
ಚಿತ್ರದುರ್ಗ ನ್ಯೂಸ್.ಕಾಂ: ಇದೊಂದು ಅಭಿಮಾನದ ಸುದ್ದಿ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೂಗು ಮುರಿಯುವವರ ನಡುವೆ. ತಮ್ಮೂರಿಗೆ ದಿನವೂ ಬರುವ ಬಸ್ಸಿನ ಬಗ್ಗೆ ಈ ಊರಿನ ಜನ ಅದೆಷ್ಟು ಪ್ರೀತಿ ಹೊಂದಿದ್ದಾರೆ ಎನ್ನುವುದನ್ನು ಈ ಸುದ್ದಿಯಲ್ಲಿ ಕಾಣಬಹುದು.
ಚಿತ್ರದುರ್ಗ ತಾಲೂಕಿನ ಕೆನ್ನೆಡಲು ಗ್ರಾಮ ಕುಗ್ರಾಮ. ಇಲ್ಲಿಗೆ ದಿನವೂ ಒಂದು ಬಸ್ಸು ಮಾತ್ರ ಬಂದು ಹೋಗುತ್ತದೆ. ದಿನವೂ ತಮ್ಮ ವ್ಯಾಪಾರ ವಹಿವಾಟು, ಆಸ್ಪತ್ರೆ, ಅಂಗಡಿ, ಶಾಲೆ, ಕಾಲೇಜುಗಳಿಗೆ ಕರೆದುಕೊಂಡು ಹೋಗಿ ಮತ್ತೆ ಸುರಕ್ಷಿತವಾಗಿ ಊರು ತಲುಪಿಸುವ ಕಾರಣಕ್ಕೆ ಬಸ್ಸಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ.
ಇದನ್ನೂ ಓದಿ: ಝಗಮಗಿಸುವ ಮುರುಘಾ ಮಠದ ಪೋಟೋ ಗ್ಯಾಲರಿ | ಬೆಳಕಿನ ಅಲಂಕಾರದಲ್ಲಿ ಕಂಗೊಳಿಸುತ್ತಿದೆ ಮಠ

ಇದು ಶಕ್ತಿ ಯೋಜನೆ ಬಂದ ಮೇಲಿನ ಪ್ರೀತಿಯಲ್ಲ. ಸುಮಾರು ಕಳೆದ 25 ವರ್ಷಗಳಿಂದ ಈ ಊರಿನ ಯುವಕರು, ಮಕ್ಕಳು ಸೇರಿದಂತೆ ಗ್ರಾಮದ ಬಹುತೇಕರು ಆಯುಧ ಪೂಜೆ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಬಸ್ಸನ್ನು ಪೂರ್ತಿ ತೊಳೆದು, ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಚೆಂಡು ಹೂವು, ಸೇವಂತಿಗೆ ಹೂವು, ಸುಗಂಧ ರಾಜ ಹೂವುಗಳನ್ನು ಪೋಣಿಸಿ ದೊಡ್ಡ ಮಾಲೆಗಳನ್ನು ಮಾಡಿ ಬಸ್ಸಿಗೆ ಸುಂದರವಾಗಿ ಅಲಂಕಾರ ಮಾಡಿ, ಗ್ರಾಮ ದೇವತೆ ಕೆಂಚಮ್ಮಾರಮ್ಮನ ಗುಡಿ ಬಳಿ ಕರೆದೊಯ್ದು ಪೂಜೆ ಮಾಡಿಸಿ ಅಲ್ಲಿಂದ ಚಿತ್ರದುರ್ಗಕ್ಕೆ ಕಳಿಸುವುದು ಈ ಊರಿನ ಸಂಪ್ರದಾಯವಾಗಿ ಬಿಟ್ಟಿದೆ.

ಕಳೆದ 25 ವರ್ಷಗಳಿಂದ ಕೆನ್ನೆಡಲು ಗ್ರಾಮಕ್ಕೆ ದಿನಕ್ಕೆ ಮೂರು ಬಾರಿ ಬಂದು ಹೋಗುವ ಏಕೈಕ ಬಸ್ಸು ಇದಾಗಿರುವುದರಿಂದ ಜನರಿಗೆ ವಿಶೇಷ ಅಭಿಮಾನವಿದೆ.
