
CHITRADURGA NEWS | 20 DECEMBER 2025
ಚಿತ್ರದುರ್ಗ: ಮುಂದಿನ ತಿಂಗಳು ನಡೆಯುವ ಮೈಸೂರು ಜಿಲ್ಲೆ ಸುತ್ತೂರಿನ ಜಾತ್ರಾ ಮಹೋತ್ಸವ ಅಂಗವಾಗಿ ಆ ಮಠದ ಆದಿ ಜಗದ್ಗುರು ಮತ್ತು ಸಂಸ್ಥಾಪನಾಚಾರ್ಯರೂ ಆದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಅದರ ಪೂರ್ವಭಾವಿಯಾಗಿ ನಾಡಿನೆಲ್ಲೆಡೆ ಪ್ರಚಾರಾರ್ಥವಾಗಿ ಕೈಗೊಂಡಿರುವ ಜಗದ್ಗುರು ಮೂರ್ತಿ ಇರುವ ಅಲಂಕೃತ ರಥವು ಶುಕ್ರವಾರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮುಕ್ಕಾಂ ಮಾಡಿ, ವಾಸ್ತವ್ಯ ಹೊಂದಿ, ಶನಿವಾರ ರಥವನ್ನು ಮುಂದಿನ ಊರಿಗೆ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.
ಇದನ್ನೂ ಓದಿ: ಮೇಷ | ವಾರ್ಷಿಕ ರಾಶಿ ಭವಿಷ್ಯ- 2026
ಈ ವೇಳೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಹನ್ನೆರಡನೇ ಶತಮಾನದ ಶ್ರೇಷ್ಠ ಅಭಿಯಾನ ಮತ್ತು ಅನುಷ್ಠಾನಗಳ ಬೀಜಮಂತ್ರಗಳೆಂದರೆ ಒಂದು ಕಾಯಕ ಮತ್ತೊಂದು ದಾಸೋಹ. ಅಂತಹ ಮೇರು ಆಚರಣೆಗಳನ್ನು ಕರ್ನಾಟಕದ ಬಹುತೇಕ ಮಠಗಳು ಅನುಸರಿಸಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಅದರಲ್ಲಿ ಚಿತ್ರದುರ್ಗದ ಬೃಹನ್ಮಠವೂ ಸೇರಿದಂತೆ ಮೈಸೂರು ಭಾಗದಲ್ಲಿ ಸುತ್ತೂರು ಮಠ ದಾಸೋಹ ಮತ್ತು ಶಿಕ್ಷಣಕ್ಕೆ ಅತಿಹೆಚ್ಚಿನ ಪ್ರಾಧಾನ್ಯತೆ ನೀಡಿರುವುದನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಚಿತ್ರದುರ್ಗದ ಮುರುಘಾಮಠಕ್ಕು ಸುತ್ತೂರು ಶಿವರಾತ್ರೀಶ್ವರ ಮಠಕ್ಕು ಅವಿನಾಭಾವ ಸಂಬಂಧವಿದೆ. ಈಗಿನ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳವರ ಪಟ್ಟಾಧಿಕಾರ ಮಹೋತ್ಸವಕ್ಕೆ ನಮ್ಮ ಅಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರು ಭಾಗವಹಿಸಿ ಕಿರೀಟಧಾರಣೆ ನೆರವೇರಿಸಿ ಆಶೀರ್ವದಿಸಿದ್ದನ್ನು ಸ್ಮರಿಸುತ್ತ, ಆ ಮಠದ ಹಿಂದಿನ ಜಗದ್ಗುರುಗಳು ದಾಸೋಹಕ್ಕೆ ಎಲ್ಲಿಲ್ಲದ ಮಹತ್ವ ಕೊಟ್ಟಿದ್ದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 20 | ಹತ್ತಿ ರೇಟ್ ಎಷ್ಟಿದೆ?
