
ಚಿತ್ರದುರ್ಗ ನ್ಯೂಸ್.ಕಾಂ
ಚಿತ್ರದುರ್ಗದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ದೇವರಾಜ್ ಅರಸು ಶಿಕ್ಷಣ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ 40 ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ‘ಡೆಸ್ಟಿನಿ 2023’ ಮೂಲಕ ಈ ಸಂಭ್ರಮವನ್ನು ಅವಿಸ್ಮರಣೀಯಗೊಳಿಸಲು ಸಂಸ್ಥೆ ಸಿದ್ಧತೆ ನಡೆಸಿದೆ. ಡಿ.21 ರಿಂದ 24 ರವರೆಗೆ ಕೋಟೆನಾಡು ಬೃಹತ್ ಸಾಂಸ್ಕೃತಿಕ ಹಬ್ಬಕ್ಕೆ ಸಾಕ್ಷಿಯಾಗಲಿದೆ.
ನಗರದ ಚಳ್ಳಕೆರೆ ಗೇಟ್ ಬಳಿಯ ವಿದ್ಯಾದಾನ ಸೌಧದ ವಿಶಾಲ ಪ್ರದೇಶದಲ್ಲಿ 4 ದಿನ ಭಿನ್ನ, ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿದ್ದು, ಬೃಹತ್ ವೇದಿಕೆ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಟಿಕೆಟ್ ಕೇಳಿದ್ದೇನೆ; ಎಂ.ಸಿ.ರಘುಚಂದನ್
ನಾಲ್ಕು ದಿನ ಸಂಭ್ರಮದ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ, ಶಾಸಕ ಡಾ.ಎಂ.ಚಂದ್ರಪ್ಪ, ‘1983 ರಲ್ಲಿ ಪ್ರಾರಂಭಿಸಿದ ದೇವರಾಜ್ ಅರಸು ಶಿಕ್ಷಣ ಸಂಸ್ಥೆ ಮೂಲಕ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡಲಾಗುತ್ತಿದೆ. ಶೈಕ್ಷಣಿಕ ಪಯಣದಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಶಿಕ್ಷಕರ ತರಬೇತಿ ಕಾಲೇಜು, ನರ್ಸಿಂಗ್ ಕಾಲೇಜು, ಫಾರ್ಮಸಿ ಹಾಗೂ ಆಯುರ್ವೇದ ವೈದ್ಯಕೀಯ ಕಾಲೇಜು ಹೀಗೆ ಹಲವು ಸ್ತರಗಳ ಒಟ್ಟು 10 ವಿದ್ಯಾ ಸಂಸ್ಥೆಗಳು ಮೈಲಿಗಲ್ಲುಗಳಂತೆ ಸ್ಥಾಪಿತವಾಗಿವೆ’ ಎಂದರು.
‘ಸಂಸ್ಥೆಯಲ್ಲಿ 5 ಸಾವಿರ ಮಕ್ಕಳು ಕಲಿಯುತ್ತಿದ್ದು, 550 ಸಿಬ್ಬಂದಿಗೆ ಉದ್ಯೋಗ ನೀಡಲಾಗಿದೆ. ಯಾವುದೇ ತಾರತಮ್ಯ ಇಲ್ಲದೆ ಎಲ್ಲ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ನೀಡುತ್ತಿರುವುದು ನಮ್ಮ ವಿಶೇಷ. ಹಣದ ವ್ಯಾಮೋಹದಿಂದ ಸಂಸ್ಥೆ ನಡೆಸುತ್ತಿಲ್ಲ. ಬೆಂಗಳೂರಿನಲ್ಲಿ ನಮ್ಮ ಜಾಗ ಇದ್ದರೂ ಅಲ್ಲಿ ಸಂಸ್ಥೆ ಕಟ್ಟುವ ಕೆಲಸ ಮಾಡಲಿಲ್ಲ. ಹಿಂದುಳಿದ ಜಿಲ್ಲೆಯ ಮಕ್ಕಳಿಗೆ ಶಿಕ್ಷಣ ಕೊಡುವ ದೃಷ್ಠಿಯಿಂದ ಸಂಸ್ಥೆ ಕಟ್ಟಿದ್ದೇವೆ’ ಎಂದು ತಿಳಿಸಿದರು.