ಈ ಕುರಿತು 2021ರಲ್ಲಿ ಸಾಮಾಜಿಕ ಕಾರ್ಯಕರ್ತ ಅಭಿಲಾಷ್ ಪಂಡ್ರಹಳ್ಳಿ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು. ಈ ಬರಹದ ಬೆನ್ನುಬಿದ್ದ ಚಿತ್ರದುರ್ಗ ನ್ಯೂಸ್, ಈ ವರ್ಷ ಕೂಡಾ ಕೆನ್ನೆಡಲು ಗ್ರಾಮಸ್ಥರು ಕೆಎಸ್‍ಆರ್‍ಟಿಸಿ ಬಸ್ಸನ್ನು ಪ್ರೀತಿಯಿಂದ ಅಲಂಕಾರ ಮಾಡಿ ಪೂಜಿಸಿ ಕಳುಹಿಸಿರುವ ಚಿತ್ರಗಳ ಸಹಿತ ಈ ವರದಿ ಪ್ರಕಟಿಸಿದೆ.
ಬಂದ್, ಹೋರಾಟಗಳ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಬಸ್ಸುಗಳಿಗೆ ಕಲ್ಲು ಹೊಡೆಯುವವರ ನಡುವೆ ಅದು ನಮ್ಮ, ನಮ್ಮೂರಿನ ಬಸ್ಸು ಎಂಬ ಅಭಿಮಾನ ಹೊಂದಿರುವ ಈ ಊರಿನ ಎಲ್ಲ ಮನಸ್ಸುಗಳಿಗೆ ಚಿತ್ರದುರ್ಗ ನ್ಯೂಸ್ ಅಭಿನಂದಿಸುತ್ತದೆ
2021 ರಲ್ಲಿ ಸಾಮಾಜಿಕ ಕಾರ್ಯಕರ್ತ ಅಭಿಲಾಷ್ ಪಂಡ್ರಹಳ್ಳಿ ಕೆನ್ನೆಡಲು ಗ್ರಾಮದ ಬಗ್ಗೆ ಬರೆದಿದ್ದ ಬರಹವೂ ಇಲ್ಲಿದೆ.
ಈ ಪುಟ್ಟ ಗ್ರಾಮದಲ್ಲೊಂದು ಪ್ರೇರಣಾದಾಯಕ ದಸರಾ ಆಯುಧಪೂಜಾ ಉತ್ಸವ. ಸುಮಾರು ಮೂವತ್ತು ವರ್ಷಕ್ಕೂ ಹಿಂದಿನಿಂದ ನಡೆದುಕೊಂಡು ಬರುತ್ತಿದೆ.
ಈ ಗ್ರಾಮ ಚಿತ್ರದುರ್ಗದಿಂದ ಹಟ್ಟಿಚಿನ್ನದಗಣಿ ಮಾರ್ಗವಾಗಿ ಸುಮಾರು 25 ಕಿ.ಮೀ ದೂರದಲ್ಲಿದೆ, ಸುತ್ತಲೂ ಚಿನ್ಮೂಲಾದ್ರಿ ಪರ್ವತ ಸಾಲುಗಳಿಂದ ಜೋಗಿಮಟ್ಟಿ ಅರಣ್ಯಧಾಮಕ್ಕೆ ಹೊಂದಿಕೊಂಡಿರುವ ಈ ಪುಟ್ಟ ಗ್ರಾಮವೆ ಕೆನ್ನೆಡಲು.
