ಮುಖ್ಯ ಸುದ್ದಿ
ಕೋಟೆನಾಡಲ್ಲಿ ರಥೋತ್ಸವ ವೈಭವ | ಜಿಲ್ಲೆಯಾದ್ಯಂತ ಸಂಭ್ರಮಿಸಿದ ಭಕ್ತರು

CHITRADURGA NEWS | 25 FEBRUARY 2024
ಚಿತ್ರದುರ್ಗ: ಬುಡಕಟ್ಟು ಸಂಸ್ಕೃತಿಯ ತೊಟ್ಟಿಲು, ಏಳುಸುತ್ತಿನ ಕೋಟೆಯ ಚಿತ್ರದುರ್ಗದ ನೆಲದಲ್ಲಿ ಸರತಿ ಸಾಲಿನಲ್ಲಿ ದೇವರ ಉತ್ಸವಗಳು ಸಾಗಿದವು. ದಕ್ಷಿಣ ಕಾಶಿ ಹಿರಿಯೂರಿನಲ್ಲಿ ತೇರುಮಲ್ಲೇಶ್ವರ ಸ್ವಾಮಿ ರಥೋತ್ಸವ, ಚಿತ್ರದುರ್ಗದ ರಾಜಬೀದಿಯಲ್ಲಿ ದುರ್ಗದ ಶಕ್ತಿ ದೇವತೆ ಉತ್ಸವಾಂಬ ದೇವಿಯ ಉಯ್ಯಾಲೋತ್ಸವ, ಕೆಳಗೋಟೆಯಲ್ಲಿ ಚನ್ನಕೇಶವ ಸ್ವಾಮಿ, ತುರವನೂರಿನಲ್ಲಿ ಆಂಜನೇಯ ಸ್ವಾಮಿ ರಥೋತ್ಸವ ಸಾಗಿದರೆ ಅತ್ತ ಮೊಳಕಾಲ್ಮುರಿನ ಕೊಂಡ್ಲಹಳ್ಳಿಯಲ್ಲಿ ಅಭಯ ಆಂಜನೇಯ ಸ್ವಾಮಿ ಹಾಗೂ ಚಿಕ್ಕಜಾಜೂರಿನಲ್ಲಿ ಕಾಳುಹುಣ್ಣಿಮೆ ಆಚರಿಸಲಾಯಿತು.
ದಕ್ಷಿಣ ಕಾಶಿ ಎಂದು ಹೆಸರುವಾಸಿಯಾಗಿರುವ ಹಿರಿಯೂರು ನಗರದ ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಮಧ್ಯಾಹ್ನ 1.45ಕ್ಕೆ ಸಾವಿರಾರು ಭಕ್ತರ ಭಕ್ತಿ–ಸಂಭ್ರಮದ ನಡುವೆ ಯಶಸ್ವಿಯಾಗಿ ನೆರವೇರಿತು.
ಬೀರೇನಹಳ್ಳಿಯ ಮಜುರೆ ಕರಿಯಣ್ಣನಹಟ್ಟಿ ಗ್ರಾಮದ ವೀರಕರಿಯಣ್ಣ ದೇವರನ್ನು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನಕ್ಕೆ ಕರೆತರಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಪೂಜೆ ಸಲ್ಲಿಸುವ ಮೂಲಕ ದೇವರನ್ನು ಬರಮಾಡಿಕೊಂಡರು. ನಂತರ ದೇಗುಲ ನಿರ್ಮಾಣಕ್ಕೆ ಕಾರಣಳಾದ ಹೇಮರಡ್ಡಿ ಮಲ್ಲಮ್ಮ ಊರುಗೋಲಾಗಿ ಬಳಸುತ್ತಿದ್ದಳು ಎನ್ನಲಾದ ಶಿವಧನಸ್ಸನ್ನು ಸಮೀಪದ ವೇದಾವತಿ ನದಿಗೆ ಒಯ್ದು ಗಂಗಾಸ್ನಾನ ನೆರವೇರಿಸಿ ತರಲಾಯಿತು.

