CHITRADURGA NEWS | 22 NOVEMBER 2026
ಚಿತ್ರದುರ್ಗ: ಹಿರಿಯೂರು ಅಭಿವೃದ್ಧಿ ಆಗಿಲ್ಲ ಎನ್ನುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಬಂದು ಪುಂಗಿ ಊದಿ ಹೋಗಿದ್ದಾರೆ. ದೇಶದಲ್ಲಿ ಕಳೆದ 70 ದಶಕಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿದೆ. ಆಗ ಹಿರಿಯೂರು ಅಭಿವೃದ್ಧಿ ಕಾಣಲಿಲ್ಲವೇ ಎಂದು ಸಂಸದ ಗೋವಿಂದ ಕಾರಜೋಳ ಪ್ರಶ್ನಿಸಿದರು.
ಇದನ್ನೂ ಓದಿ: ಭದ್ರಾ ಜಲಾಶಯದಿಂದ 2 TMC ನೀರು ಹರಿಸಿ | ಸಚಿವ ಟಿ.ರಘುಮೂರ್ತಿ ಮನವಿ
ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯೂರು ಉಪಚುನಾವಣೆ ಕಾರಣಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಂದಿದ್ದಾರೆ. ಇಲ್ಲದಿದ್ದರೆ ಇತ್ತ ಮುಖ ಮಾಡುತ್ತಿರಲಿಲ್ಲ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ಬಿಜೆಪಿ ಕೊಡುಗೆ ಏನು ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅಂಕಿ ಅಂಶ ಸಹಿತ ಉತ್ತರ ಕೊಡುತ್ತೇನೆ ಎಂದು ಅವರು, ಯೋಜನೆ ಆರಂಭಿಸಿದ್ದೇ ನಾವು. 2007-08 ರಲ್ಲಿ ಸಮೀಕ್ಷೆ ನಡೆಸಲು ಎಂಬಂತೆ 50 ಕೋಟಿ ಟೋಕನ್ ನೀಡಲಾಗಿತ್ತು. ಆನಂತರ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2008-09ರಲ್ಲಿ 104 ಕೋಟಿ ರೂ., 2009-10ರಲ್ಲಿ 100 ಕೋಟಿ ರೂ., 2010-11ರಲ್ಲಿ ಸುಮಾರು 122 ಕೋಟಿ ರೂ., 2011-12ರಲ್ಲಿ 122 ಕೋಟಿ ರೂ, 2012-13ರಲ್ಲಿ 132 ಕೋಟಿ, 2013-14ರ ಬಜೆಟ್ನಲ್ಲಿ 180 ಕೋಟಿ ರೂ. ನೀಡಲಾಗಿದೆ ಎಂದು ವಿವರಿಸಿದರು.
ನಂತರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ 2014-15ರಲ್ಲಿ 175 ಕೋಟಿ ರೂಪಾಯಿ, 2015-16ರಲ್ಲಿ 260 ಕೋಟಿ ರೂಪಾಯಿ, 2016-17ರಲ್ಲಿ 650 ಕೋಟಿ ರೂ. ಮತ್ತು 2017-18ರಲ್ಲಿ 692 ಕೋಟಿ ರೂಪಾಯಿ ನೀಡಲಾಗಿದೆ ಎಂದರು.
ಇದನ್ನೂ ಓದಿ: ಎಲೆಮರೆಯ ಸಾಧಕರಿಗೆ ಗೌರವ ಸಲ್ಲಿಸುವುದು ಶ್ರೇಷ್ಠ ಕಾರ್ಯ | ಟಿ.ರಘುಮೂರ್ತಿ
2018-19ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 720 ಕೋಟಿ ರೂಪಾಯಿ, 2019-20ರಲ್ಲಿ 721 ಕೋಟಿ ರೂಪಾಯಿ, 2020-21ರಲ್ಲಿ 518 ಕೋಟಿ ನೀಡಲಾಗಿತ್ತು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಾನು ನೀರಾವರಿ ಸಚಿವರಾಗಿದ್ದಾಗ 2021-22ರಲ್ಲಿ 2,623 ಕೋಟಿ ರೂ., 2022-23ರಲ್ಲಿ 3,100 ಕೋಟಿ ರೂ. ಮತ್ತು 2023-24ರ ಫೆಬ್ರವರಿ ಬಜೆಟ್ನಲ್ಲಿ 5,500 ಕೋಟಿ ರೂಪಾಯಿ (ಒಟ್ಟಾರೆಯಾಗಿ 11,223 ಕೋಟಿ ರೂ) ಹಂಚಿಕೆ ಮಾಡಲಾಗಿತ್ತು ಎಂದು ತಿಳಿಸಿದರು.