‘ಎಲ್ಲ ಹಂತದ ಪರೀಕ್ಷೆಗಳಲ್ಲೂ ಸಂಸ್ಥೆ ಅತ್ಯುತ್ತಮ ಸಾಧನೆ ಮಾಡುತ್ತಿದೆ. ದಾವಣಗೆರೆ ವಿಶ್ವ ವಿದ್ಯಾಲಯ ಮಟ್ಟದಲ್ಲಿ ಬಿ.ಕಾಂ ನಲ್ಲಿ ಪ್ರಥಮ ರ‍್ಯಾಂಕ್ ಬಂದಿದೆ. ಸಿಬಿಎಸ್‌ಇ ತರಗತಿಗಳು ಅತ್ಯುತ್ತಮ ಫಲಿತಾಂಶ ನೀಡಿವೆ’ ಎಂದು ವಿವರಿಸಿದರು.
ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಮಾತನಾಡಿ, ‘40 ನೇ ವರ್ಷವನ್ನು ಅರ್ಥಪೂರ್ಣಗೊಳಿಸಲು ಡಿ.21 ರಿಂದ 24 ರವರೆಗೆ 4 ದಿನ ವೈಭವದ ಸಾಂಸ್ಕೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂಸ್ಥೆಯ ಎಲ್ಲ ವಿಭಾಗಗಳು ಭಾಗವಹಿಸಲಿವೆ’ ಎಂದರು.
ಡಿ.21 ರಂದು ಸಂಜೆ 5.30ಕ್ಕೆ ‘ಡೆಸ್ಟಿನಿ 2023’ ವೈಭವಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಚಿಕ್ಕಮಗಳೂರು ಗೌರಿಗದ್ದೆ ಅವಧೂತಶ್ರಮ ಶ್ರೀ ವಿನಯ್ ಗೂರೂಜಿ ಸಾನ್ನಿಧ್ಯವಹಿಸಲಿದ್ದಾರೆ. ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ, ಶಾಸಕ ಡಾ.ಎಂ.ಚಂದ್ರಪ್ಪ ಅಧ್ಯಕ್ಷತೆವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್, ಸಂಸ್ಥೆ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ರವಿಶಂಕರ ರೆಡ್ಡಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
‘ವೇದಿಕೆ ಕಾರ್ಯಕ್ರಮದ ಬಳಿಕ ಸಂಜೆ 6.30 ರಿಂದ ಹಾಸ್ಯ ಸಂಜೆ ನಡೆಯಲಿದೆ. ಚಿಕ್ಕಮಗಳೂರಿನ ಸುಧಾ ಬರಗೂರು, ರಾಯಚೂರಿನ ರಾಘವೇಂದ್ರ ಆಚಾರ್ಯ, ಬೆಂಗಳೂರಿನ ಮಿಮಿಕ್ರಿ ಗೋಪಿ ಹಾಗೂ ಪ್ರಹ್ಲಾದ್ ಜೋಷಿ ತಮ್ಮ ಮಾತಿನ ಮೂಲಕ ಹಾಸ್ಯದ ಹೊನಲು ಹರಿಸಲಿದ್ದಾರೆ’ ಎಂದರು.
‘ಡಿ.22 ರ ಸಂಜೆ 6.30ಕ್ಕೆ ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಮ್ಯೂಸಿಕಲ್ ನೈಟ್ ಜತೆಗೆ ಸಂಸ್ಥೆ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಡಿ.23 ರಂದು ಸಂಜೆ 6.30ರಿಂದ ಕನ್ನಡ ರ‍್ಯಾಪರ್ ಚಂದನ್‌ಶೆಟ್ಟಿ ತಂಡ ಮ್ಯೂಸಿಕಲ್ ಶೋ ಅಬ್ಬರಿಸಲಿದೆ. ಡಿ.24 ರಂದು ಡಿಜೆ ನೈಟ್ ಮೂಲಕ ಸಂಭ್ರಮಕ್ಕೆ ತೆರೆ ಬೀಳಲಿದೆ’ ಎಂದು ವಿವರಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