ಈ ಬಾರಿ ಬ್ರಹ್ಮರಥಕ್ಕೆ ಎನ್.ವಿ. ಅನಿಲ್ ಕುಮಾರ್ ಹಾಗೂ ಮಹಂತೇಶ್ ಅವರು ಮಾಡಿದ್ದ ಹೂವಿನ ಅಲಂಕಾರ ಗಮನ ಸೆಳೆಯುವಂತಿತ್ತು. ಪ್ರಥಮ ಬಾರಿಗೆ ಹೂವಿನಲ್ಲಿಯೇ ‘ತೇರುಮಲ್ಲೇಶ್ವರಸ್ವಾಮಿ’ ಎಂಬ ಅಕ್ಷರಗಳನ್ನು ಮೂಡಿಸಿದ್ದು, ಬೃಹತ್ ಗಾತ್ರದ ಕನಕಾಂಬರ ಹೂವಿನ ಹಾರವನ್ನು ರಥದ ತುದಿಯಿಂದ ಇಳಿಬಿಟ್ಟಿದ್ದು ಭಕ್ತರನ್ನು ಆಕರ್ಷಿಸಿತು.
ಇದನ್ನೂ ಓದಿ: ನಾಯಕನಹಟ್ಟಿ ತಿಪ್ಪೇಶನ ಜಾತ್ರೆಯಲ್ಲಿ ಜಕಾತಿ ವಸೂಲಿಗೆ ಬ್ರೇಕ್ | ಮುಕ್ತಿ ಬಾವುಟ ಹರಾಜಿಗೆ ಮಾರ್ಗಸೂಚಿ | ಸಚಿವ ಡಿ.ಸುಧಾಕರ್

ಬ್ರಹ್ಮರಥೋತ್ಸವಕ್ಕೆ ಮೊದಲು ಹರಾಜಾದ ಮುಕ್ತಿ ಬಾವುಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ₹ 18 ಲಕ್ಷಕ್ಕೆ ಪಡೆದುಕೊಂಡರು. ಸುಧಾಕರ್ ಅವರು ತೇರುಮಲ್ಲೇಶ್ವರ ದೇವರಿಗೆ ಕೈ ಮುಗಿದು ಬೆಂಬಲಿಗರೊಂದಿಗೆ ಮುಕ್ತಿ ಬಾವುಟ ಹಿಡಿದಾಗ ಭಕ್ತರಿಂದ ಚಪ್ಪಾಳೆ, ಜೈಕಾರ ಕೇಳಿಬಂದಿತು. ಹಿಂದಿನ ವರ್ಷವೂ ಸುಧಾಕರ್ ಅವರೇ ₹ 10 ಲಕ್ಷಕ್ಕೆ ಮುಕ್ತಿ ಬಾವುಟ ಪಡೆದಿದ್ದರು.

ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಶನಿವಾರ ಅಭಯ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ
ಮೊಳಕಾಲ್ಮುರು ತಾಲ್ಲೂಕಿನ ದೊಡ್ಡ ಗ್ರಾಮವಾದ ಕೊಂಡ್ಲಹಳ್ಳಿಯಲ್ಲಿ ಅಭಯ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ವೈಭವದಿಂದ ನಡೆಯಿತು. ಈ ವರ್ಷ ರಥೋತ್ಸವಕ್ಕೆ ₹ 65 ಲಕ್ಷ ವೆಚ್ಚದಲ್ಲಿ ನೂತನ ರಥ ಮಾಡಿಸಿದ್ದ ಕಾರಣ ಸುತ್ತಮುತ್ತಲ ಗ್ರಾಮಗಳಿಂದ ಮತ್ತು ದೂರದ ಊರುಗಳಿಂದಲೂ ಅಪಾರ ಭಕ್ತರು ಭಾಗವಹಿಸಿದ್ದರು.
