CHITRADURGA NEWS | 22 NOVEMBER 2026
ಚಿತ್ರದುರ್ಗ: ಮನುಷ್ಯ ಜೀವತಾಳಿ, ಬದುಕಿ ಮರಣ ಹೊಂದುವುದರ ನಡುವೆ ಸಮಾಜಕ್ಕೆ ಅನುಕೂಲವಾಗುವಂತಹ ಸಾಧನೆ ಮಾಡಬೇಕು. ಆಗ ಮಾತ್ರ ಹುಟ್ಟಿದ ಬದುಕು ಸಾರ್ಥಕವಾಗುತ್ತದೆ. ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಉತ್ತಮ ಕಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಹೇಳಿದರು.
ಇದನ್ನೂ ಓದಿ: ಅಡಿಕೆ ತೋಟದಲ್ಲಿದ್ದ ರೈತನ ಮೇಲೆ ಮೂರು ಕರಡಿಗಳ ದಾಳಿ | ರೈತನ ಸ್ಥಿತಿ ಚಿಂತಾಜನಕ
ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 75 ಸಾಧಕರಿಗೆ ನಗರದ ತ.ರಾ.ಸು. ರಂಗಮಂದಿರದಲ್ಲಿ ಬಿ.ಕಾಂತರಾಜ್ ಮತ್ತು ತಂಡದವರು ಆಯೋಜಿಸಿದ್ದ ಶಿವ ಸಂಚಾರ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಬಸವಾದಿ ಶರಣರ ತತ್ವಾದರ್ಶಗಳನ್ನು ಚಾಚೂತಪ್ಪದೆ ಪಾಲಿಸುತ್ತಾ ಬಂದಿದ್ದಾರೆ. ಶಿವ ಸಂಚಾರ ನಾಟಕಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಮದ್ಯಪಾನದಿಂದ ಸರ್ಕಾರಕ್ಕೆ ಆದಾಯ ಬರುತ್ತದೆ ಎಂಬುದು ನಿಜ. ಆದರೆ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಾಧ್ಯ.
ಮದ್ಯ ಸೇವನೆಯಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತವೆ. ನಾನು ಚಳ್ಳಕೆರೆ ಶಾಸಕನಾದಾಗಿನಿಂದ ಯಾವುದೇ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಿಲ್ಲ. 75 ಸಾಧಕರನ್ನು ಗುರುತಿಸಿ ಪುರಸ್ಕರಿಸುತ್ತಿರುವುದು ಇತರರಿಗೂ ಪ್ರೇರಣೆಯಾಗಲಿದೆ. ಜಿಲ್ಲೆಯ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವುದಾಗಿ ತಿಳಿಸಿದರು.
ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಮೂಢನಂಬಿಕೆ ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ ಸಮಾಜ ಸುಧಾರಣೆಗೆ ಶ್ರಮಿಸಿದ ಬಸವಣ್ಣನವರ ಕುರಿತು ಇತ್ತೀಚೆಗೆ ಇಲ್ಲಸಲ್ಲದ ಅಪಪ್ರಚಾರ ನಡೆಯುತ್ತಿರುವುದು ಖಂಡನೀಯ. ಸಮಾಜದ್ರೋಹಿ ಕೃತ್ಯಗಳಿಗೆ ಮುಂದಾಗುವ ಅಜ್ಞಾನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. 21ನೇ ಶತಮಾನದಲ್ಲಿಯೂ ಬಸವತತ್ವ ಉಳಿದುಕೊಂಡು ಬಂದಿರುವುದಕ್ಕೆ ಅನೇಕ ಮಠಾಧೀಶರ ಕೊಡುಗೆ ಮಹತ್ವದ್ದಾಗಿದೆ. ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ದೀನದಲಿತರ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: NPS – OPS ವಿಚಾರದಲ್ಲಿ ಸೂಕ್ತ ನಿರ್ಧಾರ | ಹಬ್ಬಕ್ಕೆ ಮುಂಗಡ 50 ಸಾವಿರ | ಡಿ.ಕೆ.ಶಿವಕುಮಾರ್
