CHITRADURGA NEWS | 18 OCTOBER 2026
ಚಿತ್ರದುರ್ಗ: ಜನನ ಮತ್ತು ಮರಣ ನೋಂದಣಿ ಸಂದರ್ಭದಲ್ಲಿ ಆಧಾರ್ ಸಂಖ್ಯೆ, ದಿನಾಂಕ ಹಾಗೂ ಹೆಸರಿನಲ್ಲಿ ತಪ್ಪುಗಳಾಗದಂತೆ ತೀವ್ರ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಸೆಮಿಸ್ಟರ್ ಪರೀಕ್ಷೆ ಮುಂದೂಡಲು ವಿದ್ಯಾರ್ಥಿಗಳ ಮನವಿ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಾಗರೀಕ ನೋಂದಣಿ ಪದ್ಧತಿ’ಯ ಮೂರನೇ ತ್ರೈಮಾಸಿಕ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನನ ಮತ್ತು ಮರಣ ನೋಂದಣಿ ಸಮಯದಲ್ಲಿನ ಲೋಪಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ತಂದೆಯ ಆಧಾರ್ ಬದಲು ತಾಯಿಯ ಆಧಾರ್ ನಮೂದಿಸುವುದು, ಮರಣ ಹೊಂದಿದ ದಿನಾಂಕದ ವ್ಯತ್ಯಾಸ, ಗಂಡು ಮಗುವಿನ ಬದಲು ಹೆಣ್ಣು ಮಗು ಎಂದು ನಮೂದಿಸುವುದು ಹಾಗೂ ಗಂಡನ ಆಧಾರ್ ಸಂಖ್ಯೆಯ ಬದಲು ಹೆಂಡತಿಯ ವಿವರ ಹಾಕುವುದು ಸೇರಿದಂತೆ ಹಲವು ಗಂಭೀರ ತಪ್ಪುಗಳು ಗಮನಕ್ಕೆ ಬಂದಿವೆ ಎಂದು ಹೇಳಿದರು.
ಜನನ–ಮರಣ ನೋಂದಣಿಯಲ್ಲಿನ ಎಡವಟ್ಟುಗಳಿಂದಾಗಿ ಸಾರ್ವಜನಿಕರಿಗೆ ನಂತರದ ದಿನಗಳಲ್ಲಿ ತಿದ್ದುಪಡಿ ಮಾಡಿಸಲು ತೀವ್ರ ತೊಂದರೆಯಾಗುತ್ತಿದ್ದು, ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳ ನೋಂದಣಾಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದನ್ನೂ ಓದಿ: ಕನ್ನಡ ಶಾಲೆಗಳ ಉಳಿವಿಗೆ ಎಲ್ಲರೂ ಕೈಜೋಡಿಸಿ | ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ
ತಾಲ್ಲೂಕುವಾರು ಜನನ-ಮರಣ ನೋಂದಣಿ ಅಂಕಿ-ಅಂಶ ಪರಿಶೀಲಿಸಿದ ಜಿಲ್ಲಾಧಿಕಾರಿ ಎಸ್.ರಮ್ಯಾ ಅವರು, ಜನಸಂಖ್ಯೆಗೆ ಹೋಲಿಸಿದರೆ ಹೊಳಲ್ಕೆರೆ ಭಾಗದಲ್ಲಿ ನೋಂದಣಿ ಪ್ರಗತಿ ಕುಂಠಿತಗೊಂಡಿದೆ. ಗರ್ಭಿಣಿಯರ ನೋಂದಣಿ ಹಾಗೂ ನೈಜ ಜನನ ಸಂಖ್ಯೆಗೂ ವ್ಯತ್ಯಾಸ ಕಂಡುಬರುತ್ತಿದೆ. ಗರ್ಭಿಣಿಯರು ಬೇರೆಡೆ ಹೆರಿಗೆಗೆ ತೆರಳುತ್ತಿದ್ದರೂ ಅಥವಾ ಸ್ಥಳೀಯವಾಗಿ ಹೆರಿಗೆಯಾಗುತ್ತಿದ್ದರೂ ಸರಿಯಾದ ಮಾಹಿತಿ ಕ್ರೋಢೀಕರಿಸಬೇಕು.