ಪ್ರತಿವರ್ಷ ಭರತ ಹುಣ್ಣಿಮೆ ದಿನದಂದು ರಥೋತ್ಸವ ನಡೆಸಿಕೊಂಡು ಬರುವುದು ವಾಡಿಕೆ. ಮಂಗಳವಾರದಿಂದ ರಥದ ಮುಂಭಾಗದಲ್ಲಿ ಹೋಮ, ವಿಶೇಷಪೂಜೆ ನಡೆಸಲಾಯಿತು.ಬೃಹತ್ ಸೇಬು, ಕಿತ್ತಲೆ, ಗುಲಾಬಿ ಹಾರಗಳು ಗಮನ ಸೆಳೆದವು. ರಥದ ಮುಕ್ತಿಪಟವನ್ನು ಗ್ರಾಮದ ನಿವೃತ್ತ ಪೊಲೀಸ್ ಸಿಬ್ಬಂದಿ ನಾಗರೆಡ್ಡಿಹಳ್ಳಿ ದೇವೇಂದ್ರಪ್ಪ ಅವರು ಹರಾಜಿನಲ್ಲಿ ₹ 47,100ಕ್ಕೆ ಪಡೆದುಕೊಂಡರು.
ರಥ ಪಾದಗಟ್ಟೆವರೆಗೆ ಸಾಗಿ ವಾಪಸಾಯಿತು. ದಾರಿಯುದ್ದಕ್ಕೂ ಭಕ್ತರು ಬಾಳೆಹಣ್ಣು, ಸೂರುಬೆಲ್ಲ, ಮೆಣಸು ತೂರಿ ಭಕ್ತಿ ಅರ್ಪಿಸಿದರು. ಭಾನುವಾರ ಸಂಜೆ ಸ್ವಾಮಿಯ ಹೂವಿನ ಪಲ್ಲಕ್ಕಿ ಮಹೋತ್ಸವ ನಡೆಯಲಿದ್ದು, ರಾತ್ರಿ ಸ್ವಾಮಿಯನ್ನು ಗುಡಿದುಂಬಿಸುವ ಮೂಲಕ ರಥೋತ್ಸವಕ್ಕೆ ತೆರೆಬೀಳಲಿದೆ.

ಚಿತ್ರದುರ್ಗದ ಕೆಳಗೋಟೆ ಸಿ.ಕೆ.ಪುರದಲ್ಲಿ ಶನಿವಾರ ಸಾಗಿದ ಚನ್ನಕೇಶವ ಸ್ವಾಮಿಯ ರಥೋತ್ಸವ
ಚಿತ್ರದುರ್ಗ ನಗರದ ಕೆಳಗೋಟೆ ಸಿ.ಕೆ.ಪುರದ ಚನ್ನಕೇಶವ ಸ್ವಾಮಿ ದೇಗುಲದಲ್ಲಿ ಶ್ರೀದೇವಿ, ಭೂದೇವಿ ಸಹಿತ ಚನ್ನಕೇಶವ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ಬ್ರಹ್ಮ ರಥದಲ್ಲಿ ಶ್ರೀದೇವಿ, ಭೂದೇವಿ ಸಹಿತ ಚನ್ನಕೇಶವ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಮಂಗಳವಾದ್ಯಗಳು ಮೊಳಗಿದವು. ದಾಸಯ್ಯನವರು ಗಂಟೆ, ಜಾಗಟೆ, ಶಂಖಗಳನ್ನು ಮೊಳಗಿಸಿದರು. ಭಕ್ತರು ಬಾಳೆಹಣ್ಣು, ಹೂವುಗಳನ್ನು ರಥಕ್ಕೆ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಚನ್ನಕೇಶವ ಸ್ವಾಮಿ ದೇವಸ್ಥಾನದಿಂದ ಕೆಳಗೋಟೆ ಅಡ್ಡರಸ್ತೆಯವರೆಗೆ ರಥವನ್ನು ಎಳೆದು ಮೂಲ ಸ್ಥಾನಕ್ಕೆ ಕರೆತರಲಾಯಿತು. ಈ ವೇಳೆ ಸಿ.ಕೆ.ಪುರ ಬಡಾವಣೆ, ಕೆಳಗೋಟೆ, ಆಕಾಶವಾಣಿ ಸುತ್ತಲಿನ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ಮೂರ್ತಿಯ ದರ್ಶನ ಪಡೆದರು.

