CHITRADURGA NEWS | 22 November 2026
ಹಿರಿಯೂರು: ಸರ್ಕಾರಿ ನೌಕರರಿಗೆ ನೀಡಲಾಗುವ ಹಬ್ಬದ ಮುಂಗಡ ಮೊತ್ತವನ್ನು 25 ಸಾವಿರ ರೂಪಾಯಿಯಿಂದ 50 ಸಾವಿರ ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಹಿರಿಯೂರಿನಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
ಇದನ್ನೂ ಓದಿ: ದಿನ ಭವಿಷ್ಯ | ನವೆಂಬರ್ 22 | ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು, ಶುಭವಾರ್ತೆ
ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಮ್ಮೇಳನ, ಅಭಿನಂದನಾ ಕಾರ್ಯಕ್ರಮ ಹಾಗೂ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಪಿಎಸ್ ಮತ್ತು ಎನ್‌ಪಿಎಸ್ ಯೋಜನೆಗಳ ಜಾರಿ ಕುರಿತು ನೌಕರರು ಆತಂಕಪಡುವ ಅಗತ್ಯವಿಲ್ಲ. ಈ ವಿಚಾರವಾಗಿ ಹಣಕಾಸು ಇಲಾಖೆ, ಸಚಿವ ಸಂಪುಟ, ಪಕ್ಷದ ಪದಾಧಿಕಾರಿಗಳು ಹಾಗೂ ಚುನಾವಣಾ ಪ್ರಣಾಳಿಕೆ ರಚಿಸಿದವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಸರ್ಕಾರಿ ನೌಕರರ ಸಂಘದ ಅಭಿಪ್ರಾಯವನ್ನೂ ಪಡೆದು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನೌಕರರ ಸೇವೆ, ಸ್ವಾಭಿಮಾನ ಮತ್ತು ಹಿತಾಸಕ್ತಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.
ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸರ್ಕಾರಿ ನೌಕರರ ವೇತನವನ್ನು ಶೇ.27ರಷ್ಟು ಹೆಚ್ಚಿಸಲಾಗಿದೆ. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ಬದ್ಧತೆ ಸರ್ಕಾರಕ್ಕಿದೆ. ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಲಿದೆ. ಎಲ್ಲದಕ್ಕೂ ಒಂದು ಕಾಲಾವಕಾಶವಿದ್ದು, ಪರಸ್ಪರ ವಿಶ್ವಾಸದಿಂದ ಕೆಲಸ ಮಾಡೋಣ ಎಂದು ಹೇಳಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ನವೆಂಬರ್ 21 | ಯಾವ ಅಡಿಕೆಗೆ ಎಷ್ಟು ರೇಟು
ಸರ್ಕಾರಿ ನೌಕರರ ಸಂಘದವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಹಿರಿಯೂರಿನಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣ, ಸಮುದಾಯ ಭವನ, ಗುರುಭವನ ನವೀಕರಣ ಹಾಗೂ ಅರ್ಧಕ್ಕೆ ನಿಂತಿರುವ ನೌಕರರ ಭವನದ ಕಾಮಗಾರಿ ಮುಂದುವರಿಸುವ ಬೇಡಿಕೆಗಳಿಗೆ ವೇದಿಕೆಯಲ್ಲಿಯೇ ಸಹಿ ಹಾಕುವ ಮೂಲಕ ಸಮ್ಮತಿ ಸೂಚಿಸಿದರು.
