CHITRADUDRGA NEWS | 02 AUGUST 2026
ಚಿತ್ರದುರ್ಗ: ಶೀಬಾರದ ಶ್ರೀ ಗುರುಪಾದ ಮುರುಘರಾಜೇಂದ್ರ ಶ್ರೀಗಳವರ ವನದಲ್ಲಿ ಶ್ರಮದಾನ, ಶಿವಯೋಗ, ಗಾನ ನಮನ, ನುಡಿ ನಮನ, ಸನ್ಮಾನದಂತಹ ಅಪರೂಪದ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: ವ್ಯವಸ್ಥಿತವಾಗಿ ನಡೆದ ಪೊಲೀಸ್ ಸಿವಿಲ್ ಕಾನ್ಸ್‌ಟೇಬಲ್ ಪರೀಕ್ಷೆ
ಬೆಳಗು ಮುಂಜಾನೆ ಮೋಡ ಮುಸುಕಿದ ವಾತಾವರಣ, ಆಷಾಢ ಗಾಳಿ, ಹಕ್ಕಿಯ ಕಲರವ, ವಚನಗಳ ನಿನಾದ, ಸೇರಿದವರಿಗೆಲ್ಲ ಯಾವುದೋ ಒಂದು ಭಾವಯಾನದಲ್ಲಿದ್ದೇವೆಂಬಂತೆ ಭಾಸವಾಗುತ್ತಿತ್ತು.
ನಗರದ ಹೊರವಲಯದ ಶೀಬಾರದ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರರು ಅಡ್ಡಾಡಿದ ತಪೋನೆಲ ನಿಸರ್ಗದ ರಮಣೀಯತೆ ನಡುವೆ ವಿಶಾಲ ಭೂಪ್ರದೇಶದಲ್ಲಿ ಶ್ರೀ ಮುರುಘಾಮಠವು ಅಡಿಕೆ, ತೆಂಗು ಸೇರಿದಂತೆ ವಿವಿಧ ಸಸ್ಯಗಳನ್ನು ನೆಟ್ಟು ಸಸ್ಯೋದ್ಯಾನ ಮಾಡಲು ಉದ್ದೇಶಿಸಿರುವ ಗುರುಪಾದ ಮುರುಘರಾಜೇಂದ್ರ ಶ್ರೀಗಳ ವನದಲ್ಲಿಂದು ಅಪರೂಪದ ಅಂದರೆ ಶ್ರಮದಾನದ ಮೂಲಕ ಸಸಿ ನೆಡುವ, ಕಸ ತೆಗೆಯುವ ಗಿಡಗಳಿಗೆ ಪಾತಿ ಮಾಡುವುದು ಸೇರಿದಂತೆ ಅನೇಕ ಕೆಲಸಗಳು ವಿದ್ಯಾರ್ಥಿಗಳು ಸಾರ್ವಜನಿಕರಿಂದ ನಡೆಯಿತು.
ನಂತರ ಡಾ.ಬಸವಕುಮಾರ ಸ್ವಾಮೀಜಿ ಅವರು ಮನಸ್ಸಿನ ಏಕಾಗ್ರತೆಗೆ ಅಗತ್ಯ ಎನ್ನುವ ಬಸವಾದಿ ಶರಣರು ನಿರೂಪಿಸಿರುವ ಇಷ್ಟಲಿಂಗದ ಶಿವಯೋಗ(ಧ್ಯಾನ) ಸಾಧಿಸುವ ಕುರಿತಾಗಿ ಪ್ರಾತ್ಯಕ್ಷಿಕೆ ನೀಡಿದರು.
ಈ ನಾಡಿಗೆ ತಮ್ಮ ತ್ಯಾಗದ ಮೂಲಕ ಅನುಪಮ ಸೇವೆ ಸಲ್ಲಿಸಿದ ಎಂದೂ ಮರೆಯಲಾಗದ ಹಾಡುಗಳನ್ನು ಹಾಡಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಡಾ.ಎಸ್.ಜಾನಕಿ ಅವರಿಗೆ ಗಾನನಮನ ಹಾಗೂ ಹಿರಿಯ ಗಾಂಧಿವಾದಿ ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ಅವರ ಒಡನಾಡಿ ಅನುಯಾಯಿಯಾಗಿದ್ದ ಹೆಚ್. ಹನುಮಂತಪ್ಪ ಅವರಿಗೆ ನುಡಿ ನಮನ ಸಲ್ಲಿಸುವ ಹಾಗೆಯೇ ಸಮಾಜದ ಒಂದು ಭಾಗವಾಗಿರುವ ಪತ್ರಿಕಾರಂಗದಲ್ಲಿ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಸಮಾಜಸೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯನಿರ್ವಹಿಸಿದವರಿಗೆ ಸನ್ಮಾನದಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ನಡೆದವು.