ರೇಣುಕಾ ಯಲ್ಲಮ್ಮ ದೇವಿ
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಶನಿವಾರ ಭರತ ಹುಣ್ಣಿಮೆ ಅಂಗವಾಗಿ 77ನೇ ವರ್ಷದ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಇದನ್ನೂ ಓದಿ: ಚಿತ್ರದುರ್ಗ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಮುಹೂರ್ತ ಫಿಕ್ಸ್ | ಅಮೃತ್ ಭಾರತ್ ರೈಲ್ವೆ ಯೋಜನೆಯಡಿ ಕಾಮಗಾರಿ
ರೇಣುಕಾ ಯಲ್ಲಮ್ಮ ದೇವಿಗೆ (ಜಡೇಯಲ್ಲಮ್ಮ) ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪ ಅಲಂಕಾರದೊಂದಿಗೆ ವಿಶೇಷ ದರ್ಶನ ಹಾಗೂ ಶ್ರೀದೇವಿಗೆ ಮಡ್ಲಕ್ಕಿ ಮತ್ತು ಪಡ್ಡಲಿಗೆ ತುಂಬಿಸಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾದಿಗಳು ಮುಂಜಾನೆಯಿಂದಲೇ ದೇಗುಲಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.

ಚಿಕ್ಕಜಾಜೂರಿನಲ್ಲಿ ಕಾಳುಹುಣ್ಣಿಮೆ
ಚಿಕ್ಕಜಾಜೂರಿನಲ್ಲಿ ಕಾಳು ಹುಣ್ಣಿಮೆ ಹಬ್ಬವನ್ನು ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಹಬ್ಬದ ಅಂಗವಾಗಿ ಗ್ರಾಮದ ಬಹುತೇಕ ಮನೆಗಳಲ್ಲಿ ಹುರುಳಿ ಕಾಳನ್ನು ಬೇಯಿಸಿ, ಮನೆ ದೇವರುಗಳಿಗೆ ನೈವೇದ್ಯ ಅರ್ಪಿಸಿದರು. ಗ್ರಾಮ ದೇವರು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂಜೆ ಆಂಜನೇಯ ಸ್ವಾಮಿ ಹಾಗೂ ಭೂತಪ್ಪ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಗ್ರಾಮದ ಹೊರವಲಯದಲ್ಲಿರುವ ಭೂತೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ದು, ದೂಪ ಸೇವೆ ನಡೆಸಲಾಯಿತು. ನಂತರ ಉತ್ಸವ ಮೂರ್ತಿಗಳನ್ನು ಗ್ರಾಮಕ್ಕೆ ಮರಳಿ ಕರೆತರಲಾಯಿತು. ಉತ್ಸವ ಮೂರ್ತಿಗಳು ಊರ ಬಾಗಿಲಿನ ಬಳಿ ಬರುತ್ತಿದ್ದಂತೆ ಸೀರೆ ಧರಿಸಿದ್ದ ಬಾಲಕಿಯರು ತಾಯಂದಿರೊಂದಿಗೆ ಉತ್ಸವ ಮೂರ್ತಿಗಳಿಗೆ ಆರತಿ ಬೆಳಗಿದರು. ಭೂತಪ್ಪ ಸ್ವಾಮಿಯನ್ನು ಹೊತ್ತ ಭಕ್ತರು ದಾಸಯ್ಯನೊಂದಿಗೆ ಮಣೇವು ಆಡಿದರು.

ತುರುವನೂರು ಗ್ರಾಮದ ಆಂಜನೇಯಸ್ವಾಮಿ ರಥೋತ್ಸವ
ನಾಯಕನಹಟ್ಟಿ ಸಮೀಪದ ತುರುವನೂರು ಗ್ರಾಮದ ಆಂಜನೇಯಸ್ವಾಮಿ ರಥೋತ್ಸವ ವೈಭದಿಂದ ಸಾಗಿತು. ಮುಂಬರುವ ದಿನಗಳಲ್ಲಿ ಉತ್ತಮ ಮಳೆ, ಬೆಳೆಯಾಗಿ ಜಿಲ್ಲೆಯಲ್ಲಿ ಆವರಿಸಿರುವ ಬರಗಾಲ ದೂರವಾಗಲಿ ಎಂದು ಶಾಸಕ ಟಿ.ರಘುಮೂರ್ತಿ ವಿಶೇಷ ಪೂಜೆ ಸಲ್ಲಿಸಿದರು.