ಆದರೆ, 2023-24ರಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನೀಡಿದ್ದ 5,500 ಕೋಟಿ ರೂ.ಗಳಲ್ಲಿ ನಂತರ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಅರ್ಧದಷ್ಟು ಹಣ ವಾಪಸ್ ಪಡೆದು 2,700 ಕೋಟಿ ರೂ.ಗೆ ಇಳಿಸಿದ್ದು ಯಾಕೆ ಎನ್ನುವುದಕ್ಕೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.
ಚುನಾವಣೆಗೆ ಮತ ಕೇಳಲು ಬರುವ ಮೊದಲು ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಬೇಕು. ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ತೆರೆಯಬೇಕು. ಒಳ ಮೀಸಲಾತಿಯನ್ನು ಸರಿಪಡಿಸಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು. ತಪ್ಪಿದರೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಸಂಸದರಾದ ಗೋವಿಂದ ಕಾರಜೋಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪೂರ್ಣಿಮಾ ಶ್ರೀನಿವಾಸ್ಗೆ ಕಾರಜೋಳ ಪ್ರಶ್ನೆ:
ನಾನು ನೀರಾವರಿ ಸಚಿವರಾಗಿದ್ದಾಗ ಧರ್ಮಪುರ ಹೋಬಳಿ ಹಾಗೂ ಇತರ ಕಡೆಗಳಲ್ಲಿ ಬ್ಯಾರೇಜ್ ಮತ್ತು ಬಾಂದಾರಗಳನ್ನು ನಿರ್ಮಿಸಿದ್ದು, ಅದರಿಂದ ಸುಮಾರು 40,000 ಎಕರೆ ಅಡಿಕೆ ಬೆಳೆಗೆ ಅನುಕೂಲವಾಗಿದೆ. ಆಗ ಯಡಿಯೂರಪ್ಪಾಜಿ ಅನುದಾನ ನೀಡಿದರು. ಧರ್ಮಪುರ ಕೆರೆಗೆ ನೀರು ಕೊಟ್ಟರು ಎಂದಿದ್ದ ಪೂರ್ಣಿಮಾ ಶ್ರೀನಿವಾಸ್ ನಮಗೆ ಮೋಸ ಮಾಡಿ ಕಾಂಗ್ರೆಸ್ ಸೇರಿ ಈಗ ಬಿಜೆಪಿ ಅಭಿವೃದ್ಧಿಯನ್ನೇ ಮಾಡಿಲ್ಲ ಎನ್ನುತ್ತಿದ್ದಾರೆ. ಹಿಂದೆ ನೀವು ಭಾಷಣ ಮಾಡಿರುವ ವೀಡಿಯೋ ತೋರಿಸಬೇಕಾ ಎಂದು ಗೋವಿಂದ ಕಾರಜೋಳ ಹೇಳಿದರು.
ಇದನ್ನೂ ಓದಿ: ಅಡಿಕೆ ತೋಟದಲ್ಲಿದ್ದ ರೈತನ ಮೇಲೆ ಮೂರು ಕರಡಿಗಳ ದಾಳಿ | ರೈತನ ಸ್ಥಿತಿ ಚಿಂತಾಜನಕ
ಆಶಾ ಕಾರ್ಯಕರ್ತೆಯರಿಗೆ ಸಾಂತ್ವಾನ ಹೇಳದ ಸರ್ಕಾರ:
ಆಶಾ ಕಾರ್ಯಕರ್ತೆಯರು ಕಳೆದ ಐದು ದಿನಗಳಿಂದ ಚಳಿಯಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಮಲಗುತ್ತಿದ್ದಾರೆ. ಆದರೆ, ಈ ಸರ್ಕಾರ ಸೌಜನ್ಯಕ್ಕೂ ಅವರ ಬಳಿ ಹೋಗಿ ಸಾಂತ್ವಾನ ಹೇಳಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ಪ್ರಿಯಾಂಕ ಗಾಂಧಿ ಕರೆತಂದು ೧೫ ಸಾವಿರ ವೇತನ ಕೊಡಿಸುವುದಾಗಿ ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿ ಈಗ ಕೇಂದ್ರದ ಮೇಲೆ ಹೇಳುತ್ತಿದ್ದಾರೆ ಎಂದರು.
