CHITRADURGA NEWS | 15 JULY 2026
ಚಿತ್ರದುರ್ಗ: ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕನಿಷ್ಠ ಮೂರು ವರ್ಷಗಳ ಅಂತರ ಕಾಯ್ದುಕೊಳ್ಳುವುದು ತಾಯಿ-ಮಗುವಿನ ಆರೋಗ್ಯಕ್ಕೆ ಅವಶ್ಯಕ. ಇದಕ್ಕೆ ಪೂರಕವಾಗಿ ಬೆಂಕಿ ಕಡ್ಡಿ ಗಾತ್ರದ, ಯಾವುದೇ ಅಡ್ಡಪರಿಣಾಮಗಳಿಲ್ಲದ ಆಧುನಿಕ ಕಾಂಟ್ರಾಸೆಪ್ಟಿವ್ ಇಂಟ್ರಾ ಡರ್ಮಲ್ ಇಂಪ್ಲಾಂಟ್’ ವಿಧಾನವನ್ನು ಅರ್ಹ ಹೆಣ್ಣುಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಚಿತ್ರದುರ್ಗ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಹೇಳಿದರು.
ಇದನ್ನೂ ಓದಿ: ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
ಬುದ್ಧನಗರ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕಾಮನಬಾವಿ ಬಡಾವಣೆ ಅಂಗನವಾಡಿ ‘ಬಿ’ ಕೇಂದ್ರದಲ್ಲಿ ಮಂಗಳವಾರ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಅತ್ತೆ-ಸೊಸೆಯರ ಕಾರ್ಯಕ್ರಮ ಮತ್ತು ಕುಟುಂಬ ಕಲ್ಯಾಣ ಯೋಜನೆ ಆಪ್ತ ಸಮಾಲೋಚನಾ ಶಿಬಿರದಲ್ಲಿ ಅವರು ಮಾತನಾಡಿದರು.
ಕುಟುಂಬ ಕಲ್ಯಾಣ ಆಧುನಿಕ ತಾತ್ಕಾಲಿಕ ವಿಧಾನವಾದ ‘ಕಾಂಟ್ರಾಸೆಪ್ಟಿವ್ ಇಂಟ್ರಾ ಡರ್ಮಲ್ ಇಂಪ್ಲಾಂಟ್’ ಅರ್ಹ ಹೆಣ್ಣುಮಕ್ಕಳಿಗೆ ಲಭ್ಯವಿರುವ ಅತ್ಯಂತ ಸರಳ ವಿಧಾನವಾಗಿದೆ. ಇದು ಮೆದುವಾದ ಹಾರ್ಮೋನ್‍ಯುಕ್ತ ಇಂಪ್ಲಾಂಟ್ ಆಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರು ಇದನ್ನು ಅರ್ಹ ಫಲಾನುಭವಿಗಳಿಗೆ ಅಳವಡಿಸಲಿದ್ದಾರೆ.
ಒಮ್ಮೆ ಇದನ್ನು ಅಳವಡಿಸಿಕೊಂಡರೆ ಕನಿಷ್ಠ ಮೂರು ವರ್ಷಗಳ ಕಾಲ ಅನಗತ್ಯ ಗರ್ಭಧಾರಣೆಯನ್ನು ತಡೆಯಬಹುದು. ಇದರೊಂದಿಗೆ ಇತರೆ ಎಲ್ಲಾ ಆಧುನಿಕ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ವಿದ್ಯಾರ್ಥಿಗಳ ಜೀವನಕ್ಕೆ ಶಿಕ್ಷಣ ಮತ್ತು ಸಂಸ್ಕಾರ ಅತ್ಯಗತ್ಯ | ಶ್ರೀ ಬಸವಪ್ರಭು ಸ್ವಾಮೀಜಿ
ಅತ್ತೆ ಸೊಸೆಯರ ಕಾರ್ಯಕ್ರಮವು ಕೇವಲ ಯೋಜನೆಯ ಮಾಹಿತಿಗಷ್ಟೇ ಸೀಮಿತವಾಗಿರದೆ, ಸಮಾಜದಲ್ಲಿ ಅತ್ತೆ ಮತ್ತು ಸೊಸೆಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ. ಇಬ್ಬರ ನಡುವೆ ಪರಸ್ಪರ ಪ್ರೀತಿ, ಗೌರವ ಹಾಗೂ ಜವಾಬ್ದಾರಿಯನ್ನು ಹಂಚಿಕೊಳ್ಳುವ ಮೂಲಕ ಆರೋಗ್ಯವಂತ ಕುಟುಂಬ ನಿರ್ಮಾಣಕ್ಕೆ ಇದು ಸಹಕಾರಿಯಾಗಲಿದೆ ಎಂದರು.
ಜನಸಂಖ್ಯೆ ಹೆಚ್ಚಿದಷ್ಟೂ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚುತ್ತದೆ. ಪ್ರತಿಯೊಬ್ಬರೂ ಚಿಕ್ಕ ಕುಟುಂಬದ ಆದರ್ಶ ಪಾಲಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಪರಿಸರ ಸ್ವಚ್ಛತೆಯ ಅರಿವು ಮೂಡಿಸಿ, ದೇಶದ ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವರಿಕೆ ಮಾಡಿಕೊಟ್ಟರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಜಾನಕಿ ಅವರು ಮಾತನಾಡಿ, ಗರ್ಭಿಣಿಯರು ಸಕಾಲಕ್ಕೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ರಕ್ತಹೀನತೆಯಿಂದ ದೂರವಿರಲು ಪೌಷ್ಟಿಕ ಮತ್ತು ಸಮತೋಲನ ಆಹಾರದ ಕಡೆಗೆ ಗಮನ ಹರಿಸಬೇಕು. ನಿತ್ಯವೂ ಹಸಿ ತರಕಾರಿ, ಮೊಳಕೆ ಕಾಳು, ಹಾಲು, ಮೊಟ್ಟೆ ಹಾಗೂ ಆಯಾ ಕಾಲಕ್ಕೆ ದೊರೆಯುವ ಹಣ್ಣುಹಂಪಲುಗಳನ್ನು ಸೇವಿಸಬೇಕು.
ಇದನ್ನೂ ಓದಿ: DRDO ಕೇಂದ್ರಕ್ಕೆ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಭೇಟಿ
ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಆಗಾಗ್ಗೆ ನೀರು ಕುಡಿಯುತ್ತಾ, ಸಣ್ಣಪುಟ್ಟ ಮನೆಗೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಏಕಾಂತಮ್ಮ, ಸಿಬ್ಬಂದಿ ಶಬೀನಾ, ಆಶಾ ಕಾರ್ಯಕರ್ತೆಯರಾದ ಅನ್ನಪೂರ್ಣ, ಸುಜಾತ, ಶಿಲ್ಪ, ಅಂಗನವಾಡಿ ಕಾರ್ಯಕರ್ತೆಯರಾದ ರಾಧಮ್ಮ, ಶೈಲಜಾ, ರೂಪ ಸೇರಿದಂತೆ ಚಿತ್ರದುರ್ಗ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಅತ್ತೆ-ಸೊಸೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

