CHITRADURGA NEWS | 19 MAY 2026
ಚಿತ್ರದುರ್ಗ: ನಿನ್ನೆ, ಮೊನ್ನೆ ಹುಟ್ಟಿದ ಕಾಂಗ್ರೆಸ್ ನಾಯಕರು, ಸಚಿವರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೀಳು ಶಬ್ದಗಳಿಂದ ಟೀಕೆ ಮಾಡುತ್ತಿರುವುದು ಖಂಡನೀಯ ಎಂದು ಸಂಸದ ಗೋವಿಂದ ಕಾರಜೋಳ ಅಸಮದಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸ್ನಾತಕೋತ್ತರ, ಪಿಎಚ್.ಡಿ ಕೋರ್ಸ್‍ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
ಚಿತ್ರದುರ್ಗದ ಸಂಸದರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇರಾನ್, ಇಸ್ರೇಲ್, ಅಮೇರಿಕಾ ನಡುವಿನ ಯುದ್ದದ ಕಾರಣಕ್ಕೆ ಇಡೀ ಜಗತ್ತಿನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ವಿದೇಶಿ ವಿನಿಮಯ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ಮೋದಿಜಿ ಬಂಗಾರ ಖರೀದಿ, ವಿದೇಶಿ ಪ್ರವಾಸಗಳನ್ನು ಮುಂದಕ್ಕೆ ಹಾಕಲು ಮನವಿ ಮಾಡಿದ್ದಾರೆ. ಸಾರ್ವಜನಿಕ ಸಾರಿಗೆಗಳನ್ನು ಹೆಚ್ಚು ಬಳಸಲು ತಿಳಿಸಿದ್ದಾರೆ ಎಂದರು.
ಈ ಹಿಂದೆ 1964-65 ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಜಿ ಅವರು ಸೋಮವಾರ ಒಂದು ಹೊತ್ತಿನ ಊಟ ಬಿಡಿ ಎಂದು ಹೇಳಿದ್ದರು. ದೇಶದ ಜನ ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದರು ಎಂದು ನೆನಪಿಸಿದರು.
ಉಳಿತಾಯ ಎನ್ನುವುದು ನಮ್ಮ ಸಂಸ್ಕೃತಿಯಲ್ಲಿ ಪೂರ್ವಜರಿಂದ ಬಳುವಳಿಯಾಗಿ ಬಂದಿದೆ. ಉಳಿತಾಯ ಸಂಸ್ಕೃತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆನಪಿಸಿದ್ದಾರೆ. ಈ ವಾಸ್ತವಗಳು ಗೊತ್ತಿಲ್ಲದೆ ಸುಖಾಸುಮ್ಮನೆ ಟೀಕೆ ಮಾಡುತ್ತಿದ್ದಾರೆ ಎಂದರು.
ಕುರ್ಚಿಗೆ ಕಂಟಕ ಬಂದಾಗ ಸಾಧನಾ ಸಮಾವೇಶ:
ತಮ್ಮ ಕುರ್ಚಿಗೆ ಕಂಟಕ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರು ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಟೀಕಿಸಿದರು.
ಇದನ್ನೂ ಓದಿ: ಪಿಯುಸಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಕೇರಳಾ ಮುಖ್ಯಮಂತ್ರಿ ಆಯ್ಕೆ ನಂತರ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಬಂದಿದೆ. ಈಗ ಕಾಂಗ್ರೆಸ್ ನಲ್ಲಿ ಮೂರು ಬಣಗಳಾಗಿವೆ. ದಲಿತ ಸಿಎಂ ಎಂದು ಕೂಗೆದ್ದಿದೆ ಎಂದರು.
ಕಳೆದ ಮೂರು ವರ್ಷಗಳಿಂದ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾರೆ. ಆದರೆ, ಎಂದೂ ದುಂದು ವೆಚ್ಚಕ್ಕೆ ಕಡಿವಾಣ ಹಾಕಲಿಲ್ಲ. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿಕೆಲಸ ಆಗಿಲ್ಲ. 48 ಸಾವಿರ ಕೋಟಿ ದುರುಪಯೋಗ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿಕುಡಿಯುವ ನೀರಿನ ಅಭಾವ ಇದೆ. ಆದರೆ, ಈ ಸರ್ಕಾರ 7 ಸಾವಿರ ಮದ್ಯದ ಅಂಗಡಿ ತೆರೆದು ಸಾಧನೆ ಮಾಡಿದ್ದಾರೆ. ಸಿದ್ದರಾಮಯ್ಯ ಡೋಂಗಿ ಅಹಿಂದ ನಾಯಕ. ದೇಶದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಮಿತವ್ಯಯದ ಸಲಹೆ ನೀಡಿದರೆ ಅವರ ಬಗ್ಗೆಯೇ ಲಘುವಾಗಿ ಮಾತನಾಡುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿದ್ಯಾರ್ಥಿಗಳು ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು
ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ 24 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ ಎನ್ನುತ್ತಾರೆ. ಆದರೆ, ಈ ಹಣ ಜನರಿಗೆ ತಲುಪುತ್ತಿಲ್ಲ. ಜನರಿಗೆ ಜಮೀನು, ಮನೆ, ರಸ್ತೆ ಯಾವ ಸೌಕರ್ಯವೂ ಸಿಕ್ಕಿಲ್ಲ ಎಂದು ಕುಟುಕಿದರು.