ಇದನ್ನೂ ಓದಿ: ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ 48 ನಿವೃತ್ತ ಯೋಧರಿಗೆ ಸನ್ಮಾನ
ಶ್ರೀ ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವನದ ವೇದಿಕೆಯಲ್ಲಿ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಬಸವಾದಿ ಶಿವಶರಣರ ನಡೆ ನುಡಿಗಳು, ಅವರ ವಚನಗಳಲ್ಲಿ ಮಾನವನನ್ನು ಮಹದೇವನನ್ನಾಗಿಸುವ ತತ್ವಾದರ್ಶ ಮತ್ತು ಉದಾತ್ತ ಮೌಲ್ಯಗಳು ಅಡಕವಾಗಿವೆ. ತನು-ಮನ ಶುದ್ಧಿಗಾಗಿ ಕೆಲವರು ದೇವಾಲಯಗಳಿಗೆ ಹೋಗುತ್ತಾರೆ. ಶಿವಯೋಗ ಸಾಧನೆಯಿಂದಲೂ ತನು-ಮನ-ಭಾವಶುದ್ಧಿಯ ಸಾಧ್ಯತೆಯಿದೆ.
ಈ ಶಿವಯೋಗದಿಂದ ಏರುಪೇರು ಕಳವಳ ಸಂದಿಗ್ಧತೆ ಮನೋವಿಕಲತೆಯಿಂದ ಬಿಡುಗಡೆಯ ಮಾರ್ಗ ಉಂಟು. ನಮ್ಮ ದೇಹ ಮತ್ತು ಮನಸ್ಸು ಪಂಚೇಂದ್ರಿಯಗಳ ಉಪಟಳದಿಂದ ಬೇಸತ್ತಿರುತ್ತದೆ. ಅವುಗಳನ್ನು ಹತೋಟಿ ಅಥವಾ ಸ್ಥಿಮಿತಕ್ಕೆ ತರಲು ಈ ಮಾರ್ಗ ಅನುಸರಿಸುವುದರಿಂದ ಸಾಧ್ಯವಿದೆ. ಶಿವ ಎಂದರೆ ಹೊಸ ಅರ್ಥವೇನಿಲ್ಲ, ಶುಭ ಅಥವಾ ಮಂಗಳಕರ ಎಂದು. ನಾವು ಆಡುವ ಮಾತು ನೋಡುವ ದೃಷ್ಟಿ ಸದುವಿನಯ, ಸದ್ವರ್ತನೆಯಿಂದ ಕೂಡಿರಬೇಕು.
ಇಷ್ಟಲಿಂಗದ ಮೂಲಕ ಮನಸ್ಸನ್ನು ಕೇಂದ್ರೀಕರಿಸಿ ತದೇಕಚಿತ್ತದಿಂದ ನೋಡಬೇಕು. ಇದರಿಂದ ಧ್ಯಾನ-ಮೌನದೊಂದಿಗೆ ಸಮಾಧಾನ ಪ್ರಾಪ್ತವಾಗುತ್ತದೆ. ಇದನ್ನು ಬಸವಾದಿ ಶರಣರು ಎಲ್ಲಾ ಕಾಲಕ್ಕೂ ಎಲ್ಲರೂ ಜಾತಿ-ಮತ ಲಿಂಗಭೇದವಿಲ್ಲದೆ ಮಾಡಲು ಸಲಹೆ ಮಾಡಿದ್ದಾರೆಂದರು.
ಇದನ್ನೂ ಓದಿ: ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
ಖ್ಯಾತಗಾಯಕಿ ಜಾನಕಿ ಅವರು ಈ ಈ ನಾಡು ಕಂಡ ಅಪ್ರತಿಮ ಶ್ರೇಷ್ಠಗಾಯಕಿ. ಅವರಿಗೆ ಅವರೇ ಸಾಟಿ. ಅವರ ಗಾನನಮನ ನಡೆದಿದೆ. ಹಾಗೆಯೇ ಹಿರಿಯ ಗಾಂಧಿವಾದಿ ನಿಜಲಿಂಗಪ್ಪನವರ ಒಡನಾಡಿಯಾಗಿದ್ದ ಹೆಚ್.ಹನುಮಂತಪ್ಪ ಅವರು ಈ ಸಮಾಜಕ್ಕೆ ರಾಜಕೀಯದಲ್ಲಿದ್ದುಕೊಂಡು ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರ ಸ್ಮರಣೆಯೂ ನಡೆದಿರುವುದು ಸುದೈವ ಎಂದರು.