ಸರ್ಕಾರಿ ಕಾರ್ಯಕ್ರಮ ನಿಯಮಾನುಸಾರ ನಡೆಯಲಿ:
ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಮುಖಂಡರು, ಅಭ್ಯರ್ಥಿ ಆಗುವವರನ್ನು ಕರೆತಂದು ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ. ಇದು ಶಿಷ್ಟಾಚಾರದ ಉಲ್ಲಂಘನೆ. ಸರ್ಕಾರಿ ವೆಚ್ಚದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸುವುದು ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ ಎಂದು ಗೋವಿಂದ ಕಾರಜೋಳ ಕುಟುಕಿದರು.
ಕಾಡುಗೊಲ್ಲರಿಗೆ ನ್ಯಾಯ ಸಿಗಬೇಕು
ಕಾಡುಗೊಲ್ಲರಿಗೆ ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿ ನೀಡುವ ಕುರಿತು ಕುಲಶಾಸ್ತ್ರ ಅಧ್ಯಯನವನ್ನು ಮೂರು ತಿಂಗಳಲ್ಲಿ ಕಳುಹಿಸಲಿ, ನಿಯೋಗದ ಜೊತೆಗೆ ನಾನು ಹೋಗಿ ಪ್ರಧಾನಮಂತ್ರಿ ಭೇಟಿ ಮಾಡುತ್ತೇನೆ. ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೂ ಬರುತ್ತಾರೆ. ಅಧ್ಯಯನ ವರದಿ ಮತ್ತು ಮಾಹಿತಿ ಸರಿಯಾಗಿ ಹೋದರೆ ಹಾಗೂ ಮಾನದಂಡಗಳ ಪ್ರಕಾರ ಸಲ್ಲಿಸಿದರೆ ಬೆಂಬಲ ನೀಡುವುದಾಗಿ ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆಗೆ 2 ಟಿಎಂಸಿ ನೀರಿನ ವಿಚಾರ | ನೀರಾವರಿ ಸಚಿವ ಚೆಲುವರಾಯಸ್ವಾಮಿ ಏನು ಹೇಳಿದ್ರು ?
ಕಾಡುಗೊಲ್ಲರು ನಿಜವಾಗಿಯೂ ಟ್ರೈಬಲ್ ಅವರು ಹಟ್ಟಿಗಳಲ್ಲಿ ವಾಸ ಮಾಡುತ್ತಾರೆ. ಕುರಿ ಸಾಕಾಣಿಕೆಯೇ ಅವರ ಕಸುಬು. ಎಲ್ಲಾ ವಿವರಗಳನ್ನು ಸರಿಯಾಗಿ ಕಳಿಸಬೇಕು. ನ್ಯಾಯಯುತವಾಗಿ ಮೀಸಲಾತಿ ಸಿಗಬೇಕು. ಸಂವಿಧಾನಬದ್ಧ ಕುಲಶಾಸ್ತ್ರ ಅಧ್ಯಯನದ ಮೂಲಕ ನ್ಯಾಯ ದೊರಕಿಸಿಕೊಡಲು ಬದ್ಧವಾಗಿದ್ದೇನೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಸಹ ಪ್ರಬಾರಿ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಧುರಿ ಗಿರೀಶ್, ಜಿ.ಎಚ್.ಮೋಹನ್ ಕುಮಾರ್, ವೆಂಕಟೇಶ್ ಯಾದವ್, ವಕ್ತಾರ ನಾಗರಾಜ್ ಬೇದ್ರೇ, ಎಸ್.ಟಿ. ಜಿಲ್ಲಾ ಮೋರ್ಚಾದ ಅಧ್ಯಕ್ಷ ರಾಜು, ಯಶವಂತ ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