ಈ ಗ್ರಾಮದ ಜನರ ಮುಖ್ಯಕಸುಬು ವ್ಯವಸಾಯ ಇಲ್ಲಿ ಹೂವು ಮತ್ತು ತರಕಾರಿಗಳನ್ನ ಹೆಚ್ಚಾಗಿ ಬೆಳೆದು ಚಿತ್ರದುರ್ಗದ ಮಾರುಕಟ್ಟೆಗೆ ಸಾಗಿಸುತ್ತಾರೆ. ಗ್ರಾಮದ ಸಂಪರ್ಕಕ್ಕಾಗಿ ಹಲವಾರು ವರ್ಷಗಳ ಹಿಂದೆಯೇ ಒಂದು ಸರ್ಕಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಬಿಟ್ಟಿದೆ.
ಅಂದಿನಿಂದ ಆ ಸರ್ಕಾರಿ ಬಸ್ ಅವರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬೆರೆತು ಹೋಗಿದೆ ಎನ್ನುವುದಕ್ಕೆ ಈ ದಸರಾ ಹಬ್ಬದ ಆಯುಧ ಪೂಜೆಯೇ ಸಾಕ್ಷಿ.

ನವರಾತ್ರಿಯ ಕಡೆಯ ದಿನ ಆಯುಧ ಪೂಜೆಯಂದು ನಾವೆಲ್ಲಾ ನಮ್ಮ ಸ್ವಂತ ವಾಹನಗಳನ್ನ ತೊಳೆದು ಹೂವು ಹಣ್ಣುಗಳಿಂದ ಸಿಂಗರಿಸಿ ಪೂಜೆ ಮಾಡಿ ದೇವಸ್ಥಾನಕ್ಕೆ ಹೋಗಿ ಬರುವುದು ವಾಡಿಕೆ.
ಆದರೆ ಬಹುತೇಕ ಸರಕಾರಿ ವಾಹನಗಳಿಗೆ ಈ ಭಾಗ್ಯವಿರುವುದಿಲ್ಲ ಸರಕಾರ ಕೊಡುವ ನೂರು ಇನ್ನೂರು ರೂಪಾಯಿಗೆ ಹೂವು ಹಣ್ಣು ಹಾರ ಎಲವನ್ನು ತರುವುದು ಅಸಾಧ್ಯ. ನಿರ್ವಾಹಕರು ಇದ್ದಷ್ಟರಲ್ಲೇ ಪೂಜೆ ಮಾಡಿ ಮುಗಿಸಿಕೊಂಡು ಗಾಡಿ ಓಡಿಸುವುದನ್ನ ನಾವು ನೋಡ್ತಾ ಇರ್ತೀವಿ ಅಲ್ವಾ..?
ಆದ್ರೆ ಈ ಊರಿನ ಜನ ತಮ್ಮ ಊರಿಗೆ ಬರುವ ಸರಕಾರಿ ಬಸ್ಸನ್ನ ಹಬ್ಬದ ಹಿಂದಿನ ರಾತ್ರಿಯೆ ತಮ್ಮ ಊರಿಗೆ ಕರೆಸಿಕೊಂಡು ಆ ಊರಿನ ಯುವಕರೆಲ್ಲ ಒಟ್ಟಾಗಿ ವಾಹನವನ್ನ ಸ್ವಚ್ಛವಾಗಿ ತೊಳೆದು ಕುಂಕುಮ ವಿಭೂತಿ ಹಚ್ಚಿ ಇಡೀ ಊರಿನ ಜನ ತಾವೇ ಬೆಳೆದ ಹೂವುಗಳನ್ನ ಒಟ್ಟಾಗಿ ಸೇರಿಸಿ ತಂದು ಮಾಲೆಗಳನ್ನ ಕಟ್ಟಿ ಬಸ್ಸನ್ನ ಅಲಂಕರಿಸಿ ಹಣ್ಣು-ಕಾಯಿ, ಧೂಪ-ದೀಪಗಳಿಂದ ಪೂಜಿಸಿ ಎಲ್ಲರಿಗೂ ಪ್ರಸಾದ ಕೊಟ್ಟು ಆ ಸರ್ಕಾರಿ ಬಸ್ಸನ್ನ ಸಮಯಕ್ಕೆ ಸರಿಯಾಗಿ ಸಾರ್ವಜನಿಕ ಸೇವೆಗೆ ಕಳಿಸಿಕೊಡುವ ಪದ್ಧತಿಯನ್ನ ಸರಿಸುಮಾರು ಮೂವತ್ತು ವರ್ಷಗಳಿಂದಲೂ ಉಳಿಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಮುರುಗಿ ಶಾಂತವೀರ ಸ್ವಾಮಿಗಳ ಹೊಸ ಕಂಚಿನ ಪ್ರತಿಮೆ ಅನಾವರಣ
ಅರ್ಥವಿಲ್ಲದ ಯಾವನದ್ದೋ ಸ್ವಾರ್ಥಪ್ರೇರಿತ ಪ್ರತಿಭಟನೆ ನೆಪದಲ್ಲಿ ಸರ್ಕಾರಿ ವಾಹನಗಳಿಗೆ ಕಲ್ಲುತೂರಿ ಬೆಂಕಿ ಹಚ್ಚಿ ವಿಕೃತಿ ಮೆರೆಯುವ ನಾಗರೀಕರೆನಿಸಿಕೊಂಡ ನಗರ ಪ್ರದೇಶದ ಸೊ ಕಾಲ್ಡ್ ಸಂಘಟನೆಯ ಪುಂಡಪೋಕರಿಗಳು ಮತ್ತು ಅರೆಬೆಂದ ರಾಜಕೀಯ ಮಂದಿಯ ಚೇಲಾಗಳು ಈ ಗ್ರಾಮದ ಯುವಕರನ್ನ ನೋಡಿ ಕಲಿಯುವುದು ಬಹಳಷ್ಟಿದೆ.
ಅದೇ ಗ್ರಾಮದ ನನ್ನ ಸ್ನೇಹಿತ ಮಧು ಹೀಗೆ ಸರ್ವಾಲಂಕೃತವಾದ ಕೆಂಪುಬಸ್ ಫೋಟೋ ಸ್ಟೇಟಸ್‍ಗೆ ಹಾಕಿದ್ದ, ಸರ್ಕಾರಿ ಸೆಟಲ್ ಗಾಡಿಗೆ ಈ ಪಾಟಿ ಅಲಂಕಾರವಾಗಿದ್ದು ನೋಡಿ ಏನು ಸಮಾಚಾರ ಅಂತಾ ಕೇಳಿದಾಗ ಇಷ್ಟು ಮಾಹಿತಿ ತಿಳಿಸಿದ.
ಹಿಂದೂ ಜೀವನಪದ್ಧತಿ ಅಂದ್ರೆ ಇದೇ ಅಲ್ವಾ..? ನಮ್ಮ ನಿತ್ಯಜೀವನಕ್ಕೆ ಸಹಕಾರ ಕೊಡುವ, ಒಳಿತು ಮಾಡುವ ಒಂದು ನಿರ್ಜಿವ ವಸ್ತುವನ್ನೂ ಸಹ ದೈವತ್ವಕ್ಕೇರಿಸಿ ಪೂಜ್ಯ ಭಾವನೆಯಿಂದ ಕಾಣೋದು ಈ ನೆಲದಗುಣ. ಅದನ್ನ ಯಾರಿಂದಲೂ ಎಂದು ಕಸಿದುಕೊಳ್ಳಲು ಸಾಧ್ಯವಾಗದು.
ನಮ್ಮೆಲ್ಲರಿಗೂ ಈ ಕೆನ್ನೆಡಲು ಗ್ರಾಮದ ಹುಡುಗರು ಪ್ರೇರಣೆಯಾಗಲಿ ಸಾರ್ವಜನಿಕ ಸಂಪತ್ತನ್ನ ನಮ್ಮದೆಂದು ನೋಡುವಭಾವ ನಮ್ಮೆಲ್ಲರದಾಗಲಿ ಸರ್ವರಿಗೂ ಆಯುಧ ಪೂಜಾಹಬ್ಬದ ಶುಭಾಶಯಗಳು.
ಬರಹ: ಅಭಿಲಾಷ್ ಪಿ.ಆರ್


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
