CHITRADURGA NEWS | 18 SEPTEMBER 2026
ಚಿತ್ರದುರ್ಗ: ಕನ್ನಡ ರಂಗಭೂಮಿಯಲ್ಲಿ ಸುಮಾರು ಐದು ದಶಕಗಳ ಕಾಲ ಸೃಜನಾತ್ಮಕ ರಂಗ ನಿರ್ದೇಶಕರಾಗಿ ವಿಶಿಷ್ಟ ಶೈಲಿಯಲ್ಲಿ ರಂಗಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದ ಚಿದಂಬರರಾವ್ ಜಂಬೆ ಅವರಿಗೆ ರಾಜ್ಯೋತ್ಸವ, ಅಕಾಡೆಮಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ ಎಂದು ಭೋವಿ ಗುರುಪೀಠಾಧ್ಯಕ್ಷ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ನಿಮ್ಮ ಕೂದಲಿಗೆ ನಿಂಬೆ ರಸ ಬೆರೆಸಿದ ಗೋರಂಟಿ ಹಚ್ಚಿ, ಈ ಪ್ರಯೋಜನ ಪಡೆಯಿರಿ
ನಗರದ ಗಾರೇಹಟ್ಟಿ ಗ್ರಾಮದ ಬೃಹನ್ಮಠ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ರಂಗಸಾಹಿತ್ಯ ಗೆಳೆಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹಿರಿಯ ರಂಗ ನಿರ್ದೇಶಕ, ರಂಗಚಿಂತಕ ಹಾಗೂ ರಂಗಸಾಹಿತಿ ಚಿದಂಬರರಾವ್ ಜಂಬೆ ಅವರ ಕುರಿತ ‘ರಂಗ ಪುಷ್ಪನಮನ, ರಂಗಸಂಗೀತ, ರಂಗ ಉಪನ್ಯಾಸ’ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜಂಬೆಯವರ ಕಠೋರ ನೇರನುಡಿ ಹಾಗೂ ಶ್ರಮದ ಮೂಲಕ ನಾಟಕ ಕಟ್ಟುವ ವಿಧಾನವು ಕಲಾವಿದರಿಗೆ ರಂಗಶಿಸ್ತನ್ನು ಕಲಿಸಿತು. ಕನ್ನಡ ರಂಗಭೂಮಿಯಲ್ಲಿ ನಟರ ದೊಡ್ಡ ಪರಂಪರೆಯನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ರಂಗಭೂಮಿಯ ಮೂಲಕ ಮನುಷ್ಯ ವಾಸ್ತವ ಬದುಕನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಕಲಾವಿದರನ್ನು ಸ್ವಾವಲಂಬಿಗಳನ್ನಾಗಿ ಬೆಳೆಸುವ ಮೂಲಕ, ಬೇರೆಯವರಿಗೂ ಉದ್ಯೋಗ ಕಲ್ಪಿಸುವ ಮಟ್ಟಕ್ಕೆ ಅವರನ್ನು ರೂಪಿಸಿದ್ದಾರೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಡಾ. ಕೆ.ಎಂ. ವೀರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಂಬೆಯವರು ಯಾವುದೇ ನಾಟಕವನ್ನು ರಂಗಕ್ಕೆ ತರುವ ಮುನ್ನ ಆಳವಾದ ಅಧ್ಯಯನ ನಡೆಸುತ್ತಿದ್ದರು. ರಂಗ ನಿರ್ದೇಶಕರಾಗಿ ಮಾತ್ರವಲ್ಲದೆ ಸಂಘಟಕರಾಗಿಯೂ ಮಹತ್ವದ ಕೆಲಸ ಮಾಡಿದ್ದಾರೆ. ನೀನಾಸಂ ರಂಗ ಶಿಕ್ಷಣ ಕೇಂದ್ರದ ಪ್ರಾಚಾರ್ಯರಾಗಿ 22 ವರ್ಷಗಳ ಕಾಲ ರಂಗಭೂಮಿಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ನಂತರ ಕೆ.ವಿ. ಸುಬ್ಬಣ್ಣ ಅವರೊಂದಿಗೆ ಸಮಾಲೋಚಿಸಿ ‘ತಿರುಗಾಟ’ಕ್ಕೆ ಹೊಸ ಆಯಾಮ ನೀಡಿದರು ಎಂದು ಹೇಳಿದರು.
ಇದನ್ನೂ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 18 | ನಿರುದ್ಯೋಗಿಗಳಿಗೆ ಶುಭ ಸುದ್ದಿ, ಆಧ್ಯಾತ್ಮಿಕ ಚಿಂತನೆ ಹೆಚ್ಚು
ನಿವೃತ್ತ ಪ್ರಾಚಾರ್ಯ ಹಾಗೂ ರಂಗ ವಿಮರ್ಶಕ ಡಾ. ವಿ. ಬಸವರಾಜ್ ಅವರು ‘ನೀನಾಸಂ ಚಿದಂಬರರಾವ್ ಜಂಬೆಯವರ ರಂಗಬದುಕು ಮತ್ತು ರಂಗಸಾಧನೆ’ ಕುರಿತು ಉಪನ್ಯಾಸ ನೀಡಿದರು.
ಜಂಬೆಯವರು ವೃತ್ತಿಯಲ್ಲಿ ರಂಗಶಿಕ್ಷಕರಾಗಿದ್ದು, ಪ್ರವೃತ್ತಿಯಲ್ಲಿ ಕಥೆಗಾರರಾಗಿದ್ದರು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಅವರು ಯಕ್ಷಗಾನದಲ್ಲಿಯೂ ಪ್ರಾವೀಣ್ಯತೆ ಹೊಂದಿದ್ದರು. ಸಾಗರ ತಾಲ್ಲೂಕಿನ ಅಡ್ಡೇರಿ ಗ್ರಾಮದವರಾದ ಜಂಬೆಯವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ರಂಗ ನಿರ್ದೇಶಕರಾಗಿ ಬೆಳೆದರು. ನಾಟಕ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಹಲವು ಪ್ರತಿಭಾವಂತ ಕಲಾವಿದರನ್ನು ಕನ್ನಡ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ರಂಗ ನಿರ್ದೇಶಕ ಹಾಗೂ ನೀನಾಸಂ ಪದವೀಧರ ಕೆ.ಪಿ.ಎಂ. ಗಣೇಶಯ್ಯ ನುಡಿನಮನ ಸಲ್ಲಿಸಿ, ಜಂಬೆಯವರು ರಂಗಶಿಸ್ತಿನ ಮೂಲಕ ಹಲವು ನಾಟಕಗಳಿಗೆ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಸಿದ್ಧಿ ಸಮುದಾಯದ ಬದುಕನ್ನು ರಂಗಕ್ಕೆ ಪರಿಚಯಿಸಿದ ‘ಕಪ್ಪುಜನ ಕೆಂಪುನೆರಳು’ ಸೇರಿದಂತೆ ‘ಆ ಊರು ಈ ಊರು’, ‘ತಲೆದಂಡ’, ‘ಚೆರ್ರಿ ಹಣ್ಣಿನ ತೋಟ’, ‘ಬಿರುದಂತೆಂಬರ ಗಂಡ’, ‘ಕತ್ತಲೆಗೆ ಹತ್ತು ತಲೆ’, ‘ಅಥೆನ್ಸಿನ ಅರ್ಥವಂತ’ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ ಎಂದು ಸ್ಮರಿಸಿದರು.
ಬೃಹನ್ಮಠ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಂ.ಜಿ. ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕ ಹಾಗೂ ಭಾರತೀಯ ಸಂಸ್ಕೃತಿ ಚಿಂತಕ ಸಿ.ಪಿ. ಜ್ಞಾನ ದೇವ್, ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಯೋಗಥೆರಪಿ ಚಿಕಿತ್ಸಕ ಎಂ.ಬಿ. ಮುರುಳಿ, ಉಪನ್ಯಾಸಕಿ ರವಿಕಲಾ ಯೋಗೀಶ್, ಕಲಾವಿದ ಮರಡಿ ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಭದ್ರಾ ಕಾಲುವೆಗೆ ಹಾನಿ | ದೂರು ದಾಖಲು
ಕಾರ್ಯಕ್ರಮದ ಕೊನೆಯಲ್ಲಿ ರಂಗಸೌರಭ ಕಲಾವಿದರು ಬಿ.ವಿ. ಕಾರಂತ್ ಅವರ ಸಂಗೀತ ಸಂಯೋಜನೆಯ ಹಲವು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು. ಬೃಹನ್ಮಠ ಪಿಯು ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