ಎಸ್ಸೆನ್ ಸ್ಮಾರಕ ಟ್ರಸ್ಟ್ನ ಪದಾಧಿಕಾರಿ ಎಸ್.ಷಣ್ಮುಖಪ್ಪ ಅವರು ಮಾತನಾಡಿ, ಹನುಮಂತಪ್ಪನವರು ಶಿಕ್ಷಕರಾಗಿ, ವಕೀಲರಾಗಿ, ರಾಜಕಾರಣಿಯಾಗಿ ಜನಪರ ಕೆಲಸಗಳನ್ನು ಮಾಡಿದವರಾಗಿದ್ದಾರೆ. ಅವರು ಸ್ಥಾಪಿಸಿದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಅನೇಕ ಪ್ರತಿಭಾನ್ವಿತ ನ್ಯಾಯವಾದಿಗಳು ಹೊರಹೊಮ್ಮಿದ್ದಾರೆ.
ಅವರು ಈ ಚಿತ್ರದುರ್ಗ-ರಾಯದುರ್ಗ ರೈಲುಮಾರ್ಗ, ಅಂಬೇಡ್ಕರ್ ಪ್ರತಿಮೆ ಮತ್ತು ಮದಕರಿ ನಾಯಕ ಪ್ರತಿಮೆ ನಿರ್ಮಾಣ, ನೀರಾವರಿ ಹೋರಾಟ ಸೇರಿದಂತೆ ಅವರ ರಾಜಕೀಯ ಜೀವನದಲ್ಲಿ ಅನೇಕ ಬಡವರಿಗೆ ಉದ್ಯೋಗಾವಕಾಶ ಕೊಡಿಸಿದ್ದಾರೆ. ಹಾಗೆಯೇ ರಾಜಕೀಯದಲ್ಲಿ ಇವರ ಮಾತಿಗೆ ಮನ್ನಣೆ ಇರುತ್ತಿತ್ತು. ಅವರು ಎಸ್ಸೆನ್ ಸ್ಮಾರಕ ಟ್ರಸ್ಟ್ನಲ್ಲಿದ್ದು ಅವರ ಪುಣ್ಯಭೂಮಿ ಒಂದು ಐತಿಹಾಸಿಕ ಸ್ಮಾರಕವಾಗಲು ಶ್ರಮಿಸಿದರು.
ಸ್ಮಾರಕದಲ್ಲಿ ರಾಜಕೀಯ ಪ್ರವೇಶ ಮಾಡುವವರಿಗೆ ಒಂದು ತರಬೇತಿ ಶಾಲೆ ಆರಂಭಿಸಬೇಕೆಂಬ ಮಹಾತ್ವಾಕಾಂಕ್ಷೆ ಅವರಲ್ಲಿತ್ತು. ಅದು ಈಡೇರಲಿಲ್ಲ. ಅದು ನನಸಾದರೆ ಅವರಿಗೊಂದು ನಿಜ ನುಡಿನಮನವಾಗುತ್ತದೆಂದರು.
ಇದನ್ನೂ ಓದಿ: ಪರಿಶಿಷ್ಟ ಪಂಗಡ ರೈತರಿಗೆ ಸಮಗ್ರ ಕೃಷಿ ಪದ್ಧತಿ ಕುರಿತು ಉಚಿತ ತರಬೇತಿ
ಪ್ರಜಾವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಕೆ.ಪಿ.ಓಂಕಾರಮೂರ್ತಿ ಅವರು ಡೆಡ್‌ಲೈನ್ ಕಥೆಗಾಗಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಲಾಯಿತು. ಎಸ್.ಜೆ.ಎಂ. ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಬಾಪೂಜಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಗೊಂಚಿಗಾರ್, ಸಂಸ್ಥೆಯ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ ಡಾ. ಎಸ್.ಹೆಚ್. ಪಂಚಾಕ್ಷರಿ, ನಿವೃತ್ತಿ ಹೊಂದಿದ ನಾಗಭೂಷಣ ದಂಪತಿಗಳನ್ನು ಗೌರವಿಸಲಾಯಿತು.
