
CHITRADURGA NEWS | 25 JUNE 2026
ಚಿತ್ರದುರ್ಗ: ಐದು ವರ್ಷದೊಳಗಿನ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತರಾಗಬಾರದು ಎಂದು ಉಪವಿಭಾಗಾಧಿಕಾರಿ ಡಾ. ಕಾಂತರಾಜ್ ಹೇಳಿದರು.
ಇದನ್ನೂ ಓದಿ: ಯುವ ಕಾಂಗ್ರೆಸ್ ಅಧ್ಯಕ್ಷ ಉಲ್ಲಾಸ್ ವಿರುದ್ಧ ರೈತರ ಪ್ರತಿಭಟನೆ
ನಗರದ ಜಿಲ್ಲಾಆಸ್ಪತ್ರ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ರೆಡ್ ಕ್ರಾಸ್ ಸಂಸ್ಥೆ ಹಾಗೂ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, ಒಟ್ಟು 1,27,641 ಐದು ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಜಿಲ್ಲಾದ್ಯಂತ 1,162 ಪೋಲಿಯೋ ಬೂತ್ಗಳನ್ನು ಸ್ಥಾಪಿಸಲಾಗಿದ್ದು, 2,324 ಲಸಿಕೆದಾರರು ಹಾಗೂ 235 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದರು.
ಭಾರತ ಈಗಾಗಲೇ ಪೋಲಿಯೋ ಮುಕ್ತವಾಗಿದೆ. ಆದರೆ ನೆರೆಹೊರೆಯ ದೇಶಗಳಲ್ಲಿ ಇನ್ನೂ ಪ್ರಕರಣಗಳು ವರದಿಯಾಗುತ್ತಿರುವುದರಿಂದ ದೇಶಕ್ಕೆ ಪೋಲಿಯೋ ಮರುಕಳಿಸಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೋಷಕರು ಇದೇ ಜೂನ್ 28ರ ಭಾನುವಾರ ಸಮೀಪದ ಬೂತ್ಗಳಿಗೆ ಮಕ್ಕಳನ್ನು ಕರೆತಂದು ‘ಎರಡು ಹನಿ’ ಲಸಿಕೆ ಕೊಡಿಸಬೇಕು ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜೂನ್ 25 | ಹತ್ತಿ ರೇಟ್ ಎಷ್ಟಿದೆ?
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎನ್. ಕಾಶಿ ಮಾತನಾಡಿ, ‘ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ ಸಹ, ಈ ಬಾರಿ ತಪ್ಪದೇ ಮೊದಲ ದಿನದಂದೇ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಬೇಕು’ ಎಂದರು.
ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ಡಿ.ಎಂ. ಅಭಿನವ ಮಾತನಾಡಿ, ಜೂನ್ 28ರಂದು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಬಳಿಕ ಜುಲೈ 1ರವರೆಗೆ ಮೂರು ದಿನಗಳ ಕಾಲ ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ. ಬೂತ್ಗಳಲ್ಲಿ ಲಸಿಕೆ ಪಡೆಯದ ಮಕ್ಕಳನ್ನು ಪತ್ತೆ ಹಚ್ಚಿ ಲಸಿಕೆ ನೀಡಲಾಗುವುದು. ಈ ಅಭಿಯಾನಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.
ಹಾಕಿಸಿ ಹಾಕಿಸಿ ಪೋಲಿಯೋ ಲಸಿಕೆ ಹಾಕಿಸಿ, ಜೂನ್ 28 ಪೋಲಿಯೋ ಭಾನುವಾರ, ಪೋಲಿಯೋ ಲಸಿಕೆ ಹಾಕಿಸಿ ಅಂಗವಿಕಲತೆ ತಪ್ಪಿಸಿ, ಜೀವನಕ್ಕಾಗಿ ಎರಡು ಹನಿಗಳು ಎಂಬ ಘೋಷಣೆಗಳ ಮೂಲಕ ನಗರದ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ನಗರದ ಜಿಲ್ಲಾ ಆಸ್ಪತ್ರೆ ಆವರಣದಿಂದ ಆರಂಭಗೊಂಡ ಜಾಗೃತಿ ಜಾಥಾವು ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತದ ಮಾರ್ಗವಾಗಿ ಸಾಗಿ ಮರಳಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅಂತ್ಯಗೊಂಡಿತು.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್ | ರಸಗೊಬ್ಬರ ಮಾರಾಟ ಅಪ್ ಜಾರಿ | ನಾಳೆ ಚಾಲನೆ
ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞರಾದ ಡಾ. ಸುಜಾತ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್, ಉಪ ಆರೋಗ್ಯ ಶಿಕ್ಷಣಾಧಿಕಾರಿ ಗೋವಿಂದ ರೆಡ್ಡಿ ಕಣ್ಣೂರ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಬಿ.ಜಾನಕಿ, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಗಾಯಿತ್ರಿ ಶಿವರಾಂ, ಉಪ ಸಭಾಪತಿ ಅರುಣ್ ಕುಮಾರ್, ರೋಟರಿ ಕ್ಲಬ್ನ ಸವಿತಾ ಶಿವಕುಮಾರ್, ವಾಸವಿ ಕ್ಲಬ್ ಸದಸ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸರ್ಕಾರಿ ಹಾಗೂ ಜಾನ್ನವಿ ನಸಿರ್ಂಗ್ ಕಾಲೇಜು ವಿದ್ಯಾರ್ಥಿಗಳು, ಕೋಟೆ ಪ್ರೌಢಶಾಲೆಯ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