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ಸಮಾಜವನ್ನು ತಿದ್ದುವ ಕಾರ್ಯ ನಿರಂತರವಾಗಿ ಮುಂದುವರಿಸಲಿ. ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ಶಿಸ್ತು ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಾಧಕರ ಸಾಧನೆಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿ ಎಂದು ಆಶಿಸಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಶಿವ ಸಂಚಾರ ನಾಟಕಗಳನ್ನು ಉತ್ತರ ಭಾರತಕ್ಕೂ ಪರಿಚಯಿಸುವ ಮೂಲಕ ಪಂಡಿತಾರಾಧ್ಯ ಶ್ರೀಗಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಸಮಾಜದ ತಪ್ಪುಗಳು ಮತ್ತು ನ್ಯೂನತೆಗಳನ್ನು ನಾಟಕಗಳ ಮೂಲಕ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಅವರ ನೇರ ನಿಷ್ಠುರ ನುಡಿ ಹಾಗೂ ಸಾಧನೆಗಳೇ ಅವರಿಗೆ ನಿಜವಾದ ಚಿನ್ನದ ಪದಕಗಳಾಗಿವೆ ಎಂದರು. ಹೊಸದುರ್ಗ ತಾಲ್ಲೂಕಿನ 33 ಕೆರೆಗಳು ತುಂಬಿರುವುದರ ಹಿಂದೆ ಶ್ರೀಗಳ ಕಾಳಜಿಯೂ ಇದೆ ಎಂದು ಪ್ರಶಂಸಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಆರ್ಥಿಕ ಬಡತನವಿರಬಹುದು. ಆದರೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಜಿಲ್ಲೆ ಅತ್ಯಂತ ಶ್ರೀಮಂತವಾಗಿದೆ. ಶಿವ ಸಂಚಾರ ನಾಟಕಗಳ ಮೂಲಕ ಸಮಾಜಕ್ಕೆ ದಿಕ್ಸೂಚಿ ನೀಡಿದವರು ಪಂಡಿತಾರಾಧ್ಯ ಶ್ರೀಗಳು. ರಾಜ್ಯ ಸರ್ಕಾರ ಮದ್ಯಪಾನ ನಿಷೇಧಿಸಿದರೆ ನಮ್ಮ ಸಂಪೂರ್ಣ ಬೆಂಬಲವಿದೆ. ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು ಎಂದರು.
ಇದನ್ನೂ ಓದಿ: ಅಡಿಕೆ ಧಾರಣೆ | ನವೆಂಬರ್ 21 | ಯಾವ ಅಡಿಕೆಗೆ ಎಷ್ಟು ರೇಟು
ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಕಲೆ, ಸಾಹಿತ್ಯ, ಸಂಗೀತ ಮತ್ತು ನಾಟಕಗಳಿಗಷ್ಟೇ ಸೀಮಿತವಾಗದೆ ಸಮಾಜ ಸುಧಾರಣೆಯಲ್ಲಿಯೂ ಅಪಾರ ಕೊಡುಗೆ ನೀಡಿದ್ದಾರೆ. ರಂಗಭೂಮಿಯ ಮೂಲಕ ಸಾಣೆಹಳ್ಳಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಸಾಣೆಹಳ್ಳಿ ಮಠಕ್ಕೆ ಸಲ್ಲುತ್ತದೆ ಎಂದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ಐವತ್ತು ವರ್ಷಗಳಿಂದ ಸ್ವಾಮೀಜಿಗಳಾಗಿ ಸೇವೆ ಸಲ್ಲಿಸುತ್ತಿರುವುದು ದೊಡ್ಡ ಸಾಧನೆ. ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ನಿವೃತ್ತಿಯಿದೆ. ಆದರೆ ಸಮಾಜ ಸೇವೆಯಲ್ಲಿ ತೊಡಗಿರುವ ಸ್ವಾಮೀಜಿಗಳಿಗೆ ನಿವೃತ್ತಿಯಿಲ್ಲ. ಶ್ರೀಗಳ ವ್ಯಕ್ತಿತ್ವದ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲದಿರುವುದು ಸಂತಸದ ವಿಚಾರ ಎಂದರು.
ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನನಗೆ ಅತ್ಯಂತ ಸಂತೋಷ ತಂದಿದೆ. ಈ ಸಾಧಕರನ್ನು ಗೌರವಿಸುವುದು ನನ್ನನ್ನೇ ಸನ್ಮಾನಿಸಿದಷ್ಟು ಖುಷಿ ನೀಡಿದೆ. ವಯಸ್ಸಾಗುವುದು ದೊಡ್ಡದಲ್ಲ. ಬದುಕಿನ 75 ವರ್ಷಗಳಲ್ಲಿ ಮಾಡಿದ ಸತ್ಕಾರ್ಯ ಮತ್ತು ದುಷ್ಕಾರ್ಯಗಳ ಕುರಿತು ಆತ್ಮಾವಲೋಕನ ಮಾಡಿಕೊಂಡು ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಬೇಕು. ಸನ್ಮಾನವು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಹೊರತು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆಗೆ 2 ಟಿಎಂಸಿ ನೀರಿನ ವಿಚಾರ | ನೀರಾವರಿ ಸಚಿವ ಚೆಲುವರಾಯಸ್ವಾಮಿ ಏನು ಹೇಳಿದ್ರು ?