ಸರ್ಕಾರಿ ನೌಕರರಿಗೆ ನೀಡಲಾಗುವ ಹಬ್ಬದ ಮುಂಗಡ ಮೊತ್ತವನ್ನು 25 ಸಾವಿರದಿಂದ 50 ಸಾವಿರ ರೂಪಾಯಿಗೆ ಹೆಚ್ಚಿಸಬೇಕೆಂಬ ಬೇಡಿಕೆಗೆ ಸ್ಥಳದಲ್ಲಿಯೇ ಸ್ಪಂದಿಸಿದ ಸಿಎಂ, “ಪೆನ್ನು ನನ್ನ ಕೈಯಲ್ಲಿದೆ. ಹಿರಿಯೂರಿನಲ್ಲಿ ವಿಶೇಷ ಘೋಷಣೆ ಮಾಡುತ್ತಿದ್ದೇನೆ. ಹಬ್ಬದ ಮುಂಗಡವನ್ನು 50 ಸಾವಿರ ರೂಪಾಯಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ” ಎಂದು ಪ್ರಕಟಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳು ರಥದ ಎರಡು ಚಕ್ರಗಳಿದ್ದಂತೆ. ಸರ್ಕಾರ ರೂಪಿಸುವ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ. ಜನರ ಕಷ್ಟ-ಸುಖಗಳನ್ನು ಅರಿತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯ. ವಿಧಾನಸೌಧದಲ್ಲಿ ಕೆತ್ತಲಾಗಿರುವ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಸಂದೇಶವನ್ನು ಪ್ರತಿಯೊಬ್ಬ ನೌಕರರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆಗೆ 2 ಟಿಎಂಸಿ ನೀರಿನ ವಿಚಾರ | ನೀರಾವರಿ ಸಚಿವ ಚೆಲುವರಾಯಸ್ವಾಮಿ ಏನು ಹೇಳಿದ್ರು ?
ತಾಯಿ ಮೇಲೆ ಮಗುವಿಗೆ ಎಷ್ಟು ನಂಬಿಕೆ ಇರುತ್ತದೆಯೋ, ಮರಕ್ಕೆ ಬೇರಿನ ಮೇಲೆ ಎಷ್ಟು ವಿಶ್ವಾಸವಿರುತ್ತದೆಯೋ ಅಷ್ಟೇ ನಂಬಿಕೆ ನನಗೆ ಸರ್ಕಾರಿ ನೌಕರರ ಮೇಲೂ ಇದೆ. ನಾಡಿನ ಅಭಿವೃದ್ಧಿಯ ರಥ ನಿಮ್ಮ ಕೈಯಲ್ಲಿದೆ. ಅದನ್ನು ಮುನ್ನಡೆಸುವ ಸಾರಥಿಗಳು ನೀವೇ. ಆಡಳಿತ ಯಂತ್ರ ಮತ್ತು ಅಭಿವೃದ್ಧಿಯ ಮಂತ್ರ ಒಟ್ಟಿಗೆ ಸಾಗಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ನಾಡಿನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಾರೆ. ನಿವೃತ್ತರಾದ ಬಳಿಕವೂ ಅನೇಕರು ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಕರಿಗೆ ಟಿಆರ್, ಎಂಜಿನಿಯರ್‌ಗಳಿಗೆ ಇಆರ್ ಎಂಬ ಗೌರವ ಸೂಚಕ ಪದಗಳನ್ನು ಸೇರಿಸಿರುವುದು ಅವರ ವೃತ್ತಿಪರ ಸೇವೆಗೆ ಗೌರವ ನೀಡುವ ಉದ್ದೇಶದಿಂದ ಎಂದು ಹೇಳಿದರು.
ನನ್ನ ಗೌರವ ಕಾಪಾಡಬೇಕಾದವರು ನೀವೇ, ನಿಮ್ಮನ್ನು ರಕ್ಷಿಸಬೇಕಾದವರು ನಾವೇ. ಇಬ್ಬರ ನಡುವೆಯೂ ಪರಸ್ಪರ ತಿಳಿವಳಿಕೆ ಮತ್ತು ವಿಶ್ವಾಸ ಇರಬೇಕು. ನಾನು ನಿಮ್ಮ ಗೌರವ ಕಾಪಾಡುತ್ತೇನೆ, ನೀವು ನನ್ನ ಗೌರವ ಕಾಪಾಡಿ. ಪ್ರೀತಿ, ವಿಶ್ವಾಸ ಮತ್ತು ಸ್ನೇಹದ ಸಂಬಂಧವನ್ನು ಉಳಿಸಿಕೊಂಡು ಒಟ್ಟಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಲಂಚ ಕೇಳಿದ ಅಧಿಕಾರಿ ಬಲಿ ಹಾಕಿ | ಜಿಲ್ಲಾಧಿಕಾರಿಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರ ನೇತೃತ್ವದಲ್ಲಿ ಸಂಘಟನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನೌಕರರ ಹಿತಾಸಕ್ತಿ ಕಾಪಾಡಲು ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

