಿಸಿ ಭದ್ರಾ ಮೇಲ್ದಂಡೆ ಯೋಜನೆ ಪ್ರಸ್ತಾವನೆಯ ಕೇಂದ್ರದ ಮುಂದೆ ಮಂಡಿಸಿದ್ದರು.

ಭದ್ರಾ ಮೇಲ್ದಂಡೆ ಯೋಜನೆ
2020 ರ ಡಿಸೆಂಬರ್ 24 ರಂದು ನಡೆದ ಜಲಶಕ್ತಿ ಸಚಿವಾಲಯದ 147 ನೇ ಮೀಟಿಂಗ್‌ನಲ್ಲಿ ಸಲಹಾ ಸಮಿತಿ ಯೋಜನೆ ಸ್ವೀಕಾರ ಮಾಡಿತ್ತು. 2021 ರ ಮಾರ್ಚ್ 25 ರಂದು ನಡೆದ ಇನ್‌ವೆಸ್ಟ್‌ಮೆಂಟ್ ಕ್ಲಿಯರೆನ್ಸ್ ಸಮಿತಿ ₹ 16,125 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ ಸೂಚಿಸಿತ್ತು. 2021 ರ ಏಪ್ರಿಲ್17 ರಂದು ನಡೆದ ಮತ್ತೊಂದು ಸಭೆಯಲ್ಲಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗುವ ಎಲ್ಲ ಅರ್ಹತೆ ಇರುವುದ ದೃಢೀಕರಿಸಲಾಗಿತ್ತು.
2022 ರ ಫೆಬ್ರವರಿ 15 ರಲ್ಲಿ ನಡೆದ ಹೈ ಪವರ್ ಸ್ಟೀರಿಂಗ್ ಕಮಿಟಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಘೋಷಿಸಬಹುದೆಂದು ಶಿಫಾರಸು ಮಾಡಿತು. 2022ರ ಸೆಪ್ಟಂಬರ್ 25 ರಂದು ನಡೆದ ಸಾರ್ವಜನಿಕ ಬಂಡವಾಳ ಹೂಡಿಕೆ ಸಮಿತಿ ಯೋಜನೆಗೆ ₹ 5,300ಕೋಟಿ ಅನುದಾನ ನೀಡಬಹುದೆಂದು ಶಿಪಾರಸ್ಸು ಮಾಡಿತು.
ಕ್ಲಿಕ್ ಮಾಡಿ ಓದಿ: ಕುರಿ ಮೇಲೆ ಚಿರತೆ ದಾಳಿ | ಗ್ರಾಮಸ್ಥರಲ್ಲಿ ಆತಂಕ
2023ರ ಫೆಬ್ರವರಿ 1 ರಂದು ಕೇಂದ್ರ ಸಚಿವೆ ನಿರ್ಮಲ ಸೀತರಾಮನ್ ಮಂಡಿಸಿದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ ₹ 5,300 ಕೋಟಿ ಅನುದಾನ ಒದಗಿಸುವ ಘೋಷಣೆ ಮಾಡಿದ್ದರು. ಈ ಎಲ್ಲ ಪ್ರಕ್ರಿಯೆಗಳ ಹಿಂದಿನ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಿಎಂ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಖುದ್ದು ಆಸಕ್ತಿ ವಹಿಸಿ ರಾಷ್ಡ್ರೀಯ ಯೋಜನೆ ಘೋಷಣೆಗೆ ಶ್ರಮ ಹಾಕಿದ್ದರು. ಕ್ಯಾಬಿನೆಟ್ ಒಪ್ಪಿಗೆ ಮಾತ್ರ ಬಾಕಿ ಉಳಿದಿತ್ತು.