ನಂತರ ಕಾರ್ಯಕ್ರಮದಲ್ಲಿ ಎಸ್. ಜಾನಕಿಯವರ ನುಡಿ ನಮನ ಹಾಗೂ ಗಾನ ನಮನ ನಡೆಯಿತು.
ನಂತರದಲ್ಲಿ ಹವ್ಯಾಸಿ ಹಾಗೂ ಕೆಲ ವೃತ್ತಿ ಹಿನ್ನೆಲೆಗಾಯಕರಾದ ಜ್ಯೋತಿಗಿರೀಶ್, ಅವರು ನಿನ್ನ ಸವಿ ನೆನಪೇ ಗೀತೆ ಹಾಡಿದರೆ, ಸತ್ಯನಾರಾಯಣ – ದೇವರ ಆಟ ಬಲ್ಲವರಾರು, ಗೊಂಚಿಗಾರ್ – ಮಧುಮಾಸ ಚಂದ್ರಮ, ವರದಾಶಂಕರ್-ಬುದ್ಧಿಮಾತ ಕೇಳಿ, ಡಾ. ಚೇತನ್ ಮತ್ತು ಪ್ರಣತಿ – ಜೀವ ವೀಣೆ ನೀನು ಮಿಡಿತದ, ಚಂದ್ರಕಲಾ ಮತ್ತು ಮನು- ನಗುವಾ ನಯನ, ಕಲ್ಪಶ್ರೀ-ಒಮ್ಮೆ ನಿನ್ನನ್ನು ಕಣ್ತುಂಬ, ಶ್ರೀನಿವಾಸ್-ಬಿಸಿಲಾದರೇನು, ಯಶೋಧ ವಿಜಯಕುಮಾರ್, ಹೆಚ್.ಸಿ.ಪದ್ಮಾವತಿ, ಡಿ.ಓ.ಮುರಾರ್ಜಿ – ತನ್ನಂ ತನ್ನಂ ಎಂದು ಮಿಡಿಯುತಿದೇ, ಲಿಂಗರಾಜ್-ಆಕಾಶ ದೀಪವು ನೀನು, ಚಂದ್ರಣ್ಣ ತತ್ವಪದ ಸೇರಿದಂತೆ ಮತ್ತಿತರ ಗಾಯಕರು ಡಾ. ಎಸ್. ಜಾನಕಿ ಅವರ ಹಾಡುಗಳನ್ನು ಹಾಡಿ ನೆರೆದವರನ್ನು ಭಾವುಕರನ್ನಾಗಿಸಿದರು.
ಇದನ್ನೂ ಓದಿ: ಪಿತ್ತ ನೋವನ್ನು ಶಾಂತಗೊಳಿಸಲು ಈ ಗಿಡಮೂಲಿಕೆಗಳು ಪ್ರಯೋಜನಕಾರಿ?
ಈ ಸಂದರ್ಭದಲ್ಲಿ ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ.ಗುಡಸಿ, ಗಾಯತ್ರಿ ಶಿವರಾಂ, ನಾಗರಾಜ ಸಂಗಂ, ಕವಿ ಗಂಗಾಧರಪ್ಪ, ಮಲ್ಲಿಕಾರ್ಜುನಪ್ಪ, ಗೌಳಿರುದ್ರಪ್ಪ, ವಕೀಲರಾದ ಉಮೇಶ್, ಗುತ್ತಿನಾಡು ಪ್ರಕಾಶ್, ವರ್ತಕ ತಿಪ್ಪೇಸ್ವಾಮಿ, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಆಯುಷ್ ಯೋಗ ಸಂಸ್ಥೆಯ ಪ್ರಸನ್ನಕುಮಾರ್, ಮಂಜುನಾಥ್, ಬಸವರಾಜ್, ಶಿವಯೋಗಿ, ಸೇರಿದಂತೆ ವಿವಿಧ ಮಠಾಧೀಶರು ಕಲಾವಿದರು, ಕಲಾಭಿಮಾನಿಗಳು, ಭಕ್ತರು, ಸಾರ್ವಜನಿಕರು, ಎಸ್.ಜೆ.ಎಂ. ವಿದ್ಯಾಪೀಠದ ಕೆಲ ಶಾಲಾಕಾಲೇಜುಗಳ ನೌಕರರು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಮಾಜ, ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