ಗ್ಯಾರೆಂಟಿ ಆಸೆ ತೋರಿಸಿ ಬಡವರ ಮನಗೆದ್ದು, 7.64 ಲಕ್ಷ ಕೋಟಿ ಸಾಲ ಮಾಡಿರುವುದೇ ಈ ಸರ್ಕಾರದ ಸಾಧನೆ. ಗ್ಯಾರೆಂಟಿಗಳ ಜೊತೆಗೆ ಅಭಿವೃದ್ಧಿಯೂ ಇದ್ದರೆ ಒಳಿತು. ಕೇವಲ ಜನಪ್ರಿಯ ಘೋಷಣೆಗಳಿದ್ದರೆ ಸಾಲದು ಎಂದರು.
ತುಮಕೂರು ಸಾಧನಾ ಸಮಾವೇಶದಲ್ಲಿ ದಾಖಲೆಯ 1.50 ಲಕ್ಷ ಹಕ್ಕುಪತ್ರ ವಿತರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಸಮಾವೇಶ ನಡೆಸುತ್ತಿರುವ ಪಿಯು ಕಾಲೇಜು ಮೈದಾನದಲ್ಲಿ ಎಂಟು ಸಾವಿರ ಜನ ಸೇರುವಷ್ಟಿದೆ. ಸಮಾವೇಶಕ್ಕೆ ಜನ ಬಂದಿಲ್ಲ. ಆಶಾ ಕಾರ್ಯಕರ್ತೆಯರು, ಪೊಲೀಸರು, ಸರ್ಕಾರಿ ಅಧಿಕಾರಿಗಳನ್ನು ಸೇರಿಸಿದ್ದರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 19 ಮೇ | ಭೀಮಸಮುದ್ರ ಸೇರಿ ವಿವಿಧ ಮಾರುಕಟ್ಟೆಗಳ ರೇಟ್
ಬೆಂಗಳೂರಿನಲ್ಲಿ ರಸ್ತೆ ಗುಂಡಿಮುಚ್ಚಲು 34 ಕೋಟಿ ಖರ್ಚು ಮಾಡಿದ್ದಾರೆ.ರಾಜ್ಯದ ಉದ್ದಗಲಕ್ಕೂ ಬರ ಬಂದಿದೆ. ಆದರೂ ಕುಡಿಯುವ ನೀರಿಗೆ ಅನುದಾನ ಕೊಟ್ಟಿಲ್ಲ. ಚಿತ್ರದುರ್ಗ ಜಿಲ್ಲೆಯ265 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಆಗಿದೆ. ಪ್ರತಿ ಜಿಲ್ಲೆಗೆ 20 ಕೋಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರದ ಸರ್ಕಾರದ ಮಹತ್ವದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಚಿತ್ರದುರ್ಗ ಜಿಲ್ಲೆಯಲ್ಲಿ 6 ವರ್ಷಗಳಿಂದ ನಿಂತಲ್ಲೇ ಇವೆ. ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಪಡೆದುಕೊಳ್ಳಲು ಈ ಸರ್ಕಾರಕ್ಕೆ ಆಗುತ್ತಿಲ್ಲ. ರಾಜ್ಯದ 630 ಹಳ್ಳಿಗಳಲ್ಲಿ ಅಂಗನವಾಡಿ ಕಟ್ಟಡಗಳೇ ಇಲ್ಲ. ಶಾಲಾ ಕಾಲೇಜುಗಳಿಗೆ ಕಟ್ಟಡ ಇಲ್ಲ, ಆಸ್ಪತ್ರೆಗಳಿಗೆ ಔಷಧಿ ಇಲ್ಲ. ಕೇಂದ್ರ ಕೊಟ್ಟ ಮನೆ ಕಟ್ಟಿಲ್ಲ. ಇಷ್ಟೆಲ್ಲಾ ಸಮಸ್ಯೆ ಇಟ್ಟುಕೊಂಡು ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನಿಯಮ ಉಲ್ಲಂಘಿಸಿದರೆ ನೀರು, ಕರೆಂಟ್ ಕಟ್ | ನಗರಸಭೆಯಿಂದ ಎಚ್ಚರಿಕೆ
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮುಖಂಡರಾದ ಡಾ.ಸಿದ್ದಾರ್ಥ್ ಗುಂಡಾರ್ಪಿ, ಎ.ಮುರುಳಿ, ಜಿ.ಎಚ್.ಮೋಹನ್, ಪರಶುರಾಮ್, ಸಂಪತ್, ವೆಂಕಟೇಶ್ ಯಾದವ್, ಚಾಲುಕ್ಯ ನವೀನ್, ನಾಗರಜ್, ರಾಜಣ್ಣ, ಶಶಿ ಇತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