ತಾವೇ ಯೋಜನೆ ತಯಾರಿಸಿ ಕೇಂದ್ರದ ನೆರವಿಗಾಗಿ ಶ್ರಮಿಸಿದ ರಾಜ್ಯದ ಬಿಜೆಪಿ ಸಂಸದರು ಈಗ ಕೇಂದ್ರದಿಂದ ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೂ ಮೌನ ವಹಿಸಿರುವುದು ಅರ್ಥವಾಗದಂತಾಗಿದೆ. ಪಕ್ಷ ರಾಜಕಾರಣ ಬದಿಗೆ ಸರಿಸಿ ಜನರ ಪರವಾಗಿ ನಿಲ್ಲುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಲಹೆ ಮಾಡಿದೆ.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ
ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ಬರೆದ ಪತ್ರದ ಅನುಸಾರ ರಾಜ್ಯ ಸರ್ಕಾರವೇನಾದರೂ ಪಾಲನೆ ಮಾಡಿದಲ್ಲಿ ಕೇಂದ್ರದಿಂದ ಬರಬೇಕಾದ ₹ 5,300 ಕೋಟಿ ಅನುದಾನದಲ್ಲಿ ₹ 1,800 ಕೋಟಿ ಖೋತವಾಗುತ್ತದೆ. ಮಾರ್ಚ್ 2022 ರವರೆಗೆ ಖರ್ಚು ಮಾಡಿದ ಅನುದಾನ ಆಧರಿಸಿ ₹ 5,300 ಕೋಟಿ ಕೇಂದ್ರದಿಂದ ಲಭ್ಯವಾಗಬೇಕಿತ್ತು. ಅಂದರೆ ₹ 14,697 ಕೋಟಿ ಒಟ್ಟಾರೆ ಯೋಜನಾ ವೆಚ್ಚದಲ್ಲಿ ₹ 5,528 ಕೋಟಿಯನ್ನು ರಾಜ್ಯ ಸರ್ಕಾರ ಖರ್ಚು ಮಾಡಿತ್ತು. ಉಳಿದ ₹ 9,168 ಕೋಟಿಯಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.60 ರಷ್ಟು ಮೊತ್ತ ₹ 5,501 ಕೋಟಿ ಕೊಡಬೇಕಾಗಿದ್ದು ಅದನ್ನು ₹ 5,300 ಕೋಟಿಗೆ ಸೀಮಿತಗೊಳಿಸಲಾಗಿತ್ತು.
ಹಾಲಿ ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ಬರೆದ ಪತ್ರದ ಪ್ರಕಾರ ಇಲ್ಲಿಯವರೆಗೆ ಎಂಬ ಸಂಗತಿ ಪಾಲಿಸದರೆ ಅನುದಾನ ಖೋತ ಗ್ಯಾರಂಟಿ. ಕಳೆದ ಮಾರ್ಚ್ 2024 ರವರೆಗೆ ಭದ್ರಾ ಮೇಲ್ದಂಡೆಗೆ ₹ 8,785ಕೋಟಿ ಖರ್ಚು ಮಾಡಲಾಗಿದ್ದು ₹ 5,910 ಕೋಟಿ ಬಾಕಿ ಉಳಿಯುತ್ತದೆ. ಈ ಮೊತ್ತಕ್ಕೆ ಶೇ.60 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಿದ್ದಲ್ಲಿ ₹ 3,546 ಕೋಟಿ ಮಾತ್ರ ಲಭ್ಯವಾಗುತ್ತದೆ.
ಕ್ಲಿಕ್ ಮಾಡಿ ಓದಿ: ಭದ್ರಾ ಮೇಲ್ದಂಡೆ ಯೋಜನೆ ಅನುದಾನ | ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ
ಕೇವಲ ಎರಡು ವರ್ಷಕ್ಕೆ ₹1,800 ಕೋಟಿ ಖೋತವಾಗುತ್ತದೆ. ಹಾಗೇನಾದರೂ ಮುಂದಿನ ಮಾರ್ಚ್‌ವರೆಗೆ ಇದೇ ರೀತಿ ಕ್ಯಾತೆಗಳು ಮುಂದುವರಿದರೆ ಕೇಂದ್ರ ತಾನು ನೀಡಬೇಕಾದ ನೆರವು ₹ 2,000ಕೋಟಿಗೆ ಬಂದು ನಿಂತಲ್ಲಿ ಅನುಮಾನವಿಲ್ಲವೆಂದು ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆ
ರಾಜ್ಯದ ಬಿಜೆಪಿ ಸಂಸದರು ಭದ್ರಾ ಮೇಲ್ದಂಡೆ ವಿಚಾರದಲ್ಲಿ ಬದ್ದತೆ ಪ್ರದರ್ಶಿಸಬೇಕು. ಸಚಿವ ನಿರ್ಮಲಾ ಸೀತರಾಮನ್, ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಕೇಂದ್ರದಿಂದ ದ್ರೋಹವಾಗದಂತೆ ನೋಡಿಕೊಳ್ಳಬೇಕೆಂದು ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಸರ್ವೋದಯ ಕರ್ನಾಟಕದ ಮುಖ್ಯಸ್ಥ ಜೆ.ಯಾದವೆರೆಡ್ಡಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.