ಕೆಲವು ಕಾರಣಗಳಿಂದ ಒಮ್ಮೆ ದಾಸೋಹದಲ್ಲಿ ಪಡಿತರ ಖಾಲಿಯಾಗಿ ವಿದ್ಯಾರ್ಥಿಗಳು ಉಪವಾಸವಿರುವುದು ತಡವಾಗಿ ಶ್ರೀಗಳವರಿಗೆ ಗೊತ್ತಾಗುತ್ತದೆ. ಆ ಸಂದರ್ಭದಲ್ಲಿ ಗುರುಗಳು ತಾವು ಇಷ್ಟಲಿಂಗ ಇಡಲು ಧರಿಸಿದ್ದ ಬಂಗಾರದ ಕರಡಿಗೆಯನ್ನೇ ಮಾರಿ ಅದರಿಂದ ಬಂದ ಹಣದಲ್ಲಿ ಮಕ್ಕಳಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿದ್ದನ್ನು ಯಾರೂ ಮರೆಯುವಂತಿಲ್ಲ.
ಅಂತಹ ಅನ್ನದಾಸೋಹದ ಜತೆಗೆ ಶಿಕ್ಷಣ ಮತ್ತು ವಸತಿಯಂತಹ ತ್ರಿವಿಧ ದಾಸೋಹ ಇಂದು ಸುವ್ಯವಸ್ಥಿತ ರೀತಿಯಲ್ಲಿ ನಡೆದಿರುವುದು ಸಂತಸದ ಸಂಗತಿ. ಅಲ್ಲಿ ಎಲ್ಲ ವರ್ಗದ ಜನರು ಬಡವರು ಅನಾಥರು ವಿಶೇಷಚೇತನರು ಸೇರಿದಂತೆ ಎಲ್ಲರಿಗೂ ಅವಕಾಶವಿದೆ ಎಂದು ಸ್ಮರಿಸುತ್ತ ಅಂತಹ ಜಗದ್ಗುರುಗಳ ಜಾತ್ರಾ ಮಹೋತ್ಸವದ ಪ್ರಚಾರ ರಥ ಸಾಂಗವಾಗಿ ಜರುಗಲಿ ಎಂದು ಆಶಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಕೆ.ಎಂ. ವೀರೇಶ್ ಮಾತನಾಡಿ, ಸುತ್ತೂರಿನ ಶ್ರೀಮಠಕ್ಕೆ ಚಿತ್ರದುರ್ಗ ಬೃಹನ್ಮಠದ ಮೇಲೆ ಎಲ್ಲಿಲ್ಲದ ಪ್ರೀತಿ, ವಿಶ್ವಾಸವಿದೆ. ಅದು ಮುಂದುವರಿದಿದೆ ಎನ್ನುವುದಕ್ಕೆ ಈ ರಥದ ಬೀಳ್ಕೊಡುಗೆ ಸಮಾರಂಭವೇ ಸಾಕ್ಷಿ ಎಂದರೆ ತಪ್ಪಿಲ್ಲ. ಮಠಗಳ ನಡುವೆ ಸೌಹಾರ್ದ ವಾತಾವರಣ ಮತ್ತಷ್ಟು ಹೆಚ್ಚಲಿ ಎಂದು ಕಳಕಳಿ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು | ಡಾ.ಕೆ.ಟಿ.ತಿಪ್ಪೇಸ್ವಾಮಿ
ಈ ಸಂದರ್ಭದಲ್ಲಿ ವಿವಿಧ ಸಮಾಜಗಳ ಸಂಘ-ಸಂಸ್ಥೆಗಳ ಮುಖಂಡರುಗಳಾದ ಜಯದೇವಮೂರ್ತಿ, ಬಸವರಾಜಕಟ್ಟಿ, ನಾಗರಾಜಸಂಗಂ, ಕುಬೇರಪ್ಪ, ಗಂಗಾಧರ್, ವಕೀಲರಾದ ಹನುಮಂತಪ್ಪ, ಮುರುಘೇಶ್, ಜ್ಞಾನಮೂರ್ತಿ, ನಂದೀಶ್, ಶಂಕರಪ್ಪ, ಅಶೋಕ್, ಇಟಗಿ ವಿಜಯಕುಮಾರ್ ಸೇರಿದಂತೆ ಎಸ್.ಜೆ.ಎಂ. ವಿದ್ಯಾಪೀಠದ ಕೆಲನೌಕರರು, ಶ್ರೀಮಠದ ಸಿಬ್ಬಂದಿ ಭಾಗವಹಿಸಿ ಶಿವರಾತ್ರೀಶ್ವರರ ಪ್ರತಿಮೆಗೆ ವಚನಗಳ ಮೂಲಕ ಭಕ್ತಿ ಸಮರ್ಪಿಸಲಾಯಿತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