ತಾಯಿ ಕಾರ್ಡ್ ಹೊಂದಿದ್ದರೂ ನೋಂದಣಿಯಿಂದ ಯಾರೂ ಹೊರಗುಳಿಯದಂತೆ ಜಾಗೃತಿ ವಹಿಸಬೇಕು. ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ನೋಂದಣಿ ಪ್ರಮಾಣ ಉತ್ತಮವಾಗಿದೆ. ಆದರೆ ಹೆಚ್ಚಿನ ಜನಸಂಖ್ಯೆ ಹೊಂದಿರುವ ತಾಲ್ಲೂಕುಗಳಲ್ಲಿ ಹಿನ್ನಡೆಯಾಗುತ್ತಿರುವುದರ ಹಿಂದಿನ ಕಾರಣಗಳನ್ನು ಕಂಡುಕೊಂಡು ತಕ್ಷಣವೇ ಸರಿಪಡಿಸಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎನ್.ರವಿಕುಮಾರ್, ಸರ್ಕಾರದ ಆದೇಶದಂತೆ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಗ್ರಾಮ ಪಂಚಾಯಿತಿಗಳನ್ನು ಉಪ ನೋಂದಣಿ ಘಟಕಗಳನ್ನಾಗಿ ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 94 ಆರೋಗ್ಯ ಕೇಂದ್ರಗಳು ಹಾಗೂ 189 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು 1,347 ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಒಣಗುತ್ತಿರುವ ಬೆಳೆಗಳ ಕಟಾವು ಪ್ರಯೋಗ ತ್ವರಿತವಾಗಿ ಪೂರ್ಣಗೊಳಿಸಿ | ಡಿಸಿ ರಮ್ಯಾ
ಘಟನೆ ನಡೆದ 31 ದಿನಗಳ ನಂತರ ಬರುವ ಅರ್ಜಿಗಳನ್ನು ನಿಯಮಾನುಸಾರ ವಿಲೇಜ್ ಅಕೌಂಟೆಂಟ್ ಹಾಗೂ ಪಂಚಾಯತ್ ಕಾರ್ಯದರ್ಶಿಗಳ ಲಾಗಿನ್ ಮೂಲಕ ಪರಿಶೀಲಿಸಿ, ನೋಂದಣಿ ಘಟಕಗಳಿಗೆ ಶಿಫಾರಸು ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸುಲಭವಾಗಿ ಪ್ರಮಾಣಪತ್ರ ಸಿಗುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಎಲ್ಲಾ ನೋಂದಣಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು ಜನನ ಮರಣ ಪ್ರಮಾಣ ಪತ್ರಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿ ಮಾಡುವ ಸಂದರ್ಭದಲ್ಲಿ ತಂದೆ, ತಾಯಿ ಹಾಗೂ ಪತಿ ಅಥವಾ ಪತ್ನಿ ಹಾಗೂ ಪೋಷಕರುಗಳಿಂದ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ವಿತರಿಸಲಾಗುತ್ತಿದೆ. ಜನನ ಮರಣ ಘಟನೆ ಸಂಭವಿಸಿ ಒಂದು ವರ್ಷದ ನಂತರ ಮಾಹಿತಿ ನೀಡಲಾದ ಯಾವುದೇ ಜನನ ಅಥವಾ ಮರಣವನ್ನು ಮೊದಲನೇ ವರ್ಗದ ದಂಡಾಧಿಕಾರಿಯ ಅಥವಾ ಮಹಾಪ್ರಾಂತ ದಂಡಾಧಿಕಾರಿಯ ಆದೇಶದ ಮೇರೆಗೆ ನೋಂದಾಯಿಸಬೇಕು ಎಂದು ಹೇಳಿದರು.
ಜನನ-ಮರಣ ನೋಂದಣಿ ಘಟಕಗಳಲ್ಲಿ ನೋಂದಣಿಯಾಗುತ್ತಿರುವ ಸಂದರ್ಭದಲ್ಲಿ ಜನನ/ಮರಣ ದಿನಾಂಕವನ್ನು ತಪ್ಪಾಗಿ ನೋಂದಣಿ ಮಾಡುತ್ತಿರುವುದು ಕಂಡುಬಂದಿರುತ್ತದೆ. ಅದರಂತೆ ಜನಿಸಿದ ಮಗುವಿನ ಲಿಂಗ ಗಂಡಿನ ಬದಲಿಗೆ ಹೆಣ್ಣು, ಹೆಣ್ಣಿನ ಬದಲಿಗೆ ಗಂಡು ಎಂದು ನೋಂದಣಿ ಮಾಡುತ್ತಿರುವುದು ಕಂಡುಬಂದಿದೆ.
ಮರಣ ಘಟನೆಯನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ಅರ್ಜಿದಾರರ ಅಥವಾ ಪೋಷಕರ ತಂದೆ, ತಾಯಿ, ಮಗ ಅಥವಾ ಮಗಳು ಅವರ ಆಧಾರ್ ಸಂಖ್ಯೆಯನ್ನು ನಮೂದಿಸಿ ಮರಣ ಪ್ರಮಾಣ ಪತ್ರ ವಿತರಿಸಿರುವುದು ಕಂಡಬಂದಿರುತ್ತದೆ. ಇದರಿಂದಾಗಿ ಬದುಕಿರುವ ವ್ಯಕ್ತಿಯು ಎಲ್ಲಾ ಸೌಲಭ್ಯಗಳನ್ನು ಪಡೆಯಲು ವಂಚಿತರಾಗುತ್ತಿದ್ದಾರೆ ಎಂದು ಸಹಾಯಕ ಸಾಂಖ್ಯಿಕ ಅಧಿಕಾರಿ ಅಶ್ವತ್ಥಾಮ ಸಭೆಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿತ್ರದುರ್ಗದ ಖಾಸ ಬೇಡರ ಪಡೆ ಕಲಾತಂಡ ಭಾಗಿ
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕಿ ಹೆಚ್.ಶಶಿರೇಖಾ, ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಅಶ್ವತ್ಥಾಮ, ವೀಣಾ, ಮಮತಾ, ನಜರೀನ್, ಸಾಂಖ್ಯಿಕ ನಿರೀಕ್ಷಕ ರಾಕೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

