ಹೊಸದುರ್ಗ
ದೇವಸ್ಥಾನ ಪೂಜಾರಿಕೆ ವಿಚಾರದಲ್ಲಿ ಗುಂಪು ಘರ್ಷಣೆ | ಹೊಸದುರ್ಗ ತಾಲೂಕಿನಲ್ಲಿ ಘಟನೆ

CHITRADURGA NEWS | 04 JANUARY 2024
ಹೊಸದುರ್ಗ: ದೇವಸ್ಥಾನದ ಪೂಜಾರಿಕೆ ವಿಚಾರದಲ್ಲಿ ಹೊಸದುರ್ಗ ತಾಲೂಕಿನ ಗ್ರಾಮವೊಂದರಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.
ತಾಲೂಕಿನ ಕಂಚಿಪುರ ಸಮೀಪದ ಅಜ್ಜಯ್ಯನಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಲಾಟೆ ನಡೆದಿದ್ದು, ಘಟನೆಯಲ್ಲಿ ಏಳೆಂಟು ಜನರಿಗೆ ತಲೆ, ಕೈ ಕಾಲುಗಳಿಗೆ ಪೆಟ್ಟು ಬಿದ್ದಿವೆ.

ಇದನ್ನೂ ಓದಿ: ದಿನ ಭವಿಷ್ಯ | ಜನವರಿ 4 | ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ವಿವಾದ, ದೂರದ ಪ್ರಯಾಣ ಬೇಡ
ಗ್ರಾಮದ ವೀರಮಾರಣ್ಣ ದೇವರ ಪೂಜೆ ಮಾಡುವ ವಿಚಾರದಲ್ಲಿ ಹಳೆಯ ವೈಷಮ್ಯದ ಕಾರಣಕ್ಕೆ ಗಲಾಟೆ ನಡೆದಿದೆ.
ವೀರಮಾರಣ್ಣ ಪೂಜಾರಿಕೆ ವಿಚಾರದಲ್ಲಿ ಒಂದು ಗುಂಪು ಕೋರ್ಟ್ ಮೆಟ್ಟಿಲೇರಿರುವ ಸುದ್ದಿಯಿದೆ. ಇದೇ ವಿಚಾರವಾಗಿ ಆಗಾಗ ಸಣ್ಣಪುಟ್ಟ ಗಲಾಟೆ ಆಗುತ್ತಿದ್ದು, ಈಗ ವಿಕೋಪಕ್ಕೆ ಹೋಗಿದೆ.
ಇದನ್ನೂ ಓದಿ: ಚಿತ್ರದುರ್ಗ ಪತ್ರಕರ್ತರಿಗೆ ಪ್ರಶಸ್ತಿಗಳ ಮಳೆ | ರಾಜ್ಯಮಟ್ಟದ ಪುರಸ್ಕಾರಕ್ಕೆ ಐದು ಜನ ಆಯ್ಕೆ
ಶುಕ್ರವಾರ ರಾತ್ರಿ ದೊಣ್ಣೆ, ಬಡಿಗೆಗಳನ್ನು ಹಿಡಿದು ಬಡಿದಾಡಿದ್ದು, ಅನೇಕರು ರಕ್ತದ ಮಡುವಿನಲ್ಲಿ ಆಸ್ಪತ್ರೆಗೆ ಬಂದಿದ್ದಾರೆ.
ಗ್ರಾಮದ ರಾಮಚಂದ್ರಪ್ಪ, ಭದ್ರಪ್ಪ, ಬಿಲ್ಲಪ್ಪ, ನಿಂಗಪ್ಪ, ಉಮೇಶಪ್ಪ, ಮಹಾಲಿಂಗಪ್ಪ, ಪಾರ್ವತಮ್ಮ ಸೇರಿದಂತೆ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಲೂಕಿನ ಜನರಿಗೆ ರಕ್ತದ ಓಕುಳಿಯ ಕೊಡುಗೆ ಎಂದ ಗೂಳಿಹಟ್ಟಿ:
ಇನ್ನೂ ಈ ಘಟನೆ ಸಂಬಂಧ ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಪ್ರತಿಕ್ರಿಯಿಸಿದ್ದು, ತಾಲೂಕಿನ ಜನತೆಗೆ ರಕ್ತದ ಓಕುಳಿಯ ಕೊಡುಗೆ ಸಿಕ್ಕಿದೆ ಎಂದಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
ನಾನು ಶಾಸಕನಾಗಿದ್ದ ಅವಧಿಯಲ್ಲಿ ತಾಲೂಕಿನಲ್ಲಿ ಒಂದೇ ಒಂದು ಸಣ್ಣ ಗಲಾಟಟೆಗೆ ಆಸ್ಪದ ಕೊಟ್ಟಿರಲಿಲ್ಲ. ಆದರೆ, ಈಗ 500, 1000 ಪಡೆದು ಮತ ಹಾಕಿದ ಪರಿಣಾಮ ರಕ್ತದ ಓಕುಳಿಯೇ ನಡೆಯುತ್ತಿದೆ ಎಂದು ಹರಿಹಾಯ್ದಿದ್ದಾರೆ.