ಸಾಧಕರಲ್ಲಿ ನಿಷ್ಠೆ, ಭಕ್ತಿ ಮತ್ತು ಪ್ರಾಮಾಣಿಕತೆ ಇರಬೇಕು. ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಿ ಜೀವನೋತ್ಸಾಹದಿಂದ ಮುಂದಿನ ಹೆಜ್ಜೆ ಇಡಬೇಕು. ಹಣವಿದ್ದವರೆಲ್ಲರೂ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ. ಇಂತಹ ಕಾರ್ಯಕ್ರಮಗಳನ್ನು ಜನಬಲದಿಂದ ಮಾತ್ರ ಯಶಸ್ವಿಗೊಳಿಸಲು ಸಾಧ್ಯ. ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಪುಸ್ತಕಗಳ ಹಾರ ಹಾಗೂ ರಾಜವೀರ ಮದಕರಿನಾಯಕ ಅವರಿಗೆ ಶಿವ ಸಂಚಾರದ 30 ವರ್ಷಗಳ ನಾಟಕಗಳನ್ನು ನೆನಪಿಸುವ ಪುಸ್ತಕಗಳ ಹಾರ ಸಮರ್ಪಿಸಿರುವುದು ವಿಶೇಷ ಎಂದರು.
ನಗರದ ರಂಗಮಂಟಪಕ್ಕೆ ತ.ರಾ.ಸು. ರಂಗಮಂದಿರ ಎಂದು ನಾಮಕರಣ ಮಾಡಲಾಗಿದೆ. ಕನಿಷ್ಠ ವೇದಿಕೆಗಾದರೂ ನಾಟಕಕಾರ ಸಿ.ಜಿ.ಕೆ. ಅವರ ಹೆಸರನ್ನು ನಾಮಕರಣ ಮಾಡಬೇಕು. ಇರುವಷ್ಟು ಕಾಲ ಜನಮುಖಿ ಕೆಲಸ ಮಾಡಬೇಕು. ಯೋಗ್ಯ ಸ್ವಾಮೀಜಿಯಾಗುವುದು ಸುಲಭವಲ್ಲ. ಬಸವಣ್ಣ ಮತ್ತು ಅಕ್ಕಮಹಾದೇವಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಒಳ್ಳೆಯವರು ಮತ್ತು ಕೆಟ್ಟವರು ಇರುತ್ತಾರೆ. ಆದರೆ ಪ್ರತಿಯೊಬ್ಬರೂ ಒಳ್ಳೆಯತನವನ್ನು ಜೀವನದಲ್ಲಿ ಪಾಲಿಸಬೇಕು ಎಂದು ತಿಳಿಸಿದರು.
ಬಸವಣ್ಣನವರು ಲೋಕ ಮೆಚ್ಚುವಂತಹ ಸತ್ಕಾರ್ಯಗಳನ್ನು ಮಾಡಿದ ಮಹಾನ್ ಶರಣರು. ಅಂತಹವರ ಕುರಿತು ರವಿ ಹಂಜೆ ಅವಹೇಳನಕಾರಿಯಾಗಿ ಮಾತನಾಡಿರುವುದು ಶರಣರಿಗೆ ಮಾಡಿದ ಅಪಮಾನವಾಗಿದೆ. ಲೇಖಕನ ತಲೆ ತೆಗೆದರೆ ಐದು ಲಕ್ಷ ರೂ. ನೀಡುವುದಾಗಿ ಯಾರೋ ಘೋಷಿಸಿರುವ ವಿಚಾರವೂ ಸರಿಯಲ್ಲ. ತಲೆ ತೆಗೆಯುವುದು ನಮ್ಮ ಕೆಲಸವಲ್ಲ, ತಲೆಯಲ್ಲಿರುವ ಕಸವನ್ನು ತೆಗೆಯಬೇಕು. ಸರ್ಕಾರ ಇಂತಹ ಕೃತಿಯನ್ನು ಮುಟ್ಟುಗೋಲು ಹಾಕಿರುವುದಷ್ಟೇ ಸಾಕಾಗುವುದಿಲ್ಲ. ರವಿ ಹಂಜೆ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಲಂಚ ಕೇಳಿದ ಅಧಿಕಾರಿ ಬಲಿ ಹಾಕಿ | ಜಿಲ್ಲಾಧಿಕಾರಿಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
ಕಾರ್ಯಕ್ರಮದಲ್ಲಿ ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ ಉಪನ್ಯಾಸ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಮಾಜಿ ಶಾಸಕಿ ಆರ್.ಪೂರ್ಣಿಮಾ ಶ್ರೀನಿವಾಸ್, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಕಾಂಗ್ರೆಸ್ ಮುಖಂಡರಾದ ಬಿ.ಸೋಮಶೇಖರ್, ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಹನುಮಲಿ ಷಣ್ಮುಖಪ್ಪ, ಶಂಕರಮೂರ್ತಿ, ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್, ವಿ.ಎಲ್.ಪ್ರಶಾಂತ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಉದ್ಯಮಿ ಅರುಣ್, ಅಹೋಬಲಪತಿ, ದರ್ಶನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