‘ಜಿಲ್ಲೆಯಲ್ಲಿ ಕಳೆದ ವರ್ಷ ಮಳೆಯಿಲ್ಲದೆ ರೈತರು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಗಳಿವೆ. ಅವಧಿಗಿಂತ ಮೊದಲೇ ನೀರಿನ ಸಮಸ್ಯೆ ತಲೆದೋರಬಹುದಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಿ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ಚಿತ್ರದುರ್ಗದ ದೊಡ್ಡಪೇಟೆಯಲ್ಲಿ ಶನಿವಾರ ನಡೆದ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಉಯ್ಯಾಲೋತ್ಸವ
ಚಿತ್ರದುರ್ಗ ನಗರದ ದೊಡ್ಡಪೇಟೆಯ ಉಯ್ಯಾಲೆ ಕಂಬದಲ್ಲಿ ಸಂಪ್ರದಾಯದಂತೆ ಶಕ್ತಿದೇವತೆ ಉಚ್ಚಂಗಿ ಯಲ್ಲಮ್ಮ ದೇವಿಯ ಉಯ್ಯಾಲೋತ್ಸವ ಶನಿವಾರ ರಾತ್ರಿ ವೈಭವದಿಂದ ನೆರವೇರಿತು.
ಭರತ ಹುಣ್ಣಿಮೆ ಹಾಗೂ ಉಯ್ಯಾಲೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಅಭಿಷೇಕ, ಅಲಂಕಾರ ಸೇರಿದಂತೆ ಪೂಜಾ ಕಾರ್ಯಗಳು ನೆರವೇರಿದವು. ಬಳಿಕ ಪ್ರಾರಂಭವಾದ ಮೆರವಣಿಗೆ ಚಿಕ್ಕಪೇಟೆ, ಆನೆಬಾಗಿಲ ರಸ್ತೆ, ಹೊಳಲ್ಕೆರೆ ರಸ್ತೆ, ಗಾಂಧಿ ವೃತ್ತ, ಬಿ.ಡಿ ರಸ್ತೆ, ಧರ್ಮಶಾಲಾ ರಸ್ತೆ, ದೊಡ್ಡಪೇಟೆ ಮಾರ್ಗವಾಗಿ ದೇವಸ್ಥಾನ ತಲುಪಿತು.
ನಗರದ ಬುರುಜನಹಟ್ಟಿಯ ಐತಿಹಾಸಿಕ ಸಿಹಿ ನೀರು ಹೊಂಡದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು. ದೇವಿಗೆ ಹಸಿರು, ಕೆಂಪು, ಹಳದಿ, ಬಿಳಿ, ನೀಲಿ ಸೇರಿದಂತೆ ನಾನಾ ಬಣ್ಣಗಳ ಬಳೆಗಳನ್ನು ಪೋಣಿಸಿ ಸಿಂಗರಿಸಲಾಗಿತ್ತು.
ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದ ದೇವಿಯ ಉತ್ಸವ ಮೂರ್ತಿಯನ್ನು ಅಲಂಕೃತ ಉಯ್ಯಾಲೆಯಲ್ಲಿ ಕೂರಿಸುತ್ತಿದ್ದಂತೆ ನೆರೆದಿದ್ದ ಅಪಾರ ಭಕ್ತರು ಜೈಕಾರ ಹಾಕಿ ಸಂಭ್ರಮಿಸಿದರು. ಕಹಳೆ, ಉರುಮೆ, ಕರಡಿ ಚಮ್ಮಾಳ ಸೇರಿದಂತೆ ನಾನಾ ಜಾನಪದ ಕಲಾಮೇಳಗಳು ಮೆರುಗು ತಂದವು.
